ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಕಟಲಕ್ಷ್ಮಿಗೆ ಕಾಯ್ಕಿಣಿ ಮಾಡುವ ನಮಸ್ಕಾರಗಳು

By Staff
|
Google Oneindia Kannada News

Tribute to kannada columnist BS Venkatalakshmi by Jayanth Kaikini
ಮಹಿಳೆಯರ ಸ್ಥಿತಿ ಮತ್ತು ಸಾಧ್ಯತೆಗಳ ಕುರಿತು ಆಳವಾದ ಚಿಂತನೆ, ಬರವಣಿಗೆ ನಡೆಸಿದ ಗಟ್ಟಿಗಿತ್ತಿ ಬಿಎಸ್ ವೆಂಕಟಲಕ್ಷ್ಮಿ. ಇತ್ತೀಚೆಗೆ ನಿಧನರಾದ ಕನ್ನಡ ನೆಲ ಕಂಡ ಓರ್ವ ಅಪರೂಪದ ವ್ಯಕ್ತಿ ಎಂಟಿ ಬಗ್ಗೆ ಅವರನ್ನು ಹತ್ತಿರದಿಂದ ಬಲ್ಲ ಜಯಂತ್ ಬರೆಯುತ್ತಾರೆ. ಅಂದಹಾಗೆ, ಬಿಎಸ್ವಿ ಬರೆದಿರುವ ಉಯಿಲು ಅವರ ಬದುಕಿಗೆ ಅವರೇ ಬರೆದುಕೊಂಡ ಭಾಷ್ಯವಾಗಿದೆ. ಓದಿ.

* ಜಯಂತ್ ಕಾಯ್ಕಿಣಿ

ಮುಕ್ತವಾದ ಮನಸ್ಸಿನ, ಅಪರೂಪದ ನಿಲುಕುಗಳ, ಮುಲಾಜು ಗಿಲಾಜು ಇಲ್ಲದ ಸ್ಪಷ್ಟವಾದಿ ಬಿ.ಎಸ್. ವೆಂಕಟಲಕ್ಷ್ಮಿ ಜೂನ್ 26ರಂದು ಶುಕ್ರವಾರ ಹೃದಯಸ್ತಂಭನದಿಂದ ತೀರಿಕೊಂಡರು. ಅವರ ಜೀವನಸಂಗಾತಿ ಶ್ಯಾಮರಾವ್ ನನಗೆ ಫೋನ್ ಮಾಡಿದ್ದು ಮಾರನೆಯ ದಿನ ಸಂಜೆ. ಅದಾಗಲೇ ಅವರ ದನಿಯಲ್ಲಿ ಈ ಅಕಾಲಿಕ ವಿಯೋಗವನ್ನು ಭರಿಸಿಕೊಳ್ಳುತ್ತಿರುವ ಅಪಾರ ಸ್ಥೈರ್ಯವಿತ್ತು. ಜೊತೆಗೆ ಒಂದು ವಿಚಿತ್ರ ಸಂದಿಗ್ಧವಿತ್ತು. ಎಂಟಿ" (ವೆಂಕಟಲಕ್ಷ್ಮಿ, ಅವರ ಬಂಧು ಬಳಗಕ್ಕೆಲ್ಲಾ 'ಎಂಟಿ) ನಮ್ಮನ್ನು ತುಂಬಾ ಫಜೀತಿಯಲ್ಲಿ ಹಾಕಿ ಹೋಗಿದ್ದಾಳಪ್ಪ – ಸಾವಿನ ಸುದ್ದಿಯನ್ನು ಯಾರಿಗೂ ತಿಳಿಸಬಾರದು, ಪತ್ರಿಕೆಗಳಿಗೆ ಹೇಳಬಾರದು, ನನ್ನ ಅಂತಿಮದರ್ಶನಕ್ಕೆ ಅಂತ ಯಾರೂ ಮನೆಗೆ ಬರಬಾರದು – ಹೀಗೆಲ್ಲಾ ನನ್ನಿಂದ ಮಾತು ತೆಗೆದುಕೊಂಡು ಹೋಗಿದ್ದಾಳೆ. ಹೀಗಾಗಿ ನಿಮಗ್ಯಾರಿಗೂ ತಕ್ಷಣ ಹೇಳಲಿಲ್ಲ. ಅವಳಿಚ್ಛೆಯಂತೆ ಅವಳ ದೇಹವನ್ನು ವೈದ್ಯಕೀಯ ಸಂಶೋಧನೆಗೆಂದು ಕೊಟ್ಟಾಯಿತು. ಆದರೆ ಈಗವಳ ಸ್ನೇಹಿತರಿಗಾದರೂ ಅವಳು ಹೋಗಿದ್ದು ತಿಳಿಯಬೇಡವೆ? ಆ ಕಾರಣಕ್ಕಾದರೂ ಪತ್ರಿಕೆಯಲ್ಲಿ ಒಂದು ಸುದ್ದಿ ಬಂದರೆ ಸರಿಯೇನೋ ಎಂದರು. ತನ್ನ ಬಾಳಿನ ಭರತ ವಾಕ್ಯವನ್ನೂ ತಾನೇ ಸ್ಪಷ್ಟವಾಗಿ, ದಿಟ್ಟವಾಗಿ ಬರೆದುಕೊಂಡು ಹೋದ ಗಟ್ಟಿಗಿತ್ತಿ ವೆಂಕಟಲಕ್ಷ್ಮಿ.

