• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಲಿಕಲ್ ನಟರಾಜ್ ಕೈಯಲ್ಲಿ ಪವಾಡಗಳೆಲ್ಲ ಬಯಲು

By * ರೂಪ ಎಸ್., ಬೆಂಗಳೂರು
|
Google Oneindia Kannada News

Hulikal Nataraj
ಒಂದು ಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ದೇವರು ಮೈಮೇಲೆ ಬರುತ್ತಿತ್ತು. ಇದೆಲ್ಲಾ ಬೂಟಾಟಿಕೆ ಎಂದಿದ್ದೇ ತಡ ದೇವರ ವಿಗ್ರಹದ ಬಳಿಯಿದ್ದ ಕತ್ತಿ ತೆಗೆದು ಎಸೆದ. ಪ್ರಶ್ನಿಸಿದ ವ್ಯಕ್ತಿಯ ಕೈಗೆ ತಗುಲಿ ಗಾಯವಾಯಿತು. ಇದನ್ನೆಲ್ಲಾ ನೋಡುತ್ತಿದ್ದ ಜನ ಭಯಗ್ರಸ್ಥರಾದರೂ ಖಚಿತವಾಗಿ ದೇವರನ್ನು ಅಥವಾ ಅದನ್ನು ಪ್ರಶ್ನಿಸಿದ ಮನುಷ್ಯನನ್ನು ಬೆಂಬಲಿಸಲಿಲ್ಲ. ನಂತರ ದೇವರು ಮೈಮೇಲೆ ಬಂದಿದ್ದವನು ದೇವರು ಬಿಟ್ಟ ನಂತರ ತಾನೇ ಉಪಚಾರಕ್ಕೆ ಬಂದ.

ಹುಸಿ ಪವಾಡಗಳನ್ನು ಅಲ್ಲಗಳೆದು ವೈಚಾರಿಕತೆಯ ಪ್ರಜ್ಞೆ ಮೂಡಿಸಲು ಹೊರಟ ಪವಾಡ ಭಂಜಕ ಹುಲಿಕಲ್ ನಟರಾಜು ಅಂದಿನಿಂದ ಇಂದಿನವರೆಗೂ ಹೀಗೆ ಎದುರಿಸಿದ ಅಪಾಯಗಳು, ವಿರೋಧಗಳು ಎಷ್ಟೋ ಲೆಕ್ಕವಿಲ್ಲ. ಆದರೂ ಅವರು ಪವಾಡ ಭಂಜನೆಯನ್ನು ಬಿಟ್ಟಿಲ್ಲ. ಮತ್ತೊಂದು ಕಡೆ ಪವಾಡಗಳನ್ನು ಮಾಡುತ್ತಿದ್ದ ದೇವಮಾನವನನ್ನು ಅಲ್ಲಗಳೆದು ಅದೇ ಪವಾಡಗಳನ್ನ ಪುನರ್ ಸೃಷ್ಟಿಸಿದರು. ಅದೇ ದೇವಮಾನವ ಶಿಷ್ಯಂದಿರ ಸಹಾಯದಿಂದ ನಟರಾಜು ಅವರಿಗೆ ಜೀವಬೆದರಿಕೆ ಹಾಕಿದ. ಹುಲಿಕಲ್ ನಟರಾಜು ಹೆದರಲಿಲ್ಲ. ಸುಳ್ಳು ಪವಾಡ ಸೃಷ್ಟಿಸುವವರಿಗೆ, ವಂಚಕರಿಗೆ ಇಲ್ಲದ ಭಯ ನನಗೇಕೆ ಇರಬೇಕು? ಎಂದು ಧೈರ್ಯವಾಗಿ ಎದುರಿಸಿದರು. ಇತರರಿಂದ ಬೆದರಿಕೆ ಎದುರಿಸಿಯೂ ಅವರು ದೃಢವಾಗಿ ನಿಲ್ಲುವಂತೆ ಮಾಡಿದ್ದು ಅವರಲ್ಲಿನ ವೈಚಾರಿಕ ಪ್ರಜ್ಞೆಗೆ ಸಾಕ್ಷಿ!

