ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತ ಮಾಂತ್ರಿಕ ಡಾ.ಪಂ.ಭೀಮಸೇನ ಜೋಷಿ

By * ಬಸವರಾಜ ದಂಡಿನ, ಗದಗ
|
Google Oneindia Kannada News

Pandit Bhimsen Joshi
ಕರ್ನಾಟಕ ಸಂಗೀತದ ಪ್ರಭಾವದ ಮಧ್ಯದಲ್ಲಿಯೂ ಹಿಂದೂಸ್ಥಾನಿ ಸಂಗೀತದ ಅಲೆ ಎಬ್ಬಿಸಿದ ಖ್ಯಾತನಾಮರಲ್ಲಿ ಡಾ.ಪಂ.ಭೀಮಸೇನ ಜೋಷಿ ಅಗ್ರಗಣ್ಯರು. ಪುರಂದರ ದಾಸರ ಕೀರ್ತನೆ 'ಭಾಗ್ಯದ ಲಕ್ಷ್ಮೀ ಬಾರಮ್ಮ....' ಜೋಷಿಯವರ ಕಂಠದಲ್ಲಿಯೇ ಕೇಳಿ ಆನಂದಿಸಬೇಕು ಅಷ್ಟು ಅದ್ಭುತವಾಗಿ ಹೊರಹೊಮ್ಮಿದ ಗೀತೆ ಇದು.

ಬಹುತೇಕ ಕರ್ನಾಟಕ ಜನತೆಗೆ ಎಂ.ಎಸ್.ಸುಬ್ಬಲಕ್ಷ್ಮೀ ಅವರ ಸುಪ್ರಭಾತ ಹಾಗೂ ಪಂ.ಭೀಮಸೇನ ಜೋಷಿ ಅವರ ಭಾಗ್ಯದ ಲಕ್ಷ್ಮೀ ಗೀತೆಯಿಂದಲೇ ಬೆಳಗಾಗುವುದು ಎನ್ನುವಷ್ಟರ ಮಟ್ಟಿಗೆ ಈ ಗೀತೆ ಎಲ್ಲರ ಮನೆ ಮನ ತಲುಪಿದೆ.

ಮನೆ ಬಿಟ್ಟು ಪರಾರಿ : 1922 ಫೆಬ್ರವರಿ 22ರಂದು ಗದುಗಿನಲ್ಲಿ ಜನಿಸಿದ ಭೀಮಸೇನ ಗುರುರಾಜ ಜೋಷಿ ಅವರು ಕಿರಾಣಾ ಘರಾಣಾದ ಪ್ರಾವೀಣ್ಯತೆ ಸಾಧಿಸಿ ಖಯಾಲ್ ಮಾದರಿಯ ಗಾಯನ ಹಾಗೂ ಭಜನ್ ಶೈಲಿಯಲ್ಲಿ ಹೆಚ್ಚು ಪ್ರಖ್ಯಾತರಾದವರು. ಭೀಮಸೇನರ ತಂದೆ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು.

ಬಾಲ್ಯದಲ್ಲಿಯೇ ಸಂಗೀತದೆಡೆಗೆ ಆಕರ್ಷಿತಗೊಂಡ ಭೀಮಸೇನರು ಸಂಗೀತ ಸಾಧನೆಗಾಗಿ 1933ರಲ್ಲಿ 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋದವರು. ಅಂದಿನ ದಿನಗಳಲ್ಲಿ ಅಬ್ದುಲ್ ಕರೀಮ್ ಖಾನ್ ಅವರ ಗಾಯನಕ್ಕೆ ಮನಸೋತು ಗ್ವಾಲಿಯರ್, ಲಕ್ನೋ ಮತ್ತು ರಾಮಪುರದಲ್ಲಿ ಮೂರು ವರ್ಷಗಳ ಕಾಲ ಗುರುವನ್ನು ಅರಸಿ ಹೋದರು. ಗ್ವಾಲಿಯರ್‌ನಲ್ಲಿ ಉಸ್ತಾದ್ ಹಫೀಜ್‌ಖಾನ್ ಅವರಲ್ಲಿ ಶಿಷ್ಯ ವೃತ್ತಿ ಸ್ವೀಕರಿಸಿದರು. ಅತ್ತ ಸಂಗೀತ ಪಾಠ ಆರಂಭಗೊಂಡರೆ ಇತ್ತ ತಂದೆ ತಾಯಿ ಮಗನ ಹುಡುಕಾಟ ಆರಂಭಿಸಿದ್ದರು. ಕೊನೆಗೆ ಗ್ವಾಲಿಯರ್ ನಲ್ಲಿರುವ ಸುದ್ದಿ ತಿಳಿದು ಮನೆಗೆ ಮರಳಿ ಕರೆ ತಂದರು.

