ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೃಥಿವೀ, ಜಲ, ಅಗ್ನಿ, ವಾಯು, ಆಕಾಶಗಳ ಜೊತೆಗೆ, ಸೂರ್ಯ, ಚಂದ್ರ, ದಿಕ್ಕುಗಳು, ಇನ್ನಿತರ ಜೀವಿಗಳು- ಎಲ್ಲವೂ ಮಧುವಾಗಲಿ. ಇದು ನಮ್ಮ ನಿಮ್ಮೆಲ್ಲರ ಆಶಯವಾಗಲಿ!

By Staff
|
Google Oneindia Kannada News


ಬೇಕು: ಜೇನಿನ ಸವಿ
ಹಾಡೋಣ : ‘ಎಲ್ಲೆಡೆ ಜೇನೇ ಇರಲಿ’

*ಎಸ್‌.ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

ಜೀವನದ ಮುಖ್ಯ ಗುರಿಯಾದರೂ ಏನು? ಸುಖ ಪಡೆಯುವುದು! ಆರೋಗ್ಯಕರ ಮಾರ್ಗಗಳನ್ನು ಅವಲಂಬಿಸಿ, ಸಂತೋಷ, ಹರ್ಷ, ಆನಂದ, ಉಲ್ಲಾಸವೇ ಒಳಗೂ ಹೊರಗೂ ಇರುವಂತೆ ನೋಡಿಕೊಳ್ಳುವುದು ; ಸುಖಮಯವಾದ ವಾತಾವರಣದಲ್ಲಿ ಇರುವುದು; ದುಃಖ, ವೇದನೆ, ನೋವು ಏನೂ ಇಲ್ಲದಂತಹ ಸುಖವನ್ನು ಅನುಭವಿಸುವುದು- ಇದೇ ಅಲ್ಲವೇ?

ವೇದ ವಾಙ್ಮಯದಲ್ಲಿ ಹಲವೆಡೆ ಈ ಸುಖದ ಬಗ್ಗೆ , ಜೀವನದಲ್ಲಿನ ಆರೋಗ್ಯಕಾರೀ ಹಿತದ ಬಗ್ಗೆ ಋಷಿ-ಕವಿಗಳು ಹಾಡುವಾಗಲೆಲ್ಲ ಒಂದು ಸಂಕೇತವನ್ನು ಬಳಸುತ್ತಾರೆ. ಅದೇ ‘ಮಧು’, ಜೇನಿನ ಸವಿ!

‘ಮಧು’ ಎಂದೊಡನೆ, ಬಹಳ ಜನಪ್ರಿಯವಾದ, ‘ಓಂ ಮಧುವಾತಾ ಋತಾಯತೇ.. ..’ ಎಂದು ಪ್ರಾರಂಭವಾಗುವ ಋಗ್ವೇದದ ಒಂದು ಶಾಂತಿ ಮಂತ್ರ (ಋಗ್ವೇದ 1.90.6) ಬಹು ಬೇಗ ನಮ್ಮ ನೆನಪಿಗೆ ಬರುತ್ತದೆ. ಇದಲ್ಲದೆ ನಮ್ಮ ಗಮನಕ್ಕೆ ಬರುವ ಇನ್ನೊಂದು ನುಡಿಗುಚ್ಛ(ಕೃಷ್ಣ) ಯಜುರ್ವೇದದ ತೈತ್ತಿರೀಯ ಅರಣ್ಯಕದ ನಡುವಿನಲ್ಲಿ ಇದೆ ; ಯಜುರ್ವೇದಕ್ಕೇ ಸೇರಿದ ಬೃಹದ್‌ ಅರಣ್ಯಕ ಉಪನಿಷತ್ತಿನಲ್ಲಿ ಎರಡನೆಯ ಅಧ್ಯಾಯದ ಐದನೆಯ ಭಾಗದಲ್ಲಿ ಮತ್ತೊಂದು ಸ್ವಾರಸ್ಯಕರ ಸನ್ನಿವೇಶದಲ್ಲಿ ಈ ಮಧುವಿಗೆ ಹೊಸ ಹೊಸ ಅರ್ಥಗಳನ್ನು ಸ್ಫುರಿಸುತ್ತಾ, ಜಗತ್ತಿನ ಎಲ್ಲ ಜೀವ ಜಂತುಗಳಿಗೆ ಪೃಥಿವೀ, ಜಲ, ಅಗ್ನಿ, ವಾಯು, ಆಕಾಶಗಳ ಜೊತೆಗೆ, ಸೂರ್ಯ, ಚಂದ್ರ, ದಿಕ್ಕುಗಳು, ಇನ್ನಿತರ ಜೀವಿಗಳು- ಎಲ್ಲರೂ ‘ಮಧು’ವಾಗಿ ಇರಲೆಂಬ ಹಾರೈಕೆ ಮೂಡಿ ಬಂದಿದೆ. ಎಲ್ಲಕ್ಕೂ ಸಾರವಾಗಿ ನಮ್ಮ ಮನಸೆಳೆಯುವ ‘ಮಧುವಾತಾ ಋತಾಯತೆ’ಯನ್ನ ಕನ್ನಡದಲ್ಲಿ ಹೀಗೆ ಅರ್ಥಮಾಡಿಕೊಳ್ಳಬಹುದು, ಹಾಡಬಹುದು (ಮೂಲವನ್ನ ಕೊನೆಯಲ್ಲಿ ಕೊಟ್ಟಿದೆ.):

ಎಲ್ಲವೂ ಎಲ್ಲೆಡೆ ಜೇನೇ ಆಗಿರಲಿ!