ಕನ್ನಡದಲ್ಲಿ 90ರಿಂದೀಚೆ ಮಹಿಳಾವಾದ ಒಂದು ನಿರ್ದಿಷ್ಟ ಆವರಣವಾಗಿ ರೂಪುಗೊಳ್ಳುವ ಮುಂಚೆಯೇ 80ರ ದಶಕದಲ್ಲೇ ಈ ನಿಟ್ಟಿನಲ್ಲಿ ಅತ್ಯಂತ ತೀವ್ರವಾಗಿ, ಪುರೋಗಾಮಿಯಾಗಿ ಚಿಂತಿಸಿದವರು ಬಿ.ಎಸ್. ವೆಂಕಟಲಕ್ಷ್ಮಿ. ಜೀವನಾನುಭವಗಳಿಂದ ಹೊಮ್ಮಿದ ಜೀವನ್ಮುಖಿ ಸಂವೇದನೆಯ ಈಕೆಗೆ ಮನುಷ್ಯನನ್ನು ವಿಕಾಸಗೊಳಿಸಬಲ್ಲ ಎಲ್ಲ ಕ್ಷೇತ್ರಗಳಲ್ಲೂ ತೀವ್ರ ಆಸಕ್ತಿ. ಚಿತ್ರಕಲೆ, ಸಂಗೀತ, ರಂಗಭೂಮಿ ಮೂರೂ ಸಾಹಿತ್ಯದಷ್ಟೇ ಜೀವಕ್ಕೆ ಹತ್ತಿರ. ಅವರ ಮನೆಯೇ ಒಂದು ಪುಟ್ಟ ಕಲಾ ಗ್ಯಾಲರಿಯಂತಿದೆ. ಅಲ್ಲಿ ಎಂ.ಬಿ. ಪಾಟೀಲರ ತೈಲವರ್ಣ ಸಂಯೋಜನೆಗಳ ಜೊತೆ ಎಸ್.ಎಂ. ಪಂಡಿತರ ರಮ್ಯ ಚಿತ್ರಗಳೂ ಇವೆ. ಜೊತೆಗೇ ಅವರೇ ಚಿತ್ರಿಸಿದ ಕಲಾಕೃತಿಗಳೂ ಇವೆ. ಸಂಜೆ ಹೊತ್ತು ಬಾಲ್ಕನಿಯಲ್ಲಿ ಕೂತು ನಿಶ್ಯಬ್ದವಾಗಿ ಬಣ್ಣ ಬದಲಾಯಿಸುವ ಬಾನು ನೋಡುತ್ತಾ ಚಿತ್ರ ಬಿಡಿಸುವದರಲ್ಲಿ ತಲ್ಲೀನರಾಗಿರುತ್ತಿದ್ದರಂತೆ. ಕಲಾವಿದ ಹಡಪದ"ರ ಸರ್ವಗ್ರಾಹಿ ಸಂವೇದನೆ, ಲೇಖನ ನಿರಂಜನರ ಬದುಕು-ಬರಹ ವೆಂಕಟಲಕ್ಷ್ಮಿಯವರಿಗೆ ಮಾದರಿ.

ನಾನಂತೂ ಸಾಹಿತ್ಯ ಕಾರ್ಯಕ್ರಮಗಳಿಗಿಂತ ಜಾಸ್ತಿ ವೆಂಕಟಲಕ್ಷ್ಮಿ – ಶ್ಯಾಮರಾವ್ ದಂಪತಿಯನ್ನು ಭೇಟಿಯಾಗಿದ್ದು ಸಂಗೀತ ಕಾರ್ಯಕ್ರಮಗಳಲ್ಲಿ. ಈಚೆಗೆ ಈ ಸಾಹಿತ್ಯ ಕಾರ್ಯಕ್ರಮ, ಪುಸ್ತಕ ಬಿಡುಗಡೆ ಇವೆಲ್ಲಾ ಬೋರಾಗಿಬಿಟ್ಟಿವೆ. ಎಲ್ಲೂ ಏನೂ ಹೊಸ ವಿಚಾರದ ಒಂದು ಕಿಡೀನೂ ಸಿಗೋದಿಲ್ಲ. ಬರೇ ಪರಸ್ಪರ ಹೊಗಳುವ ನಾಟಕಗಳು, ಅವೇ ಅವೇ ಅತಿಥಿಗಳು – ಹೀಗಾಗಿ ಈಗಿತ್ಲಾಗಿ ಬರೇ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೇನೆ"ಎಂದಿದ್ದರು, ಫೋನಿನಲ್ಲಿ. ಅವರು ಫೋನು ಮಾಡುವುದು ತುಂಬಾ ಅಪರೂಪ, ಆದರೆ ಅದನ್ನೂ ನಾಳೆ ಇಷ್ಟು ಗಂಟೆಗೆ ಕಾಲ್ ಮಾಡ್ತೀನಿ – ನಿಮಗೆ ಅನುಕೂಲ ಇದ್ದರೆ" ಎಂದು ಮುಂಚಿತವಾಗಿ ತಿಳಿಸಿ ಮಾಡುವರು.