ರಾಗ ಬದಲಿಸದ ಭೀಮ : ಮನೆಗೆ ಕರೆತಂದರೂ ಸಂಗೀತ ಕಲಿಯುವ ರಾಗ ಬದಲಿಸದ ಭೀಮಸೇನರನ್ನು 1936ರಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳದ ಸವಾಯಿ ಗಂಧರ್ವ ಎಂದೇ ಖ್ಯಾತರಾಗಿದ್ದ ರಾಮಭಾವು ಕುಂದಗೋಳಕರ ಅವರಲ್ಲಿ ಶಿಷ್ಯತ್ವ ಒದಗಿಸಿ ಗಾಯನ ಕಲಿಕೆಗೆ ವ್ಯವಸ್ಥೆ ಮಾಡಲಾಯಿತು. ಕಿರಾಣಾ ಘರಾನಾ ಶೈಲಿಯ ಪಿತಾಮಹರೆಂದೇ ಖ್ಯಾತಿ ಪಡೆದಿದ್ದ ಅಬ್ದುಲ್ ಕರೀಂ ಖಾನ್ ಅವರಲ್ಲಿ ಪಳಗಿ ಖ್ಯಾತಿ ಪಡೆದಿದ್ದ ಕುಂದಗೋಳಕರ ಅವರಲ್ಲಿ ನಾಲ್ಕು ವರ್ಷ ಪಳಗಿದ ಭೀಮಸೇನರು 19ರ ವಯಸ್ಸಿನಲ್ಲಿದ್ದಾಗ ಮೊದಲ ಸಂಗೀತ ಕಚೇರಿ ನೀಡಿದರು. 20ನೇ ವಯಸ್ಸಿನಲ್ಲಿದ್ದಾಗಲೇ ಕನ್ನಡ ಮತ್ತು ಹಿಂದಿ ಗೀತೆಗಳನ್ನೊಳಗೊಂಡ ಆಲ್ಬಂ ಬಿಡುಗಡೆಗೊಂಡಿತು.

ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಪುಣೆಯಲ್ಲಿ ತಮ್ಮ ಗುರುವಿನ ಸ್ಮರಣೆಗಾಗಿ 'ಸವಾಯಿ ಗಂಧರ್ವ ಸಂಗೀತ ಉತ್ಸವ'ವನ್ನು ನಡೆಸಿಕೊಂಡು ಬಂದವರು. ಭೀಮಸೇನ ಜೋಷಿ ಅವರು ಹಿಂದೂಸ್ಥಾನಿ ಗಾಯನದಲ್ಲಿ ನಂ.1 ಗಾಯಕ ಎನ್ನುವಷ್ಟರ ಮಟ್ಟಿಗೆ ಸಿದ್ಧಹಸ್ತರು. ರಾಗಗಳ ಮೇಲೆ ಅವರಿಗಿರುವ ಹಿಡಿತ, ಪ್ರಭುತ್ವ ಅದ್ಭುತವಾದುದು. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಖಯಾಲ್ ಶೈಲಿಯನ್ನು ಮತ್ತಷ್ಟು ಸಮೃದ್ಧಗೊಳಿಸಿದ ಭೀಮಸೇನ ಜೋಷಿ ಅವರ 'ಮೀಲೆ ಸುರ್ ಮೇರಾ ತುಮ್ಹಾರಾ' ಎಂಬ ಹಾಡು ದೇಶದ ಉದ್ದಗಲಕ್ಕೂ ಟಿ.ವಿ ಮೂಲಕ ಮನೆ ಮನ ತಲುಪಿದೆ.

