ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಳ ಒಳ್ಳೇಯವ್ರು ನಮ್ ಮಿಸ್ಸು, ಊರಿಗೆಲ್ಲಾ ಫೇಮಸ್ಸು

By ವನಿತ.ವೈ ಜೈನ್
|
Google Oneindia Kannada News

ಪ್ರತಿಯೊಬ್ಬ ವಿದ್ಯಾರ್ಥಿಯೂ ನನ್ನ ಗುರು ಹಾಗಿದ್ರೂ, ಹೀಗಿದ್ರೂ, ಹೀಗೆ ಹೇಳಿಕೊಡ್ತಿದ್ರೂ ಎಂದೆಲ್ಲಾ ಅವರವರ ಬದುಕಿನ ಬದಲಾವಣೆಗೆ ತಕ್ಕಂತೆ ಗುರುಗಳ ನೆನಪಿನ ತೋಟದ ಹೂಗಳನ್ನು ಅರಳಿಸಿಕೊಳ್ಳುತ್ತಾ ಸಾಗ್ತಾರೆ. ಹೌದಲ್ವ ಗುರುಗಳು ಅಂದ್ರೆ ಕೇವಲ ಪಾಠ ಹೇಳಿಕೊಡುವ ಮೇಷ್ಟ್ರು, ಮೇಡಂ ಆಗಿರಲ್ಲ. ಅವರು ನಮ್ಮ ಬದುಕಿನ ಅನರ್ಘ್ಯ ರತ್ನ ಆಗಿರ್ತಾರೆ.

ಅಮ್ಮ ಉಣಿಸುವ ತುತ್ತುಗಳು ಹೇಗೆ ನಮ್ಮ ಜೀವನದ ಸವಿ ಸವಿ ಕ್ಷಣಗಳಾಗಿರುತ್ತೋ, ಅದೇ ರೀತಿ ಟೀಚರ್ ಹೇಳಿಕೊಡುವ ಪ್ರತಿಯೊಂದು ಅಕ್ಷರ ಬದುಕೆಂಬ ಸುಂದರ ಪುಸ್ತಕವನ್ನು ಚಿತ್ತು ಕಾಟುಗಳಿಲ್ಲದೇ, ಲೋಪದೋಷಗಳ ಕುರುಹು ಇಲ್ಲದೇ ಬರೆದುಕೊಂಡು ಹೋಗಿ ಸಾಧನೆಯ ಶಿಖರ... ಎಂಬ ಶೀರ್ಷಿಕೆ ಅಡಿಯಲ್ಲಿ ಪೂರೈಸಲು ಪ್ರೇರಣೆ ನೀಡುತ್ತದೆ.[ಗುರು ಪೂರ್ಣಿಮಾ: ಸನ್ಮಾರ್ಗ ತೋರಿದವರಿಗೆ ನಮೋ ನಮಃ]

My beloved teacher Asha miss, I salute you on Guru Poornima

ಹೌದು...ಇಂದು ಬಹಳ ಜವಾಬ್ದಾರಿಯುತ ಪತ್ರಿಕೋದ್ಯಮ ವೃತ್ತಿಯನ್ನು ನಾನು ನಿರ್ವಹಿಸುತ್ತಿದ್ದೇನೆಂದರೆ ಅದಕ್ಕೆ ಕಾರಣ ನನ್ನ ಹೈಸ್ಕೂಲ್ ಮಿಸ್..."ಭಾಳ ಒಳ್ಳೇಯವ್ರು ನಮ್ ಮಿಸ್ಸು..ಏನ್ ಕೇಳಿದ್ರೂ ಎಸ್ ಎಸ್..ನಗ್ತಾ ನಗ್ತಾ ಮಾತಾಡ್ತಾರೆ..ಊರಿಗೆಲ್ಲಾ ಫೇಮಸ್ಸು"..ಈ ಸಾಲು ನನ್ನ ಬದುಕಿಗೊಂದು ತಿರುವು ನೀಡಿದ ನಮ್ಮ ಆಶಾ ಮಿಸ್‌ ಗೆ ಹೇಳಿ ಮಾಡಿಸಿದಂತಿದೆ.

