• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಪ ಪ್ರಶಸ್ತಿ ಪಡೆದ ಅಭಿಜಾತ ಕವಿ ಬಿ.ಎ. ಸನದಿ

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|

ನಾಡಿನ ಹಿರಿಯ ಕವಿ, ಲೇಖಕ ಡಾ. ಬಾಬಾಸಾಹೇಬ್ ಅಹಮದ್ ಸಾಹೇಬ್ ಸನದಿ ಅವರು, ಕರ್ನಾಟಕ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಮ್ಮ ಜೀವಮಾನದ ಬಹುತೇಕ ಕಾಲವನ್ನು ಅವರು ಕರ್ನಾಟಕದಿಂದ ಹೊರಗೇ ಕಳೆದಿದ್ದರೂ ಕನ್ನಡದಲ್ಲಿ ಅಪಾರವಾದ ಸಾಹಿತ್ಯಕೃಷಿ ಮಾಡಿದ್ದಾರೆ. ಸನದಿ ಅವರನ್ನು ಹತ್ತಿರದಿಂದ ಬಲ್ಲ ಡಾ. ಜೀ.ವಿ. ಕುಲಕರ್ಣಿ ಅವರು ಸನದಿ ಅವರ ಬಗ್ಗೆ ಬರೆದಿದ್ದಾರೆ.

***

ಗೂಗಲ್ ತೆರೆದು ಸನದಿಯವರ ಬಗ್ಗೆ ನೋಡುತ್ತಿರುವಾಗ ಅವರ ಒಂದು ಟಿ.ವಿ.ಸಂದರ್ಶನ ನೋಡಿದೆ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅವರಿಗೆ ಕಂಬಾರರ ಜೀವನ ಮತ್ತು ಸಾಹಿತ್ಯದ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಕಂಬಾರರು ಕೂಡ ತಮ್ಮ ಬೆಳಗಾವಿ ಜಿಲ್ಲೆಯವರೇ ಎಂದು ಅಭಿಮಾನದಿಂದ ಹೇಳಿಕೊಂಡರು.

ಅವರು ಲಿಂಗರಾಜ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕಂಬಾರರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದರು. ಸನದಿಯವರ ತಮ್ಮನ ಸಹಪಾಠಿಯಾಗಿದ್ದರು. ಅವರ ಮನೆಗೆ ಬರುತ್ತಿದ್ದರು, ಅವರೊಡನೆ ನಿಕಟ ಸಂಬಂಧವಿದ್ದ ಬಗ್ಗೆ ಹೇಳಿದರು. ಸನದಿಯವರಿಗೆ ಪಂಪ ಪ್ರಶಸ್ತಿ ದೊರೆತ ಸುದ್ದಿ ತಿಳಿದೊಡನೆ ಭಟ್ಕಳದಲ್ಲಿ ನೆಲೆಸಿದ ಅವರನ್ನು ದೂರವಾಣಿಯ ಮುಖಾಂತರ ಅಭಿನಂದಿಸಿದೆ. ಅನೇಕ ಹಳೆಯ ಸಂದರ್ಭಗಳನ್ನು ನೆನೆಸಿ ಮಾತಾಡಿದೆ.

ಗೂಗಲ್ ಸಂದರ್ಶನದ ಬಗ್ಗೆ ಮತ್ತು ಅವರ ಹಾಗೂ ಚಂದ್ರಶೇಖರ ಕಂಬಾರರ ಸ್ನೇಹದ ಬಗ್ಗೆ ಪ್ರಸ್ತಾಪ ಮಾಡಿದೆ. ಆಗ ಅವರು ನನಗೆ ಹೇಳಿದರು, 'ಚಂದಶೇಖರ ನಮ್ಮ ಮನೆಯ ಹುಡುಗನಂತೆ ಇದ್ದ. ನನಗೆ ಅಣ್ಣಾ ಎಂದೇ ಸಂಬೋಧಿಸುತ್ತಿದ್ದ. ಅವನ ಮೊದಲ ಕವನ ಸಂಕಲನವನ್ನು ಅರ್ಪಣೆ ಮಾಡಿದ್ದು ಯಾರಿಗೆ ಗೊತ್ತೇ? ಅವನ ಪ್ರೀತಿಯ ಗುರುಗಳಾದ ಎಸ್.ಎಸ್.ಭೂಸನೂರಮಠರಿಗೆ ಮತ್ತು ಪ್ರೀತಿಯ ಅಣ್ಣ ಬಿ.ಎ.ಸನದಿ ಅವರಿಗೆ'. ಈ ಮಾತು ಕೇಳಿ ನಾನು ಹರ್ಷಪುಲಕಿತಗೊಂಡೆ.

