• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಿರೀಶ್‌ ಲೋಕನಾಥ್‌ ಮಟ್ಟೆಣ್ಣನವರಿಗೆ

By Staff
|
Sumatheendra Nadig
  • ಸುಮತೀಂದ್ರ ನಾಡಿಗ

ಶಾಸಕರ ಭವನದಲಿ ಬಾಂಬ್‌ಗಳನ್ನಿಟ್ಟು

ಶಾಕ್‌ ಕೊಟ್ಟ ಮಟ್ಟೆಣ್ಣನವರೇ,

ಕಲಾಂ ಅವರನ್ನು ಗುರುವಾಗಿ ತೆಗೆದುಕೊಂಡವರೆ

ಅವರೊಬ್ಬರೇ ನಾಯಕರೆಂದು ಗುರುತಿಸಿದವರೆ,

‘ನಿಜವಾದ ನಾಯಕರಿಲ್ಲ’ ಎಂದು ಹೇಳಲು ಸಿದ್ಧರಾದವರೆ,

ನಮ್ಮ ಸೆಕ್ಯುಲರಿಸ್ಟರು ಹೀಗೆಲ್ಲ ಹೇಳುವುದಿಲ್ಲ.

ಇನ್ನುಳಿದ ನನ್ನಂಥವರು ಒಳಗೊಳಗೆ ನೋಯುತ್ತ

ಸ್ನೇಹಿತರ ಜತೆಯಲ್ಲಿ, ಲಾಟರಿಯ ವಿರುದ್ಧ

ಇಂಗ್ಲಿಷ್‌ ಶಾಲೆಗಳ ಹಾವಳಿಯ ವಿರುದ್ಧ

ರೈತರ ಆತ್ಮಹತ್ಯಕ್ಕೆ ಕಾರಣಗಳ ವಿರುದ್ಧ

ಖಾಸಗೀಕರಣ, ಜಾಗತೀಕರಣ, ಪಾಶ್ಚಾತ್ಯೀಕರಣದ ವಿರುದ್ಧ

ನಮ್ಮ ಗೆಳೆಯರ ಜತೆಗೆ, ಮಾತಾಡುವುದರಲ್ಲೇ ಸ್ಪರ್ಧೆ ಮಾಡುವ ನಾವು

ಬೀದಿಗಿಳಿಯುವುದಕ್ಕೆ ತಯಾರಿಲ್ಲ

ಯಾವ ರಿಸ್ಕನ್ನೂ ತೆಗೆದುಕೊಳ್ಳುವುದಕ್ಕೆ ಸಿದ್ಧರಿಲ್ಲ.

ಒಬ್ಬ ವೀರಪ್ಪನನ್ನ ಹಿಡಿಯಲಿಕ್ಕಾಗದೆಯೆ

ನೂರಾರು ಪೊಲೀಸರನ್ನು ಬಲಿಕೊಟ್ಟ ಸರಕಾರ

ನಿಮ್ಮಂಥವರ ಬಾಯನ್ನು ಮುಚ್ಚಿಸಲಿಕ್ಕೆ

ನ್ಯಾಯ, ಕಾನೂನು, ಕ್ರಿಮಿನಲ್‌ ಪ್ರೊಸೀಜರ್‌ ಕೋಡು,

ಸೇವಾನಿಯಮ ಇತ್ಯಾದಿ ಹೆಸರಿನಿಂದ, ನಿಮ್ಮನ್ನು ಗೋಳಿಡಿಸುತ್ತಾರೆ,

ನಮಗೆ ಗೊತ್ತು.

ಎಲ್ಲಿ ಇದೆ ಹೇಳಿ ಪ್ರಜಾಪ್ರಭುತ್ವ ? ಈಗಿರುವುದೆಲ್ಲ

ಪಕ್ಷಗಳ ಸರ್ವಾಧಿಕಾರ. ಒಬ್ಬ ಸರ್ವಾಧಿಕಾರಿಯ

ಹಿಂದೆ ಹೌದಪ್ಪಗಳ ಗ್ಯಾಂಗು. ಅವರಲ್ಲಿ ಭ್ರಷ್ಟರು,

ದುರ್ಜನರು, ಗೂಂಡಾಗಳು, ತಲೆ ಹಿಡುಕರು,

ರಾಕ್ಷಸರು, ಸ್ವಂತಿಕೆ ಮಾರಿಕೊಂಡವರು.

ಕಾಡಿನಲ್ಲೊಬ್ಬನೇ ಅಳುವಂತೆ ಪ್ರಜೆ ಅಳುತ್ತಲಿದ್ದಾನೆ.

ಯಾರೂ ಕೇಳುವುದಿಲ್ಲ ಅವನನ್ನು, ಕೇಳುತ್ತಾರೆ ವಕೀಲರು

ಫೀಸನ್ನು, ಪೊಲೀಸರು ಲಂಚವನ್ನು, ನರ್ಸಿಂಗ್‌ ಹೋಂಗಳು

ಮೂತ್ರ ಪಿಂಡಗಳನ್ನು, ಅವಕಾಶ ಸಿಕ್ಕಾಗ ಹೃದಯವನ್ನು.

