ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದನಿ ಯಾರು, ಆತನ ಪ್ರತಾಪಗಳೇನು?

By Prasad
|
Google Oneindia Kannada News

Abdul Nasser Madani
ಅಬ್ದುಲ್ ನಾಸಿರ್ ಮದನಿ, ಕೇರಳದ ಮುಸ್ಲಿಂರ ಮತ್ತು ಕೆಲ ರಾಜಕೀಯ ಪಕ್ಷಗಳ ಪಾಲಿನ ಹೀರೊ, ಕರ್ನಾಟಕದ ಪಾಲಿನ ವಿಲನ್! 1998ರ ಕೊಯಂಬತ್ತೂರು ಹಿಂಸಾಕಾಂಡದಲ್ಲಿ ಭಾಗಿಯಾಗಿ ಎಂಟು ವರ್ಷ ಕಂಬಿ ಎಣಿಸಿ ಖುಲಾಸೆಯಾಗಿರುವ ಮದನಿ ಎರಡು ತಲೆ ಹಾವಿದ್ದಂತೆ. ಆಡುವುದು ಒಂದು ಮಾಡುವುದು ಇನ್ನೊಂದು ಆತನ ಜಾಯಮಾನ.

ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾದೊಂದಿಗೆ ಗುರುತಿಸಿಕೊಂಡಿರುವ ಅಬ್ದುಲ್ ನಾಸಿರ್ ಮದನಿ ಕೊಯಂಬತ್ತೂರು ಪ್ರಕರಣದಲ್ಲಿ ಜೈಲು ಊಟ ಮಾಡಿ ಬಂದ ನಂತರ ತಾನು ಸಂಪೂರ್ಣ ಪರಿವರ್ತಿತನಾಗಿರುವುದಾಗಿ ಭೋಂಗು ಬಿಟ್ಟಿದ್ದ. 1997ರಲ್ಲಿ ಆ ಪ್ರಕರಣದಲ್ಲಿ ಬಿಡುಗಡೆಯಾದ ನಂತರ ತಾನು 'ಜಾತ್ಯತೀತ' ಎಂದು ಹೇಳಿಕೊಂಡು ತಿರುಗಿದ ಮದನಿಯ ಹೆಸರು ನಂತರ ಕೇಳಿಬಂದಿದ್ದೇ ಬೆಂಗಳೂರು ಸರಣಿ ಸ್ಫೋಟದಲ್ಲಿ.

2008ರ ಜುಲೈ 25ರಂದು ಬೆಂಗಳೂರಿನಲ್ಲಿ ಸರಣಿ ಸ್ಫೋಟದಲ್ಲಿ ಆತ ಪರೋಕ್ಷವಾಗಿ ಭಾಗಿಯಾಗಿರುವುದು ಆತನ ಮೇಲಿರುವ ಪ್ರಮುಖ ಆರೋಪ. ಬೆಂಗಳೂರು ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ನಾಸಿರ್ ಎಂಬಾತ ಸ್ಫೋಟಕ್ಕೆ ಮುಂಚೆ ಮದನಿಯನ್ನು ಸಂಧಿಸಿದ್ದಾಗಿ ಹೇಳಿಕೆ ನೀಡಿ, ಮದನಿಯ ಭಾಗೀದಾರಿಕೆಯನ್ನು ಸ್ಪಷ್ಟಪಡಿಸಿದ್ದಾನೆ.

ಬಾಲ್ಯ ಮತ್ತು ಯೌವನ : 1965ರಲ್ಲಿ ಕೇರಳದ ಸಸ್ತಮಕೊಟ್ಟ ಎಂಬಲ್ಲಿ ಜನಿಸಿದ ಮದನಿ ವಿದ್ಯಾಭ್ಯಾಸ ನಡೆಸಿದ್ದು ಮದರಸಾಗಳಲ್ಲಿ. ಯೌವನದ ದಿನಗಳಿಂದಲೂ ಮುಸ್ಲಿಂರನ್ನು ಸಂಘಟಿಸುವುದು, ಪ್ರಚೋದನಕಾರಿ ಭಾಷಣ ಮಾಡುವುದು, ಯುವಕರನ್ನು ಭಯೋತ್ಪಾದನೆಗೆ ಪ್ರೇರೇಪಿಸುವುದನ್ನು ಮಾಡಿಕೊಂಡು ಬಂದಿದ್ದಾನೆ. ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ ಜೊತೆಗೆ ನಂಟಸ್ತನ ಬೆಳೆಸಿಕೊಂಡಿದ್ದಾನೆ ಎಂಬ ಆರೋಪ ಕೂಡ ಹೊತ್ತಿದ್ದಾನೆ.

