ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೇಖನಿ ಕೆಳಗಿಟ್ಟು ಹೋದ ಎಮ್ಆರ್ ಶಿವಣ್ಣ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

M R Shivanna, Star of Mysore
ಮೈಸೂರಿನ ಪತ್ರಕರ್ತರಲ್ಲಿ ಶೋಕದ ಛಾಯೆ ಮನೆಮಾಡಿದೆ. ಕಾರಣ ಹಿರಿಯ ಪತ್ರಕರ್ತ "ಸ್ಟಾರ್ ಆಫ್ ಮೈಸೂರ್" ಪತ್ರಿಕೆಯ ಸಂಪಾದಕ ಎಮ್ಮಾರೆಸ್ ಎಂದೇ ಹೆಸರುವಾಸಿಯಾಗಿದ್ದ ಎಂ.ಆರ್.ಶಿವಣ್ಣ ಶನಿವಾರ ಸಂಜೆ(ಮೇ 21) ತಾವು ಪ್ರೀತಿಸುತ್ತಿದ್ದ ವೃತ್ತಿಯನ್ನು ಹಾಗೂ ಅಪಾರ ಶಿಷ್ಯವೃಂದವನ್ನು, ಪತ್ನಿ, ಪುತ್ರಿ, ಮೊಮ್ಮಗು ಸೇರಿದಂತೆ ಬಂಧುಬಳಗವನ್ನು ಬಿಟ್ಟು ಮರಳಿ ಬಾರದ ಲೋಕದತ್ತ ಎದ್ದು ಹೋಗಿದ್ದಾರೆ.

ಇದ್ದಷ್ಟು ದಿನ ಪತ್ರಿಕೆಗಾಗಿಯೇ ತಮ್ಮ ಜೀವ ಸವೆಸಿದ ಅವರು ಯಾವತ್ತೂ ಗಡಿಯಾರ ನೋಡಿ ಕೆಲಸ ಮಾಡಿದವರಲ್ಲ ಎಂಬುವುದು ಅವರೊಂದಿಗೆ ಕೆಲಸ ಮಾಡಿದ ಎಲ್ಲ ಪತ್ರಕರ್ತ ಮಿತ್ರರಿಗೆ ತಿಳಿದಿರುವ ವಿಷಯವೇ. ಆದರೆ ಅವರ ಬದುಕು ಒಬ್ಬ ಪತ್ರಕರ್ತ ಹೇಗಿರಬೇಕು ಮತ್ತು ಹೇಗಿರಬಾರದು ಎಂಬುವುದಕ್ಕೊಂದು ಉದಾಹರಣೆಯಾಗಿದೆ ಎಂದರೆ ಅದು ತಪ್ಪಾಗಲಾರದು.

ಪತ್ರಕರ್ತ ಎಂ.ಆರ್.ಶಿವಣ್ಣರವರು ಮೂಲತಃ ಚಾಮರಾಜನಗರದ ದೊಡ್ಡರಾಯಪೇಟೆಯ ದಿವಂಗತ ಎಂ.ರಾಚಯ್ಯ ಮತ್ತು ಶ್ರೀಮತಿ ವೀರಮ್ಮ ದಂಪತಿಯ ಮಗ. 1956ರಲ್ಲಿ ಜನಿಸಿದ ಅವರು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಮೈಸೂರಿನ ಸರ್ಕಾರಿ ಶಾಲೆಯಲ್ಲಿ ಪೂರೈಸಿದ್ದರು. ಬಳಿಕ ಹುಬ್ಬಳ್ಳಿಗೆ ತೆರಳಿ ಪಿಯುಸಿ ಓದಿದ್ದರು.

