• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಲಬರ್ಗಾದಲ್ಲೊಬ್ಬ 'ಗಾಂಧಿ' ವೆಂಕಟೇಶ ಗುರುನಾಯಕ

By Staff
|

ಕುಷ್ಟರೋಗಿಗಳ ಮಕ್ಕಳು ಮತ್ತು ಅನಾಥ ಮಕ್ಕಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವೆಂಕಟೇಶ್ ಗುರುನಾಯಕ ಅವರ ಹುಮ್ಮಸ್ಸು, ಜೀವನೋತ್ಸಾಹ, ಕಾರ್ಯಪರತೆ ಮತ್ತು ಸೇವಾಮನೋಭಾವ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾದುದು. ಎಲೆಮರೆಯ ಕಾಯಿಯಂತೆ ಸೇವೆಯಲ್ಲಿ ನಿರತರಾಗಿರುವ ಅವರಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಗೌರವಿಸಿತು. ಗುರುನಾಯಕರ ನಿಷ್ಕಲ್ಮಶ ಸೇವೆ ಇತರರಿಗೂ ಪ್ರೇರಣೆಯಾದರೆ ಅವರ ನಿಸ್ಪೃಹ ಸೇವೆ ಸಾರ್ಥಕವಾದಂತೆ.

* ವಸಂತ ಕುಲಕರ್ಣಿ, ಸಿಂಗಪುರ

ಪಬ್ ಹೊಡೆತ, ಮುತಾಲಿಕ್‌ರ ಗುಡುಗು, ರೇಣುಕಾರ ಗರ್ಜನೆ, "ಮುಂದುವರೆದ ಸಡಿಲು ಹೆಣ್ಣು"ಗಳ ನಸುಗೆಂಪು ಒಳ ಉಡುಪುಗಳ ದಾನ ಇತ್ಯಾದಿ ಇತ್ಯಾದಿ ಮಹತ್ವದ ಸುದ್ದಿಗಳ ಮಧ್ಯೆ, ಇನ್ನೊಂದು ಘಟನೆ ಇತ್ತೀಚೆಗೆ ಸದ್ದಿಲ್ಲದೇ ನಡೆದು ಹೋಯಿತು. ಅದೆಂದರೆ, ಇದೇ ಫೆಬ್ರವರಿ 4ರಂದು, ಮಕ್ಕಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕನ್ನಡಿಗರೊಬ್ಬರಿಗೆ ನಮ್ಮ ಕೇಂದ್ರ ಸರಕಾರ "National Award for Child Welfare"ನ್ನು ನೀಡಿ ಗೌರವಿಸಿದೆ. ಈ ಮಹನೀಯರೇ ವೆಂಕಟೇಶ ಗುರುನಾಯಕ.

ಬಿಸಿಲು ನಾಡಾದ ಗುಲ್ಬರ್ಗಾದಲ್ಲಿ ಕುಷ್ಟರೋಗ ಪೀಡಿತ ಜನರ ಮಕ್ಕಳ ಬಾಳಿಗೆ ತಂಪನ್ನೀಯುವ ಕೆಲಸವನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ಮಾಡುತ್ತಿರುವ ಹಿರಿಯ ಜೀವ ವೆಂಕಟೇಶ ಗುರುನಾಯಕ. "ಗುಲ್ಬರ್ಗಾದ ಗಾಂಧಿ" ಎಂದು ಕರೆಯಲ್ಪಡುವ ವೆಂಕಟೇಶ ಗುರುನಾಯಕರು, 1985ರಲ್ಲಿ ಗುಲ್ಬರ್ಗಾದ ಹತ್ತಿರದ ಪ್ರಸಿದ್ಧ ಯಾತ್ರಸ್ಥಳವಾದ ಶ್ರೀದೇವಲ ಗಾಣಗಾಪುರದಲ್ಲಿ ಶ್ರೀ ದತ್ತ ಬಾಲ ಸೇವಾಶ್ರಮವನ್ನು ಕುಷ್ಟರೋಗ ಪೀಡಿತ ಜನರ ಮಕ್ಕಳ ಕಲ್ಯಾಣಕ್ಕಾಗಿ ಸ್ಥಾಪಿಸಿದರು.