90ರ ದಶಕ ಆರಂಭಗೊಂಡಾಗ ವೆಂಕಟಲಕ್ಷ್ಮಿ ಬರೆದು ಪ್ರಕಟಿಸಿದ್ದ ಕನ್ನಡ ಲೇಖಕಿಯರ ನೆಲೆ ಬೆಲೆ" ಎಂಬ ಪುಸ್ತಕ ಅತ್ಯಂತ ವಿಶಿಷ್ಟವಾದದ್ದು. ಜನಪದ, ಹಳಗನ್ನಡದಿಂದಾರಂಭಿಸಿ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಲಿಂಗಮ್ಮ, ಗೊಗ್ಗವ್ವೆ, ಮುಕ್ತಾಯಕ್ಕ, ನೀಲಮ್ಮರಂಥ ವಚನಕಾರ್ತಿಯರನ್ನು ಒಳಗೊಂಡು, ನಂತರದ ಹೊಸಗನ್ನಡದ ನಂಜನಗೂಡು ತಿರುಮಲಾಂಬ, ಆರ್. ಕಲ್ಯಾಣಮ್ಮ, ಗಿರಿಬಾಲೆ, ಶ್ಯಾಮಲಾದೇವಿ, ಸೀತಾದೇವಿ ಪಡುಕೋಣೆ, ಕೊಡಗಿನ ಗೌರಮ್ಮ, ಬೆಳಗೆರೆ ಜಾನಕಮ್ಮರಿಂದ ಹಿಡಿದು, ವಾಣಿ, ತ್ರಿವೇಣಿ, ಎಂ.ಕೆ. ಇಂದಿರಾ, ಅನುಪಮಾ ನಿರಂಜನ, ರಾಜಲಕ್ಷ್ಮಿ ಎಂ. ರಾವ್, ವೀಣಾ ಶಾಂತೇಶ್ವರರ ತನಕ ವ್ಯಾಪಿಸಿರುವ ಅವರ ಪ್ರಖರ, ನಿಖರ ಸಂವೇದನಾಶೀಲ ಅಧ್ಯಯನ ಮೌಲಿಕವಾಗಿದೆ. ನೀಳಾದೇವಿ, ಗೀತಾ ಕುಲಕರ್ಣಿ, ಎಂ.ಕೆ. ಜಯಲಕ್ಷ್ಮಿ ರೀತಿಯ ಲೇಖಕಿಯರ ಬಗೆಗಿನ ವಿಶಿಷ್ಟ ಟಿಪ್ಪಣಿಗಳು ನಮಗೆ ಇಲ್ಲಿಯೇ ಸಿಗಬೇಕು. ಹೀಗಾಗಿ 90ರ ದಶಕದ ನಂತರ ಈಚೆಗೆ ವೈವಿದ್ಯಮಯವಾಗಿ ಹುರಿಗೊಂಡಿರುವ ಮಹಿಳಾ ಅಭಿವ್ಯಕ್ತಿಯ ಆವರಣವನ್ನು ಗ್ರಹಿಸಲು ಅತ್ಯವಶ್ಯಕವಾಗಿ ಬೇಕಾದ ಸಾಹಿತ್ಯಿಕ, ಚಾರಿತ್ರಿಕ ಪ್ರಬಲ ಪೂರ್ವಪಕ್ಷ ಈ ಪುಸ್ತಕದಲ್ಲಿದೆ. ಇದೇ ಸುಮಾರಿಗೆ ಅವರು ಬರೆದು 1994ರಲ್ಲಿ ಪ್ರಕಟಿಸಿದ ಬದುಕು, ಬವಣೆ, ಭರವಸೆ- ಮಹಿಳಾ ಲೋಕದ ಕುರಿತ ಅತ್ಯಂತ ತೀಕ್ಷ್ಣವಾದ ಮತ್ತು ವ್ಯಾಪಕವಾದ ಬರವಣಿಗೆಯಾಗಿದೆ. ಪುರುಷಪೀಡಿತಳಾಗಿ, ಪುರುಷ ರೂಪಿತಳಾಗಿ ಹೇಳ ಹೆಸರಿಲ್ಲದೆ ನವೆಯುವ, ಸವೆಯುವ ಅಗಣಿತ ಹೆಂಗಳೆಯರ ಪಾಡನ್ನು ಚೂರೂ ಭಾವವೇಶವಿಲ್ಲದೆ, ಅತ್ಯಂತ ಎಚ್ಚರಿಕೆಯಿಂದ, ಬಹುಮುಖಿ ಕಾಳಜಿಯಿಂದ ಅರಿಯುವ ಕನ್ನಡದ ತುಂಬ ಅಪರೂಪದ ಪುಸ್ತಕವಿದು. ಸೀಮೋ ದ ಬುವಾ ಅವರ ದಿ ಸೆಕೆಂಡ್ ಸೆಕ್ಸ್" ಕೃತಿಯಿಂದ ಪ್ರೇರಿತರಾದ ವೆಂಕಟಲಕ್ಷ್ಮಿ, ಈ ಪುಸ್ತಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾರೆ. ದಿ ಸೆಕೆಂಡ್ ಸೆಕ್ಸ್ ನಲ್ಲಿ ಅಡಕವಾಗಿರುವ ವಿಚಾರಗಳನ್ನು ನನ್ನದೇ ಆದ ಬಂಧ, ಭಾಷೆ, ಶೈಲಿಯಲ್ಲಿ ಒಟ್ಟುಗೂಡಿಸಿದ ನಂತರ ಮಹಿಳೆಯರ ಜೀವನದ ಬಗ್ಗೆ ಒಂದು ಗಾಢ ಚೌಕಟ್ಟು ನಿರ್ಮಾಣವಾಯಿತು ಎನ್ನಿಸಿದರೂ, ಭಾರತೀಯ ಮಹಿಳೆಯರಿಗೆ ಒದಗಿರುವ ಸಂದರ್ಭಗಳು ಸೀಮೋ ದ ಬುವಾರಂತಹ ಅತ್ಯದ್ಭುತ ಲೇಖಕಿಯ ತಿಳುವಳಿಕೆಗೂ ಮೀರಿದ್ದು ಅನ್ನಿಸುತ್ತದೆ. ಭಾರತೀಯ ಮಹಿಳೆಯರು ಎಂಥ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗಿದೆ ಎಂಬುದನ್ನು ಶೋಧಿಸುತ್ತಾ ಹೊರಟಾಗ ನನ್ನಲ್ಲಿ ಮೂಡಿದ್ದು ಹಲವಾರು ವಿಚಾರಗಳು. ಸ್ತ್ರೀಯರಿಗೆ ಎದುರಾಗುವ ಅಡೆತಡೆಗಳು ಹಾಗೂ ಅವಕಾಶಗಳನ್ನು ವಿಪುಲವಾಗಿ ಚರ್ಚಿಸುತ್ತಿರುವಾಗ, ಭಾರತೀಯ ಮಹಿಳೆಯರಿಗೆ ಒದಗಿರುವ ವಾತಾವರಣವನ್ನು ಪ್ರತ್ಯೇಕವಾಗಿ ದಾಖಲೆಗೊಳಿಸುವುದು ಸೂಕ್ತವೆನಿಸಿತು. ಇವೆಲ್ಲಾ ಹಂಬಲಗಳ ಪರಿಣಾಮವೇ ಈ ಪುಸ್ತಕ."

ವೆಂಕಟಲಕ್ಷ್ಮಿ ಅವರದು ವಿರಳ ವಿಶೇಷ ಕಥನೇತರ ದನಿ. ಇವರ ದನಿ ಆಲಿಸದೆ ಕನ್ನಡದ ಓದು ಅಪೂರ್ಣ. ಮನಸ್ಸು ಮಾಡಿದ್ದರೆ ಕಥೆ ಬರೆಯಬಹುದಾಗಿತ್ತು. ಬರೆದಿದ್ದರು ಕೂಡ. ಆದರೆ ಸತ್ಯಕ್ಕೆ ಮಸಾಲೆ ಬೆರೆಸೋದು, ಒಗ್ಗರಣೆ ಹಾಕೋದು ಯಾಕೋ ನನ್ನ ಪ್ರಕೃತಿಗೆ ಒಗ್ಗುವದಿಲ್ಲ"ಎಂದಿದ್ದರಂತೆ. ಮಲ್ಲಿಕಾರ್ಜುನ ಮನ್ಸೂರ್ ಬಗ್ಗೆ ಅವರು ಬರೆದ ಪುಸ್ತಕ ಮತ್ತು ಚಿತ್ರಕಲೆಗಾರ ಎಂ.ಬಿ. ಪಾಟೀಲರ ಬಗ್ಗೆ ಬರೆದ ಪುಸ್ತಕ ಅವರ ಸಂವೇದನೆ ಮತ್ತು ಅಭಿರುಚಿಯ ವಿಸ್ತಾರವನ್ನು ಮನಗಾಣಿಸುವಂತಿವೆ. ಬರೆದಿದ್ದು ನಾಲ್ಕೇ ಪುಸ್ತಕ, ಆದರೆ ಎಂಥ ಗಟ್ಟಿಯಾದ, ವರ್ಚಸ್ವಿಯಾದ, ಅನುರಣಿಸುವ ಧ್ವನಿ!

ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದರು. ಲಂಕೇಶರಿಗೆ ಕಪಟ, ಅಲ್ಪತನ, ಆತ್ಮವಂಚನೆ ಕಂಡರಾಗುತ್ತಿರಲಿಲ್ಲ. ವೆಂಕಟಲಕ್ಷ್ಮಿಯವರಿಗೂ ಹಾಗೇ. ಹೀಗಾಗಿ ಇಬ್ಬರ ಮನೋಧರ್ಮಗಳು ಹೊಂದಿಕೆಯಾಗಿದ್ದವು. ಆದರೆ ಒಂದು ದಿನ ಹಠಾತ್ತನೆ ಲಂಕೇಶ ಬಳಗದಿಂದ ವೆಂಕಟಲಕ್ಷ್ಮಿ ಸದ್ದಿಲ್ಲದೆ ದೂರವಾಗಿದ್ದು ಓದುಗರ ತಾತ್ಕಾಲಿಕ ಕುತೂಹಲಕ್ಕೆ ಕಾರಣವಾಯಿತು. ಆದದ್ದಿಷ್ಟೇ: ಲಂಕೇಶರ ಆತ್ಮಕತೆ ಪ್ರಕಟವಾಗಿತ್ತು. ಆಗ ವೆಂಕಟಲಕ್ಷ್ಮಿ ಬಾಗಲಕೋಟೆ ಮುಳುಗಡೆ ಪ್ರದೇಶದ ಜನರ ಬವಣೆಯ ಕುರಿತು ಆಮೂಲಾಗ್ರ ಬರವಣಿಗೆ ಮಾಡಲು ಅಲ್ಲಿಗೆ ಹೋಗಿ ಕೆಲವು ವಾರ ಅಲೆದಾಡಿಕೊಂಡಿದ್ದರು. ಪ್ರಜಾವಾಣಿಯ ಜಿ.ಎನ್. ರಂಗನಾಥ್ ರಾವ್ ಅವರು ಕೊಟ್ಟಿದ್ದ ಬರವಣಿಗೆಯ ಕೆಲಸ ಅದು. ವೆಂಕಟಲಕ್ಷ್ಮಿ ತಮ್ಮ ಪ್ರವಾಸದ ನಡುವೆಯೇ ಲಂಕೇಶರ ಆತ್ಮಕತೆಯನ್ನು ಅಲ್ಲೇ ತರಿಸಿಕೊಂಡು, ಎಂದಿನ ಉತ್ಸಾಹ, ಆರಾಧನೆ ಮತ್ತು ತಾಟಸ್ಥ್ಯದಿಂದಲೇ ಓದಿದರು. ಅವರಿಗೆ ಏನೋ ಕಸಿವಿಸಿ ಆಗಿಹೋಯಿತು. ಆತ್ಮಕತೆಯಲ್ಲಿ ಸತ್ಯವನ್ನು ಮರೆಮಾಚುವ ಅಂಶ ಇದ್ದಂತೆ ಅನಿಸಿತು. ನೇರವಾಗಿ ಫೋನ್ ಮಾಡಿ ಹೇಳಿಬಿಟ್ಟರು. ಬೇರೆಯವರ ಆತ್ಮವಂಚನೆ ಸಹಿಸದವರು ನೀವು. ಅದಕ್ಕೇ ನೀವು ನನಗೆ, ನನ್ನಂಥವರಿಗೆ ಇಷ್ಟ. ನೀವೇ ಹೀಗೆ ಆತ್ಮವೈಭವ ಮಾಡಿದರೆ ಹೇಗೆ?" ಎಂದು ಕೇಳಿದರು. ಲಂಕೇಶರಿಗೆ ಅದು ಇಷ್ಟವಾಗಲಿಲ್ಲ. ಮತ್ತೆ ಲಂಕೇಶ್ ಪತ್ರಿಕೆ ಆಫೀಸಿನ ಕಡೆ ಇವರು ಹೋಗಲಿಲ್ಲ. ಲಂಕೇಶ್ ತೀರಿಕೊಂಡಾಗ ಕೊನೆಯ ದರ್ಶನಕ್ಕೆಂದು ಹೋದರೂ ಲಂಕೇಶರ ಬಳಗಕ್ಕೆ ಸಾಂತ್ವನ ನೀಡಿ ಬಂದರು – ಹೊರತು ಅವರಿಗೆ ಅದು ಇಷ್ಟವಾಗಲಿಕ್ಕಿಲ್ಲ"ಎಂದು ಮೃತಶರೀರವನ್ನು ನೋಡಲಿಲ್ಲ.