ಪತ್ರಿಕಾರಂಗ ಪ್ರವೇಶ : ಆ ವೇಳೆಗಾಗಲೇ ಅವರಿಗೆ ಓದಿಗಿಂತ ಬರವಣಿಗೆಯತ್ತ ಒಲವು ಹೆಚ್ಚತೊಡಗಿತು. ಹಾಗಾಗಿಯೇ ಪತ್ರಿಕಾರಂಗ ಪ್ರವೇಶಿಸಿದ ಅವರು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಹೊರತರುತ್ತಿದ್ದ "ಪ್ರಪಂಚ", ಮಾತೆ ಮಾದೇವಿಯವರ "ಕಲ್ಯಾಣಕ್ರಾಂತಿ", "ರಾಯಚೂರು ವಾಣಿ", "ಮಾನವ" ಎಂಬ ಮಾಸಿಕ ಪತ್ರಿಕೆಯಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದ್ದರು. ಆ ನಂತರ ಮೈಸೂರಿಗೆ ಹಿಂತಿರುಗಿದ ಅವರು ಸಂಪಾದಕ ರಾಜಶೇಖರ್ ಕೋಟಿಯವರ "ಆಂದೋಲನ" ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಆನಂತರ ಅವರು ಕೆ.ಬಿ.ಗಣಪತಿ ಅವರು ಹೊರತರುತ್ತಿದ್ದ "ಸ್ಟಾರ್ ಆಫ್ ಮೈಸೂರ್" ಸೇರ್ಪಡೆಗೊಂಡರು. ಅಲ್ಲಿ ಕೊನೆ ತನಕವೂ ಉಳಿದು ತಾವೂ ಬೆಳೆದು ಪತ್ರಿಕೆಯನ್ನು ಬೆಳೆಸಿದರು.

ಪತ್ರಿಕೆಯೊಂದಿಗೆ ಬೆಳೆದರು : ಯಾವುದೇ ವಿವಿಯ ಪದವಿ ಪಡೆಯದೆ ತಾವೇ ಒಂದು ವಿಶ್ವವಿದ್ಯಾಲಯದಂತೆ ಎಲ್ಲವನ್ನೂ ಕೇಳಿ, ಓದಿ ಅರಗಿಸಿಕೊಂಡರಲ್ಲದೆ, ಅದನ್ನು ಹಲವು ಯುವ ಪತ್ರಕರ್ತರಿಗೆ ಧಾರೆ ಎರೆದರು. ಸ್ಟಾರ್ ಆಫ್ ಮೈಸೂರಿಗೆ ಕೆಲಸಕ್ಕೆ ಸೇರಿದ ಸಂದರ್ಭ ಅವರಲ್ಲಿ ಇಂಗ್ಲಿಷ್ ಜ್ಞಾನ ಅಷ್ಟಾಗಿರಲಿಲ್ಲವಾದರೂ ಮುಂದೆ ಅದನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇಂಟರ್‌ನೆಟ್ ಇಲ್ಲದ ದಿನಗಳಲ್ಲಿ ಎಲ್ಲವನ್ನೂ ನಿಖರವಾಗಿ ಗ್ರಹಿಸಿ ಸರಳ ಶೈಲಿಯಲ್ಲಿ ಬರೆಯುತ್ತಿದ್ದ ಅವರ ಬರಹಗಳು ಓದುಗರನ್ನು ಸುಲಭವಾಗಿ ಸೆಳೆಯುತ್ತಿದ್ದವು.

