ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವನಸುಮವೇ ಆದ ವನೌಷಧಿ ತಜ್ಞ ಕುಂಜಿರ

By * 'ನಮನ' ಬಜಗೋಳಿ, ಕಾರ್ಕಳ
|
Google Oneindia Kannada News

Kunjiya Moolya (photo by Sushanth Bajagoli)
ಹೌದು. ಆತ ಅಂತಿಂತ ಪಂಡಿತನಲ್ಲ. ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕ. ವನೌಷಧಿಯಲ್ಲಿ ಆತ ಮಾಡಿದ ಸಾಧನೆ ಆತನನ್ನು ಹಳ್ಳಿಯಿಂದ ದಿಲ್ಲಿಗೆ ಕರೆದೊಯ್ದಿತ್ತು. ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸುವ ಭಾಗ್ಯ ಪಡೆದ ಈ ಹಳ್ಳಿಹೈದನಿಗೆ, ಇಂದು ಕೂರಲು ಸೂರಿಲ್ಲದ ಸಂಕಟ. ಪ್ರಶಸ್ತಿ ಸನ್ಮಾನಗಳ ಮಹಾಪೂರವೇ ಆತನ ಪಾಲಿಗೆ ಒಲಿದರೂ, ಒಂದೊತ್ತು ಊಟಕ್ಕೆ ತತ್ವಾರವಿರುವ ಆತನ ಬದುಕಿನ ಕಥೆಯತ್ತ ಯಾರ ಚಿತ್ತವೂ ಹಾಯುತ್ತಿಲ್ಲ.

ಹೆಸರು ಕುಂಜಿರ ಮೂಲ್ಯ. ವಯಸ್ಸು ಸುಮಾರು 85. ತಾಲೂಕಿನ ಮಾಳ ಗ್ರಾಮದ ಇಂದಿರಾ ನಗರದ ಐದು ಸೆಂಟ್ಸ್ ನಿವಾಸಿ. ಅಲ್ಲಿ ಸಂಪೂರ್ಣ ಜೀರ್ಣಾವಸ್ಥೆಯಲ್ಲಿರುವ ಮನೆ, ಹರಕಲು ಬಟ್ಟೆ, ಪಾರಂಪರಿಕ ನಾಟಿ ಔಷಧಿ ಚಿಕಿತ್ಸೆಯನ್ನು ನೀಡುತ್ತಾ ಬಂದಿರುವ ಕುಂಜಿಯ ಮೂಲ್ಯರ ಪ್ರಸ್ತುತ ಬದುಕಿನ ಸ್ಥಿತಿ ಧನ್ವಂತರಿಗೇ ಪ್ರೀತಿ.

ಹೇಳಿಕೊಳ್ಳಲು ಆರು ಮಕ್ಕಳಿದ್ದಾರೆ. ಅದರಲ್ಲಿ ನಾಲ್ವರು ಜನ ಗಂಡು ಮಕ್ಕಳು ಮದುವೆಯಾದ ಬಳಿಕ ಮನೆಯಿಂದ ದೂರವಾಗಿದ್ದಾರೆ. ಇರುವ ಎರಡು ಹೆಣ್ಣು ಮಕ್ಕಳಲ್ಲಿ ಒಬ್ಬಳು ಮಾನಸಿಕ ಅಸ್ವಸ್ಥೆ, ಆಕೆಯನ್ನು ಕಳಸದ ಆಶ್ರಮವೊಂದಕ್ಕೆ ಸೇರಿಸಿ ಆಕೆಯ ಖರ್ಚನ್ನು ಭರಿಸುವ ಜವಾಬ್ದಾರಿ ಈ ಮುದಿ ಜೀವಕ್ಕಿದ್ದರೆ, ಹತ್ತಿರವಿದ್ದ ಹೆಣ್ಣು ಮಗಳು ಗಂಡನಿಂದ ದೂರವಾಗಿ ಕೂಲಿಕೆಲಸ ನಿರ್ವಹಿಸುತ್ತಾ ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಹಳೆಯ ಕಾಲದ ಮನೆ, ಮಣ್ಣಿನ ಗೋಡೆ ಇಂದೋ ನಾಳೆಯೋ..? ಎನ್ನುವ ಸ್ಥಿತಿಯಲ್ಲಿದೆ.