ಕೃತಿ ವಿಮರ್ಶೆಯನ್ನು ವ್ಯಕ್ತಿ ವಿಮರ್ಶೆ" ಎಂದು ತಿಳಿದುಕೊಳ್ಳುವ ಕೆಲ ಪ್ರತಿಷ್ಠಿತರ ಬಗ್ಗೂ ಅವರು ನೊಂದುಕೊಂಡಿದ್ದರು. ಖ್ಯಾತ ಟಿ.ವಿ. ನಿರ್ದೇಶಕರೊಬ್ಬರ ಧಾರಾವಾಹಿಯ ಕುರಿತು ವೆಂಕಟಲಕ್ಷ್ಮಿ ತಮ್ಮ ನಿರ್ಭಿಡೆಯ ಅಭಿಪ್ರಾಯ ಹೇಳಿದ್ದರು. ನಂತರ ಸ್ನೇಹಿತರೊಬ್ಬರ ಮದುವೆಗೆ ಹೋದಾಗ ಬಾಗಿಲಲ್ಲಿ ಸ್ವಾಗತೋಪಚಾರ"ಕ್ಕೆ ನಿಂತಿದ್ದ ಆ ಖ್ಯಾತರು, ಇವರನ್ನು ನೋಡಿದ್ದೇ ಮುಖ ಸಿಂಡರಿಸಿ ಪಕ್ಕಕ್ಕೆ ನೋಡಿದರಂತೆ. ಅದನ್ನು ಹೇಳುವಾಗ ವೆಂಕಟಲಕ್ಷ್ಮಿ ನಿಜಕ್ಕೂ ನೊಂದಿದ್ದರು. ಅಲ್ಲಾ, ಅವರ ಸಾಕಷ್ಟು ಜನಪ್ರಿಯ ಕೃತಿಯ ಕುರಿತು ನಾನು ಮಾಡಿದ ಕೃತಿನಿಷ್ಠ ವಿಮರ್ಶೆಯನ್ನು ಅವರ ವ್ಯಕ್ತಿತ್ವಕ್ಕೆ ಹಚ್ಚಿಕೊಳ್ಳುತ್ತಾರಲ್ಲಾ – ಇವರು ಎಷ್ಟು ಆತ್ಮಮೋಹಿತರು? ಅವರ ಕಲೆಯ ನೈತಿಕತೆ ಎಲ್ಲಿದೆ?" ಎಂದು ನನ್ನೊಂದಿಗೆ ಫೋನಿನಲ್ಲಿ ಆಘಾತ ಹಂಚಿಕೊಂಡಿದ್ದರು. ಪ್ರಾಮಾಣಿಕ ಸತ್ಯಾನ್ವೇಷಣೆಯಿಂದಲೇ ಬರುವ ನಿರ್ಭಯ ಅವರದು.

ನನ್ನ ಮತ್ತು ವೆಂಕಟಲಕ್ಷ್ಮಿಯವರ ಮಮತೆಯ ನಂಟಿನಲ್ಲಿ ಹಾಯ್! ಬೆಂಗಳೂರ್"ನ ಪಾತ್ರವೂ ಇದೆ. ಏಕೆಂದರೆ ಅವರು ತಮ್ಮ ಆತ್ಮಕಥನದ ಅಂಕಣವನ್ನು ಮತ್ತು ನಾನು ನನ್ನ ಬೊಗಸೆಯಲ್ಲಿ ಮಳೆ" ಅಂಕಣವನ್ನು ಅದರಲ್ಲಿ ಒಂದೇ ಕಾಲಕ್ಕೆ ಬರೆಯುತ್ತಿದ್ದೆವು. ಅಕ್ಕಪಕ್ಕದ ಪುಟಗಳಲ್ಲೇ ಅವು ಅಚ್ಚಾಗುತ್ತಿದ್ದವು. ಒಂದೇ ಕಟ್ಟಡದಲ್ಲಿ ಅಕ್ಕಪಕ್ಕದ ಮನೆಯಲ್ಲಿ ಬಾಡಿಗೆಗಿದ್ದ ನೆರೆಯ ನಂಟು ಅದು! ನಾನು ಮುಂಬಯಿಯಿಂದ ಬೆಂಗಳೂರಿಗೆ ವಲಸೆ ಬಂದಾಗ ಅವರು ಬಾಯಿಬಿಟ್ಟು ಹೇಳದಿದ್ದರೂ ನನಗೆ ಆಗ ಅಗತ್ಯವಾಗಿ ಕಿಲೋಗಟ್ಟಲೆ ಬೇಕಿದ್ದ ಧೈರ್ಯ ಮತ್ತು ಅಭಯಗಳು ಅವರ ನಿಲುವಿನಲ್ಲಿ, ದನಿಯಲ್ಲಿ, ಸಂಕ್ಷಿಪ್ತ ಭೇಟಿಯಲ್ಲಿ ನನಗೆ ಸಿಗುತ್ತಿದ್ದವು. ಆಗಲೇ ಅವರು ಸರಕಾರಿ ಕೆಲಸದಿಂದ ಸ್ವಯಂ ನಿವೃತ್ತಿ ತೆಗೆದುಕೊಂಡು ಚಾವಡಿ"ಯನ್ನು ಶುರುಮಾಡಿದ್ದು.

ಸರ್ಕಾರಿ ಕೆಲಸದಲ್ಲಿದ್ದರೂ ಪ್ರಶಸ್ತಿ ಗಿಶಸ್ತಿ ಅವರನ್ನು ಅರಸಿಕೊಂಡು ಬಂದಿದ್ದರೂ, ಸೈಟು ಗಿಯ್ಟು ಅಂತ ತುಸುವೂ ಪ್ರಯತ್ನಶೀಲರಾಗದೆ, ಗಂಡ-ಹೆಂಡತಿ ತೆಪ್ಪಗೆ ಆಗಷ್ಟೇ ತಲೆ ಎತ್ತಿ ನಿಂತಿದ್ದ ಮುನ್ನೂರು ಮನೆಗಳ ಅಪಾರ್ಟಮೆಂಟಿನಲ್ಲಿ ಮೊದಲ ವಾಸಿ"ಗಳಾಗಿ ಮನೆ ಹೂಡಿದರು. ಕತ್ತಲಲ್ಲಿ ಬಿಕೋ ಎನ್ನುತ್ತಿದ್ದ ಆ ಅಪಾರ್ಟ್ಮೆಂಟ್ ನಲ್ಲಿ ಮೊದಲು ಬೆಳಕು ಹತ್ತಿಕೊಂಡಿದ್ದು ಇವರ ಫ್ಲಾಟಿನಲ್ಲಿ.