ಕುಷ್ಟರೋಗ ತುಂಬಾ ಪ್ರಾಚೀನವಾದುದು. ಮೈಕೊಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಹರಡುವ ಈ ರೋಗದ ಪರಿಣಾಮಗಳು ಭೀಕರ. ಚರ್ಮ, ಕೈ ಕಾಲುಗಳು, ಮುಖ ಮತ್ತು ನರಗಳಿಗೆ ಶಾಶ್ವತ ಹಾನಿಯುಂಟು ಮಾಡುವ ಈ ರೋಗ ಹಿಂದೊಮ್ಮೆ ಮನುಕುಲದ ಪ್ರಬಲ ವೈರಿಯಾಗಿತ್ತು. ಈಗದರ ದಾಳಿಯ ಪ್ರಖರತೆ ಕಡಿಮೆಯಾಗಿದ್ದರೂ ಭಾರತವನ್ನು ಒಳಗೊಂಡು ದಕ್ಷಿಣ ಏಶಿಯಾದಲ್ಲಿ ಈಗಲೂ ಈ ರೋಗ ಪ್ರಸರಣ, ಉಳಿದ ದೇಶಗಳಿಗಿಂತ ಅಧಿಕವಾಗಿದ್ದು, ಅನೇಕರನ್ನು ತಗಲುತ್ತಿದೆ.

ಸಾಂಕ್ರಾಮಿಕ ರೋಗವಾದದ್ದರಿಂದ, ಹಿಂದೆ ಈ ರೋಗ ತಗುಲಿದ ಜನರನ್ನು ಊರಿನಿಂದ ಹೊರಗಿಡಲಾಗುತ್ತಿತ್ತು. ಅಲ್ಲದೇ ಈ ರೋಗದ ಬಗ್ಗೆ ಅನೇಕ ಮೂಢ ನಂಬಿಕೆಗಳು ಕೂಡ ಬೆಳೆದು, ಈ ರೋಗ ತಗುಲಿದ ಜನ ಮತ್ತು ಅವರ ಕುಟುಂಬದವರು ಕಳಂಕಿತಗೊಂಡು ಸಮಾಜದ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದರು. ದುರದೃಷ್ಟವಶಾತ್, ಈ ತಾರತಮ್ಯ ದೇಶದ ಅನೇಕ ಭಾಗಗಳಲ್ಲಿ ಇಂದಿಗೂ ಮುಂದುವರೆದಿದೆ. ಅನೇಕ ಕುಷ್ಟರೋಗಿಗಳು ಇಂದಿಗೂ ಸಮಾಜದ ತಿರಸ್ಕಾರದಿಂದ ನರಳಿ, ಬದುಕಲು ಭಿಕ್ಷೆಯನ್ನು ಅವಲಂಬಿಸಿದ್ದಾರೆ. ಅವರ ಮಕ್ಕಳು, ವಿದ್ಯೆ ಮತ್ತು ಸರಿಯಾದ ಸಂಸ್ಕಾರಗಳಿಲ್ಲದೇ ಸಮಾಜ ಕಂಟಕರಾಗುವ ಸಂಭವ ಇಂದಿಗೂ ಇದೆ. ಹಿಂದೆ ಗಾಂಧಿ, ಬಾಬಾ ಆಮ್ಟೆ ಅವರಂತಹ ಅನೇಕ ಮಹಾತ್ಮರು ಆಶ್ರಮಗಳನ್ನು ಸ್ಥಾಪಿಸಿ ಈ ರೋಗಿಗಳ ಏಳಿಗೆಗಾಗಿ ಶ್ರಮಿಸಿದ್ದರು. ಈಗಲೂ ಪ್ರಕಾಶ ಆಮ್ಟೆಯವರಂತಹ ಕೆಲವು ಮಹನೀಯರು ತಮ್ಮ ಜೀವನವನ್ನು ಈ ಕೆಲಸಕ್ಕಾಗಿ ಮುಡಿಪಾಗಿಟ್ಟಿದ್ದಾರೆ.

