• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ ಚಿನ್ನ ಗೆದ್ದ ಕನ್ನಡತಿ ಮಮತಾ ಪೂಜಾರಿ

By * 'ನಮನ' ಬಜಗೋಳಿ, ಕಾರ್ಕಳ
|

ಹೆರ್ಮುಂಡೆಯಂತಹ ಗ್ರಾಮೀಣ ಪ್ರತಿಭೆ ಮಮತಾ ಪೂಜಾರಿ ಚೀನಾದಲ್ಲಿ ಚಿನ್ನವನ್ನು ಗೆದ್ದು, ಇಂದು ದೇಶದ ಹುಡುಗಿಯಾಗಿರುವ ಸಂತಸ ಆಕೆಯ ಕುಟುಂಬಿಕರಿಗೆ ಮಾತ್ರವಲ್ಲ, ಹುಟ್ಟೂರಾದ ಕಾರ್ಕಳ ತಾಲೂಕಿನ ಜನತೆಗೆ ಅತೀವ ಸಂತಸ ತಂದಿದೆ.

2002ರಲ್ಲಿ ಕಬಡ್ಡಿ ಆಟವನ್ನು ಆರಂಭಿಸಿದ್ದ ಮಮತಾ, 2003ರಲ್ಲಿ ರಾಜ್ಯಮಟ್ಟದಲ್ಲಿ, 2004-05ರಲ್ಲಿ ರಾಷ್ಟ್ರಮಟ್ಟದಲ್ಲಿ, 2006ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಪಂದ್ಯಾಟದ ದಿನಗಳಲ್ಲಿ ವಿಶ್ರಾಂತಿಯ ಕೊರತೆಯಿತ್ತು. ಹುಟ್ಟೂರಿಗೆ ಬಂದು ಒಂದೆರಡು ದಿನ ವಿಶ್ರಾಂತಿ ಪಡೆಯಬೇಕೆಂಬುವುದು ಅವರ ಹಂಬಲ. ಕೆಲವೇ ದಿನಗಳಲ್ಲಿ ಅವರು ಕಬಡ್ಡಿಯಲ್ಲಿ ಭಾಗವಹಿಸಲು ಮತ್ತೆ ಮಸ್ಕತ್‌ನ ಓಮನ್‌ಗೆ ತೆರಳಬೇಕಾಗಿದೆ.

ಎರಡನೇ ಏಷ್ಯಾನ್ ಗೇಮ್‌ನಲ್ಲಿ ಭಾಗವಹಿಸಿದ್ದ ಆಕೆ, ಇಂಡೋನೇಷಿಯಾದಲ್ಲಿ ನಡೆದ ಮೊದಲ ಬೀಚಿಂಗ್ ಏಷ್ಯನ್ ಗೇಮ್‌ನಲ್ಲಿ ತಂಡದ ನಾಯಕಿಯಾಗಿದ್ದರು. ಇದೀಗ ಮಾಧ್ಯಮದ ಜತೆ ಪ್ರತಿಕ್ರಿಯಿಸಿದ್ದು ಹೀಗೆ.....

* ಚಿನ್ನ ಗೆದ್ದಾಗ ಪ್ರಾರಂಭದಲ್ಲಿ ನಿಮ್ಮ ಮನಸ್ಸಿಗೆ ಹೊಳೆದ ಚಿತ್ರಣ ಯಾವುದು?

ಮಮತಾ : ಮೊದಲು ನಮ್ಮ ದೇಶದ ಚಿತ್ರಣ ನನ್ನ ಕಣ್ಣ ಮುಂದೆ ಬಂದಾಯಿತು. ಭಾರತದ ತಂಡವನ್ನು ಪ್ರತಿನಿಧಿಸಿದ ನಾವು ಚಿನ್ನ ಗೆದ್ದಾಗ ದೇಶದ ಋಣದ ಒಂದು ಭಾಗವನ್ನು ತೀರಿಸಿದ ಅಪಾರ ಸಂತಸ ನನಗಾಯಿತು. ಬಳಿಕ ನನ್ನನ್ನು ಹೆತ್ತವರ ನೆನಪು. ಅವರ ಆಶೀರ್ವಾದ ಮತ್ತು ಮೊದಲ ಪ್ರೋತ್ಸಾಹದಿಂದ ಕಬಡ್ಡಿ ಕ್ರೀಡಾಪಟುವಾಗುವ ಅವಕಾಶ ಲಭಿಸಿತ್ತು. ಪ್ರಾರಂಭದಲ್ಲಿ ತಂದೆತಾಯಿ ಆಕ್ಷೇಪಿಸುತ್ತಿದ್ದರೆ... ನನ್ನಿಂದ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ.

