ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಣ ಬಿಟ್ಟರೂ ದೀಕ್ಷೆ ಬಿಡದ ರಾಜೀವ ದೀಕ್ಷಿತ್!

By * ಸುಧೀಂದ್ರ ಭಾರದ್ವಾಜ್, ಕಂಚಿತೋಟ
|
Google Oneindia Kannada News

A Tribute to Rajiv Dixit
ಅವರ ಹೆಸರು ಕೇಳಿದರೇ ಬಹುರಾಷ್ಟ್ರೀಯ ಕಂಪೆನಿಗಳ ಎದೆ ಬಡಿತ ಒಂದೇ ಸಮನೇ ಏರುತ್ತಾ ಹೋಗುತ್ತಿತ್ತು. ಸ್ವದೇಶಿ ಚಿಂತನೆಯ ಹುಡುಗರಿಗೆ ನೂರಾನೆ ಬಲ ಬಂದಂತಾಗುತ್ತಿತ್ತು. ಆದರೆ ಅವರ ಸಾವು ಮಾತ್ರ ನಮ್ಮ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ!

ಅವರು ದೂರದ ಛತ್ತೀಸ್‌ಗಢದಲ್ಲಿ ನಿಧನರಾಗಿ ಒಂದು ರಾತ್ರಿ ಕಳೆದ ಮೇಲೆ ಅವರ ಸಾವಿನ ಸುದ್ದಿ ಸದ್ದಿಲ್ಲದೇ ಬಂದು ಸಂದಿಯಲ್ಲೆಲ್ಲೋ ಕಳೆದೇ ಹೋಯಿತು. ಸದಾ ಬ್ರೇಕಿಂಗ್ ನ್ಯೂಸ್‌ಗಾಗಿ ತಡಕಾಡುತ್ತಿರುವ ನಮ್ಮ ಮೀಡಿಯಾಗಳ ಪಾಲಿಗೆ ಅವರದು ಥ್ಯಾಂಕ್ ಲೆಸ್ ಜಾಬ್ ಅಷ್ಟೇ ಅಲ್ಲ, ಥ್ಯಾಂಕ್‌ಲೆಸ್ ಲೈಫ್ ಅನ್ನಿಸಿರಬೇಕು! ಅದಕ್ಕೇ ರಾಜೀವ್ ದೀಕ್ಷಿತ್ ಎಂಬ ಪ್ರಖರ ಚಿಂತಕ, ಸ್ವದೇಶಿ ನೇತಾರ, ಅಪ್ರತಿಮ ಹೋರಾಟಗಾರನ ಸಾವು ಬಹುತೇಕ ಭಾರತೀಯರಿಗೆ ತಕ್ಷಣಕ್ಕೆ ಗೊತ್ತಾಗಲೇ ಇಲ್ಲ.

'ಶರಣರ ಹಿರಿಮೆಯನ್ನು ಮರಣದಲ್ಲಿ ನೋಡು' ಅನ್ನೋದು ಸುಮ್ಮನೇ ಮಾತಲ್ಲ! ರಾಜೀವ್ ದೀಕ್ಷಿತ್ ಬರೀ ಮಾತಿನಲ್ಲಿ, ಬದುಕಿನಲ್ಲಿ ಮಾತ್ರ ಸ್ವದೇಶಿ ಚಿಂತಕನಾಗಿರಲಿಲ್ಲ. ಸಾವಿನ ಮನೆಗೂ ಅದನ್ನು ಜತೆಯಲ್ಲೇ ಕೊಂಡೊಯ್ದಿದ್ದರು! ಮೊನ್ನೆ ನವೆಂಬರ್ 30ರಂದು ರಾತ್ರಿ ಛತ್ತೀಸ್‌ಗಢದಲ್ಲಿ ಬಾಬಾ ರಾಮ್‌ದೇವ್ ಜತೆ ಸಭೆಯಲ್ಲಿದ್ದಾಗಲೇ ಅವರಿಗೆ ತೀವ್ರ ಹೃದಯಾಘಾತವಾಗಿದೆ.

