ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳ ಇನ್ನಿಲ್ಲ

By Staff
|
Google Oneindia Kannada News

ಬೆಂಗಳೂರು, ಜ.31: ಕನ್ನಡದ ಹಿರಿಯ ಸಾಹಿತಿ, ಪ್ರಸಿದ್ಧ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ ಬುಧವಾರ ರಾತ್ರಿ 9.05ರ ಸುಮಾರಿಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 85ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ.

ಖ್ಯಾತ ಕವಿ, ಸಾಹಿತಿ ನಿಡಂಬೂರ ವ್ಯಾಸರಾಯ ಬಲ್ಲಾಳ ರು ಜನಿಸಿದ್ದು 1923 ಡಿ.1ರಂದು ಉಡುಪಿಯಲ್ಲಿ.ಇವರ ತಾಯಿ ಕಲ್ಯಾಣಿ ; ತಂದೆ ರಾಮದಾಸ. 1946ರಲ್ಲಿ ಮುಂಬಯಿಗೆ ಬಂದು ತೈಲ ಕಂಪನಿಯೊಂದರಲ್ಲಿ ಶೀಘ್ರ ಲಿಪಿಗಾರರಾಗಿದ್ದ ಅವರು ಅಮೆರಿಕನ್ನರಿಗೆ ಇಂಗ್ಲಿಷ್ ಕಲಿಸಿದವರು.

ಮುಂಬಯಿಯಲ್ಲಿ ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹಳಷ್ಟು ದುಡಿದ ಬಲ್ಲಾಳರು ಒಂದು ಕನ್ನಡ ಸಾಪ್ತಾಹಿಕಕ್ಕೆ ಪ್ರಧಾನ ಸಂಪಾದಕರಾಗಿದ್ದರು. "ನುಡಿ" ಪತ್ರಿಕೆಗೆ 4 ವರ್ಷಗಳವರೆಗೆ ಅಂಕಣ ಬರಹಗಾರರಾಗಿ ಬರೆದಿದ್ದಾರೆ. ಕರ್ನಾಟಕ ಸಂಘ, Kannada Information Centre ಇವೆಲ್ಲವುಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಬಲ್ಲಾಳರು ತಮ್ಮ ಬದುಕಿನ ಮಹತ್ವದ ಘಟ್ಟಗಳನ್ನು ಕಳೆದದ್ದು ಮುಂಬಯಿ ಮಹಾನಗರಿಯಲ್ಲಿ. ನಿವೃತ್ತರಾದ ಬಳಿಕ ಬೆಂಗಳೂರಿಗೆ ಬಂದು ನೆಲಸಿದ ಅವರು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸಿದ್ದರು.ಮುಖ್ಯವಾಗಿ ವ್ಯಾಸರಾಯ ಬಲ್ಲಾಳರು ತಮ್ಮ ಸಣ್ಣ ಕತೆ ಹಾಗು ಕಾದಂಬರಿಗಳ ಮೂಲಕ ತಮ್ಮ ಸುತ್ತಲಿನ ವಾಸ್ತವ ಜಗತ್ತಿನ ಚಿತ್ರಣವನ್ನೂ, ಮಾನವ ಆದರ್ಶಗಳನ್ನೂ ಬಿಂಬಿಸಿದ್ದಾರೆ. 'ಉತ್ತರಾಯಣ' ಬಲ್ಲಾಳರ ಶ್ರೇಷ್ಠ ಕೃತಿ. ಅವರ ಮನೆಗೂ ಉತ್ತರಾಯಣ ಎಂದೇ ಹೆಸರಿಟ್ಟಿದ್ದರು.

ಉಡುಪಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೆಂದು ಬಿಂಬಿತರಾಗಿದ್ದ ಬಲ್ಲಾಳರು, ಕೊನೆಗಳಿಗೆಯಲ್ಲಿ ಆ ಅವಕಾಶದಿಂದ ವಂಚಿತರಾಗಿ ಹಿರಿ ಜೀವ ನೊಂದುಕೊಂಡಿತ್ತು. ಬಲ್ಲಾಳರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ನಗರದ ಬನಶಂಕರಿಯಲ್ಲಿನ ರುದ್ರಭೂಮಿಯಲ್ಲಿ ನಡೆಯಲಿದೆ.

ಬಲ್ಲಾಳರ ಪ್ರಮುಖ ಕೃತಿಗಳು:

ಕಥಾಸಂಕಲನ

* ಸಂಪಿಗೆ
* ಮಂಜರಿ
* ಕಾಡು ಮಲ್ಲಿಗೆ
* ತ್ರಿಕಾಲ

ಕಾದಂಬರಿ

* ಅನುರಕ್ತೆ - ಇದೇ ಹೆಸರಿನಿಂದ ಚಲನಚಿತ್ರವಾಗಿದೆ. ಚಿತ್ರದ ಮುಖ್ಯಪಾತ್ರದಲ್ಲಿ ನಟಿ ಆರತಿ ಅಭಿನಯಿಸಿದ್ದರು.
* ವಾತ್ಸಲ್ಯಪಥ
* ಉತ್ತರಾಯಣ - ಉದಯ ಟಿವಿಯಲ್ಲಿಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗುತ್ತಿತ್ತು, ಪೂರ್ಣವಾಗಿ ಪ್ರಸಾರವಾಗದೆ ಅರ್ಧದಲ್ಲಿಯೇ ನಿಂತುಹೋಯಿತು.
* ಹೇಮಂತಗಾನ
* ಬಂಡಾಯ
* ಆಕಾಶಕ್ಕೊಂದು ಕಂದೀಲು
* ಹೆಜ್ಜೆ
* ಹೆಜ್ಜೆ ಗುರುತು

ನಾಟಕ

* ಗಿಳಿಯು ಪಂಜರದೊಳಿಲ್ಲ (ಮೂಲ:ಇಬ್ಸನ್)
* ಮುಳ್ಳೆಲ್ಲಿದೆ ಮಂದಾರ (ಮೂಲ:ಬರ್ನಾಡ್ ಶಾ)

ಮಕ್ಕಳ ಸಾಹಿತ್ಯ

* ಖುರ್ಶಿದ್ ನರಮನ್

ಲೇಖನ ಸಂಗ್ರಹ

* ಮುಂಬೈ ಡೈರಿ
* ಮುಂಬಯಿಯ ನಂಟು ಮತ್ತು ಕನ್ನಡ

ಪ್ರಶಸ್ತಿ ಪುರಸ್ಕಾರಗಳು:

* "ಬಂಡಾಯ" ಕಾದಂಬರಿಗೆ 1946ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
* "ಕಾಡು ಮಲ್ಲಿಗೆ" ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
* "ಅನುರಕ್ತೆ" ಕಾದಂಬರಿಗೆ ಕರ್ನಾಟಕ ಸರಕಾರದ ಬಹುಮಾನ.
* 1983ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ.
* ಅ.ನ.ಕೃ. ಪ್ರಶಸ್ತಿ, ನಿರಂಜನ ಪ್ರಶಸ್ತಿ ಮತ್ತು ಮಾಸ್ತಿ ಪ್ರಶಸ್ತಿಗಳೂ ಬಲ್ಲಾಳರಿಗೆ ಬಂದಿವೆ.
* ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿಯೂ ಅವರಿಗೆ ಲಭಿಸಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X