ಬಾರೆ ಬಾರೆ, ಇಳೆಗೆ ಇಳಿ ಬಾ!
ಸಂಸ್ಕೃತ ಮೂಲ : ಶ್ರೀ ಅರವಿಂದ ಘೋಷ್
(ಅನುವಾದ : ಎಸ್. ಕೆ. ಹರಿಹರೇಶ್ವರ, ಸ್ಟಾಕ್ಟನ್, ಕ್ಯಾಲಿಫೋರ್ನಿಯಾ )
ತಾಯಿ ದುರ್ಗೇ, ಮಹಾ ಶಕ್ತಿಯೆ, ಸಿಂಹವಾಹಿನಿ ಕಾಳಿಯೆ,
ಮಾತೆ ಶಿವಪ್ರಿಯೆ, ದೇವಿ, ನೀನೇ ಸರ್ವ ಶಕ್ತಿ- ಪ್ರದಾಯಿನಿ;
ಭಾರತೀಯರು ನಾವು ನಿನ್ನಯ ಅಂಶಜಾತರು ತರುಣರು;
ನಿನ್ನ ಮಂದಿರದಲ್ಲಿ ಕುಳಿತೀ ನಿನ್ನ ಪ್ರಾರ್ಥನೆಗೈವೆವು-
ಕೇಳು ತಾಯೆ, ಇಳೆಗೆ ಇಳಿ, ಬಾ ! ಹುಟ್ಟು ಭಾರತದಲ್ಲಿಯೆ !!!
ತಾಯೆ ದುರ್ಗೇ, ನಾವು ಮಾನವ ಜನ್ಮವನೆತ್ತಿದಾಗೆಲ್ಲವೂ
ನೀನು ವಹಿಸಿದ ಕರ್ಮವೆಸಗಿಯೆ ಮರಳುತಿರುವೆವು ನಿನ್ನಯ
ಪರಂಧಾಮಾನಂದಮಯದ ಒಲಿದ ತಾಯಿಯ ತೌರಿಗೆ;
ನಿನ್ನ ಕಾರ್ಯಕೆ ದೀಕ್ಷೆ ತೊಟ್ಟಿಹೆವೀ ಜನ್ಮವನು ಕೇಳು ತಾಯೆ, ಇಳೆಗೆ ಇಳಿ, ಬಾ ! ಹುಟ್ಟು ಭಾರತದಲ್ಲಿಯೆ !!
ಸಿಂಹವಾಹಿನಿ, ಅಂಬಾ, ದುರ್ಗೇ, ತ್ರಿಶೂಲಾಯುಧಧಾರಿಣಿ,
ಕವಚ ಖಡ್ಗದ ಸುಂದರಾಂಗಿನಿ, ವಿಜಯದಾಯಿನಿ ತಾಯಿಯೆ,
ದೇವಿ, ನಿನ್ನ ಪ್ರತೀಕ್ಷೆಯಲ್ಲಿಯೆ ಈಗ ಭಾರತ ಕುಳಿತಿದೆ;
ನಿನ್ನ ದರುಶನ ಪಡೆದು ನಡೆಯಲು ತವಕದಿಂದದು ಕಾದಿದೆ-
ಕೇಳು ತಾಯೆ, ಇಳೆಗೆ ಇಳಿ, ಬಾ ! ಹುಟ್ಟು ಭಾರತದಲ್ಲಿಯೆ !!
ಶಕ್ತಿದಾಯಿನಿ, ಅಂಬಾ ದುರ್ಗೇ, ಪ್ರೇಮ-ಜ್ಞಾನ-ಪ್ರದಾಯಿನಿ;
ಶಕ್ತಿರೂಪಳೆ, ಓ ಭಯಂಕರಿ, ಸೌಮ್ಯ-ರೌದ್ರ-ಸ್ವರೂಪಿಣಿ;
ಅನುದಿನದ ಸಂಘರ್ಷ ಬಾಳಲಿ, ಸಮರದಲ್ಲಿ ಸ್ವದೇಶದ
ಪ್ರೇರಿತರು ನಿನ್ನಿಂದ ತಾಯೇ, ಬದ್ಧಕಟಿಯ ಯೋದ್ಧರು-
ಕೇಳು ತಾಯೆ, ಇಳೆಗೆ ಇಳಿ, ಬಾ ! ಹುಟ್ಟು ಭಾರತದಲ್ಲಿಯೆ !
ತುಂಬು ಬಾ ನೀ ಪ್ರಾಣ ಚಿತ್ತದಿ ಅಸುರ ಸಾಹಸ ಶಕ್ತಿಯ;
ನಮ್ಮ ಹೃದಯದಿ, ಬುದ್ಧಿಯಲಿ ಸುರ- ಜ್ಞಾನ ಸಚ್ಚಾರಿತ್ರ್ಯವ !
ಬೇಡುತಿರುವೆವು, ನೀಡು ನೆರವನು, ಬಂದು ಭಾರತ ದೇಶಕೆ !
ಕೇಳು ತಾಯೆ, ಇಳೆಗೆ ಇಳಿ ಬಾ ! ಹುಟ್ಟು ಭಾರತದಲ್ಲಿಯೇ !
ಬಾರೆ, ಬಾರೆ, ಇಳೆಗೆ ಇಳಿ, ಬಾ ! ಹುಟ್ಟು ಭಾರತದಲ್ಲಿಯೆ!!
ಮುಖಪುಟ / ಸಾಹಿತ್ಯ ಸೊಗಡು