ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತೆ ಹಣತೆ

By Staff
|
Google Oneindia Kannada News
  • ಡಾ.ಗುಡ್ಡೆ ರಾಘವ ಗೌಡ, ಡೇಟನ್‌, ಒಹಾಯಾ,
    Email : [email protected]
ಶಿರ ಬಾಗಿ ವಂದಿಪೆನು ತುಂಬು ಎದೆಯಿಂದ
ಕನ್ನಡಾಂಬೆಯೆ ನಿನಗೆ ಅತಿ ಪ್ರೇಮದಿಂದ
ಮನೆ ಬಿಟ್ಟು ಬಂದಿಹನು ಈ ನಿನ್ನ ಕಂದ
ಕೋಪಿಸದೆ ಹರಸೆನ್ನ ವಾತ್ಸಲ್ಯದಿಂದ

ನನ್ನ ಉಸಿರಲಿ ನಿನ್ನ ಹೆಸರು ಅಡಗಿಹುದು
ನನ್ನದೇಹದಿ ನಿನ್ನ ಕಣಕಣವು ಬೆರೆತಿಹುದು
ನನ್ನ ನೋಟದಿ ನಿನ್ನ ಚೆಲುವು ತುಂಬಿಹುದು
ನನ್ನ ಭಾವದಿ ನಿನ್ನ ಹಿರಿಮೆ ನೆಲೆಸಿಹುದು

ನಿನ್ನ ಮಕ್ಕಳ ಕಹಳೆ ಇಂದಿಗೂ ಮುಳುಗಿಲ್ಲ
ಹುಕ್ಕ ಬುಕ್ಕರ ಬಲವು ಇಂದಿಗೂ ಅಳಿದಿಲ್ಲ
ವಿಜಯ ನಗರದ ಸಿರಿಯು ಇಂದಿಗೂ ಮರೆತಿಲ್ಲ
ಗತ ಕಾಲ ವೈಭವದ ನೆನಪಿನ್ನೂ ಮಾಸಿಲ್ಲ

ಬೇಲೂರು, ಹಳೆಬೀಡು, ಶಿಲ್ಪ ಕಲೆಗಳ ಬೀಡು
ಗೊಮಟನು ಸಾರುತಿಹ ಶಾಂತಿಯ ನೆಲೆಬೀಡು
ಶ್ರೀರಂಗ ಪಟ್ಟಣದ ಸಹನೆಯ ನೆಲೆನಾಡು
ಶಂಕರನ ಶೃಂಗೇರಿ ಆತ್ಮೋನ್ನತಿ ಬೀಡು

ಭಾರತವ ಹಾಡಿಹನು ಕುಮಾರವ್ಯಾಸನಿಲ್ಲಿ
ರಾಮಾಯಣ ದರ್ಶನವ ಮಾಡಿಹನು ಕುವೆಂಪುವಿಲ್ಲಿ
ಪಂಪ, ರನ್ನರ ಕೃತಿಯು ಮೊರೆಯುವುದು ಇಂದಿಲ್ಲಿ
ಕನಕ, ಪುರಂದರ ಗೀತೆ ಪ್ರತಿಧ್ವನಿಸುತಿಹುದಿಲ್ಲಿ

ಯಾಲಕ್ಕಿ, ಕಿತ್ತಳೆ, ಕಾಫಿ ಕೊಡಗಿನ ಕೊಡುಗೆ
ತೆಂಗು, ಕಂಗಿನ ಸಿರಿಯು ಕಡಲ್ಕಡೆಯ ಉಡುಗೆ
ರಾಗಿ, ಜೋಳದ ಬೆಳೆಯು ಬಯಲಿನ ಬೆಡುಗೆ
ಎಲ್ಲೆಲ್ಲೂ ಹರಡಿಹುದು ಸಿರಿತೆನೆಯು ನಿನಗೆ

ತುರುಬಿನಲಿ ಹೂವಿಡಲು ಸಹ್ಯಾದ್ರಿಯಿಹಳಿಲ್ಲಿ
ಕಾಲ್ತೊಳೆಯೆ ನಿಂದಿಹಳು ಪಡುಗಡಲು ಮುದದಲ್ಲಿ
ಕೋಲಾರ, ಕುದುರೆಮುಖ ಸಿಂಗರಿಸೆ ಕಾದಿಹರಿಲ್ಲಿ
ಅಭಿಷೇಕವನು ಮಾಡೆ ಕಾವೇರಿ ನಿಂತಿಹಳಿಲ್ಲಿ

ವಿಜಯ ಕಹಳೆಯನೂದೆ ವಿರೂಪಾಕ್ಷ ಬಂದಿಹನು
ಕೊಳಲನೂದುತ ಉಡುಪಿ ಶ್ರೀಕೃಷ್ಣ ನಲಿದಿಹನು
ಧರ್ಮ ಧ್ವಜವನು ಎತ್ತಿ ಮಂಜುನಾಥ ನಡೆದಿಹನು
ಅನ್ನದಾನವ ನೀಡೆ ಸುಬ್ರಹ್ಮಣ್ಯ ಕುಳಿತಿಹನು

ಭೋರ್ಗರೆವ ಜೋಗಿನಲಿ ನಿನ್ನುಸಿರ ಕೇಳುವೆನು
ಕಡಲ್ತೆರೆಯ ತೆಕ್ಕೆಯಲಿ ಜೋಗುಳವ ಆಲಿಪೆನು
ತಂಗಾಳಿ ತಂಪಿನಲಿ ನಿನ್ನೊಡಲ ನೆನೆದಿಹೆನು
ಮುಂಗಾರು ಹನಿಯಲ್ಲಿ ನಿನ್ನೊಲುಮೆ ಕಾಣುವೆನು

ಕಲ್ಲು ಸಕ್ಕರೆಗಿಂತ ಸವಿಯು ಕನ್ನಡ ನುಡಿ
ಗಂಧ ಲೇಪನದಿಂದ ಘಮಿಸುತಿದೆ ನಿನ್ನ ಅಡಿ
ಹಚ್ಚ ಹಸುರಿನ ಬನವೆ ನಿನಗೊಪ್ಪುವ ಉಡುಗೆ
ಭಾರತಿಯ ಪ್ರಿಯ ತನುಜೆ, ಮಣಿವೆ ನಿನ್ನಡಿಗೆ

ಆ ಹಿರಿಮೆ, ಆ ಘನತೆ ಮತ್ತೆ ಮೆರಗಿಸು ಮಾತೆ
ಪ್ರೇಮ ಸೌಹಾರ್ದತೆಯ ಜ್ಯೋತಿ ಬೆಳಗಿಸು ಮಾತೆ
ಅಪ್ಪಿ ಅಲಂಗಿಸು ನನ್ನ ಸೆರಗಂಚಿನಲಿ ಮಾತೆ
ಪರದೇಶಿ ಕಂದ ನಾ - ಮರೆಯದಿರು ಮಾತೆ

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಸಾಲು ಸಾಲು ಹಣತೆ

ಈ ಮಣ್ಣು

  • ಪ್ರಣಯ ದೀಪ
  • ನಿರಂತರ
  • ನಿನ್ನ ನೆಲೆ ಎಲ್ಲೊ
  • ಅವ್ಳು

  • ಮುಖಪುಟ / ಸಾಹಿತ್ಯ ಸೊಗಡು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X