• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಉರಿಯ ಹೊಗುತಿಹಳಯ್ಯೋ, ಜಾಕಬ್ಬೆ, ನಿಲ್ಲು ನೀ!’

By Staff
|

ಕನ್ನಡ ನಾಡಿ ಚರಿತೆಯ ಪುಟಗಳಲ್ಲಿನ ಸ್ಮರಣೀಯ ಸತಿಯರಲ್ಲಿ ದೇಕಬ್ಬೆಯೂ ಒಬ್ಬಳು. ಪತಿ ಪರಮೇಶ್ವರನೆಂದು ನಂಬಿ ಬದುಕಿದ ದೇಕಬ್ಬೆ ವೀರಸತಿ. ಮಹಾಸತಿ. ಗಂಡನ ಸಾವು ಸಹಿಸದೆ ಅಗ್ನಿಕುಂಡಕ್ಕೆ ಹಾರಿದ ಸತಿಯ ಕುರಿತ ಒಂದು ಆಪ್ತ ಕವನ, ನಾಗಲಕ್ಷ್ಮಿ ಹರಿಹರೇಶ್ವರ ಅವರ- ‘ದೇಕಬ್ಬೆ’. ಹೆಗ್ಗಡದೇವನಕೋಟೆಯಲ್ಲಿನ ದೇಕಬ್ಬೆ ಶಾಸನಕ್ಕೆ 946 ವರ್ಷ ತುಂಬಿದ ಸಂದರ್ಭದಲ್ಲಿ ‘ದೇಕಬ್ಬೆ’ ಕವಿತೆಯ ಓದು ಅರ್ಥಪೂರ್ಣ. ಈ ಕವಿತೆ ‘ಕಿಶೋರಿ’(1974) ನಿಯತಕಾಲಿಕೆಯಲ್ಲಿ ಈಮುನ್ನ ಪ್ರಕಟವಾಗಿತ್ತು .Nagalakshmi Harihareshwara, Mysoreದೇಕಬ್ಬೆ

  • ನಾಗಲಕ್ಷ್ಮಿ ಹರಿಹರೇಶ್ವರ, ಸರಸ್ವತೀಪುರಂ, ಮೈಸೂರು

hoysala_usa@yahoo.com

ಹಿರಿ-ಮಿನಿ ಚಳುವಳಿಗಳ ಮಳೆಗಳು ಮುಗಿಯೆ,

ಹೋದೆನು ಕಾಲೇಜಿಗೆ ರಜಗಳ ಆ ದಿನಗಳು ಕಳೆಯೆ.

ಎಂದೂ ಇಲ್ಲದ ಪರಿಷೆ, ಮೀನಸಂತೆಯ ನುಗ್ಗು;

ಚಿತ್ರ ಬಿಡುಗಡೆಯ ದಿನ, ಮಂದಿರದ ಮುಂದಿನ ಮಂದೆ.

ಚಿಟ್ಟೆ, ಮದನಿಕೆ, ಕಪ್ಪೆ, ಹಿಪ್ಪಿ, ಬೃಹನ್ನಳರೆಲ್ಲ,

ಅಮಾವಾಸ್ಯೆ ಹುಣ್ಣಿಮೆಯ ತಾರೆಯರೂ ಹಾಜರು;

ಕುತೂಹಲದ ಸ್ಪ್ರಿಂಗ್‌ ಆಗಿ, ಒಳಗೆ ನುಗ್ಗಿದೆ ನಾನು.

ಟೆಲಿಫೋನ್‌ ಬೂತಿನೊಲು ಒಂದು ಗಾಜಿನ ಪೆಟ್ಟಿ;

ಚಕ್ರಗಳು, ಸನ್ನೆಗಳು, ಮೀಟರುಗಳು, ಗೇರುಗಳು,

ಹಲಬಗೆಯ ದೀಪವಿನ್ಯಾಸಗಳು, ಗುಂಡಿಗಳು;

ಹೆಸರು ತಿಳಿಯದ ಭಾಗ ನೂರಾರು, ಮಧ್ಯದಲಿ

ಸುತ್ತ ತಿರುಗುವ ಎತ್ತರದ ಸುಖಾಸನಗಳೆರಡು.

