ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗೆದಳ-4:‘ಮರೆವು ಮನುಜನೊಳಗೊ ಮನುಜ ಮರೆವಿನೊಳಗೊ’

By Staff
|
Google Oneindia Kannada News

Petal4 : Asha Balakrishna Bhatಚೈತ್ರೋಲ್ಲಾಸ !
ಚಿತ್ರಭಾನು ಸ್ವಾಗತಕ್ಕೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮೇ 4 ರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ವಿಶೇಷವೇ‘ಚೈತ್ರೋಲ್ಲಾಸ’. 500 ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿದ್ದ ಈ ಕಾರ್ಯಕ್ರಮದ ಹೈಲೈಟ್‌ ‘ಕವಯತ್ರಿಯರ ಹಾಸ್ಯ ಕವಿಗೋಷ್ಠಿ ’. ಶ್ರೀಮತಿಯರಾದ ನಾಗಲಕ್ಷ್ಮಿ ಹರಿಹರೇಶ್ವರ, ಮಂಗಳಾ ಕುಮಾರ್‌, ಜ್ಯೋತಿ ಮಹಾದೇವ, ಆಶಾ ಬಾಲಕೃಷ್ಣ ಭಟ್‌, ಸಂಧ್ಯಾ ರವೀಂದ್ರನಾಥ್‌ ಹಾಗೂ ಅಲಮೇಲು ಅಯ್ಯಂಗಾರ್‌ ಯುಗಾದಿ ಸಂಜೆಗೆ ಹಾಸ್ಯದ ಘಮಲೇರಿಸಿದರು. ಅಲಮೇಲು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯನ್ನು ನಾಗಲಕ್ಷ್ಮಿ ಅವರು ಕವಿತೆ ಓದುವುದರೊಂದಿಗೆ ಉದ್ಘಾಟಿಸಿದರು.

ಚೈತ್ರೋಲ್ಲಾಸ ಸಂಜೆಯ ಆರು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ನಿಮ್ಮ ಓದಿಗೆ ನೀಡುತ್ತಿದ್ದೇವೆ. ಇಲ್ಲಿದೆ- ಆಶಾ ಬಾಲಕೃಷ್ಣ ಭಟ್‌ ಅವರ - ನಗೆ ಅಡುಗೆ! ಉಂಡವರೇ ರಸಿಕರು...

ಮರೆವು ಮನುಜನೊಳಗೊ ಮನುಜ ಮರೆವಿನೊಳಗೊ*ಆಶಾ ಬಾಲಕೃಷ್ಣ ಭಟ್‌, ಫ್ರೀಮಾಂಟ್‌, ಕ್ಯಾಲಿಫೋರ್ನಿಯಾ

‘ಏನ್‌ ಗೊತ್ತಾ?’ ನಿನ್ನೆವರ್ಗೂ ಜ್ಞಾಪಕ ಇಟ್ಕೊಂಡಿದ್ದೆ !
ಈವತ್ತು ಮರ್ತು ಹೋಯ್ತು ನೋಡಿ.
ಹೊರಡೋ ವರ್ಗೂ ನೆನಪಿತ್ತು ,
ಹೊರಡ್ತಿದ್ದಾಂಗೆ ಮರ್ತು ಬಿಟ್ಟೆ’.
ದಿನ ನಿತ್ಯ ಕೇಳುವ ಈ ಉವಾಚಗಳ
ಸನ್ನಿವೇಶಗಳೋ ದಶಾವತಾರಗಳು..

ನಮ್ಮೂರಿನ ಮಳೆಗಾಲದಲ್ಲಿ
‘ಗೊಸಾ’ ಎಂದು ತುಂಬಿ
ಹರಿಯುವ ನೇತ್ರಾವತಿಯಂತೆ,
ನಮ್ಮ ಬಿಡಾರದ ಹಿಂದೆ ಸದಾ ತುಂಬಿರುವ,
880 ತಡೆ ರಹಿತ ಹೆದ್ದಾರಿಗೆ, ಪ್ರವಾಹದಲ್ಲಿ
ತೇಲಿ ಸಾಗುವ ಕಸದಂತೆ, ತೆಂಗಿನಕಾಯಿಗಳಂತೆ,
ಮರದ ದಿಮ್ಮಿಗಳಂತೆ ‘ಸುಯ್ಯೆಂದು’
ಬಂದೂ ಬಂದೂ ಸೇರುವ ಕಾರುಗಳಲ್ಲಿ
ಒಂದಾಗಿ ನಾವೂ ಪಾರ್ಟಿಗಳಿಗೆ,
ಷೋಗಳಿಗೆ ಸಾಗುತ್ತಿರುವಾಗ,
ಮೊದಲೆರಡು ಎಗ್ಸಿಟ್ಟುಗಳಲ್ಲಿ
ನನ್ನನ್ನೇ ಗಮನಿಸುವ ನನ್ನವರು,
ಎಲ್ಲಿ ‘ಧುತ್ತೆಂದು’ ನನ್ನ ಬಾಯಿಯಿಂದ
ಒಮ್ಮಿಂದೊಮ್ಮೆಲೇ,
‘ಅಯ್ಯೋ, ಗಿಫ್ಟ್‌ ಮರ್ತು ಹೋಯಿತು’ ಎಂದೋ,
ಮಗದೊಮ್ಮೆ,’ ಅಯ್ಯೋ ಅದೃಷ್ಟದ ಗಡಿಗೆಯ ಅಡಿಗೆ (ಪೊಟ್‌ ಲಕ್‌)
ಮರ್ತು ಹೋಯ್ತು ’ ಎಂದೋ, ಇನ್ನೊಮ್ಮೆ
‘ಷೋದ್ದು ಟಿಕೆಟ್ಟೇ ಮರ್ತು ಹೋಯ್ತಲ್ರೀ’ ಎಂದೋ
ಹೊರಡುವ ಉದ್ಗಾರಗಳಿಗೆ ಬೆಲೆಕೊಟ್ಟು ,
ಮತ್ತದೇ ಪ್ರವಾಹದಿಂದ’ ಸುಯ್ಯೆಂದು’ ಹೊರ ಬಂದು,
ಪ್ರದಕ್ಷಿಣೆಯಾಂದಿಗೆ ಎಲ್ಲಿ
ಮನೆಗೆ ವಕ್ಕರಿಸಬೇಕೋ ಎಂದು
ಕಾಯುವುದು ಸಾಮಾನ್ಯ.