"ಮೈಸೂರು ಮಿತ್ರ" ಪತ್ರಿಕೆಯಲ್ಲಿ ಬರುತ್ತಿರುವ ಕೆಬಿಜಿಯವರ ಛೂಮಂತ್ರವನ್ನು ಓದುಗರು ಇಷ್ಟಪಟ್ಟು ಓದುತ್ತಾರೆ ಎನ್ನುವುದಾದರೆ ಅದರ ಹಿಂದೆ ಶಿವಣ್ಣರವರ ಶ್ರಮ ಇದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೆಚ್ಚಿನ ಸಮಯವನ್ನು ಪತ್ರಿಕೆಯ ಕಛೇರಿಯಲ್ಲಿ ಕುಳಿತು ಬರೆಯುತ್ತಾ, ವರದಿಗಾರರಿಂದ ಕೆಲಸ ತೆಗೆಯುತ್ತಾ ಪತ್ರಿಕೆಯ ಬೆಳವಣಿಗೆಗೆ ಕಾರಣರಾದ ಅವರು ಮನಸ್ಸು ಮಾಡಿದ್ದರೆ ರಾಜ್ಯ, ರಾಷ್ಟ್ರಮಟ್ಟದ ಪತ್ರಿಕೆಯಲ್ಲಿ ಕೆಲಸಗಿಟ್ಟಿಸಿಕೊಳ್ಳುವುದು ಕಷ್ಟವಾಗಿರಲಿಲ್ಲ. ಆದರೆ ಅವರ ಸ್ವಾಮಿನಿಷ್ಠೆ ಅಲ್ಲಿಯೇ ಉಳಿಯುವಂತೆ ಮಾಡಿತ್ತು.

ನಿಷ್ಠುರವಾದಿ : ಅವತ್ತಿನ ದಿನಗಳಲ್ಲಿ ಕೆ.ಬಿ.ಗಣಪತಿಯವರಿಗೆ ಒಂದು ರೀತಿಯಲ್ಲಿ ಬಲಗೈಯಾಗಿದ್ದ ಎಮ್ಮಾರೆಸ್ ಮತ್ತೊಂದು ರೀತಿಯಲ್ಲಿ ಸಹೋದ್ಯೋಗಿಗಳಿಗೆ ನಿಷ್ಠುರವಾದಿಗಳಾಗಿದ್ದರು. ತಮಗೆ ಇಷ್ಟವಾಗದ ಉಪಸಂಪಾದಕನಾಗಲೀ, ವರದಿಗಾರನನ್ನಾಗಲೀ ಹೆಚ್ಚು ದಿನ ಪತ್ರಿಕೆಯಲ್ಲಿ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಅವರೊಂದಿಗೆ ಜಗಳಮಾಡಿಕೊಂಡು ಹೋದ ನೂರಾರು ಪತ್ರಕರ್ತರು ಸಿಗುತ್ತಾರೆ.

ಕಾರ್ಯಕ್ರಮಕ್ಕೆ ಹೋದ ವರದಿಗಾರ ತಡವಾಗಿ ವರದಿ ನೀಡಿದರೆ ಅದನ್ನು ತೆಗೆದುಕೊಳ್ಳದೆ ಆತನನ್ನು ಮತ್ತೆ ಆಫೀಸಿನ ಕಡೆಗೆ ಮುಖ ಹಾಕದಂತೆ ಮನೆಗೆ ಕಳುಹಿಸಿಬಿಡುತ್ತಿದ್ದರು. ಆದರೆ ಒಂದು ಸಣ್ಣ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಅವರು ಬೆಳೆದಿದ್ದರೆಂದರೆ ಅದಕ್ಕೆ ಅವರು ಕಾರ್ಯ ನಿರ್ವಹಿಸುತ್ತಿದ್ದ ರೀತಿಯೇ ಸಾಕ್ಷಿ.

