ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ಕಟ ಕನ್ನಡಾಭಿಮಾನಿ ವೀಣೆ ರಾಜಾರಾಯರು

By Staff
|
Google Oneindia Kannada News

Veena Raja Rao
ಸುಪ್ರಸಿದ್ದ ಮೈಸೂರು ಸಂಗೀತ ಪರಂಪರೆಗೆ ಸೇರಿದ ವೀಣೆ ರಾಜಾರಾಯರು (ಮಾರ್ಚ್ 26, 1909 - ನವೆಂಬರ್ 28, 1979) ಪ್ರಮುಖ ಪ್ರತಿಭೆಯ ಕಲಾವಿದರು. ಈ ಗುರುವಾರ ಮಾರ್ಚ್ 26ಕ್ಕೆ ಒಂದು ನೂರು ವರ್ಷಗಳ ಹಿಂದೆ ಮೈಸೂರಿನಲ್ಲಿ ಜನಿಸಿದ ರಾಜಾರಾಯರು ತಮ್ಮ ಪೂರ್ವಜರಂತೆ ವೈಣಿಕ, ಗಾಯಕ, ವಾಗ್ಗೇಯಕಾರರಾಗಿ ಬೆಳಗಿದರು.

ತಮ್ಮ ತಂದೆ ಆಸ್ಥಾನ ವಿದ್ವಾನ್ ಭೈರವಿ ಲಕ್ಶ್ಮಿನಾರಣಪ್ಪನವರಲ್ಲಿ ಶಿಷ್ಯವೃತ್ತಿ ಮಾಡಿ ಪಳಗಿದ ರಾಯರು, ತಾರುಣ್ಯದಲ್ಲೆ ತಮ್ಮ ನೆಚ್ಚಿನ ಮೈಸೂರು ವಾಸುದೇವಾಚಾರ್ಯರ ಒಡನೆ ವಿನಿಕೆ ಮಾಡುವಷ್ಟು ಬೆಳೆದಿದ್ದರು! ವೀಣಾವಾದನ, ಗಾಯನ, ಸಂಗೀತ ಶಿಕ್ಷಣ, ಸಂಗೀತ ಶಾಸ್ತ್ರ, ರಂಗಭೂಮಿ, ಗಮಕ ಕಲೆ, ಭಾಷಣ ಕಲೆಗಳಲ್ಲಿ ಬೆಳಗಿದ ರಾಯರ ಪ್ರತಿಭೆ, ವಾಗ್ಗೇಯಕಾರರಾಗಿಯೂ ಮಿಂಚಿತ್ತು. ವರ್ಣ, ಸ್ವರಜತಿ, ಕೃತಿಗಳು ಮತ್ತು ತಿಲ್ಲಾನಗಳನ್ನೂ ಕೂಡ ರಾಯರು ರಚಿಸಿದ್ದಾರೆ.

ರಾಜಾರಾಯರು ಉತ್ಕಟ ಕನ್ನಡಾಭಿಮಾನಿಯಾಗಿದ್ದರು. ನೂರಾರು ಹರಿದಾಸರ ಪದಗಳು ಮತ್ತು ಶಿವಶರಣರ ವಚನಗಳಿಗೆ ಸ್ವರಪ್ರಸ್ತಾರ ಹಾಕಿ "ಕನ್ನಡ ಸಂಗೀತ"ವನ್ನು ಪ್ರತಿಪಾದಿಸಿದವರು ರಾಯರು. ಕನ್ನಡದಲ್ಲಿ ಸಂಗೀತ ಶಾಸ್ತ್ರವನ್ನು ಕುರಿತ ಪುಸ್ತಕಗಳು ಅಲಭ್ಯವಾಗಿದ್ದ ಕಾಲದಲ್ಲಿ ತಿಳಿಯಾದ ಕನ್ನಡದಲ್ಲಿ ಸಂಗೀತ ಶಾಸ್ತ್ರ ಗ್ರಂಥಗಳನ್ನು ಬರೆದು, ಪ್ರಕಟಿಸಿದರು.

ಮೇಲೆ ಹೇಳಿದ ಈ ಎರಡು ಕೊಡುಗೆಗಳು ಕನ್ನಡ ಸಂಗೀತದ ಇತಿಹಾಸದಲ್ಲಿ ಸ್ಮರಣೀಯ ದಾಖಲೆಗಳಾಗಿವೆ!

ಕರ್ನಾಟಕ ಗಾನ ಕಲಾ ಪರಿಷತ್ ಹಾಗೂ ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ನಡೆಸಿದ ಎರಡು ರಾಜ್ಯಮಟ್ಟದ ಸಂಗೀತ ಸಮ್ಮೇಳನಗಳಿಗೆ ವೀಣೆ ರಾಜಾರಾಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಮತ್ತು ತಾವು ಸ್ಥಾಪಿಸಿದ ಶ್ರೀನಿವಾಸ ಸಂಗೀತ ಕಲಾ ಶಾಲೆಯಲ್ಲಿ ನೂರಾರು ಮಂದಿಗೆ ಸಂಗೀತ ಶಿಕ್ಷಣ ನೀಡಿದ ರಾಜಾರಾಯರು ಪ್ರಾತ:ಸ್ಮರಣಿಯರಾಗಿದ್ದಾರೆ.

ಈ ವರ್ಷ ರಾಜಾರಾಯರ ಜನ್ಮ ಶತಮಾನೋತ್ಸವದ ಆಚರಣೆ ಯೋಜಿಸಲಾಗಿದೆ. ಅದಕ್ಕಾಗಿ ಗಾನಕಲಾ ಭೂಷಣ ರಾಜಾರಾವ್ ಫೌಂಡೇಶನ್ ಶುರು ಆಗಿದೆ. ಈ ತಿಂಗಳ 28ರಂದು ಡೆಟ್ರಾಯಿಟ್ ನಲ್ಲಿ ವಿದುಷಿ ವೀಣಾ ಕಿನ್ಹಾಲ್ (ರಾಜಾರಾಯರ ಪುತ್ರಿ) ಅವರ ಕಚೇರಿ ನಡೆಯಲಿದೆ. ಜುಲೈ 4, 5ರಂದು ಬೆಂಗಳೂರಿನಲ್ಲಿ ಶನಮಾನೋತ್ಸವ ಆಚರಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಸಿದ್ದತೆಗಳು ಭರದಿಂದ ನಡೆಯುತ್ತಿವೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಶ್ರೀನಿವಾಸ ರಾಜಾರಾವ್
ಈಮೈಲ್ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X