ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರ-ಮೋಕ್ಷ

By Staff
|
Google Oneindia Kannada News
  • ರಘುನಾಥ ಚ.ಹ.
‘ಊರನಾಭಿಯಾಳು ಬೇರು ಬಿಟ್ಟ ಈ ಮರ
ಅಪ್ಪ ಅಜ್ಜ ಮುತ್ತಜ್ಜನ ಅಳು ನಗು
ಅರಗಿಸಿಕೊಂಡು ಬೆಳೆದು ನಿಂತ ಈ ಮರ
ಶಾಪಗ್ರಸ್ತ ಕಿನ್ನರಿಯೇ ಇರಬೇಕು ;

ಯಾವ ಸಿದ್ಧನ ಕೆಣಕಿದ ಸುಂದರಿಯಾ
ಅವಳ ರೋದನದ ರುಜುವಿನ ಋತುಗಳೆಷ್ಟೊ
ಮರಗಟ್ಟಿ ನಿಂತಳು ಹುಡುಗಿ ; ಅಯ್ಯೋ ಪಾಪ
ಅವಳ ನಿಟ್ಟುಸಿರೇ ಊರಿಗೆ ಶಾಪ ’

- ಮಕಾಡೆ ಬಿದ್ದ ಕವಡೆ
ಪುಟ ಬಿಡಿಸಿದ ಪಂಚಾಂಗ
ತೀರ್ಪು ಕೊಟ್ಟವು.

-2-

ಮರ ರಾಜಕುಮಾರಿಗೆ
ಮೋಕ್ಷ ಕರುಣಿಸಲೆಂದು
ಸರತಿ ಸಾಲಲ್ಲಿ ನಿಂತರು ಊರ ಗಂಡುಗಳು
ರಾಮ ತಾನೇ ಎಂದು ಪಂಚೆ ಎತ್ತಿ ಕಟ್ಟಿದರು

ಯಾರ ಸ್ಪರ್ಶಕ್ಕೆ ಕೊರಡು ಕೊನರುವುದೊ ?
ಪರೀಕ್ಷೆ ಶುರುವಾಯಿತು :

ಇಷ್ಟ ದೈವವ ಸ್ಮರಿಸುತ್ತ ಒಬ್ಬ
ಮರ ಮುಟ್ಟಿದ ; ಮರ ಹೆಣ್ಣಾಗಲಿಲ್ಲ
ಇನ್ನೊಬ್ಬ ಅಪ್ಪಿಕೊಂಡ ; ಮರ ಕೊರಡಾಗಿಯೇ ಇತ್ತು
ರಸಿಕನೊಬ್ಬ ಮುತ್ತು ಕೊಟ್ಟ ;
ನಾಚುವ ಸರದಿ ಅವನದೇ ಆಗಿತ್ತು .
ಮತ್ತೊಬ್ಬ ಭೂಪ,
ಪಂಚಭೂತಗಳನ್ನು ಸಾಕ್ಷಿಗೆ ಕರೆದು
ತಾಳಿ ಬಿಗಿದ ; ಮರ ಮರವಾಗಿಯೇ ಇತ್ತು .
ಗಂಡುಗಳೆಲ್ಲ ಮರಗಟ್ಟಿದವರಂತೆ ನಿಂತರು
ಜನ ಉತ್ಸಾಹ ಕಳಕೊಂಡರು; ಸರದಿಯಲ್ಲುಳಿದವನು
ಒಬ್ಬನೇ ಒಬ್ಬ.

ಮರಕ್ಕೆ ಅರಿಷಿಣ ಕುಂಕುಮ ಹೂ ಕಾಣಿಸಿದ
ಮಣಮಣ ಮಂತ್ರ ಗೊಣಗಿದ
ಆಮೇಲೆ,
ಪಕ್ಕದಲ್ಲಿದ್ದ ಹರಿತ ಹಲ್ಲಿನ ಕೊಡಲಿಯಿಂದ
ಬುಡವ ಕಡಿದ ಕಡಿದ ಕಡಿದ
ಮರ ಮಹಾಮೌನಿ

ಉರುಳಿಬಿತ್ತು ಅಜ್ಜ ಮುತ್ತಜ್ಜಂದಿರ ತೊಟ್ಟಿಲು
ತಲೆಮಾರುಗಳ ಸಾಕ್ಷಿಯ ದೇಹದ
ಉಬ್ಬುತಗ್ಗುಗಳ ಆಸೆಯಿಂದ ಸವರಿ
ಅಳತೆಗೆ ತಕ್ಕಂತೆ ಕತ್ತರಿಸಿದ ;
ಮಡದಿಯಾಂದಿಗೆ ಮಲಗಲು ಮಂಚ
ಕೂರಲು ಕುರ್ಚಿ, ಊಟಕ್ಕೆ ಟೇಬಲ್ಲು
ಮನೆಯ ಸೂರಿಗೆ ಬಿಕರಿಗೆ
ಉಳಿದ ಚೂರುಪಾರು ನೀರೊಲೆಯಲ್ಲಿ ನಿಗಿನಿಗಿ

ಸುಡುಸುಡು ನೀರಲಿ ಸ್ನಾನ ಮಾಡಿದ ನಂತರ
ಡಂಗುರ ಸಾರಿಸಿದ-
‘ಮರ ಕಿನ್ನರಿಗೆ ಮೋಕ್ಷ ಸಿಕ್ಕಿತು’
ಆಧುನಿಕ ರಾಮ ಬೀಗಿದ
ಜನ ಜೈಕಾರ ಹಾಕಿದರು

ಲೋಕ ವ್ಯಾಪಾರಕೆ
ಮೂಕಳಾದ ಬಾಲೆಯಾಬ್ಬಳು
ಮಂಚದ ಕಾಲುಗಳ ಅಪ್ಪಿಕೊಂಡು
ಕಥೆ ಕೇಳಲು ಕಾಯುತ್ತಿದ್ದಳು.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X