ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

By Staff
|
Google Oneindia Kannada News

ವಿಮಲ ವಚನಗಳು

  • ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
41
ಎನ್ನ ಕಣ್ಣಿನೊಳಿರುವ ಜ್ಯೋತಿಲಿಂಗವು ನೀನಯ್ಯ
ಎನ್ನ ಮನದಾಳದ ಭಾವಲಿಂಗವು ನೀನಯ್ಯ
ಎನ್ನ ಉಸಿರಿನೊಳಿರುವ ಪ್ರಾಣಲಿಂಗವು ನೀನಯ್ಯ
ವಿಮಲೇಶ ಚನ್ನಬಸವ ಕೇಳಯ್ಯ
ನೀನು ನನ್ನೊಳಗಿರಲು ನಿಜಲಿಂಗ ನಾನಯ್ಯ

42
ಮುಂದಿಹುದು ಸ್ವರ್ಗವೆಂದೆದುರು ನೋಡುತ್ತ
ಇಂದಿರುವ ಜೀವನವ ವ್ಯರ್ಥ ಕಳೆವವನೇ
ಬಂದು ನಿಂತಾಗ ನೀ ಬಾಳ ತುದಿಯಲ್ಲಿ
ಸಂದ ಬದುಕಿನಲೆ ಸ್ವರ್ಗವಿತ್ತೆಂದು ತಿಳಿದರೆ?
ಚನ್ನಬಸವೇಶನ ಕರುಣೆಯಲಿ ದೊರೆತುದನು
ಇಂದೆ ಸುಖದಿಂದುಣ್ಣು ಬದುಕೆ ಶಿವನೆಂದು

43
ಸೂರ್ಯನೆನಗೆ ಚಂದ್ರನೆನಗೆ ಹಗಲು ಇರುಳು ನನಗಾಗಿ
ಬಳ್ಳಿ ಗಿಡವು ಹೂವು ಹಣ್ಣು ಪರಿಮಳವದು ನನಗಾಗಿ
ನವಿಲುಗರಿಯು ಜಿಂಕೆ ಮರಿಯು ಮಳೆಯಬಿಲ್ಲು ನನಗಾಗಿ
ನೆರಳ ತಂಪು ಗಾನದಿಂಪು ಬೆಳದಿಂಗಳು ನನಗಾಗಿ
ಹಿಮದ ಗಿರಿಯು ಕಡಲ ತೊರೆಯು ನದ ನದಿಗಳು ನನಗಾಗಿ
ತಾಯ ಮಮತೆ ಗೆಳೆಯರೊಲವು ಅಮಿತ ಪ್ರೇಮ ನನಗಾಗಿ
ಶ್ರೀ ಚನ್ನಬಸವದೇವ ಎನ್ನ ಶರಣು ನಿನಗಾಗಿ

44
ಕೊಡುವ ಶಿವನಿರುವಾಗ ಬಚ್ಚಿ ಇಡಲೇಕೆ ?
ನಿನ್ನ ಊಟದಿಂದ ಕೊಡು ನೀನೊಂದು ತುತ್ತು
ಕೊಟ್ಟದ್ದು ಆಗುವುದು ಒಂದಕ್ಕೆ ಹತ್ತು
ನಿನ್ನ ಬಾಯಲ್ಲಿರಲಿ ಬೆಲ್ಲದಂಥ ಮಾತು
ಆಡುವ ಬಾಯಿಗೆ ಸವಿ ಕೇಳುವವರಿಗೆ ಇಂಪು
ವಿಮಲೇಶ ಚನ್ನಬಸವೇಶ ಕೊಟ್ಟಿರುವಾಗ
ಮರೆಯದೆ ಗಳಿಸು ನೀ ಪ್ರೇಮವೆಂಬ ಸೊತ್ತು

45
ಯಂತ್ರ ನನ್ನದು ವಿದ್ಯುತ್ತು ನಿನ್ನದಯ್ಯಾ
ಮಂತ್ರ ನನ್ನದು ಓಂಕಾರ ನಿನ್ನದಯ್ಯಾ
ಪ್ರಯತ್ನ ನನ್ನದು ಯಶಸ್ಸು ನಿನ್ನದಯ್ಯಾ
ಭಕ್ತಿ ನನ್ನದು ಪ್ರಸಾದ ನಿನ್ನದಯ್ಯಾ
ವಿಮಲೇಶ ಚನ್ನಬಸವ ಪ್ರಭುವೇ
ನೀನು ಒಲಿದಾಗ ಸಕಲವೂ ನನ್ನದಯ್ಯಾ

46
ನೀ ಸುರಿವ ಗಂಗೆಯಲಿ ನಿನಗೆ ಮಜ್ಜನಕ್ಕಿಡುವೆ
ನೀನಿತ್ತ ಹೂಗಳ ನಿನಗೇರಿಸಿ ಪೂಜೆ ಮಾಡುವೆ
ನೀ ಕೊಟ್ಟ ಧ್ವನಿಯಲ್ಲಿ ನಿನ್ನ ಹಾಡುವೆ
ನೀನೆ ಜ್ಯೋತಿರ್ಲಿಂಗವಾದರೂ ನಿನಗೆ ಜ್ಯೋತಿ ಬೆಳಗುವೆ
ವಿಮಲೇಶ ಶ್ರೀ ಚನ್ನಬಸವೇಶ್ವರಾ
ಈ ನನ್ನ ಮರುಳುತನವ ಮನ್ನಿಸುವೆಯಾ ಪ್ರಭುವೇ ?

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X