• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನಾಥ ಮಕ್ಕಳ ಕಣ್ಣಾಗಿರುವ ಶ್ರೀನಿವಾಸ ಮೂರ್ತಿ

By * ಜಯಶ್ರೀ
|

Srinivas Murthy of Tejaswi Seva Trust
ತನ್ನ ಮನದಂತೆ ಆಡುವ ದೇವರ ಆಟವನ್ನು ಬಲ್ಲವರಾರು? ನಿಸ್ವಾರ್ಥ ಸಮಾಜ ಸೇವೆಯ ಮುಖಾಂತರ ನಿರ್ಲಕ್ಷಿತರಿಗೆ ದಾರಿದೀಪವಾಗಿದ್ದ ಶ್ರೀನಿವಾಸ್ ಮೂರ್ತಿ ಅವರನ್ನು ದೇವರು ಬರಸೆಳೆದಿದ್ದಾನೆ. ಕಳೆದ ವಾರ ಹೃದಯಾಘಾತದಿಂದ ಅವರು ಮೃತರಾದರೆಂದು ತಿಳಿಸಲು ವಿಷಾದವೆನಿಸುತ್ತದೆ. ಅವರನ್ನು ನಂಬಿದ್ದ ಅನಾಥ ಮಕ್ಕಳು ನಿಜಕ್ಕೂ ಅನಾಥರಾಗಿದ್ದಾರೆ. ಮೂರ್ತಿಗಳು ಕೈಗೊಂಡಿದ್ದ ಕಾರ್ಯ ಸಹೃದಯರಿಂದ ಮುಂದುವರಿದರೆ ಅವರ ಆತ್ಮ ಶಾಂತಿ ಲಭಿಸಿದಂತೆ - ಸಂಪಾದಕ.

'ದಯವೇ ಧರ್ಮದ ಮೂಲವಯ್ಯ. ಇದೇ ನಮ್ಮ ಕೂಡಲ ಸಂಗಮನ ಒಲಿಸುವ ಪರಿ' ಎಂದು ಹೇಳಿದ್ದಾರೆ ಬಸವಣ್ಣನವರು ತಮ್ಮ ವಚನಗಳಲ್ಲಿ. ಈ ಮೂಲ ಭೂತವಾದ ಅಂಶದ ಅಡಿಯಲ್ಲಿಯೇ ಸರ್ವ ಧರ್ಮಗಳು ಕಾರ್ಯ ನಿರ್ವಹಿಸುತ್ತಾ ಇರುವುದು. ನಮ್ಮಲ್ಲಿ ಅನೇಕರು ತಾವು ಮಾಡುವ ಸೇವೆಯ ಬಗ್ಗೆ ಎಂದಿಗೂ ಸಮಾಜದ ಮುಂದೆ ಬಿಚ್ಚಿ ತೋರಿಸುವುದಕ್ಕೆ ಹೋಗುವುದಿಲ್ಲ. ಆದರೆ ಅವರು ಮಾಡುವ ಮಹೋನ್ನತ ಕೆಲಸವೂ ಅವರಿಗೆ ಸಮಾಜದಲ್ಲಿ ಒಂದು ವಿಶಿಷ್ಟ ಸ್ಥಾನ ನೀಡುವಲ್ಲಿ ಸಫಲವಾಗುತ್ತದೆ. ಅಂತಹ ಓರ್ವ ಸಾಧಕ ತೇಜಸ್ವಿ ಸೇವಾ ಟ್ರಸ್ಟ್ ನ ಫೌ೦ಡರ್ ಇನ್ ಚೀಫ್ ಹಾಗೂ ಅಧ್ಯಕ್ಷರಾದ ಶ್ರೀನಿವಾಸ ಮೂರ್ತಿ.