ನಿಷ್ಕಲ್ಮಶ ಸೇವೆ : ವೆಂಕಟೇಶ ಗುರುನಾಯಕರು ಕುಷ್ಟರೋಗಿಗಳ ಮಕ್ಕಳನ್ನು ಬೀದಿಯ ಮಕ್ಕಳನ್ನಾಗಲು ಬಿಡದೇ ಅವರಿಗೆ ಸರಿಯಾದ ಶಿಕ್ಷಣವನ್ನು ಒದಗಿಸಿ ಸಮಾಜಕ್ಕೆ ಉಪಯುಕ್ತರಾಗಿ ಬೆಳೆಯುವಂತೆ ನೋಡಿಕೊಳ್ಳುವದರ ಅವಶ್ಯಕತೆಯನ್ನು ಗುರುತಿಸಿದರು. ಅಂತೆಯೇ ಪ್ರಾರಂಭವಾಯಿತು ಅವರ ಶ್ರೀ ದತ್ತ ಬಾಲ ಸೇವಾಶ್ರಮ. ಆರಂಭದಲ್ಲಿ ಈ ಸಂಸ್ಥೆಗೆ ತಮ್ಮ ಮಕ್ಕಳನ್ನೊಪ್ಪಿಸುವಂತೆ ಕುಷ್ಟರೋಗಿಗಳ ಮನವೊಲಿಸುವದು ಕಷ್ಟದ ಕೆಲಸವಾಗಿತ್ತು. ಆದರೂ ಅವರ ಪ್ರಯತ್ನದ ಫಲವಾಗಿ ಎಂಟು ಮಕ್ಕಳನ್ನೊಡಗೂಡಿ, ಒಂದು ಬಾಡಿಗೆ ಮನೆಯಲ್ಲಿ ಆಶ್ರಮ ಆರಂಭವಾಯಿತು.

ಕ್ರಮೇಣ ಅವರ ನಿಸ್ಪೃಹ ಸೇವೆಯಿಂದ ಪ್ರಭಾವಿತರಾಗಿ, ಅನೇಕ ಕುಷ್ಟರೋಗಿಗಳು ತಮ್ಮ ಮಕ್ಕಳನ್ನು ತಾವೇ ಅಲ್ಲಿಗೆ ತಂದು ಬಿಡುವಂತಾಯಿತು. ಅವರ ನಿರಂತರ ಮತ್ತು ನಿಸ್ವಾರ್ಥ ಸೇವೆಯಿಂದ ಪ್ರಭಾವಿತರಾದ ಅನೇಕ ಜನ ಈ ಆಶ್ರಮಕ್ಕೆ ತಮ್ಮ ಕಾಣಿಕೆಗಳನ್ನು ಕೊಡುತ್ತಲಿದ್ದಾರೆ. ಈ ದಾತರ ಸಹಾಯದಿಂದ ಈ ಸಂಸ್ಥೆ ಇದೀಗ ಬೆಳೆದು ತನ್ನದೇ ಆದ ಎರಡು ಎಕರೆ ಜಾಗದಲ್ಲಿ ಒಂದು ಕಟ್ಟಡವನ್ನು ಹೊಂದಿದೆ. ಮಧ್ಯಮ ವರ್ಗದ ಮಕ್ಕಳಿಗೆ ಏನೇನೂ ಸೌಲಭ್ಯ ಬೇಕೋ ಅದನ್ನು ಒದಗಿಸುತ್ತಿದ್ದಾರೆ. ಅಲ್ಲಿ ಈಗ ಎಂಬತ್ತಕ್ಕೂ ಹೆಚ್ಚು ಮಕ್ಕಳು ವಾಸವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ 35 ಜನ ಹುಡುಗಿಯರು. ಈ ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಊಟ ಮತ್ತು ಔಷಧಗಳನ್ನು ಒದಗಿಸಿ ಒಳ್ಳೆಯ ನಾಗರಿಕ ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವ ಕಾಯಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ವೆಂಕಟೇಶ ಗುರುನಾಯಕರು. ಇದುವರೆಗೂ ಈ ಆಶ್ರಮದ ಸುಮಾರು 35 ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿ ಸ್ವಾವಲಂಬಿಗಳಾಗಿದ್ದಾರೆ. ಇವರಲ್ಲಿ ಕೆಲವರು ಪದವಿಗಳನ್ನು ಪಡೆದು ನೌಕರಿ ಮಾಡುತ್ತಿದ್ದಾರೆ, ಮತ್ತೆ ಕೆಲವರು ಸ್ವಯೋದ್ಯೋಗಿಗಳಾಗಿದ್ದಾರೆ. ಈ ಎಲ್ಲ ಮಕ್ಕಳು ಈ ಆಶ್ರಮದ ಜೊತೆಗೆ ಸಂಪರ್ಕವಿಟ್ಟುಕೊಂಡಿದ್ದು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಕೆಲವು ಹೆಣ್ಣು ಮಕ್ಕಳ ಮದುವೆಯನ್ನೂ ಕೂಡ ವೆಂಕಟೇಶ ಗುರುನಾಯಕರು ತಾವೇ ನಿಂತು ನೆರವೇರಿಸಿದ್ದಾರೆ.