ಬಾಬಾಸಹೇಬ ಅಹಮದ್ ಸಾಹೇಬ ಸನದಿ ಅವರು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿ ಎಂಬ ಹಳ್ಳಿಯಲ್ಲಿ (18 ಆಗಸ್ಟ್ 1933) ಜನಿಸಿದರು. ಅವರ ತಂದೆ ಕೃಷಿಕರು. ಸನದಿ ಇದು ಅರೇಬಿಕ್ ಶಬ್ದ. ಅವರ ಪೂರ್ವಜರು ರಾಜರ ಪತ್ರವನ್ನು ಬೇರೆಕಡೆಗೆ ತಲುಪಿಸುವ ಕೆಲಸ ಮಾಡುತ್ತಿದ್ದರಂತೆ. ಹೀಗಾಗಿ ಅವರು ಕೃಷಿಕರಾದರೂ ಸನದಿ ಎಂಬ ಹೆಸರು ಅಡ್ಡಹೆಸರಾಯಿತು.

ಅವರ ತಂದೆ ಒಳ್ಳೆಯ ಗಾಯಕರಾಗಿದ್ದರು. ಶ್ರೀಕೃಷ್ಣಪಾರಿಜಾತ ದೊಡ್ಡಾಟದಲ್ಲಿ ಕೊರವಂಜಿಯ ಪಾತ್ರವಹಿಸಿ ಅಪಾರ ಜನಾನುರಾಗ ಗಳಿಸಿದ್ದರು. ಇವರ ಹಳ್ಳಿಯಲ್ಲಿ ಹಿಂದೂ-ಮುಸ್ಲಿಮ್ ಎಂಬ ಭೇದಭಾವವಿರಲಿಲ್ಲ. ಒಂದೆ ಕುಟುಂಬದವರಂತೆ ಅಲ್ಲಿಯ ಜನ ಸೌಹಾರ್ದ ಮತ್ತು ಪ್ರೀತಿಯಿಂದ ಬಾಳುತ್ತಿದ್ದರು. ಬಾಲ್ಯದ ದಿನಗಳನ್ನು ಸನದಿಯವರು ಮರೆತಿಲ್ಲ. ಅವರು ನಾಲ್ಕನೆಯ ತರಗತಿಯಲ್ಲಿ ರಾಜ್ಯಮಟ್ಟದ ಪ್ರತಿಭಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಷ್ಯವೇತನ ಪಡೆದರು.

ಹಳ್ಳಿಯಲ್ಲಿ ಹೈಸ್ಕೂಲ್ ಇರಲಿಲ್ಲವೆಂದು ತಂದೆಯವರು ಇವರ ಶಿಕ್ಷಣಕ್ಕಾಗಿ ಬೆಳಗಾವಿಯಲ್ಲಿ ಮನೆ ಮಾಡಿದರು. ಸನದಿಯವರು ಜಿ.ಎ.ಹೈಸ್ಕೂಲಿನ ವಿದ್ಯಾರ್ಥಿಯಾಗಿ ಎಸ್.ಎಸ್.ಎಲ್.ಸಿ(1950) ಮುಗಿಸಿ ಲಿಂಗರಾಜ ಕಾಲೇಜು ಸೇರಿದರು. ಮೊದಲು ಮೆಟ್ರಿಕ್ ಎಂದು ಪ್ರಸಿದ್ಧವಾದ ಪರೀಕ್ಷೆ ನಂತರ ಎಸ್.ಎಸ್.ಎಲ್.ಸಿ. ಆಗಿತ್ತು, ನಾವು ವಿದ್ಯಾರ್ಥಿಯಾಗಿದ್ದಾಗ ಅದು ಎಸ್.ಎಸ್.ಸಿ.(1952) ಆಯಿತು. ಕಾಲೇಜಿನಲ್ಲಿ ಅವರಿಗೆ ಪ್ರೊ. ಭೂಸನೂರುಮಠ್, ಪ್ರೊ.ವಿ.ಜಿ.ಕುಲಕರ್ಣಿ, ಪ್ರೊ. ಸುಂಕಾಪುರ್ ಶಿಕ್ಷಕರಾಗಿದ್ದರು.