ರಾಜಕಾರಣಿಗಳು ಕೇಳುತ್ತಾರೆ ಐದು ವರ್ಷಕ್ಕೊಮ್ಮೆ ಓಟನ್ನು.

ಗಿರೀಶ್‌ ಮಟ್ಟೆಣ್ಣನವರೆ, ನಮ್ಮೆಲ್ಲರ ವ್ಯಥೆಯಿಂದ ಹುಟ್ಟಿ ಬಂದವರೇ,

ಮುಂದೆ ಹುಟ್ಟಬಹುದಾದ ಕ್ರಾಂತಿಗೆ

ಸೂಚನೆಯ ಕೊಟ್ಟವರೇ, ಎಲ್ಲೋ ನಾಲ್ಕಾರು ಜನ

ನೀವು ಮಾಡಿದ ಕೆಲಸ ಕ್ಷಮಾರ್ಹವೆನ್ನುತ್ತಾರೆ ಅಷ್ಟೆ.

ಕೆಲವರು ನಿಮ್ಮ ಧೈರ್ಯಕ್ಕೆ ಮೆಚ್ಚುತ್ತಾರೆ.

ಉಳಿದವರು ಬಹಳಷ್ಟು ಜನ ನಿಮ್ಮ ಜತೆಗಿಲ್ಲ.

ಲಂಚ ಕೊಟ್ಟರೂ ನಮ್ಮ ಮಕ್ಕಳಿಗೆ ಕೆಲಸ ಸಿಗದಿದ್ದಾಗ,

ನಮ್ಮ ಹೆಣ್ಣು ಮಕ್ಕಳಿಗೆ ಸೊಸೆಯಂದಿರಿಗೆ

ಮಾನಭಂಗವಾಗುವಂತಹ ಸ್ಥಿತಿಯು ಹುಟ್ಟಿಕೊಂಡಾಗ,

ನಮ್ಮ ಜಮೀನನ್ನೊಬ್ಬ ಫುಡಾರಿ ಕಬಳಿಸಿದಾಗ,

ವಿದ್ಯುಚ್ಛಕ್ತಿ, ಕುಡಿಯುವ ನೀರು, ಅನ್ನ ಸಿಗದಿದ್ದಾಗ

ಆಗ ಸಿಡಿಯುತ್ತಾರೆ ರೈತರು, ನೌಕರರು ಮತ್ತು ಕಾರ್ಮಿಕರು

ಒಬ್ಬ ಮಟ್ಟೆಣ್ಣನವರ್‌ ಈಗ ಕಾಣಿಸಿದ್ದಾರೆ

ಭ್ರಷ್ಟಾಚಾರದಿಂದಾಗಿರುವ ನಮ್ಮೆಲ್ಲರ ನೋವನ್ನು ಪ್ರತಿನಿಧಿಸುತ್ತಲಿದ್ದಾರೆ.

ರಾಜಕಾರಣಿಗಳು ಎಂದು ಕರೆಸಿಕೊಳ್ಳುತ್ತಿರುವ ರಾಕ್ಷಸರು

ತಾವು ಸರ್ವಾಧಿಕಾರಿಗಳು ಎಂದು ಭಾವಿಸಿದ್ದಾರೆ

ತಮ್ಮನ್ನು ಆರಿಸಿದವರನ್ನು ಈಗ ಮರೆತಿದ್ದಾರೆ

ನಮ್ಮ ನೆಲ ನೀರು ಗಾಳಿ ಬೆಳಕುಗಳನ್ನು

ನಮಗೇ ಮಾರುವುದಕ್ಕೆ ಹೊರಟಿದ್ದಾರೆ

ಆಕಾಶ ಮಾರ್ಗಗಳ ಗುತ್ತಿಗೆಗೆ ಕೊಡುತ್ತಾರೆ.

