ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ದಳದ ನಗೆಹೂವು : ಹಾಸ್ಯೋಲ್ಲಾಸವಾದ ‘ಚೈತ್ರೋಲ್ಲಾಸ’!

By Staff
|
Google Oneindia Kannada News

Petel1 : Nagalakshmi Harihareshwaraಚೈತ್ರೋಲ್ಲಾಸ !
ಚಿತ್ರಭಾನು ಸ್ವಾಗತಕ್ಕೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮೇ 4 ರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ವಿಶೇಷವೇ‘ಚೈತ್ರೋಲ್ಲಾಸ’. 500 ಕ್ಕೂ ಹೆಚ್ಚು ಕನ್ನಡಿಗರು ಭಾಗವಹಿಸಿದ್ದ ಈ ಕಾರ್ಯಕ್ರಮದ ಹೈಲೈಟ್‌ ‘ಕವಯತ್ರಿಯರ ಹಾಸ್ಯ ಕವಿಗೋಷ್ಠಿ ’. ಶ್ರೀಮತಿಯರಾದ ನಾಗಲಕ್ಷ್ಮಿ ಹರಿಹರೇಶ್ವರ, ಮಂಗಳಾ ಕುಮಾರ್‌, ಜ್ಯೋತಿ ಮಹಾದೇವ, ಆಶಾ ಬಾಲಕೃಷ್ಣ ಭಟ್‌, ಸಂಧ್ಯಾ ರವೀಂದ್ರನಾಥ್‌ ಹಾಗೂ ಅಲಮೇಲು ಅಯ್ಯಂಗಾರ್‌ ಯುಗಾದಿ ಸಂಜೆಗೆ ಹಾಸ್ಯದ ಘಮಲೇರಿಸಿದರು. ಅಲಮೇಲು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯನ್ನು ನಾಗಲಕ್ಷ್ಮಿ ಅವರು ಕವಿತೆ ಓದುವುದರೊಂದಿಗೆ ಉದ್ಘಾಟಿಸಿದರು.

ಚೈತ್ರೋಲ್ಲಾಸ ಸಂಜೆಯ ಆರು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ನಿಮ್ಮ ಓದಿಗೆ ನೀಡುತ್ತಿದ್ದೇವೆ. ಮೊದಲಿಗೆ ನಾಗಲಕ್ಷ್ಮಿ ಅವರ ‘ತಿರುಪತಿಯ ತಿಮ್ಮಪ್ಪ ಏಕೆ ನಕ್ಕ ?’ ನೀವೂ ನಕ್ಕುಬಿಡಿ!

ತಿರುಪತಿಯ ತಿಮ್ಮಪ್ಪ ಏಕೆ ನಕ್ಕ ?*ನಾಗಲಕ್ಷ್ಮಿ ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

ನಮ್ಮ ಅಯ್ಯಂಗಾರರ ಮನೆಯಲ್ಲಿ ಅವತ್ತು
ಗಡಿಬಿಡಿಯೋ, ಗಡಿಬಿಡಿ!
ಹೊಸದಾಗಿ ಹಾಕಿಸುತ್ತಿದ್ದಾರೆ,
ಹುಷಾರ್‌, ಎಚ್ಚರಿಕೆ, ಇನ್‌ಸ್ಟಾಲ್‌ ಮಾಡುತ್ತಿದ್ದಾರೆ-
ಸೆಕ್ಯುರಿಟಿ ಅಲಾರಮ್‌!

ಕಳ್ಳ ಕನ್ನ ಹಾಕುವುದಿರಲಿ,
ಬೀಗ ಮುರಿಯುವುದಿರಲಿ,
ಕಿಟಕಿ ಗಾಜನು ಒಡೆದು
ಒಳಗೆ ನುಸುಳುವುದಿರಲಿ-

ರೀ,
ಬರೀ ಮುಟ್ಟಿದರೆ ಸಾಕು
ಸ್ವಲ್ಪ ಹೀಗೆ-

ಹೊಡೆದುಕೊಂಡೀತು ‘ಲಬೋ ಲಬೋ’ ;
ಅಲ್ಲ , ‘ಕುಯ್ಯೋ ಮರ್ರೋ’, ‘ಬನ್ರೋ ಬನ್ರೋ’ ;
ಅಲ್ಲ , ಕಿಟಾರನೆ ಕಿರಿಚಿಕೊಳ್ಳುವ ಆ ಕರ್ಕಶದ ಕೂಗು ;
ಬೆಚ್ಚಿ , ಚುಚ್ಚಿ , ಚಚ್ಚಿ. ಕೊಚ್ಚಿ ,
ಕಿವಿ ಮುಚ್ಚಿಕೊಳ್ಳುವ ಹಾಗೆ
ಮಾಡುವ ತಾರಕ ಸ್ಥಾಯಿಯ ಸೈರನ್‌!