ಸಮಾಜ ಸೇವಾ ಕ್ಷೇತ್ರದಲ್ಲಿ ಅನೇಕ ಮಹನೀಯರು ಸೇವೆ ಸಲ್ಲಿಸಿದ್ದಾರೆ, ಸಲ್ಲಿಸುತ್ತಲೂ ಇದ್ದಾರೆ. ಆದರೆ ಸಮಾಜದ ನಿರ್ಲಕ್ಷಿತ ವರ್ಗವೊಂದನ್ನು ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ನಿರತರಾದವರ ಸಂಖ್ಯೆ ತುಂಬಾ ಕಡಿಮೆ. ಅಂತಹ ಅತ್ಯುತ್ತಮ ಕೆಲಸ ಮಾಡುತ್ತಿರುವ ಗುಂಪಿಗೆ ಶ್ರಿನಿವಾಸ ಮೂರ್ತಿಯವರು ಸೇರ್ಪಡೆ ಆಗ್ತಾರೆ. ತಮ್ಮ ಸಂಸ್ಥೆಯ ಮೂಲಕ ಅನೇಕ ವಿಕಲಾಂಗ, ಅಂಧ ಹಾಗೂ ಅನಾಥ ಮಕ್ಕಳಿಗೆ ತಂದೆಯಾಗಿದ್ದಾರೆ, ಕಣ್ಣಾಗಿದ್ದಾರೆ, ಅವರಿಗೆ ಚೇತನವಾಗಿದ್ದಾರೆ. ಇಂತಹ ಮಕ್ಕಳನ್ನು ತಮ್ಮ ಹೆತ್ತ ಕೂಸುಗಳಿಗಿಂತ ಜೋಪಾನವಾಗಿ ಕಾಯುತ್ತಿರುವ ಮೂರ್ತಿಯವರ ಧರ್ಮಪತ್ನಿ ಸರ್ವಮಂಗಳ ಹಾಗೂ ಮಕ್ಕಳಾದ ತೇಜಸ್ವಿನಿ ಮತ್ತು ಮಹಂತೇಶ್ ಅವರು ಈ ಸಂಸ್ಥೆಯ ಅಡಿಪಾಯವಾಗಿದ್ದಾರೆ.

ಇಂತಹದೊಂದು ಸಾಧನೆಯ ಹಾದಿಯನ್ನು ಶ್ರೀನಿವಾಸ ಮೂರ್ತಿ ಆಯ್ಕೆ ಆಡಿಕೊಳ್ಳುವುದಕ್ಕೆ ಪ್ರೇರಕಶಕ್ತಿಯಾಗಿ ನಿಂತವರು ಅವರ ತಂದೆ ಡಿ.ಎನ್.ಮಲ್ಲೇಶಯ್ಯನವರು. ರಾಜ್ಯ-ರಾಷ್ಟ್ರ ಪ್ರಶಸ್ತಿ ವಿಜೇತ ಉಪಾಧ್ಯಾರಾದ ಇವರ ತಂದೆ ಮಗನಿಗೆ ಇಂತಹುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಲವಂತ ಮಾಡಲಿಲ್ಲ. ಬದಲಿಗೆ ಸಮಾಜಮುಖಿಯ ಗುಣವನ್ನು ಪೋಷಿಸಿದರು, ನೀರೆರೆದು ಬೆಳಸಿದರು. ಮೂರ್ತಿಯವರ ಈ ಕನಸನ್ನು ಪ್ರೋತ್ಸಾಹಿಸಿ ಬೆಳೆಸಿದ್ದು ವೈ.ವಿ.ವೆಂಕಟೇಶ್ವರ ರಾವ್. ಬಿ.ಎಸ್.ವೆಂಕಟರಮಣ ಶೆಟ್ಟಿಯವರು ಅದರ ಫಲವೇ ತೇಜಸ್ವಿ ಸೇವಾ ಟ್ರಸ್ಟ್.