ಇಲ್ಲಿಯ ಮಕ್ಕಳು ತುಂಬಾ ಶಿಸ್ತಿನಿಂದ ಜೀವನವನ್ನು ನಡೆಸುತ್ತಿದ್ದಾರೆ. ಬೆಳಗ್ಗೆ ಸುಮಾರು 5.30ಕ್ಕೆ ಏಳುವ ಮಕ್ಕಳು, 6 ಗಂಟೆಗೆ ಪ್ರಾರ್ಥನೆ ಮಾಡಿ, ಯೋಗಾಸನ ಮಾಡುತ್ತಾರೆ. ಬೆಳಗಿನ ಉಪಹಾರ ಮುಗಿಸಿ ಶಾಲೆಗೆ ತೆರಳುತ್ತಾರೆ. ಗುರುನಾಯಕರು ಮಕ್ಕಳ ಮಧ್ಯಾಹ್ನದ ಊಟವನ್ನು ಶಾಲೆಯಲ್ಲಿ ಮಾಡಲು ಬಿಡುವುದಿಲ್ಲ. ಮಧ್ಯಾಹ್ನದ ಊಟ ಆಶ್ರಮದಲ್ಲಿಯೇ. ಹೊರಗಿನ ಊಟದಿಂದ ಮಕ್ಕಳ ಆರೋಗ್ಯ ಕೆಡಬಹುದು ಎಂಬ ಕಾಳಜಿ ಅವರದು. ಸಂಜೆ 6.30ಕ್ಕೆ ಮತ್ತೆ ಪ್ರಾರ್ಥನೆ ಮಾಡುವ ಮಕ್ಕಳು ರಾತ್ರಿ ಊಟ ಮುಗಿಸಿದ ನಂತರ 11 ಗಂಟೆಯವರೆಗೆ ಅಭ್ಯಾಸ ಮಾಡಿ ಮಲಗುತ್ತಾರೆ. ವೆಂಕಟೇಶ ಗುರುನಾಯಕರ ಈ ಕೆಲಸದಲ್ಲಿ ಸುಮಾರು 10 ಕಾರ್ಯಕರ್ತರು ಕೇವಲ ಸೇವಾ ಮನೋಭಾವದಿಂದ ಸಹಾಯ ಮಾಡುತ್ತಿದ್ದಾರೆ.

