ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಬರಮತಿಯ ರೈಲು

By Staff
|
Google Oneindia Kannada News


*ಡಾ.ಮೈ.ಶ್ರೀ.ನಟರಾಜ, ಗೈಥರ್ಸ್‌ ಬರ್ಗ್‌, ಮೇರಿಲ್ಯಾಂಡ್‌, ಅಮೆರಿಕ.

ಅಯೋಧ್ಯೆಯಿಂದ ಸಬರಮತಿಗೆ
ಓಡೋಡಿ ಬಂತು ರೈಲು
ರಾಮನಗರದಿಂ ಗಾಂಧಿನಗರಕೆ
ಹೋಗಿಬರುವ ರೈಲು

ಹಗೆಯ ಉಗಿಯುವ ಹೊಗೆಯ ಬಂಡಿಯದು
ಕಿಡಿಯ ಕಾರುತಿದೆ ನೋಡಿ
ಸಿಡಿವ ಕಿಡಿಯು ಅಡಿಗಡಿಗೆ ಬೆಳೆದು
ಉರಿ ಜ್ವಾಲೆಯಾಗುವುದ ನೋಡಿ

ರಾಮನಾಮವನು ಜಪಿಸುವ ನೆಪದಲಿ
ಜಗಳ ಹೂಡುವರ ನೋಡಿ
ದ್ವೇಷದ ಬೆಂಕಿಗೆ ನೀರನು ಸುರಿಯದೆ
ಎಣ್ಣೆ ಎರಚುವವ ಕೇಡಿ

ಗುಡಿಗಳ ಕೆಡುವುತ ಪುಡಿಪುಡಿ ಮಾಡುತ
ಗುಂಬಸ್‌ ಕಟ್ಟುವನೊಬ್ಬ
ಗುಂಬಸ್‌ ಉರುಳಿಸಿ ಗುಡಿಯ ಕಟ್ಟುವೆವು
ಎನ್ನುತ ಚೀರುವ ಇನ್ನೊಬ್ಬ

ದೇಗುಲ ಕೆಡಹುವ ಧರ್ಮಾಂಧರಿಗೆ
ನಾಚಿಕೆ ಹೇಸಿಗೆ ಇಲ್ಲ
ಕಳೆದ ಚರಿತ್ರೆಯ ಮರೆಯದ ಮಂದಿಗೆ
ಮುಂದಿನ ಯೋಚನೆ ಇಲ್ಲ

ಇಂಥಾ ಮಕ್ಕಳ ಹೊತ್ತು - ಹೆತ್ತವಳು
ಅತ್ತು ಕೊರಗುವುದ ನೋಡಿ
ಕೊಳ್ಳಿಯ ಕಾಳಗ ನಿಲ್ಲಿಸಲೊಲ್ಲರು
ಕೈ ಮುಗಿದು ಕಾಡಿದರೂ ಬೇಡಿ

ಮಕ್ಕಳ ವೈರವ ಆರಿಸ ಹೊರಟಳು
ಕಣ್ಣ ಕೋಡಿಯಲಿ ತಾಯಿ
ಮುಗ್ಧ ಮಕ್ಕಳನು ಸುಡುವ ದುಷ್ಟರಿಗೆ
ಗುಂಡಿಕ್ಕಲಿ ನಮ್ಮ ಸಿಪಾಯಿ

ತಾಯಿಯ ಮಾತಿಗೆ ಪ್ರತಿ ಮಾತಾಡದೆ
ಕಾಡಿಗೆ ಹೋದನು ರಾಮ
ತಾಯಿಯ ಸೆರಗಿಗೆ ಬೆಂಕಿಯಿಟ್ಟನು
ರಾಮಭಕ್ತ ನಿಸ್ಸೀಮ

ರಕ್ತದಲದ್ದಿದ ಕೆಂಪುಕಲ್ಲಿನಲಿ
ಕಟ್ಟಬಹುದು ಕೋಟೆ
ಪೇಟೆ-ಪೇಟೆಯಲಿ ಗುಡಿಯ ಕಟ್ಟಿದರು
ಕರಗದು ಪಾಪದ ಮೂಟೆ

