ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಷ್ಷನು ಬಂದನು ಬಾಗ್ದಾದ್‌ ಬಳಿಗೆ ರಾತ್ರಿಯಾಗಿತ್ತು

By Staff
|
Google Oneindia Kannada News
  • ಡಾ. ಮೈ. ಶ್ರೀ. ನಟರಾಜ, ಗೈಥರ್ಸ್‌ ಬರ್ಗ್‌, ಮೇರೀಲ್ಯಾಂಡ್‌, ಯು.ಎಸ್‌.ಎ
    Email : [email protected]
ಬುಷ್ಷನು ಬಂದನು ಬಾಗ್ದಾದ್‌ ಬಳಿಗೆ
ರಾತ್ರಿಯಾಗಿತ್ತು
ಹುಣ್ಣಿಮೆ ಚಂದಿರ ಬಾನಿನ ತುಂಬ
ಬೆಳಕನು ಚೆಲ್ಲಿತ್ತು

ಬುಷ್ಷನ ಸೇನೆಯ ತುಕಡಿಗಳೆಲ್ಲ
ಬೀಡನು ಬಿಟ್ಟಿತ್ತು
ಕುವೈತಿನ ಮರಳಲಿ ಗೂಟವ ಜಡಿದು
ಡೇರೆಯ ಕಟ್ಟಿತ್ತು

ಆಫ್ಗನ್‌ ಯುದ್ಧವು ಮುಗಿಯುವ ಮೊದಲೇ
ತಾಳ್ಮೆಯು ಮೀರಿತ್ತು
ಒಸಾಮನ ಹಿಡಿಯುವ ಭರವಸೆಯೆಲ್ಲ
ಕರಗುತ ಬಂದಿತ್ತು

Saddam Husseinಪಾಕೀಸ್ತಾನದ ಮನೆಮನೆಯಲ್ಲಿ
ಆಲ್ಖಯಿದಾ ಅವಿತಿತ್ತು
ಮುಷರ್ರಾಫನ ಕಿಸೆಯಾಳಗೆಲ್ಲಾ
ಡಾಲರ್‌ ತುಂಬಿತ್ತು

ಉತ್ತರ ಕೊರಿಯದ ಕೋಟೆಯ ಒಳಗೆ
ಅಣುಬಾಂಬ್‌ ಚಿಗುರಿತ್ತು
ಆದರೂ ಬುಷ್ಷನ ದೃಷ್ಟಿಯು ಮಾತ್ರ
ಇರಾಕಲಿ ನೆಟ್ಟಿತ್ತು

ವಿಶ್ವಸಂಸ್ಥೆಯ ಸಭೆಗಳಲೆಲ್ಲ
ಚರ್ಚೆಯು ನಡೆದಿತ್ತು
ಫ್ರಾನ್ಸ್‌ ಜರ್ಮನಿ ರಷ್ಯದ ಗುಂಪು
ಕೂಟವ ರಚಿಸಿತ್ತು

ವಿಶ್ವಕೆ ಉಳಿದಿಹ ಒಂದೇ ಶಕ್ತಿ
ಅಮೇರಿಕಾ ಎನಿಸಿತ್ತು
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನು
ಬಳಸಲು ಹೊರಟಿತ್ತು

George W. Bushಕಾಲನು ಕೆರೆಯುತ ಕದನಕೆ ಹೊರಟು
ಸದ್ದಾಮನ ಕೆಣಕಿತ್ತು
ವೀಟೋ ಮಾಡುವ ಫ್ರೆಂಚರ ಮೇಲೆ
ಕೆಂಡವ ಕಾರಿತ್ತು

ಕ್ರಿಮಿಗಳ ಬಾಂಬನು ತೆಗೆದಿಡು ಹೊರಗೆ
ಎನ್ನುತ್ತ ಅರಚಿತ್ತು
ಮಾರಕಾಸ್ತ್ರಗಳ ಮುಚ್ಚಿಟ್ಟಿರುವೆ
ಎನ್ನುತ ಕಿರುಚಿತ್ತು

ಮೂರೇದಿನದಲಿ ಎಲ್ಲವನೊಪ್ಪಿಸೆ
ಬಿಡುವೆನು ಎಂದಿತ್ತು
ಬುಷ್ಷನ ಬಂಧು ಬ್ಲೇರನ ಬಾಯಿ
ಭಾಷಣ ಬಿಗಿದಿತ್ತು

ನಿಶ್ಶಸ್ತ್ರಗೊಳಿಸಿದ ಸದ್ದಾಮನ ಸುತ್ತ
ಗೋರಿಯ ಕಟ್ಟಿತ್ತು
ಸುತ್ತಲ ಅರಬರ ಕೈಕೋಳಗಳ
ಕಳಚಲು ಹೊರಟಿತ್ತು

ಎಣ್ಣೆಯು ಗಿಟ್ಟಲು ಟೆಕ್ಸಸ್‌ ಮಿತ್ರರ
ಮೊಗದಲಿ ನಗುವಿತ್ತು
ಸಾಬರ ಬಡಿದರೆ ಯೆಹೂದ್ಯರಿಗೆಲ್ಲ
ಒಳಗೇ ಖುಷಿಯಿತ್ತು

ಎನ್ರಾನ್‌ ಗಲಾಟೆ ಜನಗಳ ನೆನಪಲಿ
ಮಾಸಿಹೋಗಿತ್ತು
ಮುಳುಗಿದ ಪೆನ್ಷನ್‌ ಏರಿದ ತೆರಿಗೆ
ಎಲ್ಲರ ಕತೆಯಾಯ್ತು!

ತಂದೆಯ ಋಣವನು ತೀರಿಸಿದಾತಗೆ
ನಿರಾಳದ ಉಸಿರಿತ್ತು
ಮುಂದಿನ ವರ್ಷದ ಚುನಾವಣೆಯಲ್ಲಿ
ಬುಷ್ಷನ ಗೆಲುವಾಯ್ತು?

  • ಸದ್ದಾಮನ ನಿಶ್ಯಸ್ತ್ರೀಕರಣ : ಓದುಗ ಮಿತ್ರರ ಭಾವತರಂಗ
  • ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

    ಮುಖಪುಟ / ಸಾಹಿತ್ಯ ಸೊಗಡು
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X