ಇವರಿಗೆ ಕನ್ನಡದಲ್ಲಿ ಪ್ರೀತಿ ಇತ್ತು ಆದರೆ ಮುಂದೆ ನೌಕರಿಗೆ ತೊಂದರೆ ಎಂದು ಅರ್ಥಶಾಸ್ತ್ರ ಹಾಗೂ ಕನ್ನಡ ಆರಿಸಿ ಬಿ.ಎ.ಪದವಿ ಪಡೆದರು (1954). ಸಮೀಪದ ಶಮನೇವಾಡಿಯಲ್ಲಿ ಶಿಕ್ಷಕ ನೌಕರಿ ದೊರೆಯಿತು. ಕೆಲಸಮಾಡುತ್ತ ಬಿ.ಎಡ್. ಡಿಗ್ರಿ ಪಡೆದರು. ಅಲ್ಲಿ ಕವಿಮಿತ್ರರ ಗುಂಪು ತಯಾರಾಗಿತ್ತು. ಶಮನೇವಾಡಿಯ ಕವಿಗಳೆಂದೇ ಪ್ರಸಿದ್ಧರಾದ 1) ಬಾಳು ಬಿ.ಉಪಾಧ್ಯ, 2) ಬ.ಗಿ.ಎಲ್ಲಟ್ಟಿ, 3) ಶ್ರೀಕಾಂತ ಶಮನೇವಾಡಿ, 4) ಭುಜೇಂದ್ರ ಮಹಿಷವಾಡಿ, 5) ಬಿ.ಎ.ಸನದಿ- 'ಐದಳ ಮಲ್ಲಿಗೆ' ಎಂಬ ಕವನ ಕವನ ಸಂಗ್ರಹ ಪ್ರಕಟಿಸಿ ಕರ್ನಾಟಕದಲ್ಲಿ ಪ್ರಸಿದ್ಧರಾದರು. ಇದಕ್ಕೆ ಮುನ್ನುಡಿಯನ್ನು ರಾಷ್ಟ್ರಕವಿ ಗೋವಿಂದ ಪೈಗಳಿಂದ ಬರೆಸುವ ಸಾಹಸ ಮಾಡಿದ್ದರು.

ನಾನು ಧಾರವಾಡದಲ್ಲಿ ಕಾಲೇಜಿನ ವಿದ್ಯಾರ್ಥಿಯಾಗಿದ್ದರೂ ಶಮನೇವಾಡಿ ಕವಿಗಳ ಕೀರ್ತಿ ಧಾರವಾಡ ತಲುಪಿತ್ತು. ಅವರ ಕವಿತೆಗಳು ಧಾರವಾಡ ಬಾನುಲಿಯಿಂದ ಬಿತ್ತರಗೊಳ್ಳುತ್ತಿದ್ದವು. ಭುಜೇಂದ್ರ ಮಹಿಷವಾಡಿಯವರ 'ಈ ವಿಶ್ವದ ಮಾಯಾಮಂದಿರದಲಿ ಬಾಳಿನ ತೊಟ್ಟಿಲು ತೂಗುತಿದೆ' ಎಂಬ ಹಾಡು ಆ ದಿನಗಳಲ್ಲಿ ಧಾರವಾಡ ರೇಡಿಯೋದಲ್ಲಿ ನಾವು ಕೇಳುತ್ತಿದ್ದೆವು. ಇನ್ನೂ ಆ ಹಾಡು ನನ್ನ ಕರ್ಣಗಳಲ್ಲಿ ನಿನಾದಿಸುತ್ತಿದೆ. ಸನದಿಯವರು ನೌಕರಿ ಮಾಡುತ್ತ ಶಿಕ್ಷಣ ಮುಂದುವರಿಸಿದ್ದರು.

ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಹಾಗೂ ಸಂಸ್ಕೃತ ವಿಷಯದಲ್ಲಿ ಎಂ.ಎ.ಪದವಿಯನ್ನು ಗಳಿಸಿದರು. 1957ರಲ್ಲಿ ಅವರಿಗೆ ಕರ್ನಾಟಕ ರಾಜ್ಯ ಸರಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಒಂದು ಒಳ್ಳೆಯ ಕೆಲಸ ದೊರೆಯಿತು. ಸಮಾಜ ಶಿಕ್ಷಣಾಧಿಕಾರಿ ಕೆಲಸ ಅವರಿಗೆ ಪ್ರಿಯವಾಗಿತ್ತು. ಅಥಣಿ, ರಾಯಬಾಗ ಎಂಬ ಕಡೆಗಳಲ್ಲಿ ಕೆಲಸಮಾಡಿದರು. ಕೊಲ್ಲಾಪುರದ ಮೌನಿ ವಿದ್ಯಾಪೀಠದಲ್ಲಿ ತರಬೇತಿಗೆ ಆಯ್ಕೆಗೊಂಡರು. ಅಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಶಿಕ್ಷಣ ತಜ್ಞ ಜೆ.ಪಿ.ನಾಯಕ್ ಅವರ ಕೆಳಗೆ ತರಬೇತಿ ಪಡೆಯುವ ಮತ್ತು ಅವರ ವಿಶ್ವಾಸ ಗಳಿಸುವ ಅವಕಾಶ ದೊರೆಯಿತು.

1962ರಲ್ಲಿ ವಾರ್ತಾ ಇಲಾಖೆಗೆ ವರ್ಗವಾದಾಗ ಬೆಂಗಳೂರಿಗೆ ಬರಬೇಕಾಯ್ತು. ಅಲ್ಲಿ 'ಪಂಚಾಯತ್ ರಾಜ್' ಎಂಬ ಪತ್ರಿಕೆಯ ಉಪಸಂಪಾದಕತ್ವ ದೊರೆಯಿತು. ಖ್ಯಾತ ಕವಿ ಸಿದ್ದಯ್ಯ ಪುರಾಣಿಕರ ಅವರು ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಇವರ ಸಾಹಿತ್ಯ ಕೃಷಿಗೆ ಹೆಚ್ಚಿನ ಪ್ರೋತ್ಸಾಹನೆ ದೊರೆಯಿತು. ಮುಂದೆ ಪ್ರಚಾರಾಧಿಕಾರಿಯಾಗಿ ಬೀದರ್, ರಾಯಚೂರು, ಬಳ್ಳಾರಿ, ಗುಲ್ಬರ್ಗಾಗಳಲ್ಲಿ ಕೆಲಸ ಮಾಡುವಾಗ ಉರ್ದು ಲೇಖಕರ ಸಂಪರ್ಕ ಬಂತು.

ಆ ಪ್ರದೇಶದಲ್ಲಿ(ಹೈದ್ರಾಬಾದ್ ಕರ್ನಾಟಕದಲ್ಲಿ) ನಿಜಾಮನ ಪ್ರಭಾವವಿತ್ತು. ಅಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಉಳಿಸಲು ಬೆಳೆಸಲು ಸನದಿ ಮಿತ್ರರೊಂದಿಗೆ ಹೆಣಗಿದರು. 1972 ಅವರ ಜೀವನದಲ್ಲಿಯ ಬಹು ಮಹತ್ವದ ವರ್ಷ. ಸನದಿಯವರು ಮುಂಬೈ ಅಕಾಶವಾಣಿಯ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ನಿಯಮಿತರಾದರು. ಮೂರು ದಶಕ ಅವರು ಮುಂಬೈಯಲ್ಲಿ ವಾಸವಾಗಿದ್ದು ಕನ್ನಡ ನುಡಿ ಹಾಗೂ ಸಂಸ್ಕೃತಿಯ ಪ್ರಚಾರಕರಾಗಿ ಅನನ್ಯ ಸೇವೆ ಸಲ್ಲಿಸಿದರು. ಅವರು ಮುಂಬೈಯನ್ನು ಮರೆಯುವಂತಿಲ್ಲ, ಮುಂಬೈ ಕೂಡ ಅವರನ್ನು ಮರೆತಿಲ್ಲ.