ಬೆಳಿಗ್ಗೆ ಎಲ್ಲರಿಗಿಂತಲೂ ಮೊದಲೇ ಕಛೇರಿಗೆ ಬರುತ್ತಿದ್ದ ಅವರು ಮನೆಗೆ ಹೋಗುವುದಕ್ಕೆ ಸಮಯದ ನಿಗದಿಯಿರಲಿಲ್ಲ. ಹೆಚ್ಚಿನ ಸಮಯ ಕಛೇರಿಯಲ್ಲಿಯೇ ಬರೆಯುತ್ತಾ, ಓದುತ್ತಾ ಕಳೆಯತೊಡಗಿದ್ದರು. (ಪೆನ್ನಿಗೆ ಕ್ಯಾಪ್ ಹಾಕಿ ಕೆಳಗಿಟ್ಟ ವ್ಯಕ್ತಿ ಅವರಲ್ಲ. ಕೆಂಪು ಶಾಹಿಯನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಯಾವುದಾದರು ವಿಷಯ ಹೊಳೆಯದಿದ್ದಾಗ ಕೈಬೆರಳನ್ನು ಊದುತ್ತಾ ಆಲೋಚಿಸುವುದು ಅವರ ಅಭ್ಯಾಸವಾಗಿತ್ತು.) ಅದರಿಂದ ಅವರ ಜ್ಞಾನ ಬೆಳೆಯಿತು, ಪತ್ರಿಕೆಗೆ, ಮಾಲೀಕರಿಗೆ ಲಾಭವೂ ಆಯಿತು ಆದರೆ ಅವರ ವೈಯಕ್ತಿಕ ಬದುಕು ಮಾತ್ರ ನಾವಿಕನಿಲ್ಲದ ಹಡಗಿನಂತಾಗಿತ್ತು.

ಆರೋಗ್ಯ ಕೆಡಿಸಿಕೊಂಡರು: ದಾಂಪತ್ಯದಲ್ಲಿ ಬಿರುಕು ಕಾಣಿಸಿತು. ಸದಾ, ಸಿಗರೇಟು, ಹೆಂಡಕ್ಕೆ ಮೋರೆ ಹೋದರು. ರಾತ್ರಿ ಹಗಲೆನ್ನದೆ, ಹೆಚ್ಚಿನ ದಿನಗಳನ್ನು ಕಛೇರಿಯ ಕುರ್ಚಿಯಲ್ಲಿಯೇ ಕುಳಿತು ಕಳೆದರು. ಸುಮಾರು ಮೂವತ್ತು ವರ್ಷಗಳ ಕಾಲ ಸುದ್ದಿಮನೆಯಲ್ಲಿ ಹೋರಾಡುತ್ತಾ ಬದುಕಿದ ಅವರು ಇದ್ದು ಇನ್ನು ಏನಾದರೊಂದು ಸಾಧಿಸಬೇಕು ಎಂದುಕೊಳ್ಳುವಾಗಲೇ ಅವರನ್ನು ಅನಾರೋಗ್ಯ ಕಾಡತೊಡಗಿತು. ಕಳೆದೊಂದು ವರ್ಷದಿಂದ ಕಾಯಿಲೆಗೆ ಬಿದ್ದ ಅವರು ಮೇಲೆ ಏಳಲಿಲ್ಲ. ಆದರೆ ಕಳೆದ ಆರು ತಿಂಗಳ ಹಿಂದೆ ಆಸ್ಪತ್ರೆಗೆ ಸೇರಿದವರು ಗುಣಮುಖರಾಗಿ ಮನೆಗೆ ಬರಲೇ ಇಲ್ಲ.

ಅವರು ಪತ್ರಿಕಾರಂಗದಲ್ಲಿ ಸಲ್ಲಿಸಿದ ಸೇವೆಗಾಗಿ 1993ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, 2003ರಲ್ಲಿ ಎನ್‌ಟಿಆರ್ ಪ್ರಶಸ್ತಿಗಳು ಸಂದಿವೆ. ಅವತ್ತು ಅವರ ಅಂತ್ಯಕ್ರಿಯೆ ದಿವಸ ಅವರಿಂದ ಬೆಳೆದವರಾಗಲೀ... ಲಾಭಪಡೆದವರಾಗಲೀ... ಯಾರು ಬರಲಿಲ್ಲ ಎಂಬುವುದೇ ವಿಷಾದದ ಸಂಗತಿ.

English summary
M.R. Shivanna, editor of Star of Mysore online, English evening newspaper, passed away on May 21 in Mysuru. A tribute to the 24/7 journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X