ಜೀವಕ್ಕೇ ಅಪಾಯ ಇದೇ ಅನ್ನೋದು ತಕ್ಷಣ ಗೊತ್ತಾಗಿದೆ. ಆದರೆ, ವೈದ್ಯರು ಎಮರ್ಜೆನ್ಸಿ ಇಂಜೆಕ್ಷನ್ ಕೊಡಲು ಬಂದಾಗ ಮಾತ್ರ ದೀಕ್ಷಿತರು ಅದನ್ನು ತೆಗೆದುಕೊಳ್ಳಲು ಬಿಲ್‌ಕುಲ್ ಒಪ್ಪಲಿಲ್ಲ! ಇಂಗ್ಲಿಷ್ ಔಷಧಿ ನನಗೆ ಬೇಡ ಎಂಬುದು ಅವರ ಅಚಲ ನಿಲುವು. ರಾಜೀವ್ ದೀಕ್ಷಿತರಿಗೆ ಹೋಮಿಯೋಪತಿ ತಿಳಿದಿತ್ತು. ಎಲ್ಲ ಸಣ್ಣ ಪುಟ್ಟ ಕಾಯಿಲೆಗಳಿಗೆ ಅವರು ಹೋಮಿಯೋಪತಿಯನ್ನೇ ಆವಲಂಬಿಸುತ್ತಿದ್ದರು ಕೂಡ. ಕೊನೆಗೆ 'ನೋಡೂ ಈ ದೇಹದ ಉಸ್ತುವಾರಿಯನ್ನು ನೀನು ನನಗೆ ವಹಿಸಿದ್ದೀಯಾ. ನಾನು ಹೇಳಿದ ಮಾತನ್ನು ಕೇಳಲೇ ಬೇಕು" ಎಂದು ಗುರು ರಾಮದೇವರು ಖಡಾಖಂಡಿತವಾಗಿ ಹೇಳಿದ ಮೇಲೆಯೇ ಅವರು ಇಂಜೆಕ್ಷನ್ ತೆಗೆದುಕೊಳ್ಳಲು ಒಪ್ಪಿದ್ದು. ಬಿಡಿ, ಈಗ ಅವರು ತಾವು ನಂಬಿದ ತತ್ವದ ಜತೆ, ನೆಚ್ಚಿಕೊಂಡಿದ್ದ ನೈತಿಕ ಮೌಲ್ಯದ ಜತೆ ರಾಜಿ ಮಾಡಿಕೊಳ್ಳುವ ಅಗತ್ಯವೇ ಇಲ್ಲ!

ನಮ್ಮ ಹೆಸರು ನಮ್ಮತನ: ರಾಜೀವ್ ದೀಕ್ಷಿತ್ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ಸ್ವದೇಶಿ ಬಚಾವೋ ಆಂದೋಲನ. ದೇಸೀ ಚಿಂತನಗೆ, ಜೀವನ ಶೈಲಿಗೆ ಆಂದೋಲನ ರೂಪ ಕೊಟ್ಟವರು ದೀಕ್ಷಿತರು. ಸುನಾಮಿ ಅಲೆಗಳಂತೆ ಅಪ್ಪಳಿಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ, ಅವು ಹೊತ್ತು ತರುತ್ತಿರುವ ವಿದೇಶಿ ಜೀವನ ಶೈಲಿಯ ವಿರುದ್ಧ ಎದೆ ಸೆಟೆಸಿ ನಿಲ್ಲುವ ಲಕ್ಷಾಂತರ ತರುಣರ ಪಡೆಯನ್ನೇ ಕಟ್ಟಿದವರು ಅವರು. ಸ್ವದೇಶಿ ಅಂದ ತಕ್ಷಣ ಈ ದೇಶದಲ್ಲೇ ತಯಾರಾದ ವಸ್ತುಗಳನ್ನು ಬಳಸೋದು ಅನ್ನೋ ಸೀಮಿತ ಕಲ್ಪನೆ ಬಹಳಷ್ಟು ಮಂದಿಗಿದೆ.