ಸನದಿಯವರಿಗೆ ಬಹುಭಾಷ ಸಂಪರ್ಕ ಬಂತು. ಅವರು ಕೆಲಕಾಲ ಪ್ರದರ್ಶನಾಧಿಕಾರಿಯಾಗಿ ಗುಜರಾತ (ಅಹಮದಾಬಾದ್), ಗೋವಾ, ದೀಯ, ದಮನ ಸುತ್ತಾಡಿದ್ದಾರೆ. ಕೊಂಕಣಿ, ಗುಜರಾತಿ, ಹಿಂದಿ, ಮಾರಾಠಿ, ಸಿಂಧಿ ಸಾಹಿತಗಳ ಸಂಪರ್ಕ ಅವರಿಗೆ ಬಂತು. ಮುಂಬೈ ಆಕಾಶವಾಣಿಯಲ್ಲಿ ಅವರು ಮಾಡಿದ ಕಾರ್ಯ ಅವರ್ಣನೀಯ. ಕನ್ನಡದ ಹಿರಿಯ ಸಾಹಿತಿಗಳಾದ ಬೇಂದ್ರೆ, ಗೋಕಾಕ, ಶ್ರೀರಂಗ, ಕಾರಂತ, ವಿಸೀ, ಮೊದಲಾದವರನ್ನು ಸಂದರ್ಶನ ಮಾಡಿದರು. ಕನ್ನಡ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವ ಇವರ ಕಾಲದಲ್ಲಿ ಲಭಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ. ನಾನೊಂದು ಗೀತರೂಪಕ ಬರೆದಿದ್ದೆ. ಅದರ ಹಾಡುಗಳನ್ನು ವಾಣಿ ಜಯರಾಮ ಅವರಿಂದ ಹಾಡಿಸಿದ್ದು ನನಗೆ ಇನ್ನೂ ನೆನಪಿದೆ.

ಮುಂಬೈ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ ಸನಿದಿಯವರು ಸೇವೆ ಸಲ್ಲಿಸಿದರು. ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ ಸನದಿಯವರು ಏರ್ಪಡಿಸಿದ ಗೋಕಾಕರ ಸನ್ಮಾನ ಸಮಾರಂಭವನ್ನು ನಾವೆಂದಿಗೂ ಮರೆಯುವಂತಿಲ್ಲ. ಕನ್ನಡ ಸಾಹಿತ್ಯದ ಕಾರ್ಯಕ್ರಮಗಳಿಗೆ, ಕವಿಸಮ್ಮೇಲನ, ವಿಚಾರಗೋಷ್ಠಿ, ನಾಟಕ ಪ್ರದರ್ಶನಗಳಿಗೆ ಸನದಿಯವರು ವಿಶೇಷ ಪ್ರಾಧಾನ್ಯತೆ ನೀಡಿದರು. ಕನ್ನಡದ ಕೆಲಸಕ್ಕಾಗಿ ಅವರು ಪಟ್ಟ ಶ್ರಮವನ್ನು ಮುಂಬೈ ಕನ್ನಡಿಗರು ಮರೆಯುವಂತಿಲ್ಲ.

ಸನದಿಯವರು ಕುಮಠಾಕ್ಕೆ ತೆರಳಿದರೂ ಪ್ರತಿ ವರ್ಷ ತಪ್ಪದೆ ಹಲವು ಬಾರಿ ಮುಂಬೈಗೆ ಬರುತ್ತಾರೆ, ಇಲ್ಲಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಕನ್ನಡ ವಿಭಾಗದ ಘಟಿಕೋತ್ಸವಕ್ಕೂ ಸನದಿಯವರು ಕಳೆದ ವರ್ಷ ಬಂದು ಕಾರ್ಯಕ್ರಮಕ್ಕೆ ವಿಶೇಷ ಶೋಭೆಯನ್ನು ತಂದರು. ಅವರು ಮುಂಬೈ ವಿಶ್ವ ವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿಗಾಗಿ ಅಭ್ಯಾಸ ಮಾಡುತ್ತಿದ್ದರು ಕಾರಣಾಂತರಗಳಿಂದ ಅವರ ಸಂಶೋಧನೆ ಪೂರ್ಣಗೊಳ್ಳಲಿಲ್ಲ. ಆದರೆ ಅವರ ಕನ್ನಡ ಸಾಹಿತ್ಯದ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ 2005ರಲ್ಲಿ ಗೌರವಿಸಿದೆ. ಅದೇ ವರ್ಷ ಬೆಳಗಾವಿಯಲ್ಲಿ ನಡೆದ ಅಖಿಲ ಕರ್ನಾಟಕ ಮಕ್ಕಳ ಸಮ್ಮೇಲನದ ಅಧ್ಯಕ್ಷತೆಯನ್ನು ವಹಿಸುವ ಗೌರವ ಅವರಿಗೆ ಪ್ರಾಪ್ತವಾಗಿತ್ತು.