ಪವಾಡ ಭಂಜನೆ ಹಿಂದಿನ ಕಾರಣ : ಬರಿಗೈಯಲ್ಲಿ ಚಿನ್ನದ ಸರ ಸೃಷ್ಟಿಸಿಕೊಡುತ್ತಿದ್ದ ಬಾಬಾರನ್ನು 'ಸಾಧ್ಯವಿದ್ದರೆ ಕುಂಬಳಕಾಯಿ ಸೃಷ್ಟಿಸು ನೋಡೋಣ' ಎಂದು ಸವಾಲೆಸೆದಿದ್ದ ವಿಜ್ಞಾನದ ಮೇಷ್ಟ್ರು ಡಾ.ಎಚ್.ನರಸಿಂಹಯ್ಯ ಕರ್ನಾಟಕದ ಎಷ್ಟೋ ಮಂದಿ ಯುವಕರಲ್ಲಿ ವೈಚಾರಿಕ ಪ್ರಜ್ಞೆಯ ಸ್ಫೂರ್ತಿ ತುಂಬಿದ್ದರು. ಇಂತಹ ಯುವಕರಲ್ಲಿ ಹುಲಿಕಲ್ ನಟರಾಜು ಕೂಡಾ ಒಬ್ಬರು. ಅವರು ಇಡೀ ಸಮಾಜಕ್ಕೆ ವೈಚಾರಿಕತೆಯನ್ನು ಬಿತ್ತುವ ಕಾಯಕದಲ್ಲಿ ತೊಡಗಿದರು. ಇಲ್ಲಿ ಇನ್ನೊಂದು ಆಶ್ಚರ್ಯಕರ ಸಂಗತಿಯಿದೆ. ಪವಾಡಗಳ ರಹಸ್ಯ ಬಯಲು ಮಾಡುತ್ತಿರುವುದಕ್ಕೆ ಅವರ ಬದುಕಿನಲ್ಲಿಯೇ ಕಾಣಿಸಿಕೊಂಡು ತಾಯಿ, ತಂದೆಯರನ್ನು ಮೋಸಗೊಳಿಸಿದ ಒಬ್ಬ ಪವಾಡ ಪುರುಷನೇ ಕಾರಣ.

ರಾಜ್ಯದ ಮೂಲೆ ಮೂಲೆ ಸಂಚರಿಸಿ 9 ಸಾವಿರಕ್ಕೂ ಹೆಚ್ಚು ಪವಾಡ ರಹಸ್ಯ ಬಯಲು ಮಾಡಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಏನೇ ಪವಾಡ ಸಂಭವಿಸಿದರೂ ಅಲ್ಲಿ ನಟರಾಜ್ ಹಾಜರಾಗುತ್ತಾರೆ. ಪವಾಡವನ್ನು ಬಿಡಿಸಿ ಅದರ ಹಿಂದಿನ ರಹಸ್ಯ ಬಯಲಿಗೆಳೆಯುತ್ತಾರೆ. ಈ ರೀತಿ ಮೂರು ದಶಕಗಳಿಂದ ರಾಜ್ಯದಲ್ಲಿ 200ಕ್ಕೂ ಹೆಚ್ಚು ವಿಸ್ಮಯಗಳ ಹಿಂದಿನ ವೈಜ್ಞಾನಿಕತೆಯನ್ನು ಹೇಳಿದ್ದಾರೆ. ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡಾಲದ ಮರದಲ್ಲಿ ದೆವ್ವವಿದೆ ಎಂದು ಅದರ ಫೋಟೋ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಜನರೆಲ್ಲಾ ಅಬ್ಬಾ ಅದ್ಭುತವೇ! ಎಂದು ಚಕಿತರಾಗಿ ನೋಡುತ್ತಿರುವಾಗಲೇ ಮರುದಿನ ಹುಲಿಕಲ್ ನಟರಾಜು ದೆವ್ವವಾಗಿ ಪತ್ರಿಕೆಗಳಲ್ಲಿ ಕಾಣಿಸಿಕೊಂಡಿದ್ದರು! ಅಲ್ಲಿಗೆ ದೆವ್ವದ ರಹಸ್ಯ ಕಿಡಿಗೇಡಿಗಳ ಕೃತ್ಯ ಎಂದು ಬಯಲಾಗಿತ್ತು.