ವೆಡ್ಡಿಂಗ್‌ ಅನಿವೆರ್ಸರಿ ದಿವಸ,
ಕೆಲಸವೇ ಮೊದಲ ಹೆಂಡತಿಯಾಗಿರುವ,
ಗ.ತ. ಮನುಜರಿಗೆ (ಗಣಕಯಂತ್ರ ತಜ್ಞರಿಗೆ)
ಗೃಹ ಮಂತ್ರಿಗಳಿಗೆ ಹೋಟೆಲ್‌
ಪ್ರೊಗ್ರಾಂ ಮರೆತು ಹೋದಾಗ ಸಿಗುವ,
ಊದಿದ ಮುಖದ ಉಪಚಾರಕ್ಕೆ, ಹೊಮ್ಮುವ
ವಾಗ್ಬಾಣಗಳಿಗೆ, ‘ಬಾಂಬೇ ಜ್ಯೂವೆಲರಿಯ’
ಎರಡೆರಡು ಆಭರಣಗಳ, ತಪ್ಪು ಕಾಣಿಕೆ
ಒಪ್ಪಿಸುವ ಭರವಸೆಯಿತ್ತರೂ ಒಪ್ಪದಾಗ,
‘ಅಯ್ಯೋ ಮರೆವೇ, ಹೀಗೇಕೆ ಕ್ರೂರ ವಿಧಿಯಾಗಿ
ನನ್ನನ್ನು ಕಾಡುತ್ತೀಯಾ?’ ಎಂದು ಹಪಹಪಿಸುವ
ಘೋರ ಪರಿಸ್ಥಿತಿ.

ಮರೆವ ಮನುಜರ ಮರೆತದ
ಮೂರು ಮಾದರಿಯಲ್ಲಿ ,
ಮರೆತು, ಮರೆತಿದ್ದು ನೆನಪಾಗಿ,
‘ಅಯ್ಯೋ ಮರೆತು ಹೋಯಿತಲ್ಲಾ’
ಎಂದು ಮನದ ಮೂಲೆಯಲ್ಲಿ
ಮರದ ಹುಳ ಕೊರೆದಂತೆ
ಕೊರೆಸಿಕೊಂಬವರು ಕೆಲವರಾದರೆ,
ಮರೆತಿದ್ದನ್ನು ಮರೆತಿದ್ದೇನೆಂದು ಮರೆತು,
ಹಾಯಾಗಿ ಮೈ ಮರೆಯುವವರು
ಇನ್ನೂ ಕೆಲವರು,
ತನಗೆ ಬೇಕಾದಾಗ,
ನೆನಪಿದ್ದರೂ ಸಹ,
ಮರೆತಂತೆ ನಟಿಸಿ,
ಛಳ್ಳೇ ಹಣ್ಣು ತಿನ್ನಿಸಿದೆನೆಂದು
ಮೆರೆಯುವವರು ಮತ್ತೆ ಕೆಲವರು.
ಮರೆವು ಕಾಡದ ಮನುಜನಿದ್ದಾನೆಯೇ ಹೇಳಿ?

ಅಂದ ಹಾಗೆ ನನ್ನ ಕವನದ
ಶೀರ್ಷಿಕೆ ಹೇಳೋದಕ್ಕೇನೇ ಮರ್ತು ಬಿಟ್ಟಿದ್ದೆ ,
‘ಮರೆವು ಮನುಜನೊಳಗೊ,
ಮನುಜ ಮರೆವಿನೊಳಗೊ.’

ಕಾವ್ಯ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X