ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ ಎಂವಿ ಭಾರತ ಕಂಡ ವಿಶ್ವವಿಖ್ಯಾತ ಇಂಜಿನಿಯರ್

By * ಸಾಕ್ಷಿರಾಜ್
|
Google Oneindia Kannada News

Sir M. Vishweshwaraiah
ಶಿಕ್ಷಣ ತಜ್ಞರಾಗಿ, ಕೈಗಾರಿಕಾ ಕ್ರಾಂತಿಯ ಹರಿಕಾರರಾಗಿ ಅನೇಕ ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿ 102 ವರ್ಷಗಳ ಕಾಲ ಸ್ವಚ್ಚ ಸುಂದರ ಬದುಕನ್ನು ನಡೆಸಿದ ಅದ್ವೀತಿಯ ಅಪ್ರತಿಮ ದೇಶಭಕ್ತ, ಚತುರ ಇಂಜಿನಿಯರ್, ದಕ್ಷ ಆಡಳಿತಗಾರ, ಪ್ರಾಮಾಣಿಕ ಸಹೃದಯಿ, ದಯಾಮಯಿಯಾದ ಸರ್ ಎಂ. ವಿಶ್ವೇಶ್ವರಯ್ಯ ಅವರ 149ನೆಯ ಹುಟ್ಟು ಹಬ್ಬದ ಸಂದರ್ಭಕ್ಕಾಗಿ ಇದೊಂದು ಪುಟ್ಟ ನುಡಿ ನಮನ.

* ಸಾಕ್ಷಿರಾಜ್

ಅಕ್ಕಿಯೊಳಗನ್ನವನು ಮೊದಲಾರು ಕಂಡವರು |
ಅಕ್ಕರದ ಬರಹಕ್ಕೆ ಮೊದಲಿಗದನಾರು ||
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ |
ದಕ್ಕುವುದೇ ಜಸ ನಿನಗೆ -ಮಂಕುತಿಮ್ಮ ||

ಡಿ.ವಿ.ಜಿಯವರ ಈ ಮೇಲಿನ ಕಗ್ಗವನ್ನು ಮನನ ಮಾಡಿದರೆ ನಮ್ಮ ಮೇಲೆ ನಮಗೆ ಬೇಸರ ಮತ್ತು ಅಸಹ್ಯ ಉಂಟಾಗುತ್ತದೆ. ನಾವು ಇಂದು ಪಡೆದಿರುವಷ್ಟು ಸೌಲಭ್ಯ, ಸೌಕರ್ಯ,ಶಿಕ್ಷಣ,ಪರಿಣತಿ,ಅಭಿವೃದ್ಧಿ ನಮ್ಮ ಹಿಂದಿನ ತಲೆಮಾರಿನವರು ಪಡೆದುಕೊಂಡಿರಲಿಲ್ಲ.ಇಷ್ಟೆಲ್ಲಾ ಉನ್ನತಿ, ಸುವ್ಯವಸ್ಥೆ ಅಭಿವೃದ್ಧಿಯ ಹಿಂದೆ ಅನೇಕರ ತ್ಯಾಗ, ಬಲಿದಾನ, ಕಾಳಜಿ, ಶ್ರಮವು ಬಹಳವಾಗಿದೆ. ಇಂದು ಅದನ್ನೆಲ್ಲ ಅನುಭವಿಸುತ್ತಿರುವ ನಾವು ಅವರ ಋಣವನ್ನು ತೀರಿಸಬೇಡವೇ? ಅವರನ್ನು ಸ್ಮರಿಸಿಕೊಳ್ಳೊದು ಬೇಡವೇ? ಅವರಿಗೆ ಒಂದು ನಮನವನ್ನಾದರೂ ಸಲ್ಲಿಸುವುದು ಬೇಡವೇ ಆ ನಿಮಿತ್ತ ಭಾರತ ಕಂಡ ವಿಶ್ವವಿಖ್ಯಾತ ಇಂಜಿನಿಯರ್, ದಕ್ಷ ಆಡಳಿತಾಧಿಕಾರಿ. ನೀರಾವರಿ-ಅಣೆಕಟ್ಟುಗಳ ಹರಿಕಾರ, ಸಜ್ಜನ, ಶಿಕ್ಷಣ ತಜ್ಞ, ದೇಶಿಯ ಕೈಗಾರಿಕೆ ಕ್ರಾಂತಿಯ ಹರಿಕಾರ, ಸಮಾಜ ಸುಧಾರಕ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜನ್ಮದಿನಾಚರಣೆ.