ಅಲ್‌ಬ್ರಿಟೋ ಎಂಬಾತ ಒಂದು ದಿನ ಬೆಂಗಳೂರಿಗೆ ಕಾಲಿಟ್ಟು ಒಂದು ಐಷಾರಾಮಿ ಹೋಟೆಲ್‌ನಲ್ಲಿ ಠಿಕಾಣಿ ಹೂಡಿ ಬರಿಗೈನಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಆರಂಭಿಸಿದ. ಸಮಾಜದ ಎಲ್ಲ ಗಣ್ಯ ವ್ಯಕ್ತಿಗಳೂ ಅವನಲ್ಲಿ ಹೋಗಿ ತಮ್ಮ ರೋಗವನ್ನು ಕಿತ್ತು ಹಾಕಿಸಿಕೊಂಡು ಬರುತ್ತಾ ಮೂರ್ಖರಾಗುತ್ತಿದ್ದರು. ಮಾರನೇ ದಿನ ನಟರಾಜ್ ಕೂಡಾ ಬರಿಗೈಯಲ್ಲಿ ಶಸ್ತ್ರಚಿಕಿತ್ಸೆ ಆರಂಭಿಸಿಯೇ ಬಿಟ್ಟರು! ಆಲ್‌ಬ್ರಿಟೋ ರಹಸ್ಯ ಬಯಲಾಯಿತು.

ದೆವ್ವ ಮಾತ್ರವಲ್ಲ, ಎಷ್ಟೊಂದು ಕಡೆ ದೇವರುಗಳು ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುತ್ತಿರುತ್ತವೆ. ಈ ದೇವರುಗಳ ಅದ್ಭುತ ಶಕ್ತಿಯೂ ಅನಾವರಣಗೊಳ್ಳುತ್ತದೆ. ಅದು ಹುಲಿಕಲ್ ನಟರಾಜು ಪ್ರವೇಶ ಪಡೆಯುವವರೆಗೆ ಮಾತ್ರ. ನಂತರ ಎಲ್ಲ ದೇವರುಗಳೂ ತಮ್ಮ ಶಕ್ತಿಯನ್ನು ಕಳೆದುಕೊಂಡು ಸಾಮಾನ್ಯ ಕಲ್ಲುಗಳಾಗಿಬಿಡುತ್ತವೆ. ಎಷ್ಟೋ ಸಾಮಾನ್ಯ ಗ್ರಹಿಕೆ ಎಟುಕದ ವಿಷಯಗಳೂ ನಟರಾಜ್ ಅವರ ವೈಜ್ಞಾನಿಕ ಸ್ಪರ್ಶಕ್ಕೆ ತಪ್ಪದೇ ನಿಲುಕುತ್ತವೆ. ಹೀಗೆ ಅವರು ಭಂಜಿಸಿದ ಪವಾಡಗಳಲ್ಲಿ ಜೇನುತುಪ್ಪ ಸುರಿಸುವ ಫೋಟೋ, ನಾಲಿಗೆಯಲ್ಲಿ ಕರ್ಪೂರ ಉರಿಸುವುದು, ಕುದಿಯುವ ಎಣ್ಣೆಯಲ್ಲಿ ಕೈ ಅದ್ದುವುದು, ನೀರಿನಲ್ಲಿ ದೀಪ ಉರಿಸುವುದು, ಸಜೀವ ಸಮಾಧಿ, ಬೆಂಕಿಯ ಸಮಾಧಿ, ಕೆಂಡದ ಮೇಲೆ ನೃತ್ಯ, ಬರಿಗೈಯಲ್ಲಿ ವಿಭೂತಿ ಸೃಷ್ಟಿ, ಚಪ್ಪಾಳೆಯಿಂದ ದೀಪ ಉರಿಸುವುದು ಇತ್ಯಾದಿ ನೂರಾರು ಪವಾಡಗಳಿವೆ.