ಸ್ವದೇಶಿ ಅಂದರೆ ಅದಷ್ಟೇ ಅಲ್ಲ, ಅದು ನಮ್ಮ ಜೀವನ ಶೈಲಿ, ನಮ್ಮ ಬದುಕು, ನಮ್ಮ ಉಸಿರು, ನಮ್ಮ ಹೆಸರು ನಮ್ಮತನ ಎಂದು ಹೇಳಿಕೊಟ್ಟವರು, ಅಂತೆಯೇ ಬದುಕಿ ತೋರಿಸಿದವರು ದೀಕ್ಷಿತರು. ಸ್ವದೇಶಿ ಚಿಂತನೆಯ ಮೂಲ ತಳಹದಿ ಸರಳತೆ. ರಾಜೀವರಲ್ಲಿ ಎದ್ದು ಕಾಣುತ್ತಿದ್ದ ಗುಣವೂ ಅದೇ. ಅಹಂಕಾರ, ಆಡಂಬರ ಎಂಬುದು ಅವರ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಸ್ವದೇಶಿ ಆಂದೋಲನದ ಬಹುದೊಡ್ಡ ನೇತಾರ ಎನ್ನಿಸಿಕೊಂಡಿದ್ದರೂ, ಬಾಬಾ ರಾಮದೇವರಾದಿಯಾಗಿ ಬಹುದೊಡ್ಡ ವ್ಯಕ್ತಿಗಳ ಆತ್ಮೀಯ ಒಡನಾಟವಿದ್ದರೂ ರಾಜೀವ್ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಓಡಾಡಿಕೊಂಡಿರುತ್ತಿದ್ದರು.

ಎಲ್ಲ ಕಾರ್ಯಕರ್ತರ ಜತೆ 'ಸ್ವದೇಶಿ ರಥ" ಎಂಬ ಮಾಮೂಲಿ ವ್ಯಾನ್ ನಲ್ಲೇ ಓಡಾಡುತ್ತಿದ್ದರು. ಕೆಲವೊಮ್ಮೆ ಕಾರ್ಯಕರ್ತರ ಜತೆ ಎಂ-80ಯಲ್ಲೇ ಊರೂರು ಸುತ್ತಾಡಿದ ಉದಾಹರಣೆಯೂ ಇದೆ. ರಾಜೀವರ ಆತ್ಮೀಯ ಒಡನಾಡಿಗಳ ಪೈಕಿ ಒಬ್ಬರಾದ ಮೈಸೂರಿನ ಸುಧೀಂದ್ರ ಅವರು ಹೇಳಿದ ಒಂದು ಘಟನೆಯನ್ನು ಇಲ್ಲಿ ಸ್ಮರಿಸಿಕೊಳ್ಳಲೇ ಬೇಕು.

ಅದು 2001ರ ಡಿಸೆಂಬರ್. ಅವತ್ತು ಚೆನ್ನರಾಯಪಟ್ಟಣದಲ್ಲಿ ಸಂಜೆ 6ಕ್ಕೆ ರಾಜೀವ್ ದೀಕ್ಷಿತರ ಕಾರ್ಯಕ್ರಮ ನಿಗದಿಯಾಗಿತ್ತು. ಅಲ್ಲಿ ದೀಕ್ಷಿತರನ್ನು ಕಂಡು ಅವರಿಗೆ ಸ್ವದೇಶಿ ಆಂದೋಲನಕ್ಕೆ ಸಂಬಂಧಿಸಿದ ಕೆಲವು ಪೋಸ್ಟರ್‌ಗಳ ಸ್ಯಾಂಪಲ್‌ಗಳನ್ನು ತೋರಿಸುವ ಉದ್ದೇಶದಿಂದ ಸುಧೀಂದ್ರ ತಮ್ಮ ಕೆಲವು ಗೆಳೆಯರ ಜತೆ ಮೈಸೂರಿನಿಂದ ಅಲ್ಲಿಗೆ ಬಂದಿದ್ದರು. ಆದರೆ ಗಂಟೆ 8ಮೀರಿದರೂ ರಾಜೀವರು ಬರಲೇ ಇಲ್ಲ. ಅವರ ಭಾಷಣ ಕೇಳಲು ಬಂದಿದ್ದ ಜನ ನಿಧಾನವಾಗಿ ಕರಗತೊಡಗಿದರು. ಕೊನೆಗೆ 9 ಗಂಟೆ ಹೊತ್ತಿಗೆ ರಾಜೀವರ ವಾಹನ ಅಲ್ಲಿಗೆ ಬಂತು.