ಮುನ್ನುಡಿ ಗಿನ್ನುಡಿಗಳ ಹಂಗಿಲ್ಲದೆ ತನ್ನ ಪುಸ್ತಕಗಳನ್ನು ಪ್ರಕಟಿಸಿಕೊಂಡಿದ್ದ ವೆಂಕಟಲಕ್ಷ್ಮಿ, ಆಗಾಗ ಶ್ಯಾಮರಾವ್ ಗೆ ಹೇಳುತ್ತಿದ್ದ ಮಾತು ಹುಲಿ ಉಪವಾಸ ಬೀಳಬಹುದು, ಆದರೆ ಖಂಡಿತಾ ಹುಲ್ಲು ತಿನ್ನಲ್ಲ". ಅವರದು ನಿರಂತರ ವಿಕಾಸಮುಖಿ ಮನಸ್ಸು. ಹೀಗಾಗಿ ಯಾವುದೇ ಎರಕ, ಖಾನೆಗಳಲ್ಲಿ ಬೀಳದೆ ಅದು ಅಲೆಅಲೆಯಾಗಿ ಮುಂದುವರೆಯುತ್ತಿತ್ತು. ನಾನೊಮ್ಮೆ ನನಗೆ ಯಾಕೋ ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಎಂದರೆ ಅಲರ್ಜಿ. ಯಾರಾದರೂ ನಿಮ್ಮ ಕಾರ್ಡ್ ಇದ್ದರೆ ಕೊಡಿ ಸಾರ್ ಎಂದರೆ ತುಂಬಾ ಅವಮಾನ ಆದಂತೆ ಆಗ್ತದೆ. ಜನ ತಪ್ಪು ತಿಳಕೊಳ್ತಾರೆ"ಎಂದಾಗ, ಹೆಗಲು ತಟ್ಟಿ ಏನೂ ಚಿಂತೆ ಮಾಡಬೇಡಿ. ನನಗೂ ಅವೆಲ್ಲಾ ಆಗಲ್ಲ. ಹೆಚ್ಚು ಒತ್ತಾಯ ಮಾಡಿದರೆ ರೇಶನ್ ಕಾರ್ಡ್ ತೋರಿಸೋಣ" ಎಂದು ನಕ್ಕಿದ್ದರು.

ಅವರಿಗೆ ಮಹಿಳಾಪುಟ, ಮಹಿಳಾ ವಿಭಾಗ ಅಂತ ಪತ್ರಿಕೆಗಳು ನಿಗದಿ ಪುಟ ಮಾಡುವುದು ಬಿಲ್ಕುಲ್ ಆಗುತ್ತಿರಲಿಲಲ್ಲ. ಇದಿಷ್ಟೇ ಜಾಗದಲ್ಲಿ ನೀವು ಆಟ ಆಡಿ ಎಂದಂತೆ ಇದೆ ಅದು. ಅದರ ಹಿಂದೆ ಗ್ರೇಸ್ ಮಾರ್ಕ್ ಕೊಡುವಂತಹ ಪುರುಷ ಹಸ್ತವೂ ಅಸ್ಪಷ್ಟವಾಗಿ ಇದೆ. ಕಡಿಮೆ ಗುಣಮಟ್ಟ ಇದ್ದರೆ ಮಹಿಳಾಪುಟಕ್ಕೆ" ಅನ್ನುವಂತಹ ವಿಚಿತ್ರ ಧೋರಣೆ ಮೂಡುವಂತಾಗಿ ಹೋಗಿದೆ. ಮುಖ್ಯಧಾರೆಯಲ್ಲಿ ಅಭಿನ್ನವಾಗಿ ಬೆರೆತು ಹೋಗಿರುವ ಮಹಿಳೆಗೆ ಇದು ಅವಮಾನ" ಎನ್ನುತ್ತಿದ್ದರು. ಮಹಿಳೆಯರು ಆ ಪುಟಗಳನ್ನು ಮಾತ್ರ ಓದುವುದು, ಪುರುಷರು ಅದನ್ನು ಓದದಿರುವುದು ಇಂಥಾ ಅವಲಕ್ಷಣಗಳು ಹುಟ್ಟುವುದೇ ಇದರಿಂದ ಎಂದು ಅವರಿಗೆ ಸಿಟ್ಟು. ಅದಕ್ಕೇ ಇರಬೇಕು, ಲೇಖಕಿಯರ ಸಂಘ, ಮಹಿಳಾ ವೇದಿಕೆ ಇಂಥಾ ಸಂಘಟನೆಗಳ ಜೊತೆ ಅವರನ್ನು ಊಹಿಸಲೂ ಆಗದಂತೆ ಅವರು ತಮ್ಮ ಪಾಡಿಗಿದ್ದರು. ಮಹಿಳಾಪರ ಸಂಕಿರಣಗಳಲ್ಲೂ, ಚರ್ಚೆಗಳಲ್ಲೂ ಇವರನ್ನು ಯಾವ ಸಾಂಸ್ಕೃತಿಕ ಪಟುಗಳೂ ಕರೆದಿದ್ದನ್ನು ನಾನು ಕಂಡಿಲ್ಲ. ಇದು ಅವರ ವ್ಯಕ್ತಿ ವಿಶಿಷ್ಟ ಹೆಗ್ಗಳಿಕೆಯಾಗಿಯೇ ನನಗೆ ತೋರುತ್ತಿದೆ.