ಹಣ ಬೇಡ, ವಿಜ್ಞಾನ ಪಸರಿಸಲಿ : ನಟರಾಜ್ ನಡೆಸಿಕೊಡುವ ಪವಾಡ ಕಾರ್ಯಕ್ರಮಗಳು ಬೆಚ್ಚಿ ಬೀಳಿಸುವಂತೆಯೂ ಇರುತ್ತವೆ, ಕೆಲವು ಮನೋರಂಜನಾತ್ಮಕವಾಗಿಯೂ ಇರುತ್ತದೆ. ಇಂತಹ ಕಾರ್ಯಕ್ರಮ ನೀಡಲು ಇವರು ಪ್ರಯಾಣ ಹಾಗೂ ಸಂಬಂಧಿಸಿದ ರಾಸಾಯನಿಕಗಳ ವೆಚ್ಚವಲ್ಲದೆ ಬೇರೇನೂ ನಿರೀಕ್ಷಿಸುವುದಿಲ್ಲ. ರಾಜ್ಯದ ಯಾವುದೇ ಮೂಲೆಯಿಂದ ಕರೆ ಬಂದರೂ ಬೇಸರಿಸದೆ ಹೋಗುತ್ತಾರೆ. ಅದಕ್ಕಾಗಿ ಅವರು ಮಾಡಿರುವ ತ್ಯಾಗವೇನೂ ಕಡಿಮೆಯಿಲ್ಲ. ಅವರು ಎಷ್ಟೋ ಮಂದಿಯಿಂದ ಜೀವ ಬೆದರಿಕೆ ಎದುರಿಸಿದ್ದಾರೆ. ಪವಾಡ ನಿರ್ವಹಿಸುವವರನ್ನು ಪ್ರಶ್ನಿಸಿ ಹಲ್ಲೆಗೊಳಗಾಗಿದ್ದಾರೆ. ಒಂದು ಕಡೆ ಇವರ ಬಂಧನಕ್ಕೆ ವಾರೆಂಟ್ ಕೂಡಾ ಹೊರಡಿಸಿದ್ದಿದೆ.

ಜೀವ ತೇಯುವ ಕೆಲಸ : ಪವಾಡ ಭಂಜನೆ ಸುಲಭದ ಮಾತಲ್ಲ. ಬೆಂಕಿ ಸುಡುವುದಿಲ್ಲ ಎಂದು ತೋರಿಸಲು ತಾವೇ ಸ್ವತಃ ಸುಟ್ಟುಕೊಂಡು ತೋರುತ್ತಾರೆ. ಇದರಿಂದ ಮೈಕೈ ಸುಟ್ಟುಕೊಂಡಿದ್ದೂ ಇದೆ. ಸಜೀವ ಸಮಾಧಿಯಾಗುವ ಸ್ವಾಮೀಜಿಗಳ ರಹಸ್ಯ ಬಯಲು ಮಾಡಲು ಹೋಗಿ ಜೀವವನ್ನು ಒತ್ತೆ ಇಟ್ಟು ಎಷ್ಟೋ ಬಾರಿ ಸಜೀವ ಸಮಾಧಿಯಾಗುವ ಸ್ಥಿತಿ ತಲುಪಿದ್ದರು. ಉರಿಯುತ್ತಿರುವ ಬೆಂಕಿಯ ಚಿತೆಯ ಮೇಲೆ ಸ್ವಾಮೀಜಿ ಪವಾಡ ತೋರಿದ್ದನ್ನು ಬಯಲು ಮಾಡಲು ಇತ್ತೀಚೆಗೆ ಉರಿಯುತ್ತಿರುವ ಚಿತೆಯ ಮೇಲೆ ಮಲಗಿ ಪವಾಡ ಬಯಲು ಮಾಡಿದ್ದೂ ಇದೆ. ಈ ಎಲ್ಲ ಪವಾಡ ರಹಸ್ಯ ಬಯಲು ಮಾಡುವಲ್ಲಿ ಕೊಂಚ ವ್ಯತ್ಯಾಸವಾದರೂ ಜೀವಕ್ಕೇ ಎರವಾಗುತ್ತದೆ ಎನ್ನುವುದು ವಾಸ್ತವ. ಜೀವವನ್ನು ಒತ್ತೆ ಇಟ್ಟಾದರೂ ವೈಚಾರಿಕತೆಯನ್ನು ಪ್ರಚುರಿಸಬೇಕೆಂಬ ಅವರ ಹಠ ನಿಜಕ್ಕೂ ಮಾದರಿ.

