ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ತ ಬೀಜರು

By Super
|
Google Oneindia Kannada News

ಹಿರಿಯ ಬುಡದ ದೊಡ್ಡಾಲದ ನೂರು ಶಾಖೆಗಳು -
ಚಾಚಿ ಹರಡಿ ದಿಕ್ಕು ದಿಕ್ಕು ನೀಡೆ ತಂಪು ನೆರಳು.
ಗೆಲ್ಲು-ಗೆಲ್ಲು, ರೆಂಬೆ-ಕೊಂಬೆ, ಹೂ-ಹಣ್ಣುಗಳು-
ಅರ್ಥಪೂರ್ಣವಾದ ಬದುಕು, ಆಸರೆ ಆಧಾರಗಳು.

ತಾಯಿ ಬೇರಿನಿಂದ ಬೆಳೆದ ಒಂದು ಮೂಲ ಕಾಂಡ-
ಅತ್ತ ಇತ್ತ ಹಂಚಿ ಸರಿದು ವಿಸ್ತಾರ, ಪ್ರಚಂಡ.
ಬೇರೆ ಬೇರೆ ಬೇರುಗಳಲಿ ನೀರು ಹೀರುವಲ್ಲೂ-
ಮೂಲದೆಲ್ಲ ಛಾಯೆ ಕಂಡು, ಅಖಂಡತೆಯೆ ಎಲ್ಲೂ.

ಹಸಿರು-ಹಸಿರು-ಹಚ್ಚನುಸಿರು, ಜೀವ ಜಾಲ ತಾಣ-
ಒಂದೆ ಬಾನ ಅಡಿಯಲೊಂದು ಸುಂದರ ಭುವಿ ಕಾಣ.
ಅಣ್ಣ-ಅಕ್ಕ-ತಮ್ಮ-ತಂಗಿ, ಹಿರಿಯ-ಕಿರಿಯರೆಲ್ಲ-
ಒಂದೇ ಮೂಲ ಆಲದೊಲವು ಹೀರಿ ಬೆಳೆದರಲ್ಲ !

ದೇಶ-ದೇಶ-ಭಾಷೆ-ವೇಷ, ಮನುಜ ಮುಖ ಹಲವು -
ಬಣ್ಣ-ರೂಪ-ರೇಖೆಗಳಿಗೆ ನಾಮಕರಣ ನೆಪವು.
ಸೂರಿನಡಿಯೆ ಸಾರ ಹೀರಿ ರೆಕ್ಕೆ ಬಲಿತ ಕೂಸು-
ಗಾಳಿಗೊಡ್ಡಿ ಬಾನ ಭಿತ್ತಿ ಸೇರಲದುವೆ ಸೊಗಸು.

ಕರುಳಭಾವ ಮೆಟ್ಟಿ ನಿಂತು ತಾಯ ಬೆನ್ನಿಗಿರಿದ-
ಏರಿದೇಣಿ ಮರೆತ ಧೂರ್ತ-ತನ್ನ ತನದಿ ಮೆರೆದ.
ನಂಟುತನವದಾರ ಗಂಟು ?ಮಾನವತೆಗೆ ದುಃಸ್ಥಿತಿ-
ಸದನುಕೂಲದಾವಿಷ್ಕಾರ ಬಾಣವಾದ ದುರ್ಮಿತಿ.

'' ವಿಶ್ವವೊಂದು ಪುಟ್ಟ ನಗರಿ’’- ತಾಂತ್ರಿಕತೆಯ ಕೊಡುಗೆ-
ನಗುವ ಮೇಲೆ ಹೊಡೆದ ನೋವು, ಕೆಡವಿ, ಘೋರ ಬಲೆಗೆ.
ಯಾರ ರಕ್ತದಾಹ ತಣಿಸೆ ಜೀವ ತೆತ್ತರಾರು-
ನೋವನುಂಡು, ನೋವ ಹಂಚಿ, ಯಮರೆ ಆದ ರೂಕ್ಷರು.

ಅಡಗಿ ಕುಳಿತ ಹೇಡಿನರಿ- ಎಷ್ಟು ಬಾಳಬಹುದು ?
ಸಾವಿರಾರು ನಿಡುಸುಯ್ಲಿಗೆ ಬೇಯದೆ ಇರಲಾರದು.
ಬೌದ್ಧಿಕತೆಯ ದುಷ್ಪ್ರಯೋಗ, ಬಲಿಪಶುವೂ ಮನುಜ-
ಮೂಲ ಆಲವನ್ನೆ ಮರೆತ ಜೀವೋತ್ತಮ ವಂಶಜ.

English summary
ThatsKannada reader writes a poem on US Tragedy...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X