1993ರಲ್ಲಿ ನಿಷೇಧಿಸಲಾದ ಇಸ್ಲಾಮಿಕ್ ಸೇವಕ ಸಂಘದ ಸ್ಥಾಪಕ. ಒಂದು ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಿಂದ ಮಾರಣಾಂತಿಕವಾಗಿ ಹಲ್ಲೆಗೀಡಾಗಿದ್ದ. ಆ ಹಲ್ಲೆಯಲ್ಲಿ ಒಂದು ಕಾಲನ್ನು ಊನ ಕೂಡ ಮಾಡಿಕೊಂಡಿದ್ದಾನೆ. 1992ರ ಬಾಬ್ರಿ ಮಸೀದಿ ಧ್ವಂಸದ ನಂತರ 1993ರಲ್ಲಿ ಆತ ಹುಟ್ಟುಹಾಕಿದ್ದು ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ. ವಾಕ್ಚಾತುರ್ಯದಿಂದಾಗಿ ಬಡ ಮುಸ್ಲಿಂರ ಮೇಲೆ ಸಾಕಷ್ಟು ಪ್ರಭಾವ ಬೆಳೆಸಿಕೊಂಡಿದ್ದಾನೆ ಮದನಿ. ಮುಸ್ಲಿಂ ಓಟುಗಳ ಆಸೆಯಿಂದಾಗಿ ಅನೇಕ ರಾಜಕೀಯ ಪಕ್ಷಗಳು ಮದನಿಯೊಂದಿಗೆ ಚುನಾವಣೆಗಳಲ್ಲಿ ಹಸ್ತಲಾಘವ ಮಾಡಿಕೊಂಡಿವೆ.

"ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಮದನಿಯನ್ನು ಬೆಂಗಳೂರು ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಕೊಯಂಬತ್ತೂರು ಸ್ಫೋಟ ಪ್ರಕರಣದಂತೆ ಈ ಪ್ರಕರಣದಲ್ಲಿಯೂ ಯಾವುದೇ ವಿಚಾರಣೆಗಳಿಲ್ಲದೆ, ಜಾಮೀನು ಕೂಡ ನೀಡದಂತೆ ಜೈಲಲ್ಲಿ ಇಡುವುದಿಲ್ಲ ಎಂದು ಏನು ಗ್ಯಾರಂಟಿ" ಎಂದು ಇನ್ನೊಂದು ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಶ್ನೆ ಎತ್ತಿದೆ.

ತಾನು ಯಾವುದೇ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ, ವಿನಾಕರಣ ತನ್ನ ಹೆಸರನ್ನು ಎಳೆದುತರಲಾಗುತ್ತಿದೆ ಎಂದು ಆರೋಪಿಸುವ ಮದನಿಯನ್ನು ಮಾನವೀಯತೆಯ ಆಧಾರದ ಮೇಲೆ ಬಂಧನದಿಂದ ಬಿಡುಗಡೆ ಮಾಡಲು ಕೇರಳ ಸರಕಾರವೇ 1996ರಲ್ಲಿ ಆದೇಶ ನೀಡಿತ್ತು. ಆಗಸ್ಟ್ 17ರ ಮಧ್ಯಾಹ್ನ ಮದನಿಯನ್ನು ಬೆಂಗಳೂರು ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರ ಸಹಕಾರದೊಂದಿಗೆ ಕರ್ನಾಟಕದ ಪೊಲೀಸರು ಬಂಧಿಸಿದ್ದಾರೆ. ಇನ್ನು ಮುಂದೆ ಕರ್ನಾಟಕದ ನ್ಯಾಯಾಲಯದಲ್ಲಿ ಆತನ ವಿಚಾರಣೆ ನಡೆಯಬೇಕಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X