ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಒಂದು ಕಣ್ಣಿಗೆ ನೋವು ಮಾಡಲು, ಅಳದೆ ಇನ್ನೊಂದೊಡನೆಯೆ?’ ಎನ್ನುವ ಕವಯತ್ರಿ ಕವನದ ಮೂಲಕ ಧ್ವನಿಸುವುದು ಐಕ್ಯತೆಯ ಅಗತ್ಯ. ಮನೆಯಾಳಗೇ ಉಳಿದ ಹಾಗೂ ಮನೆಯಿಂದ ಹಾರಿದ ಕರುಳಕುಡಿಗಳೆರಡರ ಮೇಲೂ ತಾಯ ಪ್ರೀತಿ ಏಕರೂಪಿ. ವಾಸ್ತವ ಹೀಗಿರುವಾಗ ಕಿತ್ತಾಡುವುದು, ಜಗ್ಗಾಡುವುದು, ಮೇಲುಕೀಳೆಂದು ಕೆಸರು ಎರಚಿಕೊಳ್ಳುವುದು ಸಲ್ಲದು. ಪದ್ಯ ಓದಿ, ಐಕ್ಯತೆಯ ಗೀತೆಯನ್ನು ಗೆಳೆಯರಿಗೂ ಓದಲು ಹೇಳಿ.

|
Google Oneindia Kannada News

ಪ್ರೀತಿಯೆಂಬುದ ಕಾಣಿರ..

ಮಾತೆಯೋರ್ವಳು, ಮಾತೆ ಬಸಿರಲಿ ಹುಟ್ಟಿ ಬಂದರು ಈರ್ವರು
ಸುಜಾತೆಯೋರ್ವಳು, ಮಡಿಲು ತುಂಬಿದರವಳ ಕಂದರು ಈರ್ವರು

ಒಂದು ಕಂದನು ಹಾಗೆ ಇರಲು, ಒಂದು ಕಂದನು ಹೀಗಿರೆ
ಒಂದು ಮಗುವಿಗೆ ಹಾಲಿನಾಸೆಯು, ಜೇನು ಒಬ್ಬಗೆ ಬೇಕಿರೆ,

ಒಂದು ಕೈಯ್ಯಿಗೆ ಹೂವಿನಾಸೆಯು, ಒಂದು ಚೆಂಡನು ಬೇಡಿದೆ
ಎರಡು ಕಾಲ್ಗಳು ನರ್ತಿಸಿರಲು, ಎರಡು ಓಟಕೆ ಎಳಸಿವೆ

ಒಂದು ಮಗುವದು ಮನೆಯಾಳಾಡಿದೆ ಒಂದು ಅಂಗಳಕೋಡಿದೆ
ಒಂದು ಕರೆದರೆ ಓಡಿ ಬರುತಿರೆ, ಒಂದು ಮುತ್ತನೆ ಕೊಡುತಿದೆ

ಎರಡು ಕಂದರು ತಾಯ ಕಣ್ಣು, ಅವಳ ಪ್ರೀತಿಯ ಪಡೆದರು
ಆಡುತಾಡುತ, ಬೆಳೆದು ಬಾಳಿನ ನೊಗವ ಹೊತ್ತರು ಈರ್ವರು

ಒಂದು ಕಣ್ಣದು ಮನೆಯ ಕಾವಲು, ಮನೆಯೆ ಚೆನ್ನು ಅಂದಿತು
ಒಂದು ಕಣ್ಣಿದು ಹೊರಗೆ ನೋಡಿತು, ಕಲಿಕೆ ತೃಪ್ತಿಯ ಅರಸಿತು

ಒಂದು ಕೈಯಿದು ಒಳಗೆ ದುಡಿಯಲು, ಒಂದು ಹೊರ ಹೋರಾಡಿತು
ಒಂದು ಮನಸಿದು ಇಲ್ಲೆ ನೆಲೆಸಿರೆ, ಒಂದು ದೂರದಿ ನೆನೆಯಿತು