* ಹಳ್ಳಿ ಹುಡುಗಿ ನೀವು, ಪ್ರಾರಂಭದಲ್ಲಿ ಕಬಡ್ಡಿಯಲ್ಲಿ ತೊಡಗಿಸಿಕೊಳ್ಳುವಿಕೆಗೆ ಸಮಾಜದ ಪ್ರತಿಕ್ರಿಯೆ ಹೇಗಿತ್ತು?

ಮಮತಾ : ನನಗೆ ಹೆತ್ತವರ ಪ್ರೋತ್ಸಾಹ ಚೆನ್ನಾಗಿಯೇ ಇತ್ತು. ಆದರೆ ದಿನ ಅಭ್ಯಾಸ ಮುಗಿಸಿ ಮನೆಗೆ ಬರುತ್ತಿರುವಾಗ ತಡವಾಗುತ್ತಿರುವುದು ಸಣ್ಣಪುಟ್ಟ ಟೀಕೆಗೆ ಕಾರಣವಾಗಿತ್ತು. ಊರವರು ಅಮ್ಮನ ಜತೆಯಲ್ಲೂ ಮಗಳು ಮನೆಗೆ ಲೇಟಾಗಿ ಬರುತ್ತಾಳೆ. ಯಾಕೆ ನೀವು ಕಳುಹಿಸುತ್ತೀರಿ? ಎಂದು ಪ್ರಶ್ನಿಸುತ್ತಿದ್ದರು. ಜತೆಗೆ ಕುಟುಂಬಿಕರ ಪ್ರಶ್ನೆಯೂ ಅದೇ ಆಗಿತ್ತು. ಆದರೆ ಕ್ರೀಡೆಯಲ್ಲಿ ಒಮ್ಮೆ ತೊಡಗಿಸಿಕೊಂಡ ಬಳಿಕ ಇವೆಲ್ಲವುಗಳನ್ನು ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ನನಗಿತ್ತು. ಮನೆಯವರ ಪ್ರೋತ್ಸಾಹ ನನಗಿದ್ದ ಪರಿಣಾಮ, ವಿಶ್ವದ ಗಮನ ಸೆಳೆಯುವಂತಾಯಿತು.

* ಏಷ್ಯನ್ ಗೇಮ್ಸ್‌ನಲ್ಲಿ ಯಶಸ್ಸು ಹೇಗೆ ಪ್ರಾಪ್ತಿಯಾಯಿತು?

ಮಮತಾ : ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ತಂಡದ ಸದಸ್ಯರು ಸಮಾನ ಪ್ರದರ್ಶನ ನೀಡಿದ್ದಾರೆ. ಸೆಮಿ ಫೈನಲ್ ಪಂದ್ಯಾಟ ತುಂಬಾ ಕಠಿಣವಾಗಿತ್ತು. ಆದರೆ ತಂಡದ ಸಾಂಘಿಕ ಪ್ರದರ್ಶನದಿಂದ ಗೆಲುವು ಸುಲಭವಾಯಿತು. ನಿಜ ಹೇಳಬೇಕಾದರೆ ಭಾರತದ ಕಬಡ್ಡಿ ತಂಡ ಯಾವಾಗಲೂ ಬಲಿಷ್ಟವಾಗಿಯೇ ಇದೆ. ಎಂತಹ ಎದುರಾಳಿಗಳನ್ನು ಮಣಿಸುವ ಶಕ್ತಿ ನಮ್ಮಲ್ಲಿದೆ.

* ಏಷ್ಯನ್ ಗೇಮ್ಸ್‌ನಲ್ಲಿ ಜಯಗಳಿಸಿ ಊರಿಗೆ ಬಂದಿದ್ದೀರಿ. ಮನೆ ಮತ್ತು ಊರಿನವರ ಪ್ರತಿಕ್ರಿಯೆ ಹೇಗಿತ್ತು?