ಅನಿವಾರ್ಯ ಕಾರಣದಿಂದ ಅವರು ಅಲ್ಲಿಗೆ ಬರುವುದು ತಡವಾಗಿ ಹೋಗಿತ್ತು. ಸುಧೀಂದ್ರ ಸೇರಿದಂತೆ 30-35 ಜನ ಮಾತ್ರ ಅಲ್ಲಿ ಉಳಿದಿದ್ದರು. ಆದರೆ ಆ ಹುಡುಗರ ಉತ್ಸಾಹ, ಪ್ರೀತಿ ಕಂಡ ದೀಕ್ಷಿತರು, ಅಲ್ಲೇ ರಸ್ತೆ ಬದಿಯಲ್ಲೇ ಸುಮಾರು ಒಂದೂವರೆ ಗಂಟೆಗಳ ಕಾಲ ಸ್ವದೇಶಿ ಚಿಂತನೆಯ ಬಗ್ಗೆ ಮನೋಜ್ಞವಾಗಿ ಮಾತನಾಡಿದರು. 3-4 ಸಾವಿರ ಜನರಿದ್ದ ಸಭೆಯಲ್ಲಿ ಮಾತನಾಡುವಷ್ಟೇ ಉತ್ಸಾಹದಿಂದ, ಪ್ರಖರತೆಯಿಂದ ಮಾತನಾಡಿದರು.

ಅಷ್ಟೇ ಅಲ್ಲ. ಕೊನಗೆ ಎಲ್ಲ ಹುಡುಗರನ್ನೂ ತಮ್ಮೊಂದಿಗೆ ಹಾಸನಕ್ಕೆ ಕರೆದೊಯ್ದು, ಅಲ್ಲಿ ತಮಗೆ ತಂಗಲು ವ್ಯವಸ್ಥೆಯಾಗಿದ್ದ ಮನೆಯಲ್ಲೇ ಉಳಿಸಿಕೊಂಡರು. ಎಲ್ಲರಿಗೂ ಸೂಕ್ತ ವ್ಯವಸ್ಥೆಯಾದ ನಂತರ, ಕಡಪ ಕಲ್ಲಿನ ಮೇಲೆ ಚಾಪೆಯೊಂದನ್ನು ಹಾಸಿ ಮಲಗಿಕೊಂಡರು!

ಅವರು ಇದ್ದಿದ್ದೇ ಹಾಗೆ. ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜುತ್ತಿದ್ದರು. ಹಾಲಿನ ಕೆನೆಯನ್ನು ಶೇವಿಂಗ್ ಕ್ರೀಮ್‌ನಂತೆ ಬಳಸುತ್ತಿದ್ದರು. ಸದಾ ಖಾದಿ ಬಟ್ಟೆ ತೊಡುತ್ತಿದ್ದರು. ಎಲ್ಲರನ್ನೂ ಕೋಕ್-ಪೆಪ್ಸಿ ಬದಲು ತನ್ನಂತೆ ಎಳನೀರು ಮಜ್ಜಿಗೆ ಕುಡಿಯುಂವತೆ ಪ್ರೇರೇಪಿಸುತ್ತಿದ್ದರು. ಆದರೆ ಅವರು ಯಾವತ್ತಿಗೂ ಓಬೀರಾಯನ ಕಾಲದವರಂತೆ ಕಾಣುತ್ತಲೇ ಇರಲಿಲ್ಲ. ವೇಷ-ಭೂಷಣ, ನಡೆ-ನುಡಿ ಎಲ್ಲವೂ ಸರಳ ಮತ್ತು ಸುಂದರ.