ಈ ಮಕ್ಕಳು ನಿಮ್ಮ ಮನೆಗಳಲ್ಲಿ ನಡೆಯುವ ಶುಭ-ಅಶುಭ ಕಾರ್ಯಕ್ರಮಗಳಿಗೆ ಬಂದು ಸಂಗೀತ ಸುಧೆಯನ್ನು ಹರಿಸುತ್ತಾರೆ.
1992ರಲ್ಲಿ ಈ ಟ್ರಸ್ಟ್ ತನ್ನ ಸೇವೆಯನ್ನು ಅಧಿಕೃತವಾಗಿ ಆರಂಭಿಸಿತು. ಈ ಸಂಸ್ಥೆಯ ಬೆನ್ನೆಲಬು, ಮಾರ್ಗದರ್ಶಕರು, ಒಂದರ್ಥದಲ್ಲಿ ಉಸಿರಾಗಿರುವವರು ಕೋಡಿಮಠದ ಸ್ವಾಮಿಜಿಗಳಾದ ಶ್ರೀ ಶ್ರೀ ಶ್ರೀ ಶಿವಾನಂದ ಶಿವಯೋಗಿ ಮಹಾ ಸ್ವಾಮಿಗಳು. ಅಷ್ಟೇ ಅಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ದಿ.ಡಾ.ಜೀವರಾಜ ಆಳ್ವ, ಬಿ.ಎಂ.ಶ್ರೀನಿವಾಸ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ರೇವಣ ಸಿದ್ಧಯ್ಯ ಇವರ ಬೆಂಬಲವು ಸಹ ಈ ಸಂಸ್ಥೆಯ ಶ್ರೀನಿವಾಸ ಮೂರ್ತಿ ಅವರಿಗೆ ಸಹಾಯಕಾರಿಯಾಯಿತು.

ಬೆಂಗಳೂರಿನ ಚಿಕ್ಕಲಸಂದ್ರದಲ್ಲಿ ಇರುವ ಈ ಟ್ರಸ್ಟ್ ನಲ್ಲಿ ಈಗಾಗಲೇ 120 ಅನಾಥ, ಅಂಧ ಹಾಗೂ ವಿಕಲಾಂಗ ಮಕ್ಕಳು ಈ ಸಂಸ್ಥೆಯ ಸದಸ್ಯರಾಗಿ ಜೀವನಕ್ಕೊಂದು ಮಾರ್ಗ ಕಂಡುಕೊಂಡಿದ್ದಾರೆ. ಕೆಲವು ಮಕ್ಕಳು ಪದವಿ ಪೂರೈಸಿ ಕೆಲಸಕ್ಕೆ ಸೇರಿ ಬದುಕಲ್ಲಿ ತಮಗೊಂದು ನೆಲೆ ಹಾಗೂ ಸಮಾಜದಲ್ಲೊಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಅಂಧರ ಬಗ್ಗೆ ಕೆಲಸ ಮಾಡುವ ಸಂಸ್ಥೆಗಳಲ್ಲಿ ಅಂಥವರೇ ಇರ್ತಾರೆ. ಅವರಿಗಾಗಿ ವಾಹನ, ಇನ್ನಿತರ ಸೌಲಭ್ಯಗಳು ಇರುತ್ತವೆ. ಆದರೆ ಈ ಸಂಸ್ಥೆಯಲ್ಲಿ ಒಂದು ವಿಶೇಷವಾದ ಸಂಗತಿ ಇದೆ. ಇಲ್ಲಿ ಒಬ್ಬ ವಿಕಲ, ಅಂಧ ಮಗುವಿನ ಜೊತೆ ಸಾಮಾನ್ಯ ಮಗುವನ್ನು ಜೊತೆ ಮಾಡಿ ಶಾಲೆಗೇ ಕಳುಹಿಸುತ್ತಾರೆ. ಆ ಮಗುವನ್ನು ಕರೆದು ತರುವ, ಅಲ್ಲಿ ರಕ್ಷಿಸುವ ಸಂಪೂರ್ಣ ಹೊಣೆ ನಾರ್ಮಲ್ ಆಗಿರುವ ಮಗುವಿನ, ಯುವಕನ ಮೇಲೆ ಇರುತ್ತದೆ. ಒಂದರ್ಥದಲ್ಲಿ ಮನೆಯ ಸದಸ್ಯರು ಮನೆಯವರ ಹೊಣೆ ಹೊತ್ತು ಕೊಂಡಂತೆ. ಈ ವಿಧಾನವು ತಮಗೆ ಸಾಕಷ್ಟು ನೆಮ್ಮದಿ ಹಾಗೂ ಧೈರ್ಯ ನೀಡಿದೆ ಎನ್ನುತ್ತಾರೆ ಶ್ರೀನಿವಾಸ ಮೂರ್ತಿಯವರು.

