ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮ ಹನನ ಮಾಡಿಕೊಂಡು ಧರ್ಮದ ಹೆಸರಲ್ಲಿ ಅಧಾರ್ಮಿಕ ಕೆಲಸ

By Staff
|
Google Oneindia Kannada News

G.V. Kulkarniಡಾ. ಜೀವಿ ಕುಲಕರ್ಣಿ ಬಿಜಾಪುರದ ಡೊಮ್ನಹಾಳದವರು. ಗದಗ, ಧಾರವಾಡಗಳಲ್ಲಿ ಓದಿ ಮುಂಬಯಿಯಲ್ಲಿ ವೃತ್ತಿ ಜೀವನ ಶುರು ಹಚ್ಚಿಕೊಂಡರು. ಅಧ್ಯಯನಕ್ಕೆ ಕಟ್ಟು ಬಿದ್ದು ಕನ್ನಡ, ಸಂಸ್ಕೃತಿ ಪದವಿಗಳೊಂದಿಗೆ ಇಂಗ್ಲಿಷ್‌ ಎಂ.ಎ ಮುಗಿಸಿದರು. ‘ವಿ.ಕೃ.ಗೋಕಾಕರ ಮೇಲೆ ಶ್ರೀ ಅರವಿಂದರ ಪ್ರಭಾವ’ ವಿಷಯ ಕುರಿತ ಇಂಗ್ಲಿಷ್‌ ಮಹಾಪ್ರಬಂಧಕ್ಕಾಗಿ ಡಾಕ್ಟರೇಟ್‌ ಗಿಟ್ಟಿಸಿಕೊಂಡರು. ನಂತರ ಸಾಹಿತ್ಯ ಕೃಷಿಗಿಳಿದರು. ‘ನಾಲ್ಕು ಧ್ವನಿ’, ‘ಸಂಜೀವಿನಿ’, ‘ದಶಪದಿ’ ಕವಿತಾ ಸಂಕಲನಗಳಲ್ಲದೆ ‘ಮ್ಯೂಜಿಂಗ್ಸ್‌’ ಎಂಬ ಇಂಗ್ಲಿಷ್‌ ಕವಿತಾ ಸಂಕಲನದ ಮೂಲಕ ತಮ್ಮ ಸಾಹಿತ್ಯ ವಲಯವನ್ನು ವಿಸ್ತರಿಸಿಕೊಂಡರು.

‘ಪ್ರಜಾಪ್ರಭುತ್ವ’, ‘ವಿವೇಕ ಚೂಡಾಮಣಿ’, ‘ಗುಂಡನ ಮದುವೆ’, ‘ಕಾದಿರುವಳು ಶಬರಿ’ ಎಂಬ ನಾಟಕಗಳು, ‘ವ್ಯಥೆಯಾದಳು ಹುಡುಗಿ’ ಕಾದಂಬರಿಯನ್ನೂ ಬರೆದರು. ಮುಂಬಯಿಯ ಎಲ್‌. ಯು. ಕಾಲೇಜಿನ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿಯ ಹೊಂದಿದ ಬಳಿಕ ಯೋಗಕ್ಷೇತಕ್ಕೆ ಕಾಲಿಟ್ಟರು. ಡೆಟ್ರಾಯಿಟ್‌ ಕನ್ನಡ ಸಮ್ಮೇಳನದಲ್ಲಿ ಅವರ ‘ಜೀವಿ ಕಂಡ ಅಮೇರಿಕಾ’ ಎಂಬ ಪ್ರವಾಸ ಕಥನವೂ ಬಿಡುಗಡೆಯಾಗಿದೆ. ಪ್ರಸ್ತುತ ಇವರು ಅಮೆರಿಕಾ ಪ್ರವಾಸದಲ್ಲಿದ್ದಾರೆ. ಸ್ನೇಹ ಜೀವಿ, ಯೋಗಾರಾಧಕ ಜೀವಿ ಅವರು ಸೆಪ್ಟೆಂಬರ್‌ 11ರ ವಾರ್ಷಿಕ ಸ್ಮರಣೆಯ ಕುರಿತು ಬರೆದ ಕವನ ಓದುಗರಿಗೆ :
ಅಮೇರಿಕಾ!
*ಡಾ. ‘ಜೀವಿ’ ಕುಲಕರ್ಣಿ
ಅಮೇರಿಕೆಯ ಹೆಮ್ಮೆಯ ಸಿರಿಯ ಸೌಧವಾಗಿದ್ದ
ವರ್ಲ್ಡ್‌ ಟ್ರೇಡ್‌ ಸೆಂಟರ್‌,
ಅಮೇರಿಕೆಯ ರಕ್ಷಣೆಯ ವಜ್ರ ಕೋಟೆಯಾಗಿದ್ದ
ಪೆಂಟೆಗಾನ್‌,
ಇವುಗಳ ಮೇಲಾಯ್ತು
ಭಯೋತ್ಪಾದಕರ ದಾಳಿ.
ದೈತ್ಯ ಕಟ್ಟಡಗಳನ್ನು
ನೆಲಸಮಗೊಳಿಸಿತ್ತು.
ಅಸೂಯೆ, ದ್ವೇಷದ ವಿಷ ಅಂದು
ಜ್ವಾಲಾಮುಖಿಯಾಗಿ ಹರಿದಿತ್ತು.