ನಮ್ಮ ಮಾಧ್ಯಮಗಳು (ಟಿವಿ,ಪತ್ರಿಕೆಗಳು,ಇಂಟರ್ನೆಟ್,ಎಸ್.ಎಂ.ಎಸ್) ಕೇವಲ 10-12 ವರ್ಷಗಳಲ್ಲಿ ಹುಟ್ಟಿಕೊಂಡಿರುವ ಅಂತಾರಾಷ್ಟ್ರೀಯ ದಿನಾಚರಣೆಗಳು( ಪ್ರೇಮಿಗಳ ದಿನಾಚರಣೆ,ಮದರ್ಸ್ ಡೇ,ಫಾದರ್ಸ್ ಡೇ,ಪೆಟ್ ಅನಿಮಲ್ಸ್ ಡೇ,ಇನ್ನೂ.ಏನೇನೋ..) ಅವುಗಳಿಗೆ ಕೊಡುವ ಅಬ್ಬರದ ಪ್ರಚಾರ ಮತ್ತು ವಿಶೇಷ ವರದಿಗಳು (ಎರಡೂ-ಮೂರು ಪುಟಗಳು.ಚಾನೆಲ್ ಗಳೂ ವಿಶೇಷ ಕಾರ್ಯಕ್ರಮಗಳು ) ನಮ್ಮ ದೇಶಿಯ ಹಬ್ಬಗಳಿಗೆ, ದೇಶಿಯ ದಿನಾಚರಣೆಗಳಿಗೆ( ಸರ್ವೋದಯ ದಿನ,ನ್ಯಾಷನಲ್ ಯೂತ್ಸ್ ಡೆ,ಇಂಜಿನಿಯರ್ಸ್ ಡೇ, ಟೀಚರ್ಸ್ ಡೆ...ಇನ್ನೂ ಹಲವು) ,ದೇಶಕ್ಕಾಗಿ ದುಡಿದವರ ಜನ್ಮದಿನಾಚರಣೆಗಳಿಗೆ ಕೊಡುವುದಿಲ್ಲ ಏಕೆ?ಅದು ನಮ್ಮ ದೇಶದ ಭವಿಷ್ಯಕ್ಕೆ ಮಾರಕವಾದ ಬೆಳವಣಿಗೆ.

ಅವರಿವರನ್ನೂ ದೂರುತ್ತ ನಾವು ಅದರಿಂದ ವಿಮುಖರಾಗಿ ಬಿಡುತ್ತೇವೆ. ಹಾಗಾಗುವುದಕ್ಕೂ ಮುಂಚೆ ಬನ್ನಿ ವಿಶ್ವೇಶ್ವರಯ್ಯನವರ ಬದುಕು-ಸಾಧನೆಗಳ ಬಗ್ಗೆ ಅವಲೋಕನ ಮಾಡಿಕೊಳ್ಳೊಣ. ಅವರ ಬದುಕಿನಿಂದ ಸ್ಪೂರ್ತಿ ಪಡೆದುಕೊಳ್ಳೊಣ.

ವಿಶ್ವೇಶ್ವರಯ್ಯನವರು 1860ರ ಸೆಪ್ಟಂಬರ್ ತಿಂಗಳ 15ರಂದು ಆಗಿನ ಮೈಸೂರು ಸಂಸ್ಥಾನದ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ತಂದೆ ಶ್ರೀನಿವಾಸಶಾಸ್ತ್ರಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮರ ಪುತ್ರರಾಗಿ ಜನಿಸಿದರು.

