ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

By Staff
|
Google Oneindia Kannada News

ವಿಮಲ ವಚನಗಳು

  • ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
21
ತರು ಮರದಿ ಗಾಳಿಯ ಮರ್ಮರದ ಭಾಷೆ
ಹರಿವ ನದಿ, ಸುರಿವ ಮಳೆಗೊಂದೊಂದು ಭಾಷೆ
ಗಿಳಿಯ ಕೋಗಿಲೆಯ ಮರಿದುಂಬಿಗಳ ಭಾಷೆ
ಹುಲಿಕರಡಿ ಸಿಂಹಗಳ ಗರ್ಜನೆಯ ಭಾಷೆ
ಗುಡುಗು ಸಿಡಿಲಿನ ಭಾಷೆ, ಕಡಲಿನಬ್ಬರದ ಭಾಷೆ
ತಾಯಿ ಮಗುವಿನ ಭಾಷೆ, ಪ್ರೇಮಿಗಳ ಪ್ರಿಯ ಭಾಷೆ
ಗೀತ, ನರ್ತನ, ಕಲಾವಿದರ ಭಾಷೆ
ವಿಜ್ಞಾನಿ, ತತ್ವಜ್ಞಾನಿಗಳ ಭಾಷೆ
ಕನ್ನಡ ಸಂಸ್ಕೃತ ಹಿಂದೀ ತಮಿಳು ಮರಾಠಿ ಭಾಷೆ
ಇಂಗ್ಲೀಷು ಫ್ರೆಂಚು ಚೀನೀ ಜಪಾನೀ ಭಾಷೆ
ಕೇಳಿಸದೆ ಕೇಳಿಸುವ ಕೈಸನ್ನೆಗಳ ಭಾಷೆ
ಜಗವ ಸುತ್ತಿರುವ ಕಂಪ್ಯೂಟರಿನ ಹೊಸ ಭಾಷೆ
ಎಷ್ಟೊಂದು ಭಾಷೆಗಳು ಜಗದ ತುಂಬ?
ವಿಮಲೇಶ ಶ್ರೀ ಚನ್ನಬಸವೇಶ್ವರ
ನಿನ್ನೊಡನೆ ಮಾತಾಡಲೆನಗಾವ ಭಾಷೆ ?
ಸಕಲ ಭಾಷಾ ವಿದುರ ನೀನಯ್ಯ
ಭಾಷಾತೀತನು ನೀನಯ್ಯ
ನಿನ್ನೊಡನೆ ನುಡಿಯಲು ಭಾಷೆ ಬೇಕೇನಯ್ಯ ?!

22
ದೇವರು ತಾಯಿ ಎಂದಿಹರು ಹಲವರು
ತಾಯಿ ದೇವರು ಎಂಬೆ ನಾನು
ತಾಯಾಗಿ ಬಂದೆನ್ನ ಪೊರೆಯುತಿಹೆ ದೇವ
ಶ್ರೀ ಚನ್ನಬಸವೇಶ, ವಿಮಲೇಶ
ನಿನ್ನ ಕರುಣೆಗೆ ಸೀಮೆಯಿಲ್ಲವಯ್ಯ

23
ತಾಯಿ ಎನ್ನ ಮೊದಲ ಗುರುವಾಗಿ
ಗುರುವು ಎನ್ನ ಎರಡನೆಯ ತಾಯಿಯಾಗಿ
ಬಾಳಿನ ದಾರಿಗೆ ಬೆಳಕನಿತ್ತಿಹರು
ಸದ್ಗುರು ವಿಮಲೇಶ ಚನ್ನಬಸವೇಶ
ನೀನು ಜಗಕೆಲ್ಲ ಮಹಾ ಗುರುವು
ಹಿರಿಯ ತಾಯಿ ತಂದೆ ಕಾಣಾ
ನಾ ಕರೆಯುವ ನೀ ಬಾರಾ

24
ಎಲ್ಲಿರುವೆಯೋ ದೇವಾ
ನನ್ನ ಕಣ್ಣಿಗೆ ಕಾಣದಂತೆ ?
ಎಲ್ಲಾದರೂ ಇರು ನೀನು
ಎಂತಾದರೂ ಇರು ನೀನು
ಎಂದೆಂದಿಗೂ ತಾಯಿಯ ಪ್ರೇಮದಿ
ನಿನ್ನ ಕರುಣೆಯ ಕಂಡಿಹೆನು ದೇವಾ
ವಿಮಲೇಶ ಶ್ರೀ ಚನ್ನಬಸವೇಶ್ವರ
ನಿನ್ನೊಲುಮೆ ನಿತ್ಯ ನಿರ್ಮಲವಯ್ಯಾ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X