ಎರಡು ಕೈಯಲಿ ಹಿಡಿದ ತುತ್ತು, ಒಂದು ದಿನ ನೆಲಕಚ್ಚಿತು
ಮಾತೆ ಕಣ್ಣಲಿ ಕಂದರೀರ್ವರು ತಂದ ಕಂಬನಿ ತುಂಬಿತು

ಮಾತೆ ಮುಂದಣ ಶಿಶುಗಳಿಬ್ಬರು ಕಲಹ ಕದನಕೆ ತೊಡಗಿರೆ
ನಾನು ಹೆಚ್ಚೆನೆ, ನೀನು ಕೀಳೆನೆ ದನಿಯು ತಾರಕಕೇರಿರೆ

ಒಂದು ಮೋರೆಗೆ ಮನೆಯ ಗೋಡೆಯ ಮಣ್ಣು ಕಸವದು ಮೆತ್ತಿರೆ
ಒಂದು ಮೊಗದಲಿ ಪರರ ದೇಶದ ಸಣ್ಣ ಧೂಳದು ಹತ್ತಿರೆ

ಹೇಗೆ ಕಾಣ್ವುದು ಮೊಗದ ನಗುವು, ಮಣ್ಣು ಧೂಳದು ಮೆತ್ತಿರೆ?
ಹೇಗೆ ಹರಿವುದು ಪ್ರೀತಿ ತೊರೆಯು, ಮನವು ಕದವನೆ ಮುಚ್ಚಿರೆ?

ನೀನು ತಾಯಿಯ ಸಲಹಲಿಲ್ಲ , ಎಂದು ಒಬ್ಬನು ಹರಟಿದ
ನೀನು ಅಮ್ಮನ ಬಳಿಯಲಿಲ್ಲ, ಎಂದು ಒಬ್ಬನು ಕುಟುಕಿದ

ನೀನು-ತಾನೆನೆ, ನಾನು-ನೀನೆನೆ, ತಾಯ ಮರೆತರು ಈರ್ವರು
ಇಬ್ಬರೆದೆಯಲಿ ತೆರೆದ ನೋವು, ತಾಯ ಕೊಲ್ವುದ ಕಾಣರು!

ಮಡಿಲು ನನ್ನದು, ನಿನ್ನದೆನ್ನುತ ಮೂರ್ಖರಾಗುತ ಕೂಗಿರೆ
ತಾಯ ಮಡಿಲನು ಭಾಗವಾಗಿಸೆ, ಹಠದ ಕತ್ತಿಯು ತೂಗಿರೆ

ತಾಯಿಗಿಬ್ಬರು ಕಣ್ಣಿನಂತೆಂದೆಂಬುದೇತಕೆ ಮರೆತಿರಿ?
ಮಡಿಲು ಎಂದಿಗೂ ಅವಿಛ್ಛಿನ್ನ ಎಂಬುದೆಂದಿಗೆ ಅರಿವಿರಿ?

ನೀನೂ ಬೇಕೆಲೋ ಕಂದ ಎನಗೆ, ಅವನೂ ನನ್ನಯ ಪ್ರೀತಿಯೆ
ಒಂದು ಕಣ್ಣಿಗೆ ನೋವು ಮಾಡಲು, ಅಳದೆ ಇನ್ನೊಂದೊಡನೆಯೆ?

ಭಾಗವಾಗದ ವಸ್ತು ನನ್ನಯ ಪ್ರೀತಿಯೆಂಬುದ ಕಾಣಿರ ?
ನಿಮ್ಮ ಅಹಮನು ಬಿಟ್ಟು ಮನವನು, ತೆರೆದು ಬಾಳನು ಬಾಳಿರಾ?

ಈ ಕವಿತೆ ಬಗೆಗೆ ನಿಮ್ಮ ಅನ್ನಿಸಿಕೆಗಳನ್ನು ಬರೆಯಿರಿ

ಪೂರಕ ಓದಿಗೆ-

ಅಮ್ಮನಿಗೊಂದು ಓಲೆ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X