ಬಾಲ್ಯ:

ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಮುದ್ದೇನಹಳ್ಳಿಯಲ್ಲೆ ನಡೆಯಿತು.ತಂದೆ ಶ್ರೀನಿವಾಸಶಾಸ್ತ್ರಿಗಳು ತೀರ್ಥಯಾತ್ರೆಯ ನಿಮಿತ್ತ ರಾಯಚೂರಿನಿಂದ ಹಿಂದಿರುಗುವಾಗ ಮಾರ್ಗಮಧ್ಯೆ ಸ್ವರ್ಗಸ್ಥರಾದರು.ಆಗ ವಿಶ್ವೇಶ್ವರಯ್ಯನವರ ವಯಸ್ಸು ಕೇವಲ 15 ವರ್ಷ.ತಂದೆಯ ಮರಣದ ನಂತರ ತಾಯಿ ವೆಂಕಟಲಕ್ಷಮಮ್ಮನವರಿಗೆ ವಿಶ್ವೇಶ್ವರಯ್ಯನವರ ಶಿಕ್ಷಣ ಮುಂದುವರೆಸುವ ಬಗ್ಗೆ ಚಿಂತೆ ಕಾಡತೊಡಗಿತು, ವಿಷಯ ತಿಳಿದ ವಿಶ್ವೇಶ್ವರಯ್ಯನವರ ಸೋದರಮಾವನವರಾದ ರಾಮಯ್ಯನವರು ವಿಶ್ವೇಶ್ವರಯ್ಯನವರನ್ನ ಬೆಂಗಳೂರಿಗೆ ಕರೆಯಿಸಿ (1875 ರಲ್ಲಿ) ವೆಸ್ಲಿಯನ್ ಮಿಷನ್ ಪ್ರೌಡಶಾಲೆಗೆ ಸೇರಿಸಿದರು.

ಹೈಸ್ಕೂಲು ಮುಗಿಸಿ ಸೆಂಟ್ರಲ್ ಕಾಲೇಜ್ ನಲ್ಲಿ ಶಿಕ್ಷಣವನ್ನು ಮುಂದುವರೆಸಿದರು.ಮಾವ ರಾಮಯ್ಯನವರ ಮನೆಯಲ್ಲಿ ಊಟದ ವ್ಯವಸ್ಥೆಯಗುತ್ತಿತ್ತು.ಆದರೆ ಪುಸ್ತಕ,ಕಾಲೇಜಿನ ಶುಲ್ಕ ಇತರೆ ವೆಚ್ಚಕ್ಕೆ ಹಣದ ಅವಶ್ಯಕತೆ ಇತ್ತು.ಅದನ್ನು ನೀಗಿಸಲು ಅವರು ವಿರಾಮದ ವೇಳೆಯಲ್ಲಿ ಮಂತ್ರಿಗಳಾಗಿದ್ದ ಮುದ್ದಯ್ಯನವರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು.

ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಮೆಟ್ರಿಕ್ ಪರಿಕ್ಷೆಗೆ ಕಟ್ಟಲು ಹಣ ಇರಲಿಲ್ಲ. ಚಿಕ್ಕಬಳ್ಳಾಪುರಕ್ಕೆ ಆಗ ಮೋಟಾರ್ ಬಸ್ ಸೌಲಭ್ಯ ಇರಲಿಲ್ಲ, ಬೆಂಗಳೂರಿನಿಂದ ಸುಮಾರು 35 ಮೈಲಿಗಳಷ್ಟು ದೂರ ನಡೆದುಕೊಂಡೆ ಹೋದರು.ತಾಯಿಯ ಬಳಿಯೂ ಹಣವಿರಲಿಲ್ಲ, ಮನೆಯಲ್ಲಿದ್ದ ಪಾತ್ರೆಗಳನ್ನು ಅಡವಿಟ್ಟು ಮಗನಿಗೆ 12ರೂ ಗಳನ್ನು ಕೊಟ್ಟು ಕಳುಹಿಸಿದಳು ತಾಯಿ ವೆಂಕಟಲಕ್ಷ್ಮಮ್ಮ.. ಹಣವನ್ನು ಪಡೆದುಕೊಂಡು ಮರುದಿನ ಮುಂಜಾನೆ ಎದ್ದು ಬೆಂಗಳೂರಿಗೆ ಕಾಲ್ನಡಿಗೆಯಲ್ಲೆ ಕಾಲೇಜು ತಲುಪುವಷ್ಟರಲ್ಲಿ ಬಹಳ ತಡವಾದ್ದರಿಂದ ಗುಮಾಸ್ತ ಹಣವನ್ನು ಸ್ವೀಕರಿಸಲು ನಿರಾಕರಿಸುತ್ತಾನೆ.ಕಡೆಗೆ ಒಬ್ಬ ಅಧಿಕಾರಿಯ ಶಿಫಾರಸ್ಸಿನಿಂದ ಹಣವನ್ನು ಪಾವತಿಸುತ್ತಾರೆ.ಆ ವರ್ಷವೇ ಇಡೀ ಮೈಸೂರು ಸಂಸ್ಥಾನಕ್ಕೆ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಾರೆ.