ಮಮತಾ : ನೀವೆಲ್ಲಾ ನೋಡಿದ್ದೀರಿ. ಮಾಧ್ಯಮಗಳಲ್ಲಿ ನಮ್ಮ ತಂಡದ ಜಯ, ಮನೆಯವರ ಹರ್ಷ ಎಲ್ಲವೂ ಈಗಾಗಲೇ ಪ್ರಕಟವಾಗಿದೆ. ನನಗೆ ಹೇಳಲಾಗದಷ್ಟು ಆನಂದವಾಗುತ್ತಿದೆ. ಮನೆಯವರು ಕೂಡಾ ತುಂಬಾ ಸಂತೋಷಗೊಂಡಿದ್ದಾರೆ. ಅದಕ್ಕಿಂತಲೂ ಮಿಗಿಲಾಗಿ ಹುಟ್ಟೂರಿಗೆ ಬಂದಾಗ ಕಾರ್ಕಳದಲ್ಲೂ ಇಷ್ಟೊಂದು ಜನರಿದ್ದಾರೆಯೇ? ಎಂಬ ಆಶ್ಚರ್ಯವೂ ನನಗಾಯಿತು. ಕಬಡ್ಡಿ ಆಡಿದರೆ ತುಂಬಾ ಸಪೋರ್ಟ್ ಇದೆ. ನಾವು ಎಲ್ಲಿ ಹೋದರಲ್ಲಿ ಮೆರವಣಿಗೆ ನಡೆಯುತ್ತಿದೆ. ಈ ರೀತಿಯ ಮೆರವಣಿಗೆಗಳು ಹರ್ಯಾಣ ರಾಜ್ಯದಲ್ಲಿ ಮಾತ್ರ ಮಾಡುತ್ತಾರೆ ಎಂದು ನಾನು ಮೊದಲು ಅಂದುಕೊಂಡಿದ್ದೆ. ಕಾರ್ಕಳದ ಜನತೆಗೆ ನಾನು ಋಣಿಯಾಗಿದ್ದೇನೆ.

* ಬಾಲ್ಯದಿಂದ ಈ ಹಂತಕ್ಕೆ ತಲುಪಲು ನಿಮ್ಮ ಪ್ರಯತ್ನ ಹೇಗೆ ಸಾಗಿತು?

ಮಮತಾ : ಉತ್ತಮ ಬೆಂಬಲ ಇರುವವರು ಕ್ರಿಕೆಟನ್ನು ಆಯ್ಕೆಮಾಡುತ್ತಾರೆ. ಕಬಡ್ಡಿ ತಂಡದಲ್ಲಿ ನನ್ನಂತೆ ಗ್ರಾಮೀಣ ಪ್ರತಿಭೆಗಳೇ ಇದ್ದಾರೆ. ನಮ್ಮಂತಹ ಆಟಗಾರರು ಕಬಡ್ಡಿ, ವಾಲಿಬಾಲ್, ಫುಟ್‌ಬಾಲ್ ಅಂತಹ ಆಟಗಳಿಂದಲೇ ಮೇಲೆ ಬರುತ್ತಾರೆ. ಆರಂಭದ ಹಂತಗಳಲ್ಲಿ ತುಂಬಾ ಕಠಿಣವಾಯಿತು. ಊರಿನವರ, ಕಾಲೇಜಿನವರ ಪ್ರೋತ್ಸಾಹದಿಂದ ಈ ಸಾಧನೆಗೆ ಅನುಕೂಲವಾಯಿತು. ಇನ್ನು ಮುಂದಿನ ಪಂದ್ಯಾಟಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ನನ್ನ ಪ್ರಯತ್ನ ಮುಂದುವರೆಯುತ್ತದೆ.

* ಆರಂಭದಲ್ಲಿ ನೀವೋಬ್ಬರು ವಾಲಿಬಾಲ್ ಆಟಗಾರ್ತಿ ಅಂತ ಕೇಳಿದ್ದೇವೆ. ಬಳಿಕ ಕಬಡ್ಡಿಗೆ ನಿಮ್ಮ ಆಸಕ್ತಿ ಹೇಗೆ ವಾಲಿತು?