ಮಾನವತೆ, ವಿಶ್ವಶಾಂತಿ, ವಿಶ್ವಪ್ರೇಮ
ಈ ಶಬ್ದಗಳು ತಮ್ಮ ಅರ್ಥ ಕಳೆದುಕೊಂಡವು,
ದೇವನಾಗಬೇಕಾಗಿದ್ದ ಮನುಷ್ಯ ರಾಕ್ಷಸನಾದ!
ಧರ್ಮದ ಹೆಸರಿನಲ್ಲಿ ನಡೆದ ಅಧಾರ್ಮಿಕ ಕೆಲಸ,
ಅತ್ಮದ ಹನನ ಮಾಡಿಕೊಂಡು
ಇತರರನ್ನು ಕೊಲ್ಲುವ ಕುತಂತ್ರ!
ವಿಶ್ವದ ಇತಿಹಾಸದಲ್ಲೇ ಒಂದು ಕಪ್ಪು ದಿನವಾಯ್ತು.
ಅದರ ವರುಷದ ಶ್ರಾದ್ಧದ ದಿನವು ಇಂದು,
ಮಾನವನಲ್ಲಿ ಶ್ರದ್ಧೆಯ ಬೇರನ್ನೇ ಅಲ್ಲಾಡಿಸುತ್ತಿದೆ.

ಅಂದು ಭುಗೆಲೆದ್ದ ಬೆಂಕಿ ಇನ್ನೂ ಆರಿಲ್ಲ,
ಅಂದಿನ ನಡುಕ ಇನ್ನೂ ನಿಂತಿಲ್ಲ.
ಅಮೇರಿಕೆಯ ಅರ್ಥವ್ಯವಸ್ಥೆ ಕುಸಿಯಿತು,
ಲಕ್ಷಗಟ್ಟಲೆ ಜನರು ನಿರುದ್ಯೋಗಿಗಳಾದರು,
ಅದರ ಪರಿಣಾಮ ವಿಶ್ವವನ್ನೇ ವ್ಯಾಪಿಸಿತು,
ಭಾರತಕ್ಕೂ ತಗುಲಿತು.

ಪರ್ವತದೆತ್ತರ ಬೆಳೆದು ನಿಂತ
ಸಾಫ್ಟ್‌ವೇರ್‌ ಉದ್ಯಮ, ವಜ್ರಾಘಾತಕ್ಕೆ ಸಿಲುಕಿ
ತನ್ನ ವಿಶಾಲ ರೆಕ್ಕೆಯ ಬಲ ಕಳೆದುಕೊಂಡಿತು.
ಅಬ್ಜಾಧೀಶರು ಲಕ್ಷಕ್ಕಿಳಿದರು,
ಲಕ್ಷಾಧೀಶರು ಬೀದಿಗಿಳಿದರು.
ಸೌಧದಲ್ಲಿರುವವರು ಅಪಾರ್ಟ್‌ಮೆಂಟ್‌ ಸೇರಿದರು.

ಕೆಲಮಕ್ಕಳು ಶಾಲೆ ಕಾಲೇಜು ತೊರೆದರು.
ನಗೆ ಉಲ್ಲಾಸ ಮಾಯವಾಯ್ತು.
ಅನಿಶ್ಚಿತತೆಯ ಖಡ್ಗ ಸದಾಕಾಲ
ಎಲ್ಲರ ತಲೆಯ ಮೇಲೆ ತೂಗುವಂತಾಯ್ತು.

ಬಿದ್ದ ಮನೆ ಎದ್ದೀತೇ?
ಕಳೆದ ನಗೆ ಮರಳಿ ಬಂದೀತೇ?
ಅವಕಾಶಗಳನಾಡು, ಉತ್ಸಾಹದ ಬೀಡು,
ಮತ್ತೆ ಎದ್ದೀತೇ? ಪೂರ್ವಸ್ಥಿತಿ ಪಡೆದೀತೇ?
ಇಲ್ಲಿಯ ಸ್ಥಿತಿ ನೋಡಿದರೆ,
ಜಂಘಾಬಲ ಉಡುಗುತ್ತಿದೆ, ಎದೆ ಕಂಪಿಸುತ್ತಿದೆ.
ಆದರೂ,

ನಗೆಯ ಮುಖವಾಡ ಹಾಕಲೇಬೇಕು
ನಾಟಕದ ಪರದೆ ಬೀಳುವ ವರೆಗೆ
ಪಾತ್ರಗಳು ಓಡಾಡಲೇ ಬೇಕು.
ಆತಂಕ, ಉದ್ವೇಗ, ಸಂಕಟ, ಒತ್ತಡ-
ಇವು ಪ್ರತಿ ಉಸಿರಿನ ಕೊನೆಯಾಗಿದೆ,
ಪ್ರತಿ ಹೃದಯವನ್ನು ಚುಚ್ಚುವ ಮೊನೆಯಾಗಿದೆ.

ಇಲ್ಲಿ ಕವಿದ ಕಾರ್ಮೋಡದಲ್ಲಿಯೂ
ಬೆಳ್ಳಿಯ ರೇಖೆ ಮೂಡುತ್ತಿದೆ.
ಆಸೆಯ ಬೂದಿಯ ಮೇಲೆಯೇ
ನವಚೇತನದ ಹಕ್ಕಿ ಮರುಹುಟ್ಟು ಪಡೆಯುತ್ತಿದೆ.
ಇಲ್ಲಿಯ ಜನರ ತಾಳ್ಮೆಗೆ
ಸಹಸ್ರ ಸಹಸ್ರ ನಮನ!
ಇದನ್ನೂ ಓದಿ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X