ಗಣಿತ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದ ವಿಶ್ವೇಶ್ವರಯ್ಯನವರು 1881ರಲ್ಲಿ ಬಿಎ ಪರೀಕ್ಷೆಯಲ್ಲಿ ಉನ್ನತ ಶ್ರೇಣೀಯಲ್ಲಿ ತೇರ್ಗಡೆಯಾದರು. ಉನ್ನತವ್ಯಾಸಂಗದ ಸೌಲಭ್ಯ ಮೈಸೂರಿನಲ್ಲಿ ಇರಲಿಲ್ಲ. ಅದಕ್ಕಾಗಿ ಬೊಂಬಾಯಿ ಪ್ರಾಂತ್ಯಕ್ಕೆ ಹೋಗಬೇಕಿತ್ತು.ಶಿಕ್ಷಣವನ್ನು ಪ್ರೋತ್ಸಾಹಿಸಲು ಮೈಸೂರು ಸರ್ಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತಿತ್ತು. ಅಂತಹ ವಿದ್ಯಾರ್ಥಿ ವೇತನ ಪಡೆದು ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ವಿಶ್ವೇಶ್ವರಯ್ಯನವರು ಪುಣೆಗೆ ತೆರಳಿದರು. ಮೂರು ವರ್ಷಗಳ ಅವಧಿಯ ಶಿಕ್ಷಣವನ್ನು ಕೇವಲ ಎರಡೂವರೆ ವರ್ಷದಲ್ಲಿ (1883) ತಮ್ಮ 23 ನೆ ವಯಸ್ಸಿನಲ್ಲಿ L.C.E ಮತ್ತು E.C.E.L ಪರೀಕ್ಷೆಯಲ್ಲಿ ಇಡೀ ಬೊಂಬಾಯಿ ಪ್ರಾಂತ್ಯಕ್ಕೆ ಮೊದಲ ಶ್ರೇಣೀಯಲ್ಲಿ ಪ್ರಥಮ ಸ್ಥಾನಗಳಿಸಿದರು.ಇದು ಈಗಿನ ಬಿ.ಇ. ಡಿಗ್ರಿಗೆ ಸಮ. ಅದಕ್ಕಾಗಿ ಅವರಿಗೆ ಜೇಮ್ಸ್ ಬರ್ಕ್ಲೆ ಬಂಗಾರದ ಪದಕ ದೊರಕಿತು.

ವೃತ್ತಿ ಜೀವನದ ಸಾಧನೆ:

ತಮ್ಮ 24 ನೆ ವಯಸ್ಸಿನಲ್ಲೆ (1884) ಬೊಂಬಾಯಿ ಪ್ರಾಂತ್ಯದಲ್ಲಿ ಸಹಾಯಕ ಇಂಜಿನಿಯರ್ ಅಧಿಕಾರಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿ ಸತತ 24 ವರ್ಷಗಳಷ್ಟು ಕಾಲ ಇಂಜಿನಿಯರಿಂಗ್ ವಿಭಾಗದ ಎಲ್ಲ ಉನ್ನತ ಹುದ್ದೆಗಳಿಗೂ ಬಹಳ ಬೇಗ ತಮ್ಮ ಸಾಮರ್ಥ್ಯ ಮತ್ತು ದಕ್ಷತೆಯಿಂದ ಮೇಲೆರಿದರು.

