ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಾಣದ ಪುಟಗಳ ಮೀರಿ ವರ್ತಮಾನದಲ್ಲಿ ಜೀವ ತಳೆದ ಭೀಷ್ಮ

By Staff
|
Google Oneindia Kannada News

M.R.Dattatri, The poetಮಹಾಭಾರತದ ಭೀಷ್ಮ ಬಸ್ಸಿನಲ್ಲಿ ಮುಖಾಮುಖಿಯಾದರೆ? ಆತ ನಿಮ್ಮ ಪಕ್ಕದಲ್ಲೇ ಕೂತರೆ? ಭೀಷ್ಮ ಏನು ಹೇಳಬಹುದು? ಪುರಾಣದ ಚಿತ್ರಗಳು ವರ್ತಮಾನದ ಕನ್ನಡಿಯಲ್ಲಿ ಬದಲಾಗುತ್ತವಾ?

- ಇಂಥದೊಂದು ಕಲ್ಪನಾ ಲಹರಿಗೆ ನಮ್ಮನ್ನೊಯ್ಯುವ ಕವಿತೆ- ‘ಭೀಷ್ಮರ ಬಾಯಾರಿಕೆ’. ಅದು ಈ ಕ್ಷಣದ ಬಾಯಾರಿಕೆಯಲ್ಲ ; ಯುಗ ಯುಗಗಳ ಬಾಯಾರಿಕೆ. ಬುದ್ಧ, ಮಹಾವೀರಾದಿಗಳೇ ಇತಿಹಾಸ ಮೀರಿ ಪುರಾಣದ ಪುಟಗಳಾಗುತ್ತಿರುವಾಗ, ಈ ಭೀಷ್ಮ ಪುರಾಣದ ಪುಟಗಳಿಂದ ವರ್ತಮಾನದಲ್ಲಿ ಜೀವಗೊಳ್ಳುತ್ತಿದ್ದಾನೆ. ಸೃಜನಶೀಲ ಕವಿಯಾಬ್ಬ ಪುರಾಣವನ್ನು ಎದುರುಗೊಳ್ಳಬೇಕಾದ ಬಗೆಯೆಂದರೆ ಇದಲ್ಲವೇ...!

ಭೀಷ್ಮರ ಬಾಯಾರಿಕೆ
*ಎಂ.ಆರ್‌.ದತ್ತಾತ್ರಿ
ಸನ್ನಿವೇಲ್‌, ಕ್ಯಾಲಿಫೋರ್ನಿಯಾ

Bhishmaಹೊರಟಿದ್ದ ಬಸ್ಸಿಗೆ ಕೈ ಅಡ್ಡಹಾಕಿ
ದಡಬಡನೆ ಹತ್ತಿ ಉಸ್ಸಪ್ಪ ಎಂದು ಕುಸಿದು ನೋಡಿದರೆ
ಪಕ್ಕದ ಸೀಟಿನಲ್ಲಿ ಹಣ್ಣು ಹಣ್ಣು ಮುದುಕರು
ಅವರ ಬಿಳಿಯ ಗಡ್ಡದ ಹುಲುಸು ಮಹಾಭಾರತಕ್ಕಿಂತಲೂ
ತಿರುಚಿಕೊಂಡಿದ್ದನ್ನು ಬೆರಗಾಗಿ ನೋಡಿದ್ದಕ್ಕೆ
‘ನಾನು ಭೀಷ್ಮ’ ಎಂದರು.

ನೆನ್ನೆ, ಮೊನ್ನೆ , ಸಂವತ್ಸರ ಕಲಿ ಗಲಿಗಳನ್ನೆಲ್ಲಾ ದಾಟಿ
ಬುದ್ಧ ಮಹಾವೀರಾದಿಗಳೇ ಇತಿಹಾಸ ಮೀರಿ ಪುರಾಣಕ್ಕೆ
ಹಿಂದು ಹಿಂದಕ್ಕೆ ಜಾರುತ್ತಿರುವಾಗ
ನೋವಿನಿಂದ ಅರಚುತ್ತಾ ಮುಂದು ಮುಂದಕ್ಕೆ ಸಾಗುವ
ಬಸ್ಸಿನಲ್ಲಿ ಈತ!
ಶರಟು ಪ್ಯಾಂಟು ಹಾಕಿ ಮಫ್ಲರ್‌ ಕಟ್ಟಿಕೊಂಡು!
ಬಿಲ್ಲು ಬಾಣ ಸಾಯಲಿ ಪರಚಲು ಉಗುರು ಸಿಗುರೂ
ಇಲ್ಲದವ.