ಹಲವಾರು ಪ್ರಶಸ್ತಿಗಳು ಸನದಿಯವರನ್ನು ಅರಸಿಕೊಂಡು ಬಂದಿವೆ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಭಾರತ ಸರಕಾರದ ಪ್ರಶಸ್ತಿ, ಭೂಸನೂರಮಠ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ಎಲ್ಲಕ್ಕಿಂತ ಹಿರಿದಾದ, ಈಗ ದೊರೆತ, ಪಂಪ ಪ್ರಶಸ್ತಿ.

'ಸನದಿ' ಎಂದೊಡನೆ ಮನದ ಪಟಲದಲ್ಲಿ ಮೂಡುವುದು ಒಂದು ಚಿತ್ರ

ಹಸನ್ಮುಖ, ಬೆಳ್ಳಿತಲೆ, ಮೃದು ಮಾತು: ಇವರು ಆತ್ಮೀಯರು, ಸನ್ಮಿತ್ರರು

ಮಾತು ಸಿಹಿ, ಕಾವ್ಯಮಯ ಇಂಪು, ಬಿಸಿಲಿನಲ್ಲೂ ನೀಡುವುದು ತಂಪು

ಇಂಥ ವ್ಯಕ್ತಿ ದೊರೆಕುವುದು ಅಪರೂಪ, ಇವರ ಸ್ನೇಹ ನಮ್ಮ ಭಾಗ್ಯ.

ಮುಂಬೈ ಎಂದೊಡನೆ ಹಲವು ಕವಿಗಳ, ಲೇಖಕರ ನೆನಪಾಗುವುದು

ಮೂರು ದಶಕ ಮುಂಬೈಯಲ್ಲಿ ನೆಲೆಸಿ, ಈಗ ಮರಳಿ ಕನ್ನಡ ನಾಡಿಗೆ

ಹೊರಳಿದ್ದಾರೆ, ಆದರೆ, ಅವರು ಇಲ್ಲಿ ಬಿಟ್ಟ ಸ್ನೇಹದ ಕಂಪು ಇನ್ನೂ

ಹಚ್ಚಗಿದೆ, ಸನದಿ ನಮ್ಮವರು, ಮುಂಬೈ ಪಡೆದ ಸತ್ಪುತ್ರರಲ್ಲಿ ಒಬ್ಬರು.

ಕವಿ, ಕತೆಗಾರ, ನಾಟಕಕಾರ, ಅಪ್ರತಿಮ ವಾಗ್ಮಿಯಾಗಿ ಕನ್ನಡದ ಕಂಪು

ಬಹುಭಾಷಿಕರಿಗೆ ಬಿತ್ತರಿಸಿದ ವಾಣಿ ಇವರು. ಬಾಂಧವ್ಯದ ಹರಿಕಾರ,

ಕುಶಲ ಸಂಘಟಕ, ಕಿರಿಯರ ಮಾರ್ಗದರ್ಶಕ, ಮುನ್ನುಡಿಕಾರ, ಕನ್ನಡದ

ಡಿಂಡಿಮವ ಬಾರಿಸಿದ ಸನದಿಯವರು ಅನನ್ಯ ವ್ಯಕ್ತಿ, ಅಪೂರ್ವ ಶಕ್ತಿ.

ಬೇಲಿಗಳ ದಾಟಿದ ಸನದಿಯವರು, ಮಾನವ್ಯ ಕವಿಯೆಂದೇ ಪ್ರಸಿದ್ಧರು

ಈಗ ಕೀರ್ತಿಕಿರೀಟಕ್ಕೆ ಚಿನ್ನದ ಗರಿ ಮೂಡಿದೆ, ಪಂಪ ಪ್ರಶಸ್ತಿ ದೊರೆತಿದೆ.

English summary
Kannada poet Dr Babasaheb Ahmedsaheb Sanadi has been chosen for prestigious Pampa award by Karnataka government. Dr. G.V. Kulkarni writes about Sanadi who obtained BA and B.Ed. degrees from Karnataka University and did his postgraduation in Kannada and Sanskrit in 1972 from Bombay University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X