* ಮೊದಲ ಯೋಜನೆ : ಪಂಜ್ರಾ ನದಿಯಿಂದ ದಾತಾರಿ ಗ್ರಾಮಕ್ಕೆ "ಸೈಫನ್" ವಿಧಾನದಿಂದ ನೀರು ಹಾಯಿಸುವ ಕೆಲಸ. ಕೆಲಸಕ್ಕೆ ಸೇರಿದ 20 ತಿಂಗಳಲ್ಲೆ ಇಲಾಖೆಯ ಪರೀಕ್ಷೆಯಲ್ಲಿ ಉತ್ತಿರ್ಣರಾಗಿ ಮೊದಲ ದರ್ಜೆಯ ಇಂಜಿನಿಯರ್ ಆದರು.
* ಸಿಂಧ್ ವಿಭಾಗದ ಸೆಕ್ಕೂರಿಗೆ ನದಿಯಿಂದ ಕುಡಿಯುವ ನೀರನ್ನು ಒದಗಿಸುವ ಯೋಜನೆ.
* ತಪತಿ ನದಿಯಿಂದ ಸೂರತ್ ನಗರಕ್ಕೆ ನೀರೊದಗಿಸುವ ಕಾರ್ಯಯೋಜನೆ.
* ಪುಣೆ ಮತ್ತು ಸುತ್ತಲಿನ ದಂಡಿನ ಕರ್ಕಿಗೆ ಮೂಸಾ ನದಿಯ ಕಾಲುವೆಯಿಂದ ನೀರು ಒದಗಿಸಲಾಗುತ್ತಿತ್ತು-"ಪೈಪ್" ಜಲಾಶಯದಲ್ಲಿ "ಸ್ವಚ್ಚಲೀ"-ಸ್ವಯಂ ಚಾಲಿತ ಕವಾಟಗಳನ್ನು ಅಳವಡಿಸಿ ಯೋಜನೆಯನ್ನು ಯಶಸ್ವಿಗೊಳಿಸಿದರು-"ಸ್ವಚ್ಚಲೀ" ತಂತ್ರಜ್ಞಾನಕ್ಕೆ ಪೆಟೆಂಟ್ ಪಡೆದುಕೊಂಡರು.
* 1904ರಲ್ಲಿ ಬೊಂಬಾಯಿ ಪ್ರಾಂತ್ಯದಲ್ಲಿ ಸ್ಯಾನಿಟರಿ ವಿಭಾಗದ ಇಂಜಿನಿಯರ್ ಹುದ್ದೆಗೇರಿದರು.
* 1906ರಲ್ಲಿ ಲಂಡನ್ ನ -ಏಡನ್ ನಗರದ ನೆರವಿಗೆ ಧಾವಿಸಿ ಅಲ್ಲಿನ ನೀರಿನ ಮತ್ತು ಒಳಚರಂಡಿಯ ಯೋಜನೆಗಳನ್ನು ಸಮರ್ಪಕವಾಗಿ ನೆರವೇರಿಸಿದರು.
* 1907ರಲ್ಲಿ ಸ್ಯಾನಿಟರಿ ವಿಭಾಗದ ಜೊತೆಗೆ ಇನ್ನು ಎರಡು ವಿಭಾಗದ ಹೊಣೆಗಾರಿಕೆ ಸೇರಿದವು ಅವುಗಳನ್ನು ಸಮರ್ಪಕವಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
* ಕೈಸರ್-ಇ-ಹಿಂದ್-ಪ್ರಶಸ್ತಿ ಪದಕ ಬ್ರಿಟೀಷ್ ಪ್ರಭುತ್ವ ನೀಡಿ ಗೌರವಿಸಿತು.
* ಇವರ ಸಾಮರ್ಥ್ಯ, ಬುದ್ಧಿವಂತಿಕೆ, ಕಾಲಕ್ಷಮತೆ, ಪ್ರಾಮಾಣಿಕತೆ ಇವುಗಳನ್ನ ಗಮನಿಸಿ ಸರ್ಕಾರ 18 ಆಂಗ್ಲ ಅಧಿಕಾರಿಗಳ ಮೇಲೆ ಬಡ್ತಿ ನೀಡಿತು.