ಮಮತಾ : ಮುನಿಯಾಲು ಸರಕಾರಿ ಕಾಲೇಜಿನಲ್ಲಿ ಕಲಿಯುತ್ತಿರುವ ವೇಳೆ ನಾನೊಬ್ಬ ವಾಲಿಬಾಲ್ ಆಟಗಾರ್ತಿ. ಆ ಸಂದರ್ಭ ನಾನು ಕಬಡ್ಡಿ ಆಟವನ್ನು ನೋಡಲು ಹೋಗುತ್ತಿದ್ದೆ. ಆಟಗಾರರನ್ನು ನೋಡಿ ಇದು ಏನು ಆಟವಪ್ಪಾ... ಎಂದು ನಗುತ್ತಿದ್ದ ಸಂದರ್ಭವೂ ಇತ್ತು. ಆದರೆ ಕ್ರಮೇಣ ಕಾಲೇಜಿನ ಕಬಡ್ಡಿ ತಂಡದಲ್ಲಿ ಭಾಗವಹಿಸುವಂತೆ ನಮ್ಮ ಕೋಚ್ ರಮೇಶ್ ಸುವರ್ಣ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ರಾಮಕೃಷ್ಣ ಹೆಗ್ಡೆ ಅವರ ಸಲಹೆಯಾಗಿತ್ತು. ಅಂತೆಯೇ ತಂಡದಲ್ಲಿ ಏಳನೇ ಆಟಗಾರರಾಗಿ ಅವಕಾಶ ಪಡೆದೆ. ಪ್ರಾರಂಭದಲ್ಲಿ ಅವರಿಬ್ಬರ ತರಬೇತಿ ನನಗೆ ಶ್ರೀರಕ್ಷೆಯಾಗಿತ್ತು.

* ನಮ್ಮ ದೇಶದಲ್ಲಿ ಮತ್ತು ನಮ್ಮ ಕರಾವಳಿಯಲ್ಲಿ ಅನೇಕ ಪ್ರತಿಭೆಗಳಿದ್ದಾರೆ. ಅವರ ಪ್ರತಿಭೆಯನ್ನು ಹೊರಗೆಡವಲು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಎಂತಹ ಕೋಚ್‌ಗಳು ಬೇಕಾಗಿದ್ದಾರೆ? ಮುಂದಿನ ಪ್ರತಿಭೆಗಳಿಗೆ ನಿಮ್ಮ ಕಿವಿ ಮಾತೇನು?

ಮಮತಾ : ನಮ್ಮ ಭಾರತದಲ್ಲಿ ಇರುವಂತಹ ಅದ್ಭುತ ಆಟಗಾರರು ಬಹುಶಃ ಯಾವ ರಾಷ್ಟ್ರಗಳಲ್ಲೂ ಇಲ್ಲ. ಫೆಡರೇಶನ್ ಮತ್ತು ಕೋಚ್‌ಗಳು ಆಟಗಾರರ ಆಟವನ್ನು ಗಮನಿಸಿ ಪ್ರತಿಭಾವಂತರನ್ನು ಆರಿಸಬೇಕು. ಸರಕಾರವು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕಾಗಿದೆ. ಕ್ರೀಡೆ ಯಾವುದೇ ಆಗಲಿ ಕಠಿಣ ಪರಿಶ್ರಮ ಪಟ್ಟರೆ ನಿರ್ದಿಷ್ಟ ಗುರಿ ಸಾಧಿಸಬಹುವುದು ಎನ್ನುವುದು ಯುವ ಪ್ರತಿಭೆಗಳಿಗೆ ನನ್ನ ಸಲಹೆ.

* ಏಷ್ಯನ್ ಗೇಮ್ಸ್‌ನಲ್ಲಿ ಪಂದ್ಯಾಟ ಎಷ್ಟು ಕಠಿಣವಾಗಿತ್ತು? ನೀವು ನಿಮ್ಮ ತಂಡದ ಆಟಗಾರರು ಜಯಕ್ಕಾಗಿ ಯಾವ ರೀತಿಯ ರಣತಂತ್ರ ಹೆಣೆದಿದ್ದೀರಿ?