ಮೀಲೆ ಸುರ್ ಮೇರಾ ತುಮ್ಹಾರಾ : ಈ ಗೀತೆ ಇಂದಿಗೂ ಜನಪ್ರಿಯ ಗೀತೆ. ಲೋಕ ಸೇವಾ ಸಂಚಾರ ಪರಿಷದ್ ಈ ಗೀತೆಯನ್ನು ನಿರ್ಮಿಸಿದೆ. ಪಿಯೂಷ್ ಪಾಂಡೆ ಗೀತೆ ರಚನೆಕಾರರು, ಅಶೋಕ ಪಟ್ಕಿ ಹಾಗೂ ಲೂಯಿ ಬ್ಯಾಂಕ್ಸ್ ಗೀತೆಯನ್ನು ಸಂಗೀತಕ್ಕೆ ಅಳವಡಿಸಿದರು. ಸುರೇಶ್ ಮುಲಿಕ್ ನಿರ್ದೆಶಿಸಿದ ಈ ಗೀತೆ 1988ರ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯಲ್ಲಿ ಪ್ರಧಾನಮಂತ್ರಿಗಳ ಭಾಷಣದ ನಂತರ ಪ್ರಪ್ರಥಮವಾಗಿ ಹಾಡಲಾಯಿತು. ಈ ಗೀತೆ ಜನಪ್ರಿಯತೆ ಪಡೆದು 14 ಭಾಷೆಗಳಲ್ಲಿ ಉಚ್ಛರಿಸಲ್ಪಟ್ಟಿದೆ.

ಗೀತೆಯ ದೃಶ್ಯದಲ್ಲಿ ಅಮಿತಾಬ್ ಬಚ್ಚನ್, ಮಿಥುನ್ ಚಕ್ರವರ್ತಿ, ತನ್ವೀರ್ ಆಶಾಯ್, ಕಮಲ್ ಹಾಸನ್, ಕೆ.ಆರ್.ವಿಜಯ, ರೇವತಿ, ಜಿತೇಂದ್ರ, ವಹೀದಾ ರಹಮಾನ್, ಹೇಮಾಮಾಲಿನಿ, ತನುಜಾ, ಶರ್ಮಿಳಾ ಟ್ಯಾಗೋರ್, ಶಬಾನಾ ಅಜ್ಮಿ, ದೀಪಾ ಸಾಹಿ, ಓಂ ಪುರಿ, ಧಿನಾ ಪಾಠಕ್, ಮೀನಾಕ್ಷಿ ಶೇಷಾದ್ರಿ, ಮಲ್ಲಿಕಾ ಸಾರಾಭಾಯ್, ಮಾರಿಯೋ ಮಿರಾಂಡಾ, ಮೃಣಾಲ್ ಸೇನ್, ಸುನೀಲ್ ಗಂಗೂಪಾಧ್ಯಾಯ, ಆನಂದಶಂಕರ ರೇ, ಭೀಮಸೇನ ಜೋಷಿ, ಎಂ.ಬಾಲಮುರಳಿಕೃಷ್ಣ, ಲತಾ ಮಂಗೇಶ್ಕರ್, ಸುಚಿತ್ರಾ ಮಿತ್ರಾ, ನರೇಂದ್ರ ಹಿರ್ವಾನಿ, ಎಸ್.ವೆಂಕಟರಾಘವನ್, ಪ್ರಕಾಶ ಪಡುಕೋಣೆ, ರಾಮನಾಥನ್ ಕೃಷ್ಣನ್, ಅರುಣ್‌ಲಾಲ್, ಪಿ.ಕೆ.ಬ್ಯಾನರ್ಜಿ, ಚುನೀ ಗೋಸ್ವಾಮಿ, ಸೈಯದ್ ಕಿರ್ಮಾನಿ, ಲೆಸ್ಲೀ ಕ್ಲಾಡಿಯಸ್, ಗುರುಬಕ್ಸ್ ಸಿಂಗ್ ಮುಂತಾದವರಿಂದ ಗೀತೆ ಗಟ್ಟಿತನದ ಮೆರಗು ಪಡೆದಿದೆ.