ಆಗಿನ ಕಾಲದಲ್ಲಿ ಚೀಫ್ ಇಂಜಿನಿಯರ್ ಸ್ಥಾನ ಆಂಗ್ಲರಿಗೆ ಮೀಸಲಾಗಿತ್ತು. ನ್ಯಾಯ ಸಮ್ಮತವಾಗಿ ತಮಗೆ ಸಿಗಬೇಕಿದ್ದ ಸ್ಥಾನ ಸಿಗಲಿಲ್ಲ ಅದಕ್ಕಾಗಿ ಆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದರು. ಅದನ್ನು ಹಿಂತೆಗೆದುಕೊಳ್ಳುವಂತೆ ಗೌರ್ವನರ್ ಮನವಿ ಮಾಡಿಕೊಂಡರೂ ವಿಶ್ವೇಶ್ವರಯ "ಭಾರತೀಯರ ಸಾಮರ್ಥ್ಯ ಕಡೆಗಣಿಸುವ ದುರಭಿಮಾನಕ್ಕೆ ತಲೆಬಾಗಲಾಗದು" ಎಂದು ತಮ್ಮ ನಿಲುವನ್ನು ಸಡಿಲಿಸದೆ 1908ನೆ ಮೇ ತಿಂಗಳಲ್ಲಿ ಬೊಂಬಾಯಿ ಸರ್ಕಾರದ ಕೆಲಸದಿಂದ ನಿವೃತ್ತಿ ಹೊಂದಿ ಲಂಡನ್ ಪ್ರವಾಸ ಕೈಗೊಂಡರು. ಅಲ್ಲಿ ಅನೇಕ ಕಾರ್ಖಾನೆಗಳಿಗೆ ಭೇಟಿ ನೀಡಿ ನಮ್ಮ ದೇಶಕ್ಕೆ ಬೇಕಾಗುವ ಎಲ್ಲ ತಂತ್ರಜ್ಞಾನ, ಮಾಹಿತಿಯನ್ನು ಪಡೆದುಕೊಂಡರು. ಲಂಡನ್ ಪ್ರವಾಸದಲ್ಲಿದ್ದಾಗ ಹೈದ್ರಾಬಾದ್ ನಿಂದ ಕರೆ ಬಂತು. ಪ್ರವಾಸ ಮುಗಿಸಿಕೊಂಡು ಹೈದ್ರಾಬಾದ್ ಪ್ರಾಂತ್ಯಕ್ಕೆ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು .ಆಗ ಇಯಾಸಿ ಮತ್ತು ಮೂಸಿ ನದಿಗಳಿಗೆ ಅಣೆಕಟ್ಟನ್ನು ಕಟ್ಟಿ ಹಿಮಾಯತ ಸಾಗರ ಮತ್ತು ಉಸ್ಮಾನ ಸಾಗರ
ನಿರ್ಮಿಸಿ ಹೈದ್ರಾಬಾದ್ ಮತ್ತು ಸಿಕಂದ್ರಾಬಾದ್ ನಗರಗಳಿಗೆ ನೀರೊದಗಿಸಿದರು.

* 1909 ನವೆಂಬರ್ ನಲ್ಲಿ ಮೈಸೂರ್ ಸಂಸ್ಥಾನದಿಂದ ಆಹ್ವಾನ ಬಂದಿತು.ಮುಖ್ಯ ಇಂಜಿನಿಯರ್ ಆಗಿ ನೇಮಕಗೊಂಡರು.ಇದೆ ಕಾಲದಲ್ಲಿ ರೈಲ್ವೆ ಮತ್ತು ಮರಾಮತ್ ಇಲಾಖೆಗಳಿಗೆ ಕಾರ್ಯದರ್ಶಿಗಳಾಗಿದ್ದರು.
* 1909-1912ರ ವರೆಗೂ ಮೈಸೂರು ಪ್ರಾಂತ್ಯದಲ್ಲಿ ಅನೇಕ ಕೆರೆಕಟ್ಟೆ , ಕಾಲುವೆ, ಜಲಾಶಯದ ಯೋಜನೆಗಳನ್ನು ಅಚ್ಚುಕಟ್ಟಾಗಿ ಕಟ್ಟಿದ್ದರು .ಅವರ ಈ ಕೆಲಸಗಳಿಂದ ಸಂತೃಪ್ತರಾದ ಮಹಾರಾಜರು ಅವರನ್ನು ದಿವಾನ್ ರಾಗಿ ನೇಮಿಸಿದರು.

