ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನಪ್ರೀತಿಯ ಗಾಜುಗೋಳ

By ಎಚ್‌.ಎಲ್‌. ಪುಷ್ಪ
|
Google Oneindia Kannada News

ಮಹಿಳೆಯರಿಗೆ ಪದ್ಯ ಒಗ್ಗುವುದಿಲ್ಲ ಅನ್ನುವ ಗೊಣಗನ್ನು ನಿರಾಕರಿಸಬಹುದಾದ ಉತ್ತರ ಎಚ್‌.ಎಲ್‌. ಪುಷ್ಪ , ನಮ್ಮ ನಡುವಿನ ಪ್ರತಿಭಾವಂತ ಕವಯತ್ರಿ. ಅಮೃತಮತಿಯ ಸ್ವಗತ ಸಂಕಲನದ ಕವಿತೆಗಳ ಉತ್ಸಾಹ ಎರಡನೆಯ ಸಂಕಲನದಲ್ಲೂ ಉಳಿದಿರುವುದು ಗಾಜುಗೋಳದ ವಿಶೇಷ . ಗಾಜುಗೋಳಕ್ಕೀಗ ಡಾ. ಪುತಿನ ಕಾವ್ಯ ಪ್ರಶಸ್ತಿಯ ಸಮ್ಮಾನ (ಜ.30, ಮೇಲ್ಕೋಟೆಯಲ್ಲಿ ಪ್ರಶಸ್ತಿ ಪ್ರದಾನ). ಅತೀವ ಜೀವನಪ್ರೀತಿ ಗಾಜುಗೋಳದ ಬಂಡವಾಳ. ಗಾಜುಗೋಳದಿಂದಾಯ್ದ ಇಲ್ಲಿ ಕಾಣಿಸಿರುವ ಕವಿತೆಗಳು ಪುಷ್ಪ ಅವರ ಕಾವ್ಯದ ಮಾದರಿಯೆಂದು ಭಾವಿಸಲಿಕ್ಕೆ ಯಾವುದೇ ಅಡ್ಡಿಯಿಲ್ಲ.
ಕವಿತೆ ಮತ್ತು ಕೆನ್ನೆ ಸರಪಳಿ

ಮಿರಮಿರನೆ ಮಿನುಗುವ ಕೆನ್ನೆಗೆ
ಕೆನ್ನೆ ಸರಪಳಿಯ ತಂದಿತ್ತ ಹುಡುಗ
ಸರಪಳಿಯ ಚಲನೆಗೆ ತೂಗಿ ಪಿಸುಗುಡುತ್ತಾನೆ
ಬದುಕು ಹೂವಾಗಲೆಂದು.

ಅಗಲ ಕಣ್ಣಿನ ಸುಮ್ಮಾನದ ಹೆಣ್ಣು
ನುಡಿದದ್ದು ಒಂದೇ ಮಾತು
ನನ್ನ ನಲ್ಲ ತರುವುದೇ ಚಿನ್ನ
ಒಡಲೆಲ್ಲಾ ಮುತ್ತು ಬಂಗಾರ
ಕೆಂಪು, ಪಚ್ಚೆ , ಹವಳ
ತರದಿರುವುದೆಲ್ಲಾ ಬರೆ ಲೋಹ

ಅಂತರಂಗದಲ್ಲಿ ಕಟ್ಟಿದೆ ಒಂದು ಗೂಡು
ಆ ಗೂಡಲ್ಲೊಂದು ರೂಪು ತಳೆಯುತ್ತಿರುವ ಮರಿಹಕ್ಕಿ
ಎದೆ ಮಾಂಸದ ಗೂಡಿನ ಮೇಲೆ
ಪುಟ್ಟ ಗುಲಾಬಿ ಪಾದಗಳ ಹೆಜ್ಜೆ
ಒಡಲಿಗೆ ನೀಡಿದ ಪ್ರಭು ತೋಳಿಗೆ ನೀಡಲಿಲ್ಲ
ಕಿವಿಯಲ್ಲಿ ಮಾಸದಿದೆ ಕಳಚದ ಬೆಳ್ಳಿ
ಗೆಜ್ಜೆಗಳ ಗುನುಗು
ಒಳಗೊಳಗೆ ಕರಗದ ಮಡುಗಟ್ಟಿದ ಮಾತುಗಳು
ವ್ಯರ್ಥವಾಗಿ ಸುರಿದು ಹೋದ ಎದೆಹಾಲು
ಕೈಕಾಲು ಮೂಡಿಸದ
ಪಿಳಿ, ಪಿಳಿ ಪಪ್ಪಾಯಿ ಹಣ್ಣಿನ ಬೀಜದ ಕಣ್ಣು
ಅರೆ ರೂಪು ತಳೆದ ಮೂಕ ಭಾವ
ಅಂಗೈಯಲ್ಲಿ ಹಿಡಿದು ಇಂದು ನಾಳೆಗಳ
ತೂಗಿ ನೋಡಿದ ಭ್ರೂಣ.

ಬೆಳ್ಳಿ ದೀಪಗಳಲ್ಲಿ ಸುರಿದು ನೀರು
ಆಟವಾಡುವ ಮಗಳು ಕೇಳುತ್ತಾಳೆ
ಅಮ್ಮಾ ಹಚ್ಚಲೇ ದೀಪ, ಬೆಳಗಲೇ ಬೆಳಕು
ಹೇಗೆ ಬರಲಿದೆ ಬೆಳಕು, ಬರಿ ನೀರ ಸತ್ವಕ್ಕೆ ?

ಸಂತಾಪ ಹೊತ್ತು ಬರುವ ಮುಖಗಳೆಲ್ಲಾ
ಸರದಿಯಂತೆ ಹೊಸಿಲು ದಾಟುತ್ತಾ
ಮನೆ ಖಾಲಿ, ಮನ ಖಾಲಿ
ಒಳಗೆ ಕಾವು ಕೂತಿದ್ದ ಕೂಸೂ ಖಾಲಿ
ಎದೆ ಗೂಡೊಳಗೆ ಅಡಗಿದ್ದ ಕವಿತೆಯೂ ಖಾಲಿ
ಬಣ್ಣ ಕಳಕೊಂಡ ಕೆನ್ನೆಯ ಮೇಲೆ
ತೂಗುವ ಕೆನ್ನೆ ಸರಪಳಿಯೂ ಮೌನಿ,

English summary
Tracking poetry by women in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X