ಇದ್ದ ಗುಡಿಗಳನು ಒದ್ದು ಕೆಡಹುತಲಿ
ಕಟ್ಟಿದ ಮಸೀದಿ ಗೋರಿ
ಒಡೆದ ಗೋರಿಯಲಿ ರಾಮ ಪ್ರತಿಷ್ಠೆ
ನಡೆಯದಿರಲಿ ಮಿತಿಮೀರಿ

ರೈಲನು ಸುಟ್ಟರೆ ಆಸ್ತಿಯು ನಷ್ಟ
ಜೀವವ ಸುಟ್ಟರೆ ಬರುವುದು ಕಷ್ಟ
ಕ್ರಿಯೆಗೆ ಪ್ರತಿಕ್ರಿಯೆ ಮಿತಿ ಮೀರಿದರೆ
ಆಗುವುದೆಲ್ಲ ಅನಿಷ್ಠ

ಅಣ್ಣ ತಮ್ಮದಿರ ಕೊಳ್ಳಿ ಜಗಳದಲಿ
ಸುಟ್ಟು ಹೋದವಳು ಅಮ್ಮ
ಒಪ್ಪ ಮಾಡುವೆವು ತಪ್ಪದೆ ದೇಹವ
ಎನ್ನುತ ಅರಚಿದರಮ್ಮ

ದಫನ್‌ ಮಾಡುವೆ ಅಬ್ಬೆಯ ಎನ್ನುತ
ಗಡ್ಡವ ಸವರಿದ ತಮ್ಮ
ಅಗ್ನಿ ಸ್ಪರ್ಷವೇ ನನ್ನಯ ಧರ್ಮ
ಅದು ಅಣ್ಣನ ಉತ್ತರವಮ್ಮ

ಹೂಳುವೆನೆಂದರೆ ದೇಹವೆ ಇಲ್ಲ
ಏನು ಮಾಡಲೋ ಅಲ್ಲಾ
ಚಿತೆಯಲಿಟ್ಟು ನಾ ಸುಡುವೆನೆಂದರೆ
ಜೀವಂತ ಸುಟ್ಟಿಹೆನಲ್ಲ

ಸಾಕು ದೇಗುಲ ಸಾಕು ಮಸೀದಿ
ಅತಿಯಾಯಿತು ಧರ್ಮದ ವ್ಯಾಧಿ
ಕಟ್ಟುವುದಾದರೆ ಕಟ್ಟಿರಿ ದೇಶ
ಸಾಕು ಪರಸ್ಪರ ದ್ವೇಷ

ಊರಿಗೆ ಒಂದೇ ದೇಗುಲವಿರಲಿ
ಅಲ್ಲಿಗೇ ಎಲ್ಲರು ಬರಲಿ
ನಿರ್ಮಲ ಭಕ್ತಿಯ ಮೌನ ಪೂಜೆಯನು
ಭಾರತ ಮಾತೆಗೆ ಸಲ್ಲಿಸಲಿ

ಹಿಂದಿನ ವ್ಯಾಜ್ಯವ ಮರೆಯದಿದ್ದರೆ
ಇಂದಿನ ಬದುಕೂ ಶೂನ್ಯ
ಒಂದು ತಾಯಿಯ ಮಡಿಲ ಮಕ್ಕಳಲಿ
ಐಕ್ಯತೆಯಾಂದೇ ಮಾನ್ಯ

ಧರ್ಮದ ಹೆಸರಲಿ ವಿಷವನು ಕಾರಿ
ಬುಸುಬುಸುಗುಟ್ಟುವ ಹಾವು
ಇಂದಿನ ಮಕ್ಕಳ ಮಂಡೆಯಸೇರಿ
ತರದಿರಲಿ ಭವಿಷ್ಯದ ಸಾವು

ಸಬರಮತಿಯಲಿ ಗಾಂಧಿಯ ಆಶ್ರಮ
ಇಹುದು ನೆನಪಲಿದೆಯೇ
ಅಹಿಂಸೆಯ ಮಂತ್ರವ ಸಾರಿದ ತಾತನ
ಗುರುತಾದರೊ ನಿಮಗಿದೆಯೇ

ಅಯೋಧ್ಯೆಯಿಂದ ಸಬರಮತಿಗೆ
ಓಡೋಡಿ ಬರಲಿ ರೈಲು
ರಾಮರಾಜ್ಯದ ಕನಸುಗಳನ್ನು
ಹಂಚುತಿರಲಿ ಎಲ್ಲೆಲ್ಲು

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X