ಅವರು ಮೈಸೂರು ಪ್ರಾಂತ್ಯಕ್ಕೆ ನೀಡಿದ ಕೊಡುಗೆ:

* ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಗೆ ತಂದರು
* ಅಸ್ಪೃಶ್ಯರ ಮತ್ತು ಹಿಂದುಳಿದವರ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆಯನ್ನು ಮಾಡಿದರು.
* ಸ್ತ್ರೀ ಶಿಕ್ಷಣಕ್ಕೆ ಗಮನ ಹರಿಸಿದರು. 1917 ಮೈಸೂರಿನ ಮಹಾರಾಣಿ ಕಾಲೇಜನ್ನು ಪ್ರಥಮ ಶ್ರೇಣಿಗೆ ಏರಿಸಲಾಯಿತು.
* 1913ರಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ವ್ಯವಸಾಯ ಶಿಕ್ಷಣ ಶಾಲೆಯನ್ನು ಸ್ಥಾಪಿಸಿದರು.

ಸಂಜೆ ಶಾಲೆಗಳು

* ಬ್ಯಾಂಕುಗಳ ಸ್ಥಾಪನೆ -ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
* ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಲ್ಲು ಬಹಳ ಮುಖ್ಯ ಪಾತ್ರ ವಹಿಸಿದರು.
* 1916 ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಕೆಲಸ ಮಾಡಲು ಪ್ರಾರಂಭಿಸಿತು.
* ಭದ್ರಾವತಿ ಕಬ್ಬಿಣ ಕಾರ್ಖಾನೆಯ ಸ್ಥಾಪನೆ
* ಕನ್ನಂಬಾಡಿ ಕಟ್ಟೆಯ ಸ್ಥಾಪನೆ
* ಕೋಲಾರದ ಚಿನ್ನದ ಗಣಿಗೆ ಮೊಟ್ಟ ಮೊದಲಬಾರಿಗೆ ವಿದ್ಯುತ್ ಪೂರೈಕೆ.
* ಗಂಧದ ಎಣ್ಣೆ ಕಾರ್ಖಾನೆ ಮತ್ತು ಸಾಬೂನು ಕಾರ್ಖಾನೆಯ ಸ್ಥಾಪನೆ
* ಬಾಳೇಹೊನ್ನೂರಿನ ಕಾಫಿ ಪ್ರಯೋಗ ಕ್ಷೇತ್ರವನ್ನು ವಿಸ್ತರಿಸಿ ಅಬಿವೃದ್ಧಿಗೊಳಿಸಿದರು.
* ಹಳ್ಳಿಗಳಲ್ಲಿ ಗ್ರಾಮಸಮಿತಿಗಳನ್ನು ರಚಿಸಿದರು.
* 1949ರಲ್ಲಿ ಗ್ರಾಮ ಔದ್ಯೋಗಿಕರಣದ ಯೋಜನೆ ತಯಾರಿಸಿ ಭಾರತ ಸರ್ಕಾರದ ಅನುಮೋದನೆಗೆ ಒಪ್ಪಿಸಿದರು.
* 1914ರಲ್ಲಿ ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ಕೂಲನ್ನು ಸ್ಥಾಪಿಸಿದರು.

ಇನ್ನೂ ಎಲ್ಲಾ ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಷ್ಟು ಕೆಲಸಗಳನ್ನು ಮಾಡಿ 102 ವರ್ಷಗಳ ಕಾಲ ಸ್ವಚ್ಚ ಸುಂದರ ಬದುಕನ್ನು ನಡೆಸಿದ ಅದ್ವೀತಿಯ ಅಪ್ರತಿಮ ದೇಶಭಕ್ತ, ಚತುರ ಇಂಜಿನಿಯರ್, ದಕ್ಷ ಆಡಳಿತಗಾರ, ಪ್ರಾಮಾಣಿಕ ಸಹೃದಯಿ, ದಯಾಮಯಿ ಅವರ 149ನೆಯ ಹುಟ್ಟು ಹಬ್ಬದ ಸಂದರ್ಭಕ್ಕಾಗಿ ಇದೊಂದು ಪುಟ್ಟ ನುಡಿ ನಮನ.

(ಗ್ರಂಥ ಋಣ: ಮೋಕ್ಷಗುಂಡಂ ವಿಶ್ವೇಶ್ವರಯ್ಯ: ಲೇ:ವಿ.ಎಸ್.ನಾರಾಯಣರಾವ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X