ಪರೀಕ್ಷಿಸಿದ್ದಾಯ್ತು ,
ಅದೇ, ಟೆಸ್ಟು ಮಾಡಿದ್ದೂ ಆಯ್ತು ;
ಕೊಂಚವೂ ರೆಸ್ಟಿಗೆ ಟೈಮು ವೇಸ್ಟುಉ ಮಾಡದೆ,
ಏನು ಬೆಸ್ಟ್‌ಉ, ಆಹಾ ಎಂಥ ಲೇಟೆಸ್ಟ್‌ಉ?-
ಅಂತೆಲ್ಲ ತುಂಬ ಹೊಗಳಿ,
ಕೈಪಿಡಿ ಪುಟ ಪುಟ ತಿರುವಿ, ಅಲ್ಲಲ್ಲಿ
‘ಯಾರೋ ಬರೆದ ಅಧ್ವಾನದಿಂಗ್ಷೀಷು’-
ಅಂತ ಸ್ವಲ್ಪ ಬೈದಿದ್ದೂ ಆಯ್ತು !

ಈಗ ‘ಪಾಸ್‌ ವರ್ಡ್‌’ ಥರಾನೇ
ಯಾವುದಾದರೂ ಸಂಖ್ಯೆ, ಅದನ್ನ
ಇದರ ಮೆದುಳಿಗೆ ತುರುಕಿ,
ಅದ ನೆನಪಿಟ್ಟುಕೊಳ್ಳಲು ಅಲಾರಮ್‌ಗೆ ಹೇಳಿ,
ರಾತ್ರೆ ಮಲಗುವ ಮುನ್ನ
ಆ ಸಂಖ್ಯೆಯನ್ನೊಮ್ಮೆ ಒತ್ತಬೇಕಂತೆ-
‘ಅ್ಯಕ್ಟಿವೇಟ್‌ ಮಾಡಬೇಕಂತೆ!’

‘ಸರಿ, ಮೂರು ಅಂಕೆಯ ಒಂದು ನಂಬರು ತಾನೆ?
ಅದೇನು ಮಹಾ!’- ಎಂದಿರಾ, ಸುಮ್ಮನಿರಿ!
ಆಗ ಆದ ಗಲಾಟೆ, ಈಗ ಹೇಳುವೆ ಕೇಳಿ!

‘ಪಾಸ್‌ ವರ್ಡ್‌ನ ನಂಬರ್‌ ಯಾವುದಾದರೊಂದು ಹೇಳಿ’
- ಎಂದು ಕೇಳಿದಳು ಮುದ್ದಣನ ಮನದನ್ನೆ .
‘ಜುಲೈ ಇಪ್ಪತ್ತು’- ಎಂದನಾ ಗಂಡ ಧಡಧಡನೆ, ಒಡನೆ.

‘ಅದೇಕೆ ಏಳೂ ಇಪ್ಪತ್ತು ?’- ಬಂತವಳ ಪ್ರಶ್ನೆಯ ಬಾಣ ;
‘ನಮ್ಮ ಮದುವೆಯಾದದವತ್ತೆ !’ - ಉತ್ತರಿಸಿದಾ ಜಾಣ.
‘ತಲೆ ಕೆಟ್ಟು ಹೋಗಿರಬೇಕು, ನಿಮಗದೂ ಸರಿ ನೆನಪಿಲ್ಲ !’

‘ಇರಲಿ ಬಿಡು, ನಿನ್ನ ಹುಟ್ಟಿದ ಹಬ್ಬ ಮಾರ್ಚ್‌ ಹತ್ತು ?’
‘ನನ್ನ ಹಣೇ ಭಾರ! ನಿಮಗದೂ ಜ್ಞಾಪಕವಿಲ್ಲ ;
‘ಫೆಬ್ರವರಿ ಮೂವತ್ತು’ ಅಂತ ಪೆದ್ದು ಪೆದ್ದಾಗಿಯೇ ನೀವು
ಹೇಳಲಿಲ್ಲವಲ್ಲ , ಅದೆ ನನ್ನ ಪುಣ್ಯ!’ ಮುನಿಸಿಕೊಂಡಳು,
ಮಡದಿ.

‘ಮಗಳು ಹುಟ್ಟಿದ ದಿನಾಂಕ? ಅದು ಸುಲಭ, ಅದು ಸುಲಭ’
- ಎಂದು ತಲೆ ಕೆರೆದರು;
‘ಅವತ್ತು ಭಾರಿ ಮಳೆ ಬಂದಿತ್ತು ಅಲ್ವೆ, ಅಲ್ವೆ’
‘ಬಿಡಿ, ಬಿಡಿ, ಮಾತ ಮರೆಸಲು ಬೇಡಿ; ನಿಮಗೆ ಅದೂ
ಜ್ಞಾಪಕವಿಲ್ಲ ! ’

‘ಹೋಗಲಿ ಬಿಡಿ, ನಿಮಗೆ ಸರಿಯಾಗಿ ನೆನಪಲ್ಲಿರುವ,
ಏನೂ ಯೋಚಿಸದೆ, ಥಟ್ಟನೆ ಹೊಳೆವ
ಒಂದು ದಿನಾಂಕವ ಹೇಳಿ;
ಅದೆ ಸಾಕು, ಅದೇ ಸಾಕು’- ಎನಲು ಆ ಮನೋರಮೆ,
‘ಕನ್ನಡ ರಾಜ್ಯೋತ್ಸವದ ದಿನಾಂಕ
‘ನವಂಬರ್‌ ಒಂದು’ ಆದರೆ ಹೇಗೆ?’
- ಎಂದನಾ ಪತಿರಾಯ.

ತಿರುಪತಿಯ ತಿಮ್ಮಪ್ಪ ನಕ್ಕುಬಿಟ್ಟ !!!

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X