ವಿವರಿಸುತ ಬಳಿ ನಿಂತ ಪ್ರೊಫೆಸರನು ಕಂಡೆ;

‘‘ಇದು ಕಾಲ ಯಂತ್ರ, ಟೈಂ ಮಷೀನ್‌!

ವಿಜ್ಞಾನ ಪ್ರಕೃತಿಯ ಗೆದ್ದ ಟೊಪ್ಪಿಗೆಯ ಪುಕ್ಕ;

ಒಳ ಕುಳಿತು, ಮೀಟರಿದನೀಪರಿ ತಿರುಗಿಸಿ, ಸನ್ನೆ

ಇದನೊತ್ತಿ, ಇದನೆಳೆದು, ಈ ಗುಂಡಿಯಾತ್ತಿದರೆ

ಕುರಿತೆಡೆಗೆ ಹೋಗುವಿರಿ, ಕುರಿತ ವೇಳೆಗೆ ಸಾಗಿ;

ನೂರು ಸಾವಿರ ವರುಷ ಮುಂದೆ ಸಾಗಲು ಬಹುದು,

ಬಯಸಿದೊಡೆ ಶತಮಾನ ಶತಮಾನ ಹಿಂದಕ್ಕೂ.

ತಂತ್ರ ಹೀಗಿದೆ ನೋಡಿ, ವಿನ್ಯಾಸ ಇದರದು ಇಂತು.’’

ಹೇಳುತಿದ್ದರು ಅವರು, ಪಾಳಿ, ಪ್ರಾಕೃತ ನಮಗೆ,

ಅರ್ಥವಾಗದ ಭಾಷೆ, ಏನೇನೋ ಪರಿಭಾಷೆ.

ಕೊನೆಗೆ, ಇದು ಕೇಳಿಸಿತು: ‘‘ಯಾರೂ ಪರೀಕ್ಷಿಸ ಬಹುದು!’’

ಗಿಜಿಬಿಜಿಯ ಗುಸ್ಸು ಗುಸು ನೂಕು ನುಗ್ಗಲು ಹೆಚ್ಚಿ,

ನಿಂತ ಗುಂಪೇ ಪೆಂಡುಲಂ ಆಗಿತ್ತು, ತೂಗಿತ್ತು.

ಯಾರೋ ನೂಕಿದರೆನ್ನ, ‘ಓ’ ಎಂಬ ಹುಯಿಲೆದ್ದು,

ಏನೂ ತಿಳಿಯುವ ಮುನ್ನ, ನಾನಿದ್ದೆ ‘ಯಂತ್ರ’ದಲಿ.

‘‘ಪ್ರೊಫೆಸರ್‌,

ಈ ನಾಡ ಹೆಸರಾಂತ ಅಮರ ರಮಣಿಯರನ್ನ

ಕಾಂಬ ಹಂಬಲ, ಪ್ರೊಫೆಸರ್‌; ಒಯ್ಯಿರೊಯ್ಯನೆ ಅತ್ತ.’’

‘‘ಯಾರ ನೋಡುವ ಕಾಂಕ್ಷೆ ? ರಾಜ್ಯ ಸೂತ್ರವ ಹಿಡಿದ

ಪುಲಿಕೇಶಿ ಹಿರಿಯ ಸೊಸೆ ವಿಜಯ ಭಟ್ಟಾರಿಕೆ ಬೇಕೆ?

ಬನವಾಸಿಯಾಳಿದ ಮೈಲೆ? ಕಿಸುಕಾಡ ಅಕ್ಕ?

ಗೇರುಸೊಪ್ಪೆಯ ರಾಣಿ ಚೆನ್ನ ಭೈರಾದೇವಿ?

ಭೂಮಿದಾನದ ಖ್ಯಾತ ಸೊರಟೂರ ಜಕ್ಕಿಯಳೆ?

ಎಳೆತನದಿ ಪಾಲೆರೆವಂದು, ‘‘ನಂಬಿದರ್ಗೆ ಎರೆವಟ್ಟಾಗಿರು’’- ಎಂದು

ಜೋಗುಳದಿ ಕಿವಿಗೊರೆದ ಲಕ್ಷ್ಮೀಧರಾಮಾತ್ಯನ ತಾಯಿ?