ಆಧುನಿಕ ಚಿಕಿತ್ಸೆಯಿಂದ ಗುಣಮುಖವಾಗದ ರೋಗಗಳಿಗೂ ಚಿಕಿತ್ಸೆ ನೀಡಿ ಯಶಸ್ಸು ಕಂಡವರು ಕುಂಜಿರ
ಒಲಿದು ಬಂದ ಪ್ರಶಸ್ತಿಗಳ ಸರಮಾಲೆ : ಕುಂಜಿರ ಮೂಲ್ಯರಿಗೆ ನಾಟಿ ಔಷಧಿ ತನ್ನ ತಂದೆಯಿಂದ ಬಂದ ಬಳುವಳಿ. ಸುಮಾರು 500 ವಿವಿಧ ಔಷಧಿಗಳನ್ನು ತಯಾರಿಸುತ್ತಾರೆ. ಅದರಲ್ಲಿ 300 ಕ್ಕೂ ಮಿಕ್ಕಿ ಮಾನವರಿಗೆ, 200 ಕ್ಕೂ ಮಿಕ್ಕಿ ಜಾನುವಾರುಗಳಿಗೆ ನೀಡುವ ಔಷಧಿಗಳಿವೆ. ಫಶ್ಚಿಮಘಟ್ಟದ ತಪ್ಪಲಲ್ಲಿರುವ ಅವರು, ವಿವಿಧ ಔಷಧೀಯ ಸಸ್ಯಗಳ ಬೇರುಗಳನ್ನು ಮೂರು ಕಿ.ಮೀ ದೂರವಿರುವ ದಟ್ಟ ಕಾನನಕ್ಕೆ ಕ್ರಮಿಸಿ ತರುತ್ತಾರೆ.

ವಿಷ ಜಂತು ಕಡಿತ, ಸರ್ಪಸುತ್ತು, ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಹೊಟ್ಟೆನೋವು, ಸ್ತ್ರೀರೋಗ, ವಾತ ಹೀಗೆ ಹತ್ತಾರು ರೋಗಗಳಿಗೆ ಉಪಶಮನ ನೀಡಿದ ಕೀರ್ತಿ ಅವರದ್ದು. ಆಧುನಿಕ ಚಿಕಿತ್ಸೆಯಿಂದ ಗುಣಮುಖವಾಗದ ರೋಗಗಳಿಗೂ ಚಿಕಿತ್ಸೆ ನೀಡಿ ಯಶಸ್ಸು ಕಂಡವರು ಅವರು. ಚಿಕಿತ್ಸೆ ಪಡೆದವರು ಸ್ವಇಚ್ಛೆಯಿಂದ ನೀಡಿದ ಒಂದಿಷ್ಟು ಗೌರವಧನದಿಂದ ಕುಂಜಿರ ಮೂಲ್ಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ವನೌಷಧಿ ಪಂಡಿತ: ಅವರ ಸಾಧನೆಯನ್ನು ಪರಿಗಣಿಸಿ ನವದೆಹಲಿಯಲ್ಲಿ ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದರು. 2003ರಲ್ಲಿ ಚಿತ್ರದುರ್ಗದಲ್ಲಿ ನಡೆದ ಸಮಾರಂಭದಲ್ಲಿ ನವದೆಹಲಿ ರಾಷ್ಟ್ರೀಯ ಔಷಧಿ ಸಸ್ಯಗಳ ಮಂಡಳಿಯಿಂದ ಕೊಡ ಮಾಡುವ ಪ್ರಪ್ರಥಮ ಬಾರಿಯ "ವನೌಷಧಿ ಪಂಡಿತ-2003" ಪಾರಂಪರಿಕ ವೈದ್ಯ ಎಂಬ ರಾಜ್ಯ ಪ್ರಶಸ್ತಿಯನ್ನು ತರಳಬಾಳು ಬೃಹನ್ಮಠ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ವೀಕರಿಸಿದ್ದಾರೆ.