ಅವರ ವೈಚಾರಿಕ ಭಾಷಣಗಳನ್ನು ಆಲಿಸಿದ ಎಷ್ಟೋ ಮಂದಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಕೂಡಾ ನಟರಾಜ್ ಅವರಲ್ಲಿ ತೋಡಿಕೊಳ್ಳುವುದಿದೆ. ಆಗೆಲ್ಲಾ ನಟರಾಜ್ ಅವರ ಬದುಕಿಗೆ ಸಾಂತ್ವನ ಹೇಳುತ್ತಾರೆ. ಇಂತಹ ಎಷ್ಟೋ ಕರೆಗಳು ಅವರಿಗೆ ರಾಜ್ಯದ ಮೂಲೆಮೂಲೆಗಳಿಂದ ಬರುತ್ತವೆ. ಎಲ್ಲ ಕರೆಗಳಿಗೂ ಅವರು ಸಹನೆಯಿಂದ ಉತ್ತರಿಸುತ್ತಾರೆ. ಎಷ್ಟೋ ಮಂದಿ ಬದುಕಿನಲ್ಲಿ ಉತ್ಸಾಹವನ್ನೇ ಕಳೆದುಕೊಂಡ ಕ್ಷಣಗಳಲ್ಲಿ ಅವರಲ್ಲಿ ಆತ್ಮಬಲ ತುಂಬಲು ಅವರಿಗೆ ನೆರವಾಗಿದ್ದಾರೆ. ಆದರೆ, ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ವೈಚಾರಿಕತೆಗಿಂತ ಮೂಢನಂಬಿಕೆಗಳನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವ ಬಗ್ಗೆ ಅವರಿಗೆ ಅಸಹನೆಯಿದೆ. ಆದರೆ ಎಷ್ಟೋ ಪವಾಡಗಳ ಸಂದರ್ಭದಲ್ಲಿ ಅದಕ್ಕೆ ವೈಜ್ಞಾನಿಕ ವಿವರಣೆಯನ್ನು ಹುಲಿಕಲ್ ನಟರಾಜ್ ಅವರಿಂದಲೇ ಪಡೆಯುತ್ತವೆ ಎನ್ನುವುದೂ ವಾಸ್ತವ.

ಪ್ರಶಸ್ತಿ, ಬಿರುದು ಬಾವಲಿ : ಅವರು ತುಮಕೂರು ಜಿಲ್ಲೆಯ ಹುಲಿಕಲ್‌ನಲ್ಲಿ ಜನಿಸಿ ದೊಡ್ಡಬಳ್ಳಾಪುರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಶಿಕ್ಷಕರಾಗಿದ್ದಾರೆ. ಪವಾಡ ಭಂಜನೆಯೊಂದಿಗೆ ಅತ್ಯುತ್ತಮ ಶಿಕ್ಷಕರೆನಿಸಿಕೊಂಡಿರುವ ಅವರಿಗೆ ರಾಜ್ಯ ಹಾಗೂ ರಾಷ್ಟ್ರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿವೆ. ಕಳೆದ ವರ್ಷ ಶಿಕ್ಷಣ ಇಲಾಖೆ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಇವುಗಳಲ್ಲದೆ ಶಿಕ್ಷಣ ರತ್ನ, ವಿಜ್ಞಾನಮಿತ್ರ, ವಿಜ್ಞಾನ ಚಿಂತಕ, ಸಮಾಜರತ್ನ, ವಿಶ್ವಜ್ಯೋತಿ ಇತ್ಯಾದಿ ಬಿರುದುಗಳನ್ನೂ ನೀಡಿ ಹಲವಾರು ಸಂಸ್ಥೆಗಳು ಗೌರವಿಸಿವೆ. ರಾಜ್ಯದ ಮೂಲೆಮೂಲೆ ಸಂಚರಿಸಿ ಪವಾಡ ಭಂಜನೆ ಮಾಡುವ ಮೂಢನಂಬಿಕೆಗಳನ್ನು ಕಿತ್ತೆಸೆಯುವ ಕಾಯಕಕ್ಕೆ ಯಾವುದೇ ಪುರಸ್ಕಾರ ಬರದಿರುವುದು ಆಶ್ಚರ್ಯ. ಆದರೆ ರಾಜ್ಯದ ಮೂಲೆಮೂಲೆಯ ಹಲವಾರು ಸಂಘ ಸಂಸ್ಥೆಗಳು ಅವರಿಗೆ ವಿವಿಧ ಬಿರುದು ಬಾವಲಿಗಳನ್ನು ನೀಡಿ ಗೌರವಿಸಿವೆ.