ಬಯಸಿ ಗಂಗೆಯಲೀಸಿ ಗಂಗದತ್ತನ ಹೆತ್ತ

ವಿಜಯಳೆ? ಪುಲಿಗೆರೆಯ ಕುಂಕುಮಳೆ? ರೆಬ್ಬೆಲಳೆ?

ಕೆರಸಿ, ಕಾವಲಿ, ಹುಟ್ಟು, ಕೊಡ, ಒರಳು, ಸಟ್ಟುಗದ

ಕೂಪದಿಂ ಹೊರಬಿದ್ದು, ಮೃಡನ ಗುಡಿ ಕಟ್ಟಿಸಿದ

ಸೆಟ್ಟಿಕವ್ವೆಯೆ? ನೃತ್ಯ ಮೈವೆತ್ತಾಕೆ ಕಳಚೂರ್ಯ ಸೋವಲಳೆ?

ಜಿನ ಚಾರುಚರಣಾರ್ಚನವಿನೋದೆ, ಮೃಗಮದಾಮೋದೆ

ತ್ರಿಭುವನಮಲ್ಲನ ರಾಣಿ, ಇಂಗುಣಿಗೆ ಜಾಕಲಳೆ?

ಹರಿಗನುರಸ್ಥಳಕೆ ಲಕ್ಷ್ಮಿ, ಲಚ್ಚಲಳೆ? ಬಲಚಿಯೆ?

ಓಬವ್ವೆ, ಚನ್ನಮ್ಮ, ಹೊನ್ನಮ್ಮ, ಕಂತಿಯೆ?

ಕವಯಿತ್ರಿ ಗಂಗೆ, ಅಕ್ಕ, ಗಿರಿಯಮ್ಮ?

ತಂದೆ ಮಾದನ ಜೊತೆಗೆ ಕಾದಿದಾ ಹರಿಯಕ್ಕ?

ತಲೆಗೆ ಮುಂದಲೆಯಾಗಿ ಸಿಡಿದೆಲೆಯ ಕೊಡಲಿದ್ದ

‘ಗರುಡ’ ಲಕ್ಷ್ಮನ ಮಡದಿ ಲೆಂಕಿ ಸುಗ್ಗಲದೇವಿ?

ತಂದೆ ನಾಗತ್ತರ ಮಡಿಯೆ, ಕರ್ತವ್ಯ ಪ್ರಜ್ಞೆಯ ಬೆಳಗಿ,

‘ವೇಳೆಗೊಂಡ್‌’ ಅಸು ನೀಗಿ ಮೆರೆದಾಕೆ ಕೊಂಡಬ್ಬೆ?

ಶಿವಗಂಗೆಯಡಿ ‘ಮುಡಿಪಿ’, ಸಂನ್ಯಸನದಿಂ ಮಡಿದ

‘ಸವತಿಗಂಧವಾರಣೆ’ ರಾಣಿ, ನೃತ್ಯ-ಸಂಗೀತ ಪ್ರವೀಣೆ

ಶಾಂತಲೆಯೆ? ಕೇತಲಳೆ? ಅತ್ತಿಮಬ್ಬೆಯೆ? ದೇಕಬ್ಬೆ?’’

‘‘ಯಾರವಳು ದೇಕಬ್ಬೆ?’’

‘‘ಇದೊ ನೋಡಿ, ಬಂದಿಹೆವು ಹೆಗ್ಗಡದೇವನ ಕೋಟೆ;

ರವಿಗ ಪೊನ್ನಕಬ್ಬೆಯರಣುಗಿ ಲಲಿತಾಂಗಿ ದೇಕಬ್ಬೆ,

ಕಂಬಲಿಸಿ, ಹಠಮಾಡಿ, ಹೆತ್ತವರ ಮನವೊಲಿಸಿ,

ಮನದನ್ನ ಏಚನನು ವರಿಸಿಹಳು, ಬಂದಿಹಳು.

ಬೆಳತೂರ ನವಲೆಯಲಿ, ತನ್ನ ಇನಿಯನ ಮನೆಗೆ.

ಊರೆಲ್ಲ ಸಂತಸದ ಇಂಗಡಲಲೀಸುತಿರೆ,

ನೋಡಿ, ಬರಸಿಡಿಲಾಗಿ ಎರಗಿಹರು ದಾಯಿಗರು!