ಮಮತಾ : ನಮ್ಮ ತಂಡದ ಆಟಗಾರರು ತುಂಬಾ ಪರಿಶ್ರಮ ವಹಿಸಿದ್ದೀವಿ. ಇರಾನ್ ತಂಡದ ವಿರುದ್ಧ ಸೆಣಸುವ ಸಲುವಾಗಿಯೇ ನಾವು ಸುಮಾರು ಒಂದು ವರ್ಷದಿಂದ ಕಠಿಣ ಪರಿಶ್ರಮ ನಡೆಸಿದ್ದೆವು. ಥಾಯ್ಲೆಂಡ್ ಕೂಡಾ ಉತ್ತಮ ತಂಡವಾಗಿತ್ತು. ಕೊನೆಯ ಪಂದ್ಯಗಳಲ್ಲಿ ನಮ್ಮ ತಂಡದ ಮೇಲೆ ಒತ್ತಡವಿತ್ತು. ಆದರೆ ಸೆಮಿಫೈನಲ್‌ನಲ್ಲಿ 1 ಅಂಕದಿಂದ ಜಯಗಳಿಸಿದ್ದು, ಮರೆಯಲಾಗದ್ದು ಮತ್ತು ಗೆಲುವು ತುಂಬಾ ಅನೀರಿಕ್ಷಿತ ಹಾಗೂ ಹರ್ಷದಾಯಕವಾಗಿತ್ತು.

* ಕಬಡ್ಡಿಗೆ ಸರಕಾರದ ಪ್ರೋತ್ಸಾಹ ಹೇಗಿದೆ?

ಮಮತಾ : ಸರಕಾರ ತುಂಬಾ ಸಪೋರ್ಟ್ ಮಾಡುತ್ತಿದೆ. ಏಷ್ಯಾಡ್‌ನಲ್ಲಿ ಈ ಬಾರಿ ಕಬಡ್ಡಿ ಪ್ರಥಮವಾಗಿ ಆಡುವ ಅವಕಾಶ ದೊರೆತಿದೆ. ಮುಂದಿನ ಒಲಿಂಪಿಕ್ಸ್‌ನಲ್ಲೂ ಈ ಅವಕಾಶದ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ ದೊರೆತಲ್ಲಿ ಸರಕಾರದ ಇನ್ನೂ ಹೆಚ್ಚಿನ ಬೆಂಬಲವಿದ್ದಲ್ಲಿ ಕಬಡ್ಡಿಯಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ರೂಪಿಸಬಹುದು.

* ಹಾಗಾದರೆ ಒಲಿಂಪಿಕ್ಸ್ ಗೇಮ್ ನಿಮ್ಮ ಮುಂದಿನ ಗುರಿಯಾಗಿದೆಯೇ?

ಮಮತಾ : ಇದು ನನ್ನ ಒಬ್ಬಳ ಗುರಿಯಲ್ಲ. ಎಲ್ಲಾ ಆಟಗಾರರ ಗುರಿಯಾಗಿರಬೇಕು. ಮುಂದಿನ 10 ವರ್ಷಗಳ ಬಳಿಕ (2020ರಲ್ಲಿ) ನಡೆಯುವ ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಪಂದ್ಯಾಟ ಸೇರ್ಪಡೆಯಾಗುವ ನಿರೀಕ್ಷೆ ಇದೆ. ನನ್ನ ಜೂನಿಯರ್‌ಗಳು ಆ ಪಂದ್ಯಾಟದಲ್ಲಿ ಭಾಗವಹಿಸಿದಾಗಲೂ ಕೂಡಾ ನಾನು ಇಷ್ಟೇ ಖುಷಿ ಪಡುತ್ತೇನೆ.

* ನಿಮ್ಮ ಮುಂದಿನ ಗುರಿ?

