ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಾಯುಷಿ ತಿರಳೇಬೈಲ್ ಪಾಂಡುರಂಗ ಭಟ್ಟ

By * ಡಾ. ಬಾಲಕೃಷ್ಣ ಹೆಗಡೆ
|
Google Oneindia Kannada News

Freedom fighter T. Panduranga Bhat
ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧಿವಾದಿ ತಿರಳೇಬೈಲ್ ಪಾಂಡುರಂಗ ಭಟ್ಟರಿಗೆ ಈಗ ಬರೋಬ್ಬರಿ ಒಂದು ನೂರು ವರ್ಷ. ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳು ಭಟ್ಟರು ಶತವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಇಲ್ಲಿನ ಗೌಡ ಸಾರಸ್ವತ ಕಲ್ಯಾಣ ಮಂದಿರದಲ್ಲಿ ಶತಮಾನೋತ್ಸವ ಸಂಭ್ರಮಾಚರಣೆ ಹಮ್ಮಿಕೊಂಡು ಶತಾಯುಷಿ ಭಟ್ಟರಿಗೆ ಹೃದಯ ಪೂರ್ವಕ ಶುಭಾಶಯ ಕೋರಿದರು. ಎಲ್ಲರೂ ಎದ್ದು ಕರತಾಡನ ಮಾಡಿದಾಗ ನಿಸ್ವಾರ್ಥ ಬದುಕು ಕಂಡ ಶತಾಯುಷಿಯ ಕಣ್ಣಲ್ಲಿ ಸಾರ್ಥಕತೆಯ ಮಿಂಚಿತ್ತು.

1909ರ ಡಿ.3ರಂದು ಕೃಷ್ಣಭಟ್ಟ-ರುಕ್ಮಿಣಿಯಮ್ಮನವರ ಹಿರಿಯ ಪುತ್ರರಾಗಿ ಜನಿಸಿದ ಪಾಂಡುರಂಗ ಭಟ್ಟರು ಓದಿದ್ದು ಕೇವಲ ಏಳನೇ ತರಗತಿವರೆಗೆ. ಮುಂದೆ ಓದಬೇಕು ಅಂತ ಮನಸ್ಸಿದ್ದರೂ ಸ್ವಾತಂತ್ರ್ಯ ಚಳವಳಿಯ ಸಳೆತ ಅದಕ್ಕೆ ಅವಕಾಶ ನೀಡಲಿಲ್ಲ. ಎಳೆ ವಯಸ್ಸಿನಲ್ಲಿಯೇ ದೇಶಪ್ರೇಮ ಮೈಗೊಡಿಸಿಕೊಂಡ ಭಟ್ಟರು ತೀರ್ಥಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಜನರಲ್ಲಿ ದೇಶಪ್ರೇಮದ ಕಿಡಿ ಹೊತ್ತಿಸುವಲ್ಲಿ ಯಶಸ್ವಿಯಾದವರು.

ಹೊಟ್ಟೆಪಾಡಿಗಾಗಿ ಶಿವಮೊಗ್ಗಕ್ಕೆ ಬಂದ ಭಟ್ಟರು ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಿದರು. ಮಹಾತ್ಮ ಗಾಂಧಿ, ಲಾಲಬಹದ್ದೂರ್ ಶಾಸ್ತ್ರೀ, ಜವಾಹರಲಾಲ್ ನೆಹರು, ಮೂರಾರ್ಜಿ ದೇಸಾಯಿ ಮುಂತಾದ ರಾಷ್ಟ್ರ ನಾಯಕರ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾದ ಭಟ್ಟರು ನಿಸ್ವಾರ್ಥ ವ್ಯಕ್ತಿತ್ವದಿಂದ ರಾಜಕೀಯದ ಉತ್ತುಂಗಕ್ಕೇರಿದವರು. ಅದರೆ ಯಾವ ಅಧಿಕಾರದ ಲಾಲಸೆಯನ್ನೂ ಹೊಂದಿರದ ಭಟ್ಟರು ಶಿವಮೊಗ್ಗದಲ್ಲಿದ್ದುಕೊಂಡೇ ಅಧಿಕಾರದುತ್ತುಂಗಕ್ಕೇರಿದವರನ್ನು ತಮ್ಮೂರಿಗೆ ಬರಮಾಡಿಕೊಳ್ಳುವಲ್ಲಿ ಸಿದ್ಧಹಸ್ತರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇವರು ಶಿವಮೊಗ್ಗ, ಬೆಳಗಾವಿ, ಬೆಂಗಳೂರು ಸೇರಿದಂತೆ ಅನೇಕ ಕಡೆ ಜೈಲುವಾಸ ಅನುಭವಿಸಿದ್ದರು. ಈ ಕುರಿತ ಅವರ ಮಾತನ್ನು ಕೇಳುವಾಗ ಯಾರಿಗಾದರೂ ದೇಶಭಕ್ತಿಯ ಬಗ್ಗೆ ಪುಳಕಿತವಾಗದಿರದು.

ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರಲ್ಲೊಬ್ಬರಾದ ಇವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ನಗರ ಸಭೆಯ ಉಪಾಧ್ಯಕ್ಷರಾಗಿ, ಕೆಲಕಾಲ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಭದ್ರ ಬುನಾದಿ ಹಾಕಿದರು. ಶಿವಮೊಗ್ಗದ ಮಹಾತ್ಮಾಗಾಂಧಿ ಪಾರ್ಕ್, ರಾಮಣ್ಣಶ್ರೇಷ್ಠಿ ಪಾರ್ಕ್‌ಗಳ ಉಳಿವಿಗಾಗಿ ಪರಿಶ್ರಮಿಸಿದ ಭಟ್ಟರನ್ನು ಜನತೆ ಮರೆಯುವಂತಿಲ್ಲ. 230 ಜನರ ತುಂಬು ಕುಟುಂಬದ ಹಿರಿಯ ಸಜ್ಜನರಾದ ಇವರು ನಗರದಲ್ಲಿನ ಗೌಡ ಸಾರಸ್ವತ ಸಮಾಜದ ಕಲ್ಯಾಣ ಮಂದಿರದ ಸಂಸ್ಥಾಪಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಹಾಗೂ ದೇಶೀಯ ವಿದ್ಯಾ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ಇವರು ಇಂದಿಗೂ ಆ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಲು ಮರೆಯುವುದಿಲ್ಲ.

ಎಸ್.ವಿ.ತಿಮ್ಮಯ್ಯ ಒಬ್ಬನಿಷ್ಠಾವಂತ, ಒಳ್ಳೆಯ ಕೆಲಸಗಾರ ಎಂದು ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಂಸ್ಥಾಪಕರಲ್ಲಿ ಪ್ರಮುಖರಾದ ಶತಾಯುಷಿ ಟಿ.ಪಾಂಡುರಂಗ ಭಟ್ಟರು ಹೆಮ್ಮೆಯಿಂದ ನುಡಿಯುತ್ತಾರೆ. ತಿಮ್ಮಯ್ಯನವರ ತಂದೆ ನಮ್ಮ ಜತೆ ಕೆಲಸ ಮಾಡಿದವರು. ನಾಗಪ್ಪ ಶೆಟ್ಟರು, ಗಿರಿಮಾಜಿ ರಾಜಗೋಪಾಲ ಮುಂತಾದ ಮಹನೀಯರು ಅಹರ್ನಿಷಿ ದುಡಿದು ಕಟ್ಟಿದ ಸಂಸ್ಥೆ ಇದು. ಈಗ ಎಸ್.ವಿ.ತಿಮ್ಮಯ್ಯ ಸಮಿತಿಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿರುವುದು ತಮಗೆ ಖುಷಿ ತಂದಿದೆ ಎಂದು ತಿಮ್ಮಯ್ಯ ಅವರ ಕಾರ್ಯಕ್ಷಮತೆಯನ್ನು ಬಣ್ಣಿಸಿದರು.