ಶಬರಿಮಲೆ ಜ್ಯೋತಿ ಮಾನವ ನಿರ್ಮಿತ ಎಂದು ಪವಾಡ ರಹಸ್ಯ ಬಯಲು ಕಾರ್ಯಕ್ರಮವೊಂದರಲ್ಲಿ ಹೇಳಿದ್ದ ಸಂದರ್ಭದಲ್ಲಿ ಮಡಿಕೇರಿಯ ಚೇತನ್ ಎಂಬುವವರು ಅವರ ಮೇಲೆ ದೂರು ದಾಖಲಿಸಿದ್ದರು. ಇದನ್ನು ತನಿಖೆ ನಡೆಸದೆ ಎಫ್‌ಐಆರ್ ಸಲ್ಲಿಸಿದ್ದ ಪೊಲೀಸರ ವಿರುದ್ಧ ಹೈಕೋರ್ಟ್ ತರಾಟೆ ತೆಗೆದುಕೊಂಡು ದೂರು ಹಾಗೂ ಎಫ್‌ಐಆರ್ ಅನ್ನು ವಜಾ ಮಾಡಿತು. ಇದು ಅವರ ವಿಜ್ಞಾನ ಪ್ರಚಾರದ ಹೋರಾಟದಲ್ಲಿ ಒಂದು ಸಣ್ಣ ಉದಾಹರಣೆಯಷ್ಟೇ.

ಬೆಸ್ಟ್ ಸೆಲ್ಲರ್ ಲೇಖಕ : ಅತ್ಯುತ್ತಮ ಶಿಕ್ಷಕರಾಗಿರುವ ನಟರಾಜ್ ಪವಾಡಗಳ ಕುರಿತು 'ನೀವೂ ಮಾಡಿ ಪವಾಡ-1, 2' ಪುಸ್ತಕಗಳು ಮಾತ್ರವಲ್ಲದೆ ಅಂಗೈಯಲ್ಲಿ ಆರೋಗ್ಯ, ನಿಮ್ಮ ಯಶಸ್ಸಿಗೆ ನೀವೇ ರೂವಾರಿ ಇತ್ಯಾದಿ ಕೃತಿಗಳನ್ನೂ ರಚಿಸಿದ್ದಾರೆ. ಒಂದು ಕಡೆ ಮೂಢನಂಬಿಕೆಗಳನ್ನು ಪ್ರಚಾರ ಮಾಡುತ್ತಿರುವ ಟೀವಿ ಕಾರ್ಯಕ್ರಮಗಳು ಜನಪ್ರಿಯವಾಗುತ್ತಿದ್ದರೆ ಹುಲಿಕಲ್ ನಟರಾಜ್ ಅವರು ಮೂಢನಂಬಿಕೆಗಳನ್ನು ನಿರಾಕರಿಸುವ ಈ 'ನೀವೂ ಮಾಡಿ ಪವಾಡ' ಪುಸ್ತಕಗಳು ಕೂಡಾ ಅದಕ್ಕಿಂತ ಹೆಚ್ಚು ಬೇಡಿಕೆ ಗಳಿಸಿತ್ತಿವೆ. ಎಷ್ಟೇ ಮೂಢನಂಬಿಕೆಯನ್ನು ಉತೇಜಿಸಿದರೂ ಜನರ ಮನಸ್ಸು ವೈಜ್ಞಾನಿಕತೆಯತ್ತಲೇ ಸೆಳೆಯುತ್ತಿರುತ್ತದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.

ಪವಾಡದ ಕುರಿತಾದ ಅವರ ಪುಸ್ತಕಗಳು ಅತಿ ಹೆಚ್ಚು ಮಾರಾಟವಾಗಿವೆ ಎನ್ನುವುದು ಅವರ ವೈಚಾರಿಕ ಪ್ರಜ್ಞೆಗೆ ಜನತೆ ನೀಡಿರುವ ಗೌರವ. ಅದೇ ರೀತಿಯಲ್ಲಿ ಆರೋಗ್ಯ, ಮಾನಸಿಕ ಆರೋಗ್ಯದ ಪುಸ್ತಕಗಳನ್ನೂ ಜನತೆ ಬಹಳ ಇಷ್ಟಪಟ್ಟು ಕೊಳ್ಳುತ್ತಾರೆ. ವಿವರಗಳಿಗೆ ಹಾಗೂ ಪವಾಡ ಭಂಜನೆಗೆ ಹುಲಿಕಲ್ ನಟರಾಜ್ ಅವರನ್ನು 94817 76616 ಈ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X