ಕಂಕಣದ ಹಸಿ, ಸೇಸೆ ಆರಿಲ್ಲ, ಜಾರಿಲ್ಲ ;

ಸಿಡಿದೆದ್ದನ್‌ ಏಚ; ಖಡ್ಗ ಕವಚವ ತೊಟ್ಟ ;

ತಂದೆ ತಾಯ್ಗಳಿಗೆರಗಿ, ಮೃಗನಯನಿಯೆಡೆ ತಿರುಗೆ,

ಹಸೆಯ ಬಳಿಯಿಂದೊಂದು ಆರತಿಯನೆತ್ತಿಹಳು;

ತಿಲಕವಿಡೆ, ತನ್ನವಳ ಮುಂದಲೆಯ ಮೂಸಿಹನು;

ವೈರಿಗಳ ಸದೆ ಬಡಿದು ತುಂಡರಿಸೆ ನುಗ್ಗಿಹನು-

ಲೋಕ ಬೆರಗಾಗುತಿರೆ ಹಯವೇರಿ ಕರಗಿದನು!

ನೆತ್ತರೋಕುಳಿ ಸುತ್ತ, ನಗುವಡಗಿ ಹೆಡೆಯಾಡೆ,

ನಡುಹಗಲ ಗ್ರಹಣವಿದು ಕಳೆವುದನೆ ಕಾಯುತಿರೆ,

ಕಾಯುತಿರೆ, ಕಾಯುತಿರೆ, ಕಾ ಯು ತಿ ರೆ, ಕಾ.. ಯು.. ತಿ.. ರೆ..-

ಚಾರ ಓಡುತ ಬಂದ; ಕುಸಿದ, ಗದ್ಗದನಾದ;

‘ನಾವು ಕೆಟ್ಟೆವು, ಅಯ್ಯೋ, ಕಡುಗಲಿಗೆ ಕೆಡುಕಾಯ್ತು,

ಹೇಗೆ ಹೇಳಲಿ, ಏಚ ಮೋಸಕ್ಕೆ ಬಲಿಯಾದ,

ಸೆರೆಯಾದ, ಕೊಲ್ಲಲಿಕೆ ತಲಕಾಡಿಗೊಯ್ದಿಹರು!’

ಚೀರಿ ಚಿಟ್ಟನೆ, ಕುಸಿದು, ದೇಕಬ್ಬೆ ಒರಗಿದಳು!

ಮೈತಿಳಿದು ಅಳುತಳುತ ಮೆಳುದನಿಯಲುಸಿರಿದಳು:

‘ಏಚನಿಲ್ಲದೆ ನಾನು ಇನ್ನೇಕೆ ಇರಬೇಕು?

ಪತಿಯ ಪರೋಕ್ಷದಿ ನನಗೆ ಆಚರಿಸಲೆರಡೆ ನೋಂಪಿ-

ಜಿನದೀಕ್ಷೆ ಆಚರಣ, ಶುಭಚರಿತದಲಿ ಮರಣ;

ಪತಿಗೆ ಮುನ್ನವೆ ನಾನು ಸ್ವಾಗತಿಸಲಲ್ಲಿರುವೆ,

ಕೊಟ್ಟ, ಕೊಂಡ ಕುಲಕ್ಕೆ ಬದುಕಿ ಬರಲಿಹುದೇನು?

ಬೇಡ, ಮಾಣು, ಎಂದಾರು ನುಡಿಯದಿರಿ ಬಂಧುಗಳೆ!

ಆದರದಿ ಬೀಳುಕೊಡಿ ಚಿತೆಯ ಕೊಂಡಕೆ ನಡೆವೆ-

ಎನುತ ದೇವರ ದೇವಗಳ್ತಿಯಿಂ ಕೈಮುಗಿದು...’’

‘‘ಉರಿಯ ಹೊಗುತಿಹಳಯ್ಯೋ, ಜಾಕಬ್ಬೆ, ನಿಲ್ಲು ನೀ!

ತಡೆಯಲಾರರೆ ಯಾರೂ, ನಿಲ್ಲಿಸಿರಿ, ಪ್ರೊಫೆಸರ್‌!

ಹಿಂತಿರುಗೆ ಹೋಗೋಣ,

ಮನೆಯವರ ನೆನಪು!’’.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more