ನಿಮಗೆ ಗೊತ್ತಾ....ನನ್ನ ಜೀವನದಲ್ಲಿರುವುದು ಇಬ್ಬರು ತಾಯಂದಿರು..ಒಬ್ಬರು ನನ್ನ ಹೆತ್ತು ಹೊತ್ತು ಬೆಳೆಸಿದ ನನ್ನ ಹೆತ್ತ ತಾಯಿ. ಇನ್ನೊಬ್ಬರು ವಿದ್ಯಾರ್ಥಿಗಿಂತ ಹೆಚ್ಚಾಗಿ ಇಂದಿಗೂ ಸ್ವಂತ ಮಗಳಂತೆ ಸಲಹುತ್ತಿರುವ, ನನ್ನ ಕಷ್ಟ ಸುಖಗಳಲ್ಲಿ ಇಂದಿಗೂ ತಾಯಿಯಂತೆ ನನ್ನ ಜೊತೆ ಹೆಜ್ಜೆ ಹಾಕುತ್ತಿರುವ ನನ್ನ ಆಶಾ ಮಿಸ್..ನಿಜವಾಗಿಯೂ ನಮ್ಮಿಬ್ಬರ ನಡುವೆ ಗುರು-ವಿದ್ಯಾರ್ಥಿ ಎಂಬ ಸಂಬಂಧದ ಜೊತೆಯಲ್ಲಿ ತಾಯಿ-ಮಗಳ ರೀತಿಯ ಪ್ರೀತಿಯೇ ಇಂದಿಗೂ ಬಹಳ ಗಾಢವಾಗಿ ಇದೆ.

ಪ್ರಸ್ತುತ ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಶಾಲೆಯಲ್ಲಿ ಶಿಕ್ಷರಾದ ಇವರು ನಮಗೆ ಬೋಧಿಸುತ್ತಿದ್ದದ್ದು ಕನ್ನಡ ವಿಷಯವನ್ನು. ನಾವು ಮೂವರು ಅಕ್ಕ-ತಂಗಿಯರು ಅವರ ಮಾರ್ಗದರ್ಶನದಲ್ಲಿಯೇ ನಮ್ಮ ಜೀವನವನ್ನು ರೂಪಿಸಿಕೊಂಡವರು. ಅವರಿಂದ ಕಲಿತದ್ದು ಹಲವಿದೆ.."ಬದುಕು ಸಾಧನೆ ಮಾಡಿದಾಗಲೇ ಚಂದ ಎನಿಸೋದು ವನಿತಾ...ಆವಾಗಲೇ ಕಾಣದ ಗೌರವ, ಪ್ರೀತಿಗಳು ನಮ್ಮನ್ನು ತಾವಾಗಿಯೇ ಅರಸಿಕೊಂಡು ಬರುತ್ತವೆ..ಸಾಧನೆ ಮಾಡುವವರೆಗೂ ನಿನ್ನ ಬದುಕು ನಿನ್ನದು..ಸಾಧನೆ ಬಳಿಕ ನಿನ್ನ ಬದುಕನ್ನು ಪರರದ್ದು" ಎಂದು ಹೇಳ್ತಾನೆ ಇರ್ತಿದ್ರು.

ಅವರ ಸಹಾಯ ಗುಣ, ಎಲ್ಲರನ್ನೂ ನಗುಮೊಗದಿಂದ ಮಾತನಾಡಿಸುವ, ಕಷ್ಟದ ಬದುಕನ್ನು ಕಂಡು ಸಣ್ಣ ಮಕ್ಕಳಂತೆ ಕೊರಗುವ, ಮರುಗುವ, ಇವರಿಂದ ಇಂದು ಎಷ್ಟೋ ವಿದ್ಯಾರ್ಥಿಗಳು ಅತ್ಯುತ್ತಮ ಹುದ್ದೆ ಅಲಂಕರಿಸಿದ್ದಾರೆ ಹಾಗೂ ಹಲವಾರು ಹೆಣ್ಣು ಮಕ್ಕಳು ಬದುಕಿನಲ್ಲಿ ಕಪ್ಪು ಚುಕ್ಕೆಗಳಿಲ್ಲದೇ ಬದುಕುವುದಕ್ಕೆ ಸಾಧ್ಯವಾಗಿದೆ. ಇವರ ಕುರಿತಾಗಿ ಇಷ್ಟೇಲ್ಲಾ ಹೇಳುವ ನಾನು ಅವರ ಸಹಾಯ ಗುಣಕ್ಕೊಂದು ಉತ್ತಮ ನಿದರ್ಶನ ನೀಡ್ತೇನೆ......