ಮಾತೃಭೂಮಿಯ ಮಾರಿ ಸೌಧಗಳನ್ನು ಕಟ್ಟುತ್ತಾರೆ

ದೇಶದುದ್ದಕ್ಕೆ ಸ್ಲಮ್ಮುಗಳ ಕೊಳಕನ್ನು ಹರಡಿದವರು,

ನಮ್ಮ ದುಡ್ಡಿನಿಂದಲೇ ಬೀಳುವಂತಹ ಶಾಲೆ ಕಟ್ಟಿದವರು,

ಬಡಜನರ ಹೊಟ್ಟೆ ಹೊಡೆದು, ಹೊಟ್ಟೆಯನು ಬೆನ್ನಿಗೇ ಅಂಟಿಸಿಬಿಟ್ಟವರು,

ಸಾರಾಯಿ ಸೀಮೆಯೆಣ್ಣೆ ಗುತ್ತಿಗೆಯ ಹಿಡಿದವರು

ಕಾಡುಗಳಿಂದ ಗಿರಿಜನರ ಅಟ್ಟಿದವರು, ಬಡ ಹೆಣ್ಣು ಮಕ್ಕಳನು

ಸೂಳೆಯರಾಗಿ ಮಾರಾಟಕ್ಕೆ ಇಂಬುಕೊಟ್ಟವರು,

ಜಗತ್ತಿನ ಭಯೋತ್ಪಾದಕರ ತಂಬುಲಕೆ ಕೈಯಾಡ್ಡಿ

ಕಪ್ಪು ಹಣ ಮನರಂಜನೆಗೆ ಹರಿಯಬಿಟ್ಟವರು,

ಮತ್ತೆ ಮತ್ತೆ ಸೂಳೆಯರ ಜೈಲಿಗೆ ಹಾಕಿ, ಮತ್ತೆ ಮತ್ತೆ ಬಿಡುತ್ತ

ಸೂಳೆಗಾರಿಕೆಯಿಂದ ಮಾಮೂಲು ಪಡೆವವರು,

ಸರಕಾರಿ ಆಸ್ಪತ್ರೆಗಳಲ್ಲಿ ಬಡಜನರ ಸುಲಿಯಬಿಟ್ಟವರು,

ಮಕ್ಕಳನು ಮಾರುವುದಕ್ಕೆ ಅವಕಾಶ ಕೊಟ್ಟವರು, ನಮ್ಮ ಶಾಸಕರು.

ದಲಿತರೊಗ್ಗಟ್ಟಾಗಿ ಅಧಿಕಾರ ಪಡೆವರೆಂದು

ಅವರಲ್ಲಿ ಜಾತೀಯತೆಯ ಬೆಳೆಸಿ ಒಗ್ಗಟ್ಟ ಮುರಿದವರು,

ಛಾಪಾ ಕಾಗದ, ನೋಟು, ನೂರಾರು ಔಷಧಿಯ

ನಕಲು ಮಾಡುವುದಕೆ ಅವಕಾಶ ಕೊಟ್ಟವರು,

ಇಂಥವರ ಅನಾಚಾರದಾಸ್ಥಾನ ಶಾಸಕರ ಭವನದಲಿ

ಬಾಂಬುಗಳ ಅಡಗಿಸಿ ಇಟ್ಟು,

ಸಿಡಿಯುವುದು ಬೇಡೆಂದು

ಮುಂಜಾಗ್ರತೆಯ ವಹಿಸಿ ಸೂಚನೆಯ ಕೊಟ್ಟಿದ್ದ

ಮಟ್ಟೆಣ್ಣನವರೇ, ನಿಮಗೆ ನಮಸ್ಕಾರ.

Police arresting Girish Mattannanavarಈಗಿರುವ ಭ್ರಷ್ಟಾಚಾರ ಹೀಗೆಯೇ ನಡೆದರೆ

ಭ್ರಷ್ಟಾಚಾರಿ ಮಂತ್ರಿಗಳ ಕೊಲೆಯಾಗುತ್ತೆ

ಅವರ ಮನೆ ಆಫೀಸಲ್ಲಿ ಬಾಂಬು ಸಿಡಿಯುತ್ತೆ

ಜನರು ಸಿಡಿದೆದ್ದಾಗ ದೇಶ ನರಳುತ್ತೆ.

ನಾನು ಹೇಳಿದ ಮಾತು ಕಾವ್ಯವೇನಲ್ಲ,

ಕಾವ್ಯ ಇಳಿದಿದೆ ಈಗ ಇಂಥ ದುರ್ಗತಿಗೆ,

ಕಾವ್ಯವ್ನನೇರಿಸಲು ವ್ಯಾಸ ವಾಲ್ಮೀಕಿ ಎತ್ತರಕ್ಕೆ

ಬದುಕು ಏರಲೇ ಬೇಕು ಮಟ್ಟೆನವರಂಥ ಕನಸುಗಾರಿಕೆಗೆ

ಸ್ನೇಹಿತರೇ, ಮಟ್ಟೆಣ್ಣನವರೊಬ್ಬ ಆದರ್ಶವಾದಿ,

ಕಾನೂನು ದೃಷ್ಟಿಯಲಿ ಅವನು ಅಪರಾಧಿ,

ಧರ್ಮ ಜಾಗೃತಿಗೆ ಬಂದವನು, ಅವನೊಬ್ಬ ಪ್ರವಾದಿ,

ನೈತಿಕತೆಯೇ ನಿಮಗೆ ಮುಖ್ಯವಾದರೆ ಆಗ ಅವನೊಬ್ಬ ನಿರಪರಾಧಿ.

ಯಾರೀ ಮಟ್ಟೆಣ್ಣನವರ್‌0 ?

ಭ್ರಷ್ಟರ ನಿಗ್ರಹಕ್ಕೆ ಬಾಂಬ್‌ ಹಿಡಿದ ‘ದೇಶಪ್ರೇಮಿ’

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more