ನನಗೆ ನಿಜಕ್ಕೂ ಕೌತುಕ ಎನಿಸಿದ ಒಂದು ಅಂಶವೆಂದರೆ 80ರ-90ರ ಸಂಕ್ರಮಣ ಕಾಲದಲ್ಲಿ ತನ್ನ ಸಮಯಕ್ಕಿಂತ ಮುಂದೆ ನೋಡಬಲ್ಲವರಾಗಿ ಮಹಿಳೆಯರ ಸ್ಥಿತಿ ಮತ್ತು ಸಾಧ್ಯತೆಗಳ ಕುರಿತು ಆಳವಾದ ಚಿಂತನೆ, ಬರವಣಿಗೆ ನಡೆಸಿದ ಈಕೆ 2000ದ ಶಕೆ ಆರಂಭವಾದಾಗ ಒಂದು ಬಗೆಯ ಹಿನ್ನೋಟದ ಬೆಳಕಿಂಡಿಯಂತೆ ಚರ್ಚೆಗೊಂದು ಚಾವಡಿ"ತೆರೆದದ್ದು! ಕೇವಲ ಸಾಹಿತ್ಯಿಕ"ಗೊಂಡು ಜಡಗೊಳ್ಳುವ ಅಪಾಯಕ್ಕೆ ಭಯ ಪಟ್ಟ ಅವರ ಜೀವನ್ಮುಖಿ ಮನಸ್ಸು ತಾನು ಈತನಕದ ದಾರಿಯಲ್ಲಿ ಕಳೆದುಕೊಂಡಿರಬಹುದಾದ, ಅಥವಾ ಮರೆತಿರಬಹುದಾದ, ತನ್ನನ್ನು ಬೆಳೆಸಿದ ಸಂಗತಿಗಳನ್ನು ಮತ್ತೆ ಹೆಕ್ಕಿ ಹಂಚಿಕೊಳ್ಳುವ ಯತ್ನದಲ್ಲಿ ತೊಡಗಿತು. ಸಂಗೀತ, ವಿಜ್ಞಾನ, ಪರಿಸರ, ತಿಂಡಿ, ಉಡುಪು, ಭಕ್ತಿ, ಹರಿಕಥೆ, ಕಾಯಕತತ್ವ ಒಂದೇ ಎರಡೇ. ಬದುಕಿನ ವಿವಿಧ ಹೆಣಿಗೆಗಳನ್ನು ಹೆಣಿಗೆ ಬಿಚ್ಚದೆ ಅದರ ಒಟ್ಟಂದದಲ್ಲಿ ಗ್ರಹಿಸುವ ಕೆಲಸವನ್ನು ಸದ್ದಿಲ್ಲದೆ ಒಂಬತ್ತು ವರುಷ ಪ್ರತಿ ತಿಂಗಳೂ ಒಂದು ಭಕ್ತಿಯ ವ್ರತದಂತೆ ಮಾಡಿಕೊಂಡು ಬಂದರು. ತಾವೇ ಟೈಪ್ ಮಾಡಿ, ಪುಟ ಸಂಯೋಜನೆ ಮಾಡಿ, ಪ್ರೆಸ್ಸಿಗೆ ಹೋಗಿ ಮುದ್ರಿಸಿ ತಂದು ಇಷ್ಟ ಮಿತ್ರರಿಗೆ, ಬಳಗಕ್ಕೆ ಕೈಯಿಂದ ಸ್ಟಾಂಪ್ ಹಚ್ಚಿ, ವಿಳಾಸ ಬರೆದು ಅಂಚೆಗೆ ಹಾಕುವ ಸರಳ ಅಧ್ಯಾತ್ಮ ಅವರದಾಯ್ತು. ತಮ್ಮ ಪೆನ್ಶನ್ ಹಣದಲ್ಲಿ ಮುಖ್ಯ ಪಾಲನ್ನು ಅವರು ಇದಕ್ಕೆ ಮತ್ತು ಪುಸ್ತಕ ಖರೀದಿಗೆ ಮೀಸಲಿಟ್ಟಿದ್ದರು. ಅವೆನ್ಯೂ ರೋಡಿನ ಹಳೆಪುಸ್ತಕದ ಅಂಗಡಿಗಳಲ್ಲಿ ನಿಧಿ ಹುಡುಕುವವರಂತೆ ಪುಸ್ತಕ ಅರಸಿ ಕೊಳ್ಳುತ್ತಿದ್ದರು.

ಅಸು ನೀಗುವ ಮುನ್ನಾ ದಿನವೇ ಈ ತಿಂಗಳ ಚಾವಡಿ"ಯನ್ನು ಅಂಚೆಗೆ ಹಾಕಲು ಅಣಿ ಮಾಡಿ ನೀಟಾಗಿ ಚೀಲದಲ್ಲಿ ಇಟ್ಟಿದ್ದರು. ಅಂಚೆ ಕಛೇರಿಗೆ ಗಂಡಹೆಂಡತಿ ಹೋಗುವಾಗ ಚಾವಡಿ"ಯ ಪ್ರತಿಗಳಿರುವ ಚೀಲವನ್ನು ಹಠ ಮಾಡಿ ತಾವೇ ಹಿಡಿದುಕೊಂಡಿರುತ್ತಿದ್ದರಂತೆ. ಕೊಡು"ಎಂದರೆ, ನನ್ನ ಶಿಲುಬೆಯ ಭಾರ ನಾನೇ ಹೊರಬೇಕು" ಎನ್ನುತ್ತಿದ್ದರಂತೆ. ಮನಸ್ಸಿನಲ್ಲಿ ಅಪಾರವಾದ ಧೈವಭಕ್ತಿ ಇದ್ದರೂ ಪ್ರವಚನಗಳಿಗೆಲ್ಲಾ ಬರೋದಿಲ್ಲ, ಬೇಂದ್ರೆ, ಡಿವಿಜಿ, ಕುವೆಂಪು, ಶಿವರಾಮ ಕಾರಂತರಲ್ಲಿ ಸಿಗುವಂಥದ್ದು ಅಲ್ಲೆಲ್ಲಿ ಸಿಗುತ್ತೆ?"ಎನ್ನುತ್ತಿದ್ದರಂತೆ. ಅಡಿಗೆ ಕೋಣೆಯಲ್ಲಿ ಅತ್ಯಂತ ಕಡಿಮೆ ಸಮಯ ಕಳೆಯುವಂತೆ ತಮ್ಮ ದಿನಚರಿಯನ್ನು ರೂಪಿಸಿಕೊಂಡಿದ್ದರು. ಮುಂಜಾನೆ ಒಂದು ಗಂಟೆ, ಸಂಜೆ ಅರ್ಧ ಗಂಟೆ ಅಷ್ಟರಲ್ಲೇ ಮನೆವಾರ್ತೆ"ಯನ್ನು ನಿಖರವಾಗಿ ಪೂರೈಸಿ, ಉಳಿದ ಸಮಯ ಓದು ಬರಹ ಚಿತ್ರಕಲೆಯಲ್ಲಿ ಕಳೆಯುತ್ತಿದ್ದರಂತೆ. ವೀಣಾ ಸಹಸ್ರಬುದ್ಧೆ, ಬಾಂಬೆ ಜಯಶ್ರೀ ಈಚೆಗೆ ಅವರು ತುಂಬಾ ಆಲಿಸುತ್ತಿದ್ದ ಸಂಗೀತ. ಬೆಂಗಳೂರಿನಲ್ಲಿ ಸರ್ಕಾರಿ ಕೆಲಸದಲ್ಲಿದ್ದ ಆಕೆಗೆ ತೊಂದರೆ ಆಗಕೂಡದೆಂದು ಹೊರ ಊರಿನ ತಮ್ಮ ಒಳ್ಳೆ ಉದ್ಯೋಗ ತೊರೆದು ಬೆಂಗಳೂರಿಗೇ ಬಂದ ಪತಿ ಶ್ಯಾಮರಾವ್ ಗೆ ಆಕೆ ಸ್ನೇಹಿತೆ, ತತ್ವಜ್ಞಾನಿ, ಮಾರ್ಗದರ್ಶಿ ಎಲ್ಲ.