'ಒಂದು ತುಂಬು ಕುಟುಂಬದ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆ ಮನೆಯ ಮಕ್ಕಳಲ್ಲಿ ದೊಡ್ಡ ಮಗಳಿಗೆ ಹೆಚ್ಚು ಹೆಚ್ಚು ಓದಿ ಕುಟುಂಬವನ್ನು ಉತ್ತಮ ಮಟ್ಟಕ್ಕೆ ಕರೆದೊಯ್ಯುವ ಹೆಬ್ಬಯಕೆ. ಆದರೆ ಆಕೆಗೆ ಹಣ ಭರಿಸುವುದು ಅಸಾಧ್ಯವಾದ ಕೆಲಸ. ಆಗ ಹೈಸ್ಕೂಲಿನಲ್ಲಿ ಆಕೆಗೆ ನಮ್ಮ ಆಶಾ ಮಿಸ್ಸಿನ ಪರಿಚಯವಾಯ್ತು. ಯಾವಾಗಲೂ ತರಗತಿಯಲ್ಲಿ ಓದಿನಲ್ಲಿ ಮುಂದಿರುತ್ತಿದ್ದ ಆಕೆಗೆ ನಮ್ಮ ಆಶಾ ಮಿಸ್ಸಿನ ಪರಿಚಯವೂ ಆಯಿತು, ಅವರ ಪ್ರೀತಿಯ ವಿದ್ಯಾರ್ಥಿಯೂ ಆದಳು. ಹೇಗೋ ಹಾಗೂ ಹೀಗೂ ಆಕೆ ಹೈಸ್ಕೂಲ್ ಮುಗಿಸಿ, ಪಿಯುಸಿ ಹಂತದಲ್ಲಿಯೂ ವಿಜ್ಞಾನ ವಿಭಾಗದಲ್ಲಿ 94% ತೆಗೆದುಕೊಂಡು ಉತ್ತೀರ್ಣಳಾದಳು..

ಈಕೆಗೆ ವೈದ್ಯರಾಗುವ ಆಸೆ ಇದ್ದರೂ ಕುಟುಂಬಕ್ಕೆ ಹಣ ಭರಿಸಲು ಸಾಧ್ಯವಿಲ್ಲ ಎಂದು ತಿಳಿದ ಆಕೆ ಇಂಜಿನಿಯರಿಂಗ್ ಓದಲು ನಿರ್ಧರಿಸಿದಳು. ಆದರೆ ಅಲ್ಲೂ ಅವಳೊಂದಿಗೆ ವಿಧಿ ಆಟ ಆಡಿತು. ಕೌನ್ಸೆಲಿಂಗ್ ಗೆ 10,000 ಹಣ ಭರಿಸಿವುದು ಆಕೆಗೆ ಕಷ್ಟವಾಗಿತ್ತು. ಆಗ ಕೌನ್ಸೆಲಿಂಗ್ ಡಿಡಿ ತೆಗೆಯಲು ಹಣವಿಲ್ಲದೇ ಒಂದೇ ಸಮನೆ ಕಣ್ಣೀರು ಗರೆಯುತ್ತಿದ್ದ ಆಕೆಗೆ ಬೇರೆಯವರಿಂದ ಅವಳ ಓದಿನ ಮಾಹಿತಿ ತಿಳಿದ ನನ್ನ ಮಿಸ್ ಖುದ್ದಾಗಿ ಅವರ ಮನೆಗೆ ಮಧ್ಯಾಹ್ನ 3 ಗಂಟೆಗೆ ತೆರಳಿ, ಅವಳ ಕೈಗೆ 11,000 ಕೈಗೆ ಕೊಟ್ಟು, 10,000ದಲ್ಲಿ ಡಿಡಿ ತೆಗೆಸು, ಇನ್ನು ಒಂದು ಸಾವಿರದಲ್ಲಿ ಬೆಂಗಳೂರಿಗೆ ಹೋಗಿ ಕೌನ್ಸಿಲಿಂಗ್ ಮುಗಿಸಿಕೊಂಡು ಬಾ ಎಂದು ಕಳುಹಿಸಿಕೊಟ್ಟರು'.