ಅನೇಕ ಸಂಘ ಸಂಸ್ಥೆಗಳು ಕುಂಜಿರ ಮೂಲ್ಯರನ್ನು ಸನ್ಮಾನಿಸಿದ್ದು, ಒಟ್ಟು 30ಕ್ಕೂ ಮಿಕ್ಕಿದ ಸನ್ಮಾನಗಳು, ಪುರಸ್ಕಾರಗಳು ಅವರಿಗೆ ಲಭಿಸಿದೆ. ಅವರಿಂದ ಅನುಭವ ಪಡೆದುಕೊಳ್ಳಲು ಕಲ್ಕತ್ತಾ, ಗುಜರಾತ್ ಮತ್ತು ಕೊರಿಯಾದಂತಹ ವಿದೇಶೀ ಸಂಶೋಧಕರ ತಂಡಗಳು ಮಾಳಕ್ಕಾಗಮಿಸಿ, ಅವರಿಂದ ಗಿಡಮೂಲಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಅವರೊಂದಿಗೆ ವಿವಿಧ ಗಿಡಮೂಲಿಕೆಗಳನ್ನು ಅರಸಿಕೊಂಡು ಪಶ್ಚಿಮಘಟ್ಟವನ್ನು ತಿರುಗಾಡಿದ್ದಾರೆ. ಉಚಿತ ವನೌಷಧಿ ನೀಡುವ ಕುರಿತು ಸರಕಾರದ ಪಿಯುಸಿ ಉಪಪಠ್ಯಪುಸ್ತಕದಲ್ಲಿ ಬಂದಿರುವ ಕುಂಜಿರ ಮೂಲ್ಯರ ಉಲ್ಲೇಖವು ನಾಟಿ ಔಷಧಿ ವೈದ್ಯನಾಗಿ ನಡೆಸಿದ ಸೇವೆಗೆ ಸಂದ ಗೌರವವಲ್ಲವೇ.

ರಾಷ್ಟ್ರ ಪ್ರಶಸ್ತಿಯ ಜತೆ 10 ಸಾವಿರ ನಗದು ಬಹುಮಾನ ದೊರೆತಿದ್ದು, ಅದು ದೆಹಲಿ ಪ್ರಯಾಣಕ್ಕಷ್ಟೇ ಸೀಮಿತವಾಗಿ ಹೋಗಿದ್ದರೆ, ಇತರ ಸನ್ಮಾನಗಳಿಂದ ದೊರೆತಿರುವ ನಗದು ಬಹಳಷ್ಟು ಕಡಿಮೆ ಎನ್ನುತ್ತಾರೆ ಕುಂಜಿರ ಮೂಲ್ಯ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ದೇಶದ ರಾಜಧಾನಿಯನ್ನು ಕಾಣುವ ಅಪೂರ್ವ ಅವಕಾಶ ದೊರೆತಿರುವುದು ನನ್ನ ಭಾಗ್ಯ ಎನ್ನುತ್ತಾರಷ್ಟೇ. ಆದರೆ ಕುಳಿತುಕೊಳ್ಳಲೊಂದು ಸೂರಿನ ವ್ಯವಸ್ಥೆಯಾಗುತ್ತಿದ್ದರೆ, ಸಾಯುವ ಮುನ್ನ ಸಂತಸವನ್ನು ಕಾಣುತ್ತಿದ್ದೆ ಎನ್ನುವ ಹಂಬಲ ಅವರದ್ದು. ಚಿತ್ರ :ಸುಶಾಂತ್ ಬಜಗೋಳಿ

ಸಹಾಯ ಮಾಡುವ ದಾನಿಗಳಿದ್ದರೆ ಮಾಳ ಕಾರ್ಪೋರೇಶನ್ ಬ್ಯಾಂಕಿನಲ್ಲಿರುವ ಅವರ ಪುತ್ರಿ ಶಾಂತ ಮೂಲ್ಯರ ಖಾತೆ ನಂಬರು 0351/SB/01/003544 ಖಾತೆಗೆ ಹಣ ನೀಡಿ ಸಹಕರಿಸುವಂತೆ ಕೋರಲಾಗಿದೆ.

ವಿಳಾಸ : ಕುಂಜಿರ ಮೂಲ್ಯ, ಇಂದಿರಾನಗರ ಫೈವ್ ಸೆನ್ಸ್, ಮಾಳ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ, 574122.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X