ಪ್ರಶಸ್ತಿಗಳು : ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ, ಕರ್ನಾಟಕ ರತ್ನದಂತಹ ಪಶಸ್ತಿಗಳನ್ನು ಪಡೆದಿದ್ದ ಖ್ಯಾತ ಹಿಂದೂಸ್ತಾನಿ ಸಂಗೀತ ದಿಗ್ಗಜ ಪಂ.ಭೀಮಸೇನ ಜೋಷಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡಿ ಗೌರವಿಸಲಾಗಿದೆ.

ಸರ್ ಎಂ.ವಿಶ್ವೇಶ್ವರಯ್ಯ ಅವರ ನಂತರ ಈ ಶ್ರೇಷ್ಠ ಗೌರವಕ್ಕೆ ಪಾತ್ರರಾದ ಕನ್ನಡಿಗರಲ್ಲಿ ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಭೀಮಸೇನ ಜೋಷಿ ಮೊದಲಿಗರು. ಏಳು ವರ್ಷದ ನಂತರ ಕೇಂದ್ರ ಸರಕಾರ ಘೋಷಿಸಿದ ಈ ಪ್ರಶಸ್ತಿ ಕನ್ನಡಿಗರಿಗೆ ದೊರೆತದ್ದು ಇನ್ನೂ ವಿಶೇಷ ಎಂದೇ ಹೇಳಬೇಕು. ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸತ್ಯಜಿತ್ ರಾಯ್, ಎಂ.ಎಸ್.ಸುಬ್ಬುಲಕ್ಷ್ಮೀ, ಪಂ.ರವಿಶಂಕರ್, ಲತಾ ಮಂಗೇಶ್ಕರ್ ಹಾಗೂ ಉಸ್ತಾದ್ ಬಿಸ್ಮಿಲ್ಲಾಖಾನ್ ಅವರಿಗೆ ಈಗಾಗಲೇ ಭಾರತ ರತ್ನ ನೀಡಿ ಗೌರವಿಸಲಾಗಿದ್ದು ಆ ಪಂಕ್ತಿಗೆ ಸೇರ್ಪಡೆಯಾದ ಭೀಮಸೇನ್‌ರು ಸುಬ್ಬುಲಕ್ಷ್ಮೀ ನಂತರ ಸಂಗೀತ ಕ್ಷೇತ್ರದಲ್ಲಿ ಭಾರತ ರತ್ನ ಪಡೆದ ಎರಡನೆಯವರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

ಸಂಗೀತ ಲೋಕದ ಮಾಂತ್ರಿಕ ಎಂದೇ ಬಣ್ಣಿಸಲಾಗುತ್ತಿದ್ದ .ಪಂ.ಭೀಮಸೇನ ಜೋಷಿ ಅವರು ದೀರ್ಘ ಕಾಲದ ಅನಾರೋಗ್ಯದಿಂದಾಗಿ ಇದೀಗ ನಮ್ಮನ್ನಗಲಿದ್ದು ಸಂಗೀತ ಲೋಕದಲ್ಲಿ ಮೌನ ಆವರಿಸಿದಂತಾಗಿದೆ. [ಭೀಮಸೇನ ಜೋಶಿ]

English summary
A pen portrait of Bharat Ratna Pandit Bhimsen Joshi, legendary hindustani musician, by Basavaraj Dandin, Gadag. Bhimsen Joshi breathed last on January 24, 2011 in Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X