ಚಿಕ್ಕಂದಿನಿಂದಲೂ ಪರಿಚಯವಿದ್ದ ನಾನು, ಅವರಿಗೆ ಈ ಕೆಲಸಕ್ಕೆ ಪ್ರೇರಣೆ ಏನು ಎಂದು ಕೇಳಿದಾಗ "ನನಗೆ ಸಾಮಾಜಿಕ ಕೆಲಸದಲ್ಲಿ ಆಸಕ್ತಿ ಮೊದಲಿನಿಂದಲೂ ಇತ್ತು. ಆದರೆ ಅದಕ್ಕೆ ಒಂದು ಸ್ಪಷ್ಟ ರೂಪ ಬಂದಿದ್ದು, ನಾನು ಪ್ರಸಿದ್ಧ ಕುಷ್ಟರೋಗ ತಜ್ಞ ಡಾ. ಮಂಗಲವೇಡೆಕರ್ ಜೊತೆ ಇದ್ದು ಕೆಲಸ ಮಾಡಿದಾಗ" ಎಂದರು.

14 ವರ್ಷಗಳ ಹಿಂದೆ ವೆಂಕಟೇಶ ಗುರುನಾಯಕರು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ತಮ್ಮ ತಂದೆ ತಾಯಿಯರಿಂದ ತ್ಯಜಿಸಲ್ಪಟ್ಟ ಶಿಶುಗಳನ್ನು ಎತ್ತಿಕೊಂಡು ಬಂದು ಆ ಮಕ್ಕಳಿಗೆ ಆಶ್ರಯ ಒದಗಿಸುವ ಕೆಲಸವನ್ನಾರಂಭಿಸಿದರು. ಸುಮಾರು 19 ಅನಾಥ ಮಕ್ಕಳು ಈ ಸಂಸ್ಥೆಯ ಆಶ್ರಯದಲ್ಲಿದ್ದಾರೆ. ಅಲ್ಲದೇ ಗುಲ್ಬರ್ಗಾ ನಗರದಲ್ಲಿ "ನಂದಗೋಕುಲ" ಮತ್ತು "ನಿಸರ್ಗ" ಎಂಬ ಸಂಸ್ಥೆಗಳನ್ನು ಸ್ಥಾಪಿಸಿ ಅಲ್ಲಿ ಬಾಲಕಾರ್ಮಿಕರನ್ನು ಗುರುತಿಸಿ ಕರೆದುಕೊಂಡು ಬಂದು ಊಟ, ವಸತಿ ಮತ್ತು ಶಿಕ್ಷಣಗಳನ್ನೊದಗಿಸುತ್ತಿದ್ದಾರೆ. ಈ ಸಂಸ್ಥೆಗಳಲ್ಲಿ ಈಗ 90 ಮಕ್ಕಳು (45 ಹುಡುಗರು ಮತ್ತು 45 ಹುಡುಗಿಯರು) ಆಶ್ರಯ ಪಡೆದುಕೊಂಡಿದ್ದಾರೆ. ಈ ಕೆಲಸದಲ್ಲಿ ಕೂಡ ಸುಮಾರು 6 ಕಾರ್ಯಕರ್ತರು ಕೇವಲ ಸೇವಾ ಮನೋಭಾವದಿಂದ ಅವರ ಜೊತೆ ಕೆಲಸ ಮಾಡುತ್ತಿದ್ದಾರೆ.

ವೆಂಕಟೇಶ ಗುರುನಾಯಕರ ಈ ನಿಸ್ವಾರ್ಥ ಕಾರ್ಯವನ್ನು ಗುರುತಿಸಿ, ಕರ್ನಾಟಕ ರಾಜ್ಯ ಸರಕಾರ ಕ್ರಿ.ಶ. 2000ದಲ್ಲಿ ಅವರಿಗೆ ಪ್ರಶಸ್ತಿ ಕೊಟ್ಟು ಗೌರವಿಸಿತು. ಕ್ರಿ.ಶ. 2006ರಲ್ಲಿ ಅವರಿಗೆ ಹರಿದ್ವಾರದ ಸಂಸ್ಥೆಯಾದ ದಿವ್ಯ ಪ್ರೇಮ ಸೇವಾ ಮಿಶನ್, ಪ್ರಶಸ್ತಿ ನೀಡಿ ಗೌರವಿಸಿತು. ಮೊದಲೇ ತಿಳಿಸಿದಂತೆ, ಇದೇ ಫೆಬ್ರವರಿ 4ರಂದು ಕೇಂದ್ರ ಸರಕಾರವು ಅವರಿಗೆ ಪ್ರತಿಷ್ಠಿತ "National Award for Child Welfare"ನ್ನು ನೀಡಿ ಗೌರವಿಸಿದೆ.