ಅವರು ದೇಹಾಂತದ ಎರಡು ತಿಂಗಳ ಮುನ್ನವೇ ಬರೆದಿಟ್ಟ ಮರಣಪತ್ರ, ಅವರ ಅಚಲ, ತಾತ್ವಿಕ, ಸಾತ್ವಿಕ, ಪುರೋಗಾಮಿ ನಿಲುವನ್ನು ಬಿಂಬಿಸುವಂತಿದೆ. ಅದರ ಕೆಲ ಅಂಶಗಳು ಹೀಗಿವೆ. ಇದನ್ನು ಶ್ಯಾಮರಾವ್ ಅತ್ಯಂತ ಘನತೆಯಿಂದ, ಸಾಮಾಜಿಕ ಅಭಿಮಾನದಿಂದ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ನನ್ನ ದೇಹದ ಅಂತಿಮ ವಿಲೇವಾರಿಗೆ ಯಾವ ಪುರೋಹಿತರೂ ಬರಬಾರದು. ನನಗೆ ಅರಿಷಿಣ ಕುಂಕುಮ ಹಚ್ಚಬಾರದು. ನನ್ನ ಮೃತ ದೇಹದ ದರ್ಶನಕ್ಕೆ ಯಾರೂ ಬರಬಾರದು. ನನ್ನ ದೇಹವನ್ನು ಮೆಡಿಕಲ್ ಕಾಲೇಜಿನ ಸಂಶೋಧನಾ ವಿಭಾಗಕ್ಕೆ, ಕಣ್ಣುಗಳನ್ನು ಕಣ್ಣಿನ ಬ್ಯಾಂಕಿಗೆ ಕೊಡಬೇಕು. ನನ್ನ ನಿಧನದ ಸುದ್ದಿಯನ್ನು ಪತ್ರಿಕೆಗೆಲ್ಲಾ ಕೊಡಬಾರದು. ನಾನು ಜೀವಿತಾವಧಿಯಲ್ಲೇ ಸಾಕಷ್ಟು ಅನ್ನವನ್ನು ತಿಂದಿರುವೆನಾದ್ದರಿಂದ ನನ್ನ ಬಾಯಲ್ಲಿ ದಯವಿಟ್ಟು ಅಕ್ಕಿಕಾಳು ಹಾಕಬಾರದು. ನಾನು ಬದುಕಿದ್ದಾಗಲೇ ಅನಾಥಾಶ್ರಮದ ಮಕ್ಕಳಿಗೆ ನಿಯಮಿತವಾಗಿ ಊಟ ಹಾಕಿರುವೆನಾದ್ದರಿಂದ ನನ್ನ ನಿಧನಾನಂತರ ನನ್ನನ್ನು ವೈಕುಂಠಕ್ಕೆ ಕಳುಹಿಸುವ ನೆಪದಲ್ಲಿ ಇನ್ಯಾರೂ ಭೂರಿಭೋಜನ ಮಾಡುವ ಅಗತ್ಯವಿಲ್ಲ. ಯಾರೋ ಸಂಬಂಧಿಕರು ಹಟ ಮಾಡಿದರು ಅಂತ, ಅಥವಾ ಯಾರಿಗಾದರೂ ಬೇಜಾರಾಗುತ್ತದೆ ಅಂತ ಪುರೋಹಿತರನ್ನು ಒಂದು ವೇಳೆ ತಂದು ವಿಧಿ ವಿಧಾನ ಮಾಡಿದರೆ ನಾನು ಖಂಡಿತಾ ಅವರೆಲ್ಲರನ್ನು ಕಾಡು"ತ್ತೇನೆ!"

ಇದು ಜೀವಂತ, ವರ್ತಮಾನದ ಮನಸ್ಸು. ಅದು ಅವರ ಬರವಣಿಗೆಯಲ್ಲಿ ಜಾಗೃತವಾಗಿದೆ. ಅವರ ಚಾವಡಿ"ಯ ಬರಹಗಳು, ಅವರ ಆತ್ಮಕಥನಾತ್ಮಕ ಅಂಕಣಗಳು ಪುಸ್ತಕ ರೂಪದಲ್ಲಿ ಬರಬೇಕು. ಈಗ ಮಾರುಕಟ್ಟೆಯಲ್ಲಿ ಇಲ್ಲದ ಅವರ ನಾಲ್ಕೂ ಪುಸ್ತಕಗಳು ಪುನರ್ ಮುದ್ರಣಗೊಳ್ಳಬೇಕು. ಸೆಮಿನಾರು, ಸ್ಕೀಮು, ಅನುದಾನ, ಪ್ರಶಸ್ತಿ, ಫಲಕಗಳ ಸಾಂಸ್ಥಿಕ" ರೂಪದಲ್ಲಿ ಸ್ಥಾವರಗೊಂಡು ಶಿಥಿಲವಾಗುತ್ತಿರುವ ಚಿಂತನಶೀಲತೆ, ಇಂಥ ತೀವ್ರ ಮನಸ್ಸುಗಳ ಸಂಪರ್ಕದಿಂದ ಜಂಗಮಗೊಳ್ಳಬೇಕು, ಮುಕ್ತಗೊಳ್ಳಬೇಕು, ಮಾನವೀಯಗೊಳ್ಳಬೇಕು. ಆಗಲೇ, ತಿರುಪತಿ ತಿಮ್ಮಪ್ಪನಿಗೆ 52 ಕೋಟಿ ರೂಪಾಯಿ ಕಿರೀಟ ತೊಡಿಸುವ ಜನನಾಯಕರಿಂದ ನಾಳೆಯ ಲೋಕ ಬಚಾವಾಗಬಲ್ಲದು.

ಎಂಟಿ ಕಾಡು"ತಿರಲಿ ನಮ್ಮನ್ನು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X