ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರೀತಿಗೊಂದು ಮಾತು
*ಕೆ.ಆರ್. ವಿನುತ
ಹೊಚ್ಚ ಹೊಸ ಪ್ರೀತಿಯಲಿ
ಕೊಚ್ಚಿ ಹೋಗುವ ಮುನ್ನ
ಎಚ್ಚರದ ಮಾತೊಂದ ಕೇಳು ಗೆಳತಿ
ಹುಚ್ಚು ಮಾತುಗಳಲ್ಲ
ಬಿಚ್ಚು ಮನಸಿನ ನುಡಿಯು
ರೊಚ್ಚಿಗೆಬ್ಬಿಸಿದಲ್ಲಿ ಕ್ಷಮಿಸು ಗೆಳತಿ
ನಿಚ್ಚಳದ ಪಥವಲ್ಲ
ಹುಚ್ಚು ಪ್ರೀತಿಯ ದಾರಿ
ತುಚ್ಛ ಮಾತುಗಳೆಲ್ಲ ಕೇಳೀತು ನಿನಗೆ
ಕೊಚ್ಚಿ ಹಾಕುವ ಕೋಪ
ಕಿಚ್ಚು ಹಚ್ಚುವ ತಾಪ
ಮುಚ್ಚಿಬಿಡು ನಿನ್ನಯ ಮನದ ಒಳಗೆ
ಮೆಚ್ಚುಗೆಯು ಇದ್ದಲ್ಲಿ
ನೆಚ್ಚಿಗೆಯೂ ಇದ್ದಲ್ಲಿ
ಕೆಚ್ಚೆದೆಯೂ ನಿನ್ನೊಳಗೆ ಇರಲೇ ಬೇಕು
ಮುಚ್ಚುಮರೆ ಒಳಿತಲ್ಲ
ಬೆಚ್ಚುವುದು ಬೇಕಿಲ್ಲ
ಸಚ್ಚರಿತೆಯಲಿ ನಡೆವುದೊಂದೇ ಸಾಕು
ಬಚ್ಚಿಟ್ಟ ಕನಸುಗಳ
ಬಿಚ್ಚಿಡುವವಳಾಗು
ನುಚ್ಚು ನೂರಾಗುವ ಭಯ ಬೇಡ ನಿನಗೆ
ಸ್ವಚ್ಛ ಬದುಕಿಗೆ ನನ್ನ
ಬೆಚ್ಚಗಿನ ಹಾರೈಕೆ
ಸಚ್ಚಿದಾನಂದನೇ ನಿನ್ನ ಬಾಳ ದೀವಟಿಗೆ