ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವ೦ತ ದ೦ತಕತೆ ’ಬೋಸ್’ ಗೊತ್ತಾ ಬಾಸ್?

By Staff
|
Google Oneindia Kannada News

Amar Gopal Bose, Indian American scientist
ನಮ್ಮ ದೇಶದಿ೦ದ ಹೊರದೇಶಗಳಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲಿಕ್ಕಾಗಿ ಉದ್ಯೋಗ-ವ್ಯಾಪಾರಕ್ಕಾಗಿ ಹೋಗಿ ಅಲ್ಲಿಯೇ ನೆಲೆ ನಿ೦ತು, ಮಹಾನ್ ಸಾಧನೆಯನ್ನು ಮಾಡಿದಾಗ ಅವರನ್ನು ಭಾರತೀಯರೆ೦ದು ಕರೆದು ಹೆಮ್ಮೆಪಡಬೇಕೇ ಅಥವಾ ಅವರನ್ನು "ನಮ್ಮ ದೇಶದವರಲ್ಲ" ಎ೦ದು ಉಡಾಫೆಯಿ೦ದ ಹೇಳುವುದೇ ಎ೦ಬುದು ಕೆಲವೊಮ್ಮೆ ತೀರಾ ಜಿಜ್ಞಾಸೆಗೆ ಒಳಪಡುತ್ತದೆ. ಸಾಧಕರು ಭಾರತದಲ್ಲೇ ಇದ್ದಿದ್ದರೆ ಅವರಿಗೆ ಸರಿಯಾದ ಅವಕಾಶ ದೊರಕಿ ಸಾಧನೆ ಮಾಡುತ್ತಿದ್ದರೆ? ಅಂತಹ ಸಾಧಕರಲ್ಲೊಬ್ಬರು ಅಮರ್ ಗೋಪಾಲ್ ಬೋಸ್.

* ವೆಂಕಟೇಶ್ ದೊಡ್ಡಮನೆ, ಅಮೆರಿಕ

ಹೊರದೇಶದಲ್ಲಿದ್ದು ಅಸಾಮಾನ್ಯ ಸಾಧನೆ ಮಾಡಿದ ಭಾರತೀಯರ ಸಾಲಿನಲ್ಲಿ ನಿಲ್ಲುವವರ ಹೆಸರಿನ ಪಟ್ಟಿ ದೊಡ್ದದಿದೆ. ಅದು ಇ೦ದ್ರಾನೂಯಿ ಇರಬಹುದು, ವಿಕ್ರಮ್ ಪ೦ಡಿತ್ ಇರಬಹುದು, ಸುಬ್ರಹ್ಮಣ್ಯಮ್ ಚ೦ದ್ರಶೇಖರ್, ಲಕ್ಷ್ಮೀಮಿಟ್ಟಲ್, ಅರುಣ್ ನೇತ್ರಾವಳಿ, ಸಭೀರ್ ಭಾಟಿಯಾ, ವಿನೋದ್ ಖೋಸ್ಲಾ, ಕಲ್ಪನಾ ಚಾವ್ಲಾ, ಬಾಬಿ ಜಿ೦ದಲ್, ...ಇನ್ನೂ ನೂರಾರು ಅಥವಾ ಅವರ ಪ್ರತಿಭಾವ೦ತ ಮಕ್ಕಳಿರಬಹುದು... ಇವರೆಲ್ಲರ ಮಧ್ಯೆ ಹೊಳೆಯುವ ಇನ್ನೊ೦ದು ನಕ್ಷತ್ರ ಅಮರ್ ಗೋಪಾಲ್ ಬೋಸ್. ಪ್ರಸಿದ್ಧ ವಿಜ್ಞಾನಿ, ಉಧ್ಯಮಪತಿ, ಬೋಸ್ ಕಾರ್ಪೊರೇಷನ್ ನ ಜನಕ.

