ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ-ಶಾಂತಿ ಮತ್ತು ಬೇವು-ಬೆಲ್ಲ

By Staff
|
Google Oneindia Kannada News
Suptha deepthiಯುದ್ಧ ಭಯದ ನೆರಳಿನಲ್ಲಿ ಹಬ್ಬದೊಂದು ಪಲ್ಲವ,
ಬೇವು-ಬೆಲ್ಲ ಬೊಗಸೆಯಲ್ಲಿ , ಪಕ್ಕದಲ್ಲಿ ತಾಂಡವ ;
ಇಹದ ಸುಖದ ಚಿಂತೆಯಲ್ಲಿ ಪರರ ತರಿದ ಮಾನವ,
ತನ್ನ ದೇವ-ಶಿಲುಬೆಯನ್ನೆ ರಕ್ತಸಿಕ್ತ ಮಾಡುವ.

ಯಾವ ತಾಯ ಮಡಿಲು ಬರಿದು, ತಂದೆ ಎದೆಯು ಒಡೆಯಿತು,
ಯಾವ ಪ್ರೀತಿ-ಹಕ್ಕಿ ತನ್ನ ಜೀವಕಾಗಿ ಅರಸಿತು;
ಯಾವ ಕಂದ ಅಮ್ಮನಿಂದ ಕಣ್ಣನೀರನುಂಡಿತು,
ಯಾವ ಭೂಮಿಯಾಡಲು ತಪ್ತ ನೆತ್ತರಿಂದ ನೆನೆಯಿತು.

ಅರ್ಥವಿಲ್ಲ , ಸ್ವಾರ್ಥವೆಲ್ಲ ; ಬದುಕು ಬವಣೆ ಹಬ್ಬಿದೆ,
ತನ್ನ ಊಟದೆಲೆಯಲಿರುವ ಕೆಸರು ಗೌಣವಾಗಿದೆ;
ಅರಗಲಾರದಂಥ ತುತ್ತು , ಛಲದಿ ಬಾಯಾಳಿಟ್ಟಿದೆ,
ತಮದ ಮದದ ಅಟ್ಟದಲ್ಲಿ ಏಣಿ ಮೆಟ್ಟಿ ನಿಂತಿದೆ.

ಜಗದ ಮಾನ-ಪ್ರಾಣ-ಧನವ ಕಾವ ದೇವನಾವನು?
ಯಾವ ಜಾತಿ-ಜೀವನಕ್ಕೆ, ಯಾವ ಬಣ್ಣ ಆತ್ಮನು?
ಇರುಳು ಕಂಡ ಬಾವಿಯಲ್ಲಿ ಹಗಲು ಬೀಳ್ವನಾತನು!
ಬಿಲದ ಸರ್ಪವನ್ನು ಹಿಡಿದು ಮನೆಗೆ ತಂದನೀತನು!

ಕರಿಮೋಡದ ಮರೆಯಲ್ಲಿಹ ಬೆಳ್ಳಿಚಂದ್ರನಂತಿರೆ,
ಮುಗ್ಧ ಮನದ ಕನಸುಗಳು, ಧೂಮ್ರಾಕ್ಷನ ಕೈಸೆರೆ;
ಹರಡಿ ನಿಂತ ಮರದ ನೆರಳಿನಂತೆ ಇರಲಿ ಆಸರೆ,
ಬಿರು ಬೇಸಗೆ ತಂಪಾಗಲಿ, ಕರಗಲೆಲ್ಲ ತೊಂದರೆ.

ಹೊಸ ಚೇತನ ಪಲ್ಲವಿಸಲಿ, ಹೊಸ ಚಿಂತನ ಮೂಡಲಿ,
ಹೊಸ ಚಿಲುಮೆಯ ಒಸರಿಂದ ಹೊಸ ನೀರು ಚಿಮ್ಮಲಿ;
ಹೊಸ ವರುಷದ ಪ್ರತಿಘಳಿಗೆಯು ಹಸಿರಾಗಿ ಹೊಮ್ಮಲಿ,
ಹೊಸ ಗಾಳಿಯು ಉಸಿರಾಡಲಿ, ಜಗಜೀವನ ನಲಿಯಲಿ.

ಯುದ್ಧ ಭಯದ ನೆರಳಿನಲ್ಲಿ ಹಬ್ಬದೊಂದು ಪಲ್ಲವ,
ಬೇವು-ಬೆಲ್ಲ ಬೊಗಸೆಯಲ್ಲಿ , ಸ್ನೇಹ-ಪ್ರೀತಿ ಹಂಚುವ;
ಮರುಳು ಭ್ರಾಂತಿ ಹೊರಳಿ ನಿಲಲಿ, ಕಳೆಯಲೆಲ್ಲ ರೌರವ,
ಭೀತಿ ಕಳಚಿ, ನೀತಿ ಉಳಿಸಿ, ಮರಳಿ ಶಾಂತಿ ಕಾಣುವ.


ಹೇಳು ಮನಸೇ
ಜಾಗತಿಕ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕವಿತೆ
ಯುದ್ಧ ಸಂಬಂಧಿ ಇನ್ನೊಂದು ಕವಿತೆ; ಸದ್ದಾಮನ ನಿಶ್ಯಸ್ತ್ರೀಕರಣ


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X