ಅವರ ಆ ಒಂದು ಸಹಾಯದಿಂದ ಇಂದು ಇಂಜಿನಿಯರಿಂಗ್ ಮುಗಿಸಿದ ಆಕೆ ಹೈದರಾಬಾದಿನ ಒಂದು ದೊಡ್ಡ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತನ್ನದೇ ಆದ ಒಂದು ಸ್ವಂತ ಕಂಪನಿ ನಿರ್ಮಿಸಲು ಎಲ್ಲಾ ರೀತಿಯ ಯೋಜನೆಯನ್ನು ರೂಪಿಸಿಕೊಂಡು, ಇನ್ನಷ್ಟು ಎತ್ತರಕ್ಕೆ ಏರಲು ಹವಣಿಸುತ್ತಾ, ಇಬ್ಬರು ತಂಗಿಯರನ್ನು ಓದಿಸಿದ ಈಕೆ ತಂಗಿಯರ ಬದುಕು ಹಸನಾಗಿರಿಸಲು ಎಲ್ಲಾ ರೀತಿಯ ಪ್ರಯತ್ನದಲ್ಲಿ ತೊಡಗಿದ್ದಾಳೆ.

ನನ್ನ ಮಿಸ್ಸು ಅವರು ನಮ್ಮ ಮಿಸ್ಸು, ಇಷ್ಟು ಹೊತ್ತು ಹೇಳಿದ್ದು ನನ್ನ ಅಕ್ಕನ ಬದುಕಿನ ಯಶೋಗಾಥೆ. ಇಂದು ನಮ್ಮ ಬದುಕು ಉತ್ತಮವಾಗಿ ರೂಪುಗೊಂಡಿದೆ ಎಂದರೆ ಅವರು ಅಂದು ಮಾಡಿದ ಸಹಾಯದಿಂದ. ನಾನು ಮಿಸ್ಸಿನ ಹಾಗೂ ನನ್ನ ಇಚ್ಚೆಯಂತೆ ಇಂದು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪೂರೈಸಲು ಸಾಧ್ಯವಾಗುತ್ತಿರಲ್ಲಿಲ್ಲ. ನನಗೆ ನಿಮಗೆಲ್ಲಾ ಒನ್ ಇಂಡಿಯಾದ ಮೂಲಕ ನನ್ನ ಮಿಸ್ಸಿನ ಪರಿಚಯ ಮಾಡಿಕೊಡಲು ಆಗುತ್ತಿರಲಿಲ್ಲ.

ಅಂದು ಒಂದು ಕರೆ ಮಾಡಿ ಮಿಸ್ ನನಗೆ ಕೆಲಸ ಸಿಕ್ತು ಅಂತಾ ಒಂದು ವಾಕ್ಯ ಹೇಳ್ದೆ...ಅವರ ಮಾತಿನಲ್ಲಿ ಇದ್ದ ಸಂತೋಷದ ಪದಗಳು ನನ್ನ ಕಿವಿಯಲ್ಲಿ ಹಸನಾಗಿಯೇ ಇದೆ. ಥ್ಯಾಂಕ್ಯೂ ಮಿಸ್ ನಿಮ್ಮ ಸಹಾಯದಿಂದ ನಿಮ್ಮ ಆಶಯದಂತೆ, ನನ್ನ ಇಚ್ಛೆಯಂತೆಯೇ ಪತ್ರಿಕೋದ್ಯಮದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಅಣಿಯಾಗಿದ್ದೇನೆ...

ನೀವು ಈ ಮಿಸ್ಸಿನ ಅಥವಾ ಈ ರೀತಿಯ ಗುರುಗಳಿಂದ ನಿಮ್ಮ ಬದುಕು ಸುಂದರವಾಗಿದ್ದಲ್ಲಿ ಈ ಲೇಖನವನ್ನು ಶೇರ್ ಮಾಡಿ. ನಮ್ಮ ಮಿಸ್ಸಿನ ಸಹಾಯ ಗುಣಕ್ಕೆ ಒಂದು ಕೃತಜ್ಞತೆ ಸಲ್ಲಿಸಿ.

English summary
My beloved teacher Asha miss, I salute you on Guru Poornima. We all have gone through schools and colleges, have seen many tutors. But, there will be one person, who would have made indelible impact on our life. Here, Vanitha writes about her mentor, guide, friend and also 'mother' Asha miss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X