ದೇಶೀಯತೆಯ ಸರಳ ಸೂತ್ರ ದೀಕ್ಷಿತರು: ಕೇವಲ ಊರೂರು ಸುತ್ತುತ್ತ, ಸ್ವದೇಶಿ ಆಂದೋಲನ ಕುರಿತು ಭಾಷಣ ಮಾಡುತ್ತ ಸಾಗಲಿಲ್ಲ. ಬದಲಿಗೆ ತಾವು ಹೋದ ಕಡೆಯಲ್ಲೆಲ್ಲ ಹುಡುಗರ ಪಡೆಯನ್ನು ಕಟ್ಟಿದರು, ಹಳ್ಳಿ-ಹಳ್ಳಿ, ಮನೆಮನೆಗಳಲ್ಲಿ ಸ್ವದೇಶಿ ಚಿಂತನೆಯ ಕಿಡಿ ಹೊತ್ತಿಸಿದರು. ಅವರು ಎಂದಿಗೂ ಸುಮ್ಮನೆ ಎಂಎನ್‌ಸಿಗಳನ್ನು ಹಳಿಯುತ್ತ, ವಿದೇಶಿ ಸಂಸ್ಕೃತಿಯನ್ನು ಜರಿಯುತ್ತ ಸಾಗಲಿಲ್ಲ. ಬದಲಿಗೆ ಸ್ವದೇಶಿ ಜೀವನ ಶೈಲಿ ಹೇಗಿರಬೇಕೆಂದು ಹೇಳಿಕೊಟ್ಟರು.

ಸ್ವದೇಶಿ ವಸ್ತುಗಳನ್ನೇ ಬಳಸಿ, ಖಾದಿ ಬಟ್ಟೆಗಳನ್ನೇ ತೊಡಿ, ಮಾತೃ ಭಾಷೆಯಲ್ಲೇ ಮಾತನಾಡಿ, ದಿನದಲ್ಲಿ ಕನಿಷ್ಠ ಕೆಲವು ನಿಮಿಷಗಳನ್ನಾದರೂ ರಾಷ್ಟ್ರೀಯ ವಿಚಾರ ಧಾರೆಯ ಪ್ರಚಾರಕ್ಕಾಗಿ ಮೀಸಲಿಡಿ.. ಎಂಬಂಥ ಎಲ್ಲರೂ ಅನುಸರಿಸಬಹುದಾದ, ಸರಳವಾಗಿ ಪಾಲಿಸಬಹುದಾದ ಸತ್ಯಗಳನ್ನು ಹೇಳಿಕೊಡುತ್ತಾ ಹೋದರು. ಗ್ರಾಮ ಸ್ವರಾಜ್ಯ ಅವರ ಬಹುದೊಡ್ಡ ಕನಸು. ಸದೃಢ ಗ್ರಾಮ;

ಬಲಿಷ್ಠ ಭಾರತ ಎಂಬುದು ಅವರ ಸರಳ ತತ್ವ. ಹೀಗಾಗಿ ಸದಾಕಾಲ ಅವರು ವ್ಯವಸಾಯದ ಜಪಮಾಡುತ್ತಿದ್ದರು. ಸಾವಯವ ಕೃಷಿಯಲ್ಲಿ ಅವರೊಬ್ಬ ಪಕ್ಕಾ ಪರಿಣಿತರಾಗಿದ್ದರು. ಹುಟ್ಟೂರಿನಲ್ಲಿ ಸ್ವತಃ ವ್ಯವಸಾಯ ಮಾಡುತ್ತಿದ್ದರು. ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಪದ್ದತಿ ಮೂಲಕ ವರ್ಷಕ್ಕೆ 70-80 ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದರು. ಕೃಷಿಗೆ ಪೂರಕವಾದ ಗೋಸಂಪತ್ತಿನ ರಕ್ಷಣೆಯ ಪ್ರಾಮುಖ್ಯವನ್ನೂ ಅವರು ಒತ್ತಿ ಹೇಳುತ್ತಿದ್ದರು. ಅಂತೆಯೇ ಗೋರಕ್ಷಾ ಆಂದೋಲನದಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದರು.

