ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ ನ ಅವರ ಕೋಟಿರೂಪಾಯಿ ಇನ್ನಿಲ್ಲ

By Staff
|
Google Oneindia Kannada News

Venkamma wife poet KS Na
ಬೆಂಗಳೂರು, ಆ.27 : 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ..' ಎಂದು ತಮ್ಮ ಪತ್ನಿ ಕುರಿತು ಹೆಮ್ಮೆಯಿಂದ ಬರೆದುಕೊಳ್ಳುತ್ತಿದ್ದ ಪ್ರೇಮಕವಿ ದಿವಂಗತ ಕೆ ಎಸ್ ನರಸಿಂಹಸ್ವಾಮಿ ಅವರ ಧರ್ಮಪತ್ನಿ ವೆಂಕಮ್ಮ ಬುಧವಾರ (ಆ 26) ಅವರ ಬೆಂಗಳೂರು ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಅಸ್ತಮಾ ಮತ್ತು ತೀವ್ರ ರಕ್ತದ ಒತ್ತಡದಿಂದ ಬಳಲುತ್ತಿದ್ದ ಅವರು 15 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ವಾರದ ಹಿಂದೆಯಷ್ಟೆ ಮನೆಗೆ ವಾಪಸ್ ಆಗಿದ್ದರು. ವೆಂಕಮ್ಮನವರು ನಾಲ್ಕು ಗಂಡು ಮತ್ತು ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಕೆ ಎಸ್ ಎನ್ ಅವರ ಮಲ್ಲಿಗೆಯಂಥ ಕವನಗಳಿಗೆ ಅವರ ಮನದನ್ನೆಯಾಗಿದ್ದ ವೆಂಕಮ್ಮನವರೆ ಸ್ಫೂರ್ತಿಯಾಗಿದ್ದರು.

ವೆಂಕಮ್ಮ ಅವರಿಗೆ ಅಪಾರ ಓದುವ ಹವ್ಯಾಸವಿತ್ತು. ಸ್ವಾಮಿಗಳು ಬೆತ್ತದ ಕುರ್ಚಿಯ ಮೇಲೆ ಕುಳಿತು, ಬಿಳಿಯಂಗಿಯ ಮೇಲೆ ನೆಶ್ಯ ಉದುರಿಸಿಕೊಳ್ಳುತ್ತಾ ಮೂಗಿಗೆ ಏರಿಸಿಕೊಳ್ಳುತ್ತಿದ್ದರೆ, ವೆಂಕಮ್ಮ ಎಳೆ ಬಿಸಿಲಿಗೆ ಮೈಯೊಡ್ಡಿ ಆವತ್ತಿನ ಎಲ್ಲ ದಿನ ಪತ್ರಿಕೆಗಳನ್ನು ಚೂರು ಬಿಡದೆ ಓದುತ್ತಿದ್ದರು.

ಬುಧವಾರ ಮಧ್ಯಾನ್ಹ ಕೆಎಸ್ ನ ಅಭಿಮಾನಿಗಳು, ವೆಂಕಮ್ಮ ಅವರ ಕುಟುಂಬ ಬಂಧುಗಳು ಅಪಾರ ಸಂಖ್ಯೆಯಲ್ಲಿ ಬನಶಂಕರಿ ಚಿತಾಗಾರಕ್ಕೆ ಆಗಮಿಸಿ ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ಸಾಹಿತಿಗಳಾದ ಎಚ್.ಎಸ್. ವೆಂಕಟೇಶಮೂರ್ತಿ, ನಿಸಾರ್ ಅಹಮದ್, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಮುಂತಾದವವರೇನಕರು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X