ಹೇಳಿಕೊಂಡರೆ ಕೇಳುವ ಬೆಪ್ಪ ನಾನು ಎನ್ನಿಸಿತೇನೋ.
ಹೇಗೇಗೋ ಹೋಯಿತು ಜೀವನ ಎಂದರು
ನಿಷ್ಠೆಗೆ ಮಾದರಿ ನೀವು ಎಂದೆ.
ನಿಷ್ಠೆ ! ಮಣ್ಣು ! ಯಾವನೋ ಕುರುಡನಿಗಾಗಿ ಜೀವಬಿಟ್ಟೆ
ನಮ್ಮಪ್ಪನ ಯಾವಳೋ ಸೂಳೆಗಾಗಿ ಎಲ್ಲಾ ಅದುಮಿಟ್ಟೆ
ರಕ್ತ ಹಂಚದಿದ್ದರೆ ಹೀಗೇ, ಯಾರದೋ ಬೆಕ್ಕ ಕಾಯುವವನು!
ಒತ್ತಿದಷ್ಟೂ ಜೀವನ ಬತ್ತಿದಷ್ಟೂ ಪಾವನ, ಅಹ!
ಯಾವನಿಗೂ ಬೇಡ ಎಂದರು.

‘ಅಶರೀರವಾಣಿ ನುಡಿದದ್ದು ಪುಷ್ಪವೃಷ್ಟಿಯೇ ಆದದ್ದು ಸಾಮಾನ್ಯವೇ’
ನಾನು ಸಮಾಧಾನ ಮಾಡಲು ನೋಡಿದೆ.
ಸುರೀತು ಸುರೀತು ಹೂ ಸುರೀತು
ಚಟ್ಟದ ಮೇಲೆ ಇನ್ನೂ ಚೆನ್ನಾಗಿ ಸುರಿಯುತ್ತೆ
ನಕ್ಕರು.

ನಕ್ಕಿದ್ದಕ್ಕೋ
ಬಹಳ ದೂರ ಬಂದದ್ದಕ್ಕೋ
ದಣಿದು ಹಣ್ಣಾಗಿದ್ದರು
‘ನಮ್ಮಮ್ಮ’ ಎಂದು ನಕ್ಕು ಬಗಲಿನ ಚೀಲದಿಂದ
ಮಣುಕುಗಟ್ಟಿದ ಬಾಟಲಿಯಿಂದ ನೀರನ್ನು ಗುಟುಕರಿಸುವಾಗ
ಬೊಬ್ಬೆ ಹೊಡೆಯುತ್ತಿದ್ದರೂ
ತಿರುಗಿ ನೋಡದೇ ಹೋದ ಅಮ್ಮನ ನೆನಪು
ಪ್ರೀತಿ, ಕ್ರೋಧ, ದ್ವೇಷ, ಸೇಡುಗಳನ್ನೆಲ್ಲಾ ಬತ್ತಿಸಿ
ಯುಗಯುಗಗಳ ನಂತರ
ಬಾಯಾರಿಸುವ ಮಟ್ಟಕ್ಕೆ ನಿಂತಿತ್ತು ಅಂತ ಕಾಣುತ್ತೆ .
ಬಸ್ಸಿನ ಹರಿದ ಸೀಟು ಬಹಳ
ಒರಟಲ್ಲವೇ ಈ ಮುದುಕನಿಗೆ?
ಆಮೇಲೆ ಹೊಳೆಯಿತು ಶರಶಯ್ಯೆಯಲ್ಲೇ
ಮಲಗಿದ್ದವನಲ್ಲವೇ ಈತ ?

ಕಲ್ಲುಗುಂಡಿಗಳ ರಸ್ತೆಯಲ್ಲಿ ಏದುಸಿರು ಬಿಡುತ್ತಾ
ಬಸ್ಸು ಬಹಳ ವೇಗವಾಗಿ ಓಡುತ್ತಿತ್ತು .

ದತ್ತಾತ್ರಿ ಪ್ರತಿಭಾ ಕಿಡಿ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X