(ಕನ್ನಡದಲ್ಲಿ ಭಾವಾನುವಾದ : ಎಸ್‌.ಕೆ.ಹರಿಹರೇಶ್ವರ)

ಎಲ್ಲೆಡೆ ಜೇನು,
ಎಲ್ಲವೂ ಜೇನು-
ಜೇನೇ ಆಗಿರಲಿ!

ಅರಳುತ ಎಲ್ಲೆಡೆ ಹೂಗಳು ಬೀರಲಿ
ಪರಿಮಳ ಗಾಳಿಯಲಿ;
ಸುತ್ತಲೂ ಮುತ್ತಿಹ ಧೂಳಿನ ಕಣ ಕಣ
ಜೇನೇ ಆಗಿರಲಿ!

ಹನಿ ಹನಿ ಕೂಡುತ ತೆರೆ ನೊರೆ ನದಿಯಲಿ
ಸಕ್ಕರೆ ನೀರಿರಲಿ ;
ನಭ ನೆಲ ಗಿಡ ಮರ ಗಿರಿ ಅಣು ಅಣುವಲಿ
ಜೇನೇ ನೆರೆದಿರಲಿ!

ಚಂದಿರ ಸೂರ್ಯನ ಚಿಕ್ಕೆಯ ಹೊಳಪಲಿ
ಕಣ್ಣಿಗೆ ತಂಪಿರಲಿ ;
ಬೆಳಗೂ ಬೈಗಲಿ ಹಗಲಲಿ ಇರುಳಲಿ
ಜೇನಿನ ಇನಿದಿರಲಿ!

ಚಿಲಿಪಿಲಿ ಹಕ್ಕಿಯ ಹಾಡಲಿ ತಾಯಿಯ
ಜೋಗುಳದಿಂಪಿರಲಿ ;
ಸಾಕಿದ ಹಸು ಕರು ಪ್ರಾಣಿಗಳಕ್ಕರೆ
ಜೇನಿನ ಸವಿ ತರಲಿ!

ಒಳಹೊರಗೆಲ್ಲೆಡೆ, ಕನಸಲಿ ನನಸಲಿ,
ಜೇನೇ ತುಂಬಿರಲಿ!
ನಡೆ ನುಡಿಗಳಲಿ ಮನದಲಿ ನಮ್ಮಲಿ -
ಜೇನೇ ಜೇನಿರಲಿ!!

(ಮೂಲ : ‘ಮಧುವಾತಾ ಋತಾಯತೇ।।’
ಮಧುವಾತಾ ಋತಾಯತೇ, ಮಧು ಕ್ಷರನ್ತಿ ಸಿನ್ಧವ:। ಮಾಧ್ವೀರ್‌ ನಸ್‌ ಸನ್ತು ಓಷಧೀ:। ಮಧು ನಕ್ತಂ ಉತೋಷಸಿ।
ಮಧುಮತ್‌ ಪಾರ್ಥಿವಂ ರಜ:। ಮಧು ದ್ಯೌರ್‌ ಅಸ್ತು ನ: ಪಿತಾ। ಮಧುಮಾನ್‌ ನೋ ವನಸ್ಪತಿ:।
ಮಧುಮಾನ್‌ ಅಸ್ತು ಸೂರ್ಯ:। ಮಾಧ್ವೀರ್‌ ಗಾವೋ ಭವನ್ತು ನ:।।
- ಋಗ್ವೇದ 1.90.6 ; ಯಜುರ್ವೇದ 13.27, 29; ತೈತ್ತಿರೀಯ ಸಂಹಿತಾ 4.2.9.3,5.2.8.6 ; ಮೈತ್ರಾಯಿಣೀ ಸಂಹಿತಾ 2.17.6,99.18; ತೈತ್ತಿರೀಯ ಅರಣ್ಯಕ 10.10.2,49.1 ; ಆಪಸ್ತಂಬ ಗೃಹ್ಯಸೂತ್ರ 1.24.15; ಪಾರಸ್ಕರ ಗೃಸೂ 1.3.21 ; ಆಪಸ್ತಂಬ ಧರ್ಮಸೂತ್ರ 2.7.17.22; ಬೋಧಾಯನ ಧರ್ಮಸೂತ್ರ 2.8.14.5 ; (ಪಾಠಾಂತರಗಳೊಂದಿಗೆ ಇನ್ನೂ ಹಲವೆಡೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X