"ಸ್ವದೇಶಿ ಅಪನಾವೋ; ದೇಶ್ ಬಚಾವೋ": 2005ರ ನಂತರ ರಾಜೀವರ ಕಾರ್ಯಶೈಲಿ ಮತ್ತು ಹೋರಾಟದ ಸ್ವರೂಪ ತುಸು ಬೇರೆಯದೇ ತಿರುವು ಪಡೆದುಕೊಂಡಿತು. ಗ್ಯಾಟ್ ಸಂಪೂರ್ಣ ಜಾರಿಯಾದ ನಂತರ, ಮೊದಲಿನ ಹಾಗೆ ಆಜಾದಿ ಬಚಾವೋ ಆಂದೋಲನದ ಮೂಲಕ ಹೋರಾಡುವುದು, ವಿದೇಶಿ ಆಕ್ರಮಣವನ್ನು ಎದುರಿಸಿ ನಿಲ್ಲುವುದು ಸ್ವಲ್ಪ ಕಷ್ಟ ಎಂಬ ಅರಿವು ಅವರಿಗಾಗಿತ್ತು.

ಹೀಗಾಗಿ ತಮ್ಮ ಸ್ವದೇಶೀ ಚಿಂತನೆಗೆ ಇನ್ನಷ್ಟು ವಿಸ್ತಾರವಾದ ಸಾಮಾಜಿಕ, ರಾಜಕೀಯ ತಳಹದಿ ನೀಡುವ ಉದ್ದೇಶದಿಂದ ಅವರು ಬಾಬಾ ರಾಮ್‌ದೇವ್ ಜತೆ ಕೈಜೋಡಿಸಿದರು. ಹಿಂದೂ ಸ್ವರಾಜ್ ಅಭಿಯಾನಕ್ಕೆ ಮುನ್ನುಡಿ ಬರೆದರು. ರಾಜೀವ್ ದೀಕ್ಷಿತರನ್ನು ಒಬ್ಬ ಮಹಾನ್ ನಾಯಕ, ಕ್ರಾಂತಿಕಾರಿ ಎಂದೆಲ್ಲ ನೋಡುವುದರ ಬದಲು ಅವರನ್ನೊಬ್ಬ ಹೋರಾಟಗಾರ, ಚಿಂತಕ, ತಪಸ್ವಿಯಂತೆ ನೋಡಿದರೆ ಹೆಚ್ಚು ಅರ್ಥವಾಗುತ್ತಾರೆ. 'ಇಂಡಿಯಾ"ದಲ್ಲಿ ಭಾರತೀಯತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಪಟ್ಟ ಪ್ರಯತ್ನಗಳು, ಮೂಡಿಸಿದ ಹೆಜ್ಜೆ ಗುರುತುಗಳು ನಿಚ್ಚಳವಾಗಿ ಕಾಣಿಸುತ್ತವೆ.