ಮಮತಾ : ಶೀಘ್ರದಲ್ಲಿ ಮದುವೆ. 25 ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಮದುವೆಯಾಗಬೇಕು ಎನ್ನುವುದು ಮನೆಯವರ ಇಂಗಿತ. ಎಲ್ಲವೂ ರೈಟ್ ಟೈಮ್‌ನಲ್ಲಿ ಆದ್ರೆ ಲೈಫ್ ಚೆನ್ನಾಗಿರುತ್ತೆ ಅನ್ನುತ್ತಾರಲ್ಲ (ಎಂದು ನಗುತ್ತಾ)..... ದೇಶದ ಜನತೆ ನನ್ನ ಮೇಲೆ ಇರಿಸಿದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಮುಂದೆ ನನ್ನ ಪ್ರಯತ್ನ ಸಾಗಲಿದೆ. ಜತೆಗೆ ಮುಂದಿನ ದಿನಗಳಲ್ಲಿ ಕಬಡ್ಡಿ ಆಟಕ್ಕಾಗಿ ನನ್ನಿಂದಾಗುವ ಎಲ್ಲಾ ಸಹಾಯವನ್ನು ಮಾಡಲು ನಾನು ಸದಾ ಸಿದ್ಧ ಎಂದರು.

* ಈ ಸಾಧನೆಯ ಹಿಂದೆ ನೀವು ಪಟ್ಟ ಶ್ರಮ ಎಷ್ಟು? ಈಗೇನನಿಸುತ್ತದೆ?

ಮಮತಾ : ಕ್ರಿಕೆಟ್ ಅಥವಾ ಇನ್ನಿತರ ಹೈ ಲೆವೆಲ್ ಆಟದ ಆಟಗಾರರನ್ನು ಬಿಟ್ಟು ಬೇರೆ ಯಾವುದೇ ಆಟಗಾರರಲ್ಲೂ ಕೇಳಿದರೂ ಅವರಿಗೆ ಕ್ರೀಡೆಯ ಆರಂಭಿಕ ಹಂತಗಳಲ್ಲಿ ತುಂಬಾ ಕಷ್ಟಪಡಬೇಕಾಗುತ್ತದೆ. ಕುಂದಾಪುರದ ಅಶ್ವಿನಿ ಅವರಿಗೆ ಮೊದಮೊದಲು ತುಂಬಾ ಸಮಸ್ಯೆಯಿತ್ತು. ಆದರೆ ಈವಾಗ ಯಶಸ್ಸು ಕಂಡಿದ್ದಾರೆ. ನಮ್ಮ ಕಬಡ್ಡಿ ತಂಡದ ನಾಯಕಿ ಕರ್ನಾಟಕದವರೇ ಆದ ತೇಜಸ್ವಿನಿ ಬಾಯಿ. ಅವರಿಗೂ ಕೂಡಾ ಆರಂಭದಲ್ಲಿ ತುಂಬಾ ಕಷ್ಟಪಡಬೇಕಾಗಿತ್ತು. ನನ್ನ ಪರಿಸ್ಥಿತಿಯೂ ಅದೇ ಆಗಿತ್ತು. ಆದರೆ ನನಗೆ ಅದು ನೋವು ತಂದಿಲ್ಲ. ಯಾಕೆಂದರೆ ನನ್ನ ಹೆತ್ತವರು ನನ್ನ ಜತೆಗಿದ್ದರು.

* ಮಕ್ಕಳಿಗೆ ಬರೇ ಓದು ಓದು ಎನ್ನುವ ಪೋಷಕರಿಗೆ ನಿಮ್ಮ ಸಲಹೆ?

ಮಮತಾ : ಪಠ್ಯದ ಜತೆ ಪಠ್ಯೇತರ ಚಟುವಟಿಕೆಗೂ ಅವಕಾಶ ಕಲ್ಪಿಸಿಕೊಡಬೇಕು. ಮಕ್ಕಳ ಆಸಕ್ತಿ ಮತ್ತು ಅಭಿರುಚಿಯ ಬಗ್ಗೆಯೂ ಚಿಂತನೆ ನಡೆಸುವ ಅನಿವಾರ್ಯತೆ ಇದೆ. ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಗೆ ವಿಫುಲ ಅವಕಾಶವಿದೆ. ಭಾರತದಲ್ಲಿ ನನ್ನನ್ನು ಬೆಸ್ಟ್ ರೈಡರ್ ಎಂದು ಗುರುತಿಸುತ್ತಿದ್ದಾರೆ. ಅದು ನನಗೆ ಅತೀವ ಸಂತೋಷ ತಂದಿದೆ.

English summary
Asian Games 2010 Kabaddi gold medalist Mamata Poojary gets rousing welcome back in Hermunde, Karkala, Karnataka. Kabaddi queen Mamata Poojary speaks to the media and shares her experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X