ಎಪ್ಪತ್ತು ವರ್ಷದ ಬ್ರಹ್ಮಚಾರಿ ವೆಂಕಟೇಶರು ಸಂಧಿವಾತದಿಂದ ಬಳಲುತ್ತಿದ್ದರೂ, ಮತ್ತೊಂದು ಸೇವಾಕಾರ್ಯವನ್ನು ಆರಂಭಿಸುವ ವಿಚಾರ ಹೊಂದಿದ್ದಾರೆ. ಸಮಾಜದಿಂದ ತಿರಸ್ಕೃತರಾಗಿ ಬೀದಿಗೆ ಬಿದ್ದ ವಯಸ್ಕರಿಗೆ ಆಶ್ರಯ ಕೊಟ್ಟು ಉದ್ಧರಿಸಿ ದಾರಿಗೆ ಕರೆತರುವುದಕ್ಕಾಗಿ "ಸಂಧ್ಯಾದೀಪ" ಎಂಬ ಮತ್ತೊಂದು ಸಂಸ್ಥೆಯನ್ನು ಆರಂಭಿಸುವ ಮಹದಾಸೆಯನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿ ಕಾರ್ಯಪೃವೃತ್ತರಾಗಿದ್ದಾರೆ.

ಅವರ ಈ ಹುಮ್ಮಸ್ಸು, ಜೀವನೋತ್ಸಾಹ, ಕಾರ್ಯಪರತೆ ಮತ್ತು ಸೇವಾಮನೋಭಾವ ನಮ್ಮೆಲ್ಲರಿಗೂ ಆದರ್ಶಪ್ರಾಯವಾದುದು. "ದೇಶದ ಪ್ರತಿಯೊಂದು ಕೂಸೂ ಈ ದೇಶದ ಸಂಪತ್ತು. ಅದರ ದುರ್ಬಳಕೆಯಾಗಕೂಡದು ಮತ್ತು ದೇಶದ ಪ್ರತಿಯೊಬ್ಬ ವ್ಯಕ್ತಿ ಈ ದೇಶದ ನಾಗರಿಕ ಮತ್ತು ಸಮಾಜದಲ್ಲಿ ಆತನಿಗೆ ತಕ್ಕ ಸ್ಥಾನಮಾನವಿರಬೇಕು" ಎಂದು ಕಳಕಳಿಯಿಂದ ನುಡಿಯುತ್ತಾರೆ. ಅವರು ನೂರು ಕಾಲ ಬಾಳಿ ಇನ್ನೂ ಅನೇಕರ ಬಾಳಿಗೆ ದಾರಿದೀಪವಾಗಲಿ ಅಲ್ಲದೇ ಅನೇಕ ಸ್ವಯಂಸೇವಕರಿಗೆ ಪ್ರೇರಣೆಯ ಸ್ರೋತರಾಗಲಿ ಎಂಬುದು ನಮ್ಮ ಹಾರೈಕೆ.

ವಿ. ಸೂ : ಅವರಿಗೆ ಸಹಾಯ ಮಾಡಲಿಚ್ಛಿಸುವವರು ಅವರನ್ನು ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಬಹುದು.

ನಂದಗೋಕುಲ ಶಿಶು ಗೃಹ,

ಉದನೂರ ರಸ್ತೆ,

ಗುಲಬರ್ಗಾ - 585102

ಕರ್ನಾಟಕ, ಭಾರತ

ದೂರವಾಣಿ : +91 94483 80363

ಈ ಸಂಸ್ಥೆಯ ದಾನಿಗಳಿಗೆ NGO 80G ಮೂಲಕ ವರಮಾನ ತೆರಿಗೆ ವಿನಾಯಿತಿ ಸೌಲಭ್ಯ ಲಭ್ಯವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more