ಇವತ್ತು ಪೆಪ್ಸಿ-ಕೋಲಾಗಳ ಎದುರು ಕಬ್ಬಿನ ಹಾಲು, ಎಳನೀರು, ಮಜ್ಜಿಗೆಗಳಿಗೆ ಕಮರ್ಷಿಯಲ್ ವ್ಯಾಲ್ಯೂ" ಬಂದಿದ್ದರೆ, ಬಿಟಿ, ರಸಗೊಬ್ಬರ, ರಾಸಾಯನಿಕಗಳ ಅಬ್ಬರದ ಮಧ್ಯೆ ಸಾವಯವ ಕೃಷಿ ನಿಧಾನವಾಗಿ ನಮ್ಮ ಹೊಲಗದ್ದೆಗಳನ್ನು ಆವರಿಸಿಕೊಳ್ಳುತ್ತಿದ್ದರೆ ಅದರೆ ಹಿಂದೆಲ್ಲೋ ರಾಜೀವ ದೀಕ್ಷಿತರ 'ಸ್ವದೇಶಿ ಅಪನಾವೋ; ದೇಶ್ ಬಚಾವೋ" ಘೋಷಣೆ ಕೇಳಿಸುತ್ತದೆ. ಅವರಿಂದ ಪ್ರೇರಿತರಾದ ಸಾವಿರಾರು ಕಾರ್ಯಕರ್ತರ ಬೆವರು ಕಾಣಿಸುತ್ತದೆ.

ದೀಕ್ಷಿತರಿಗೆ ರ್ಕರ್ನಾಟಕ ಸೆಳೆತ: ರಾಜೀವ ದೀಕ್ಷಿತರಿಗೆ ಕರ್ನಾಟಕ ಎಂದರೆ ಎನೋ ಒಂಥರಾ ಸೆಳೆತ. ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರ ಮೇಲೂ ಇನ್ನಿಲ್ಲದ ಪ್ರೀತಿ. ಹಾಗೆಯೇ ಈ ನಾಡಿನ ಸಾಧು-ಸಂತರು, ಚಿಂತಕರ ಜತೆ ಆತ್ಮೀಯ ಒಡನಾಟ. ಆ ಪೈಕಿ ಬಿಜಾಪುರದ ಸಿದ್ಧೇಶ್ವರ ಸ್ವಾಮೀಜಿ ಅವರೆಂದರೆ ಇನ್ನಿಲ್ಲದ ಭಕ್ತಿ, ಆದರ. ಎ

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದ ತನಗೆ ಇಲ್ಲಿನ ಜನ ತೋರುವ ಆತ್ಮೀಯತೆ, ಪ್ರೀತಿ ಬಗ್ಗೆ ದೀಕ್ಷಿತರು ಒಮ್ಮೆ ಸಿದ್ದೇಶ್ವರ ಸ್ವಾಮೀಜಿಯವರಲ್ಲಿ ಹೇಳಿಕೊಂಡಿದ್ದರಂತೆ. ಆಗ ಸಿದ್ದೇಶ್ವರರು, 'ನೀನು ಹಿಂದಿನ ಜನ್ಮದಲ್ಲಿ ಯಾವುದೋ ಮಹತ್ತರ ಕೆಲಸವನ್ನು ಶುರು ಮಾಡಿದ್ದೆ. ಅದು ಅಪೂರ್ಣವಾಗಿತ್ತು ಅಂತ ಕಾಣುತ್ತೆ. ಅದಕ್ಕೇ ಈ ಜನ್ಮದಲ್ಲಿ ಅದು ಈ ರೀತಿ ಮುಂದುವರಿದಿದೆ..." ಅಂತ ಹೇಳಿದ್ದರಂತೆ. ನಿಜ, ದೀಕ್ಷಿತರ ಕೆಲಸ ಈ ಜನ್ಮದಲ್ಲೂ ಅಪೂರ್ಣವಾಗಿದೆ. ಅದನ್ನು ಪೂರ್ಣಗೊಳಿಸಲು ಅವರು ಆದಷ್ಟು ಬೇಗ ಮತ್ತೆ ಹುಟ್ಟಿ ಬರಲಿ!

(ಸ್ನೇಹಸೇತು: ವಿಜಯಕರ್ನಾಟಕ)

English summary
With the sad demise of Rajiv dixith(on Nov.30) India lost a great visionary, thinker, writer and a great leader of modern Swadeshi Movement. he was working as National Secretory of Bharat Swabhiman Andolan started by Baba Ramdev. Rajiv was strong believer and preacher of Bharatiyata(Indianism). He was also a scientist, orator lead many movements against corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X