ಇಲ್ಲಿನ ಮಕ್ಕಳ ದಿನದ ಚಟುವಟಿಕೆ ಆರಂಭವಾಗುವುದು ಮುಂಜಾನೆ 4.30ಕ್ಕೆ. ಶಾಲೆಗೆ ಹೋಗುವವರೆಗೂ ಮಕ್ಕಳು ಯೋಗ, ಆಟ, ಓದು, ಸಂಗೀತ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ನಿರತರಾಗಿರುತ್ತಾರೆ. ಈ ಮಕ್ಕಳಿಗೆ ಮುಂಜಾನೆ ಹಾಲು-ಕಾಫಿ, ದಿನಕ್ಕೊಂದು ಉಪಹಾರ, ಪೋಷಕಭರಿತ ಆಹಾರ, ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಸಿಹಿಯೂಟ ನೀಡುವಲ್ಲಿಯೂ ಮೂರ್ತಿಗಳು ಹಿಂದೆ ಬಿದ್ದಿಲ್ಲ. ತಮ್ಮ ಚೂರು ಭೂಮಿಯಲ್ಲಿ ಬೆಳೆಯುವ ದವಸವನ್ನು ಸಂಸ್ಥೆಯ ಮಕ್ಕಳ ಹೊಟ್ಟೆ ತುಂಬಿಸುವುದಕ್ಕೆ, ಅವರ ಇತರ ಅಗತ್ಯಗಳಿಗೆ ವಿನಿಯೋಗಿಸುತ್ತಾ ಇದ್ದಾರೆ.

ಕಳೆದ ಹದಿನೆಂಟು ವರ್ಷಗಳಿಂದ ನಿರಂತರವಾಗಿ ಸಮಾಜದ ನಿರ್ಲಕ್ಷಿತ ಮಕ್ಕಳ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀನಿವಾಸ ಮೂರ್ತಿಯವರು ಸಹೃದಯರಲ್ಲಿ ಕೇಳಿಕೊಳ್ಳುವುದಿಷ್ಟೇ, "ಈಗಾಗಲೇ ಸಂಗೀತ, ಯೋಗ ಹಾಗೂ ಹಲವಾರು ವೈವಿಧ್ಯಮಯ ಕ್ಷೇತ್ರಗಳಲ್ಲಿ ಪರಿಣಿತರಾಗಿರುವ ಈ ಮಕ್ಕಳು ನಿಮ್ಮ ಮನೆಗಳಲ್ಲಿ ನಡೆಯುವ ಶುಭ-ಅಶುಭ ಕಾರ್ಯಕ್ರಮಗಳಿಗೆ ಬಂದು ಸಂಗೀತ ಸುಧೆಯನ್ನು ಹರಿಸುತ್ತಾರೆ. ಆಗ ನೀವು ನೀಡುವ ಮೊತ್ತವು ಅವರ ದಿನದ ಊಟ ಹಾಗೂ ಇನ್ನಿತರ ಸೌಲಭ್ಯಗಳಿಗೆ ಬಳಕೆಯಾಗುತ್ತದೆ. ನೀವು ನಿಮ್ಮ ಜನ್ಮ ದಿನದ ಖರ್ಚು ಅವರಿಗೆ ನೀಡಿದರೆ ಅವರ ಒಂದು ದಿನದ- ವರ್ಷದ ಕೆಲವು ಸೌಲಭ್ಯಗಳಿಗೆ ಉಪಯೋಗವಾಗುತ್ತದೆ". ಉದಾ : 750 ರು. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ(ಒಂದರಿಂದ ಮೂರನೇ ತರಗತಿ) ಒಂದು ಮಗುವಿನ ಕೆಲವು ಮುಖ್ಯ ಸೌಲಭ್ಯಗಳಿಗೆ ಸಹಾಯವಾಗುತ್ತದೆ. ಹೀಗೆ ಹಲವಾರು ಆಯ್ಕೆಗಳು ಇಲ್ಲಿವೆ.

ಸೇವಾಮನೋಭಾವಿದ್ದರೆ ಸಂಪರ್ಕಿಸಿ:

ಈಮೇಲ್ : tejaswisevatrust@yahoo.com, dmsmurthy@yahoo.com

ದೂರವಾಣಿ : 94486 13773,080-6575 0397, 080-2639 6101

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more