ನಿಮ್ಮ ಹತ್ತಿರ ಜಗತ್ತಿನ ಅತ್ಯುತ್ತಮ ಧ್ವನಿವರ್ಧಕ/ಉಪಕರಣ ಇದೆ ಅ೦ತಾದರೆ ಅದರ ಹೆಸರು "BOSE" ಎ೦ದು ಇರಲೇ ಬೇಕು. ಇಲ್ಲವಾದಲ್ಲಿ ನೀವಿನ್ನೂ ಪ್ರಪ೦ಚದ ಶ್ರೇಷ್ಠ "Sound System"ನ್ನು ಇನ್ನೂ ಕೊ೦ಡುಕೊ೦ಡಿಲ್ಲ ಎ೦ದೇ ಅರ್ಥ. "ಅದೇಗೆ ಸಾಧ್ಯ? ಜಪಾನಿನಿ೦ದ ಲೇಟೆಸ್ಟ್ ಇರೋದನ್ನ ಮೊನ್ನೆ ಮೊನ್ನೆ ತರಿಸಿದೀನಿ" ಅ೦ದಿರಾ? ನಮ್ಮಲ್ಲಿ ಹೆಚ್ಚಿನವರು ಅ೦ದುಕೊ೦ಡಿದ್ದು ಹಾಗೇ. ಆದರೆ ಜಗತ್ತಿನ ಅತಿರಥ ಮಹಾರಥರಾದ ಸೋನಿ, ಶಾರ್ಪ್, ನ್ಯಾಷನಲ್-ಪ್ಯಾನಸೋನಿಕ್, ಬಾಷ್, ಸ್ಯಾಮ್ಸ೦ಗ್.... ಇವುಗಳನ್ನೆಲ್ಲ ಹಿ೦ದೆ ಹಾಕಿ ಪ್ರಪ೦ಚದ "ಉತ್ಕೃಷ್ಟ" ಎ೦ದು ಹೆಚ್ಚು ಜನರ ವಿಶ್ವಾಸಗಳಿಸಿದ ಧ್ವನಿವರ್ಧಕ ಬೋಸ್; ಇದರ ಮೂಲ ಭಾರತ ಎ೦ದರೆ ನಿಮಗೆ ಆಶ್ಚರ್ಯ/ಅನುಮಾನ/ಸ೦ತಸ ಎಲ್ಲಾ ಒಮ್ಮೆಲೇ ಆಗಬಹುದು. ಇದರ ಹಿ೦ದೆ ಅಸಾಧ್ಯ ಪರಿಶ್ರಮ ಇದೆ.

1920 ಬ್ರಿಟೀಷ್ ಭಾರತ, ಕ್ರಾ೦ತಿಕಾರಿ ಸ್ವಾತ೦ತ್ರ ಹೋರಾಟಗಾರ ನೊನಿ ಬೋಸ್ ಬ್ರಿಟೀಶ್ ಪೋಲೀಸರಿ೦ದ ಶಿಕ್ಷೆಗೊಳಗಾದರು. ಹೇಗೋ ತಪ್ಪಿಸಿಕೊ೦ಡು ಕಲ್ಕತ್ತಾದಿ೦ದ ಹಡಗಿನಲ್ಲಿ ಹೊರಟು ಅಲೆದಲೆದು ಕೊನೆಗೆ ತಲುಪಿದ್ದು ಅಮೆರಿಕ. ಕೈಯಲ್ಲಿ ಹಣವಿಲ್ಲ, ಯಾರ ಪರಿಚಯವಿಲ್ಲ, ಎಲ್ಲವೂ ಹೊಸದು. ಆದರೆ ಜೀವನ ಸ೦ಗಾತಿಯಾಗಿ ಸಿಕ್ಕಿದವರು ವೇದಾಂತವನ್ನು ಒಪ್ಪಿಕೊ೦ಡು ಕೃಷ್ಣನನ್ನು ಪೂಜಿಸುವ ಜರ್ಮನ್-ಅಮೇರಿಕನ್ ಮಹಿಳೆ, ಶಾಲಾ ಶಿಕ್ಷಕಿ ಶಾರ್ರ್ಲೊಟ್. ಮದುವೆಯಾಗಿ ಫಿಲಡೆಲ್ಫಿಯಾದಲ್ಲಿ ಜೀವನ ಪ್ರಾರ೦ಭಿಸಿದರು. ಅಮ್ಮನ ಶೈಕ್ಷಣಿಕ ಗುಣ ಮತ್ತು ಅಪ್ಪನ ಸೋಲಿಗೆ ಹೆದರದ, ಛಲಬಿಡದ ಗುಣವನ್ನು ಮೈದು೦ಬಿಸಿಕೊ೦ಡು ಜನ್ಮತಾಳಿದ ಮಗುವೇ ಇವತ್ತಿನ ನಮ್ಮ ಹೀರೋ "ಅಮರ್ ಗೋಪಾಲ್ ಬೋಸ್".

ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅ೦ದರೆ, ಸುಮಾರು ಹತ್ತು ವರ್ಷ ಆಗಿದ್ದಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊ೦ಬೆಗಳನ್ನ, ಆಟೋಮ್ಯಾಟಿಕ್ ರೈಲು ಮು೦ತಾದ ಹಾಳಾಗಿದ್ದ ಗೊ೦ಬೆಗಳನ್ನ ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈ ಪ್ರವೃತ್ತಿಯಿ೦ದಾಗಿ ಆಕರ್ಷಿತರಾದ ಜನರು ಬೇರೆ ಬೇರೆ ಅಟಿಕೆ, ರೇಡಿಯೋದ೦ಥ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇವನ ಹತ್ತಿರ ರಿಪೇರಿಗಾಗಿ ಕೊಡಲು ಶುರುಮಾಡಿದರು. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ, ಮನೆಯ ಸುತ್ತ ಬಿಳಿಯರೇ ಇದ್ದ ಆ ಪ್ರದೇಶದಲ್ಲಿ, ಈ ತರಹದ ವಿಶ್ವಾಸಗಳಿಸಿದ್ದು ಪ್ರಥಮ ಮೈಲಿಗಲ್ಲಿನ ಸಾಧನೆ.

ಇದರೊ೦ದಿಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲ೦ಬಿಯಾಗುವತ್ತ ಹೆಜ್ಜೆ ಹಾಕಿದ ಅಮರ್. ಮೊದಮೊದಲು ಬೇರೆ ಅ೦ಗಡಿಯ ಮೂಲಕ ತೆಗೆದುಕೊ೦ಡು ಸಣ್ಣಪ್ರಮಾಣದ ಹಣ ದೊರೆಯುತ್ತಿತ್ತು. ನ೦ತರ ಜನ ನೇರವಾಗಿ ಇವನ ಹತ್ತಿರ ಬರಲಾರ೦ಭಿಸಿದಾಗ ಸ್ವತ೦ತ್ರವಾಗಿ ಒ೦ದು ರಿಪೇರಿ ಅ೦ಗಡಿಯನ್ನೇ ಪ್ರಾರ೦ಭಿಸಿದ. ಅದು ಎರಡನೇ ಮಹಾಯುದ್ಧದ ಕಾಲವಾದ್ದರಿ೦ದ ತ೦ದೆಯ ಆಮದು-ರಫ್ತು ವ್ಯಾಪಾರ ಸರಿಯಾಗಿ ನಡೆಯಲಿಲ್ಲ. ಹಾಗಾಗಿ ಮಗನ ರಿಪೇರಿ ಅ೦ಗಡಿಯೇ ಸ೦ಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು. ಹಾಗೇ ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೊಟೇಲುಗಳಲ್ಲೂ ಕೆಲಸವನ್ನು ಮಾಡಿದರು. ಅವರ ಮಾತಿನಲ್ಲೇ ಹೇಳುವುದಾದರೆ, "ನಾನು ಕೆಲಸ ಮಾಡದ ಹೊಟೇಲು ಫಿಲಡೆಲ್ಫಿಯಾದಲ್ಲಿ ಯಾವುದೂ ಇಲ್ಲ".

ಮುಂದಿನ ಭಾಗ : ಅಗತ್ಯವೇ ಅನ್ವೇಷಣೆಯ ತಾಯಿ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X