ಆಗಿನ ಹೋರಾಟ ಸ್ವಾತಂತ್ರ್ಯಕ್ಕಾಗಿತ್ತು. ಈಗಿನ ಹೋರಾಟ ಕೇವಲ ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಎಂದು ಹೇಳುವಾಗ ಭಾವುಕರಾಗುವ ಅವರು ಈಗಿನ ರಾಜಕಾರಣಿಗಳಿಗೆ ಏಕೆ ಈ ದುರ್ಬುದ್ದಿ ಬಂತೋ ಎಂದು ಪಶ್ಚಾತ್ತಾಪ ಪಡುತ್ತದೆ ಈ ಹಿರಿ ಜೀವ. ಅಪ್ಪಟ ಕಾಂಗ್ರೆಸ್ಸಿಗರಾದರೂ ಬಿಜೆಪಿ ಅಧಿಕಾರಕ್ಕೆ ಬಂದು ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳುತ್ತಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳ್ಳೆಯ ಮನುಷ್ಯ ಎಂದು ಕೊಂಡಾಡುತ್ತಾರೆ. ಪ್ರಸ್ತುತ ಗಣಿವಿವಾದಕ್ಕೆ ಸಂಬಂಧಿಸಿದಂತೆ ತೀವ್ರ ಖೇದ ವ್ಯಕ್ತಪಡಿಸುವ ಶತಾಯುಷಿ ಭಟ್ಟರು ಗಣಿಗಾಗಿ ಅಧಿಕಾರ ಬೇಡ. ರಾಜಕೀಯದಲ್ಲಿ ವಚನಭ್ರಷ್ಟರಾಗುವುದು ಬೇಡ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.

ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ವೀರಕೇಸರಿ ಸೀತಾರಾಮಶಾಸ್ತ್ರೀ, ಸಿ.ವಿ.ಗುಪ್ತಾ, ಸುಬ್ರಮಣ್ಯಂ, ಸಿದ್ದಯ್ಯ ಮುಂತಾದ ಮಹನೀಯರ ಒಡನಾಟವನ್ನು ಸ್ಮರಿಸುತ್ತ ಮಾಜಿ ಮುಖ್ಯಮಂತ್ರಿ, ರಾಜಕೀಯ ಮುತ್ಸದ್ದಿ ರಾಮಕೃಷ್ಣ ಹೆಗಡೆ, ಗಣೇಶ ಹೆಗಡೆ ದೊಡ್ಡನೆ, ಅವರ ಸಹೋದರಿ ಮೊದಲಾದವರು ತಮ್ಮ ಮನೆಗೆ ಆಗಾಗ ಬಂದು ದೇಶದ ವಿದ್ಯಮಾನ ಚರ್ಚಿಸುತ್ತಿದ್ದ ಸನ್ನಿವೇಶ ಮೈನವಿರೇಳಿಸುವಂಥದ್ದು. ತಾವು ಹೋರಾಟ ಮಾಡಿದ್ದು ಗಾಂಧಿವಾದಕ್ಕೆ. ಇಲ್ಲಿದ್ದವರು ಇಲ್ಲೇ ಇರಬೇಕು. ವಿದ್ಯಾವಂತರ ಸೇವೆ ಸ್ವದೇಶಕ್ಕೇ ಲಭಿಸಬೇಕು. ಪ್ರತಿಯೊಬ್ಬರೂ ದೇಶದ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಅವಕಾಶ ದೊರಕುವುದು ದುರ್ಲಭ. ರಾಜಕೀಯದವರನ್ನು ಮಾಧ್ಯಮದವರು ಸರಿದಾರಿಗೆ ತರಬೇಕು ಎಂಬುದು ಭಟ್ಟರ ಕಳಕಳಿಯ ಮನವಿಯಾಗಿದೆ. ಜಿಲ್ಲೆಯ ಅನೇಕ ಗಣ್ಯಾತಿ ಗಣ್ಯರು ಈ ಸಮಾರಂಭಕ್ಕೆ ಹಾಜರಾಗಿ ಭಟ್ಟರ ಆರ್ಶೀವಾದ ಪಡೆದದ್ದು ವಿಶೇಷವಾಗಿತ್ತು. ತಾವು ಹೇಳಿದಂತೆ ನಡೆದುಕೊಂಡು ಬಂದಿರುವ ಭಟ್ಟರ ಶತಮಾನೋತ್ಸವ ಸಮಾರಂಭ ನಯನಾರವಿಂದೋತ್ಸವವಾಗಿದ್ದಂತೂ ನಿಜ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X