• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಹೆಮ್ಮೆಯ ಪುತ್ರ ; ಅಚ್ಯುತ ಸಮಂತಾ

By Staff
|

Dr. Achyuta Samantaಇಲ್ಲೊಬ್ಬ ಸುಬ್ಭಣ್ಣ, ಅಲ್ಲೊಬ್ಬ ಸುದರ್ಶನ್, ಅಗೋನೋಡು ಸಮಂತಾ ! ಹೌದು. ಸರಕಾರ, ರಾಜಕೀಯ ಧುರೀಣರು, ಫಾರಿನ್ ಏಡ್ ಅಥವಾ ಒಂದು ಜಾತಿಮಠದ ಹಂಗಿಲ್ಲದೆ ಭಾರತದಲ್ಲಿ ಬದಲಾವಣೆಯ ತಂಗಾಳಿ ಬೀಸುತ್ತಿರುವವರು ಇಂಥವರೇ. ಒರಿಸ್ಸಾದ ಬೆಂಗಾಡಿನಲ್ಲಿ ಶಿಕ್ಷಣ ಕ್ಷೇತ್ರದ ನಂದನವನ ನಿರ್ಮಿಸಿದ ಆಧುನಿಕ ಕಳಿಂಗ ಸಾಮ್ರಾಜ್ಯದ ದೊರೆ ಡಾ.ಅಚ್ಯುತ ಸಮಂತಾ ಅವರ ಕಿರುಪರಿಚಯ.

ಚಿತ್ರ ಲೇಖನ : ರಾಜು ಅಡಕಳ್ಳಿ

ಒಂದು ಕಾಲಕ್ಕೆ ಆ ಮುನ್ನೂರು ಎಕರೆ ಜಾಗ ಕಾಡುಕುಪ್ಪೆ, ಮುಳ್ಳು ಕಂಟಿಗಳ ಕೊಂಪೆ. ಈಗ ಅದೇ ಪ್ರದೇಶ ಸಾಮಾಜಿಕವಾಗಿ ಮೂಲೆಗುಂಪಾದವರ ಶಿಕ್ಷಣಕ್ಕೆ ಶೋಭೆ ತಂದ ನಂದನವನ. ಎಲ್ಲಿ ನೋಡಿದರಲ್ಲಿ ಹಸುರು, ಆಧುನಿಕ ಕಟ್ಟಡಗಳ ಕ್ಯಾಂಪಸ್, ಗ್ರಂಥಾಲಯ, ಆಟದ ಮೈದಾನ, ಸಾವಿರಾರು ಅಧ್ಯಾಪಕರು, ಎಲ್ಲಕ್ಕೂ ಹೆಚ್ಚಾಗಿ ವಿದ್ಯಾರ್ಥಿ,ವಿದ್ಯಾರ್ಥಿನಿಯರ ಕಲರವ. ಕ್ಯಾಂಪಸ್ ತುಂಬೆಲ್ಲ ಉಜ್ವಲ ಭವಿಷದ್ದೇ ಕನಸು.

ಶೈಕ್ಷಣಿಕ ಕ್ಷೇತ್ರದ ಇತ್ತೀಚಿನ ಸವಾಲುಗಳನ್ನು ಮೀರಿನಿಲ್ಲುವ ಬೆರಗು ಹುಟ್ಟಿಸುವ ಈ ಅನುಭವ ಅನಾವರಣವಾಗಿದ್ದು, ಇತ್ತೀಚೆಗೆ ನಮ್ಮ ಪತ್ರಕರ್ತರ ತಂಡ ತೆರಳಿದಾಗ. ದೂರದ ಒರಿಸ್ಸಾದ ರಾಜಧಾನಿ ಭುವನೇಶ್ವರದ ಕಳಿಂಗ ವಿಶ್ವವಿದ್ಯಾಲಯದ ಅಂಗಳದಲ್ಲಿ.

ಕೇವಲ 6 ವರ್ಷಗಳಲ್ಲಿ ಕಳಿಂಗ ಕ್ಯಾಂಪಸ್‌ನಲ್ಲಿ 8 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಜೊತೆಗೆ ಉಚಿತ ಊಟ ವಸತಿಗಳೊಂದಿಗೆ ಶಿಕ್ಷಣ ಕಲಿಯುತ್ತಿರುವ, ನಲಿಯುತ್ತಿರುವ 5 ಸಾವಿರ ಬುಡಕಟ್ಟು ವಿದ್ಯಾರ್ಥಿಗಳು. ಐಟಿಐ ನಿಂದ ಪ್ರಾರಂಭವಾದ ಪುಟ್ಟ ಶಿಕ್ಷಣ ಸಂಸ್ಥೆ ಇಂದು ಡೀಮ್ಡ್ ವಿಶ್ವವಿದ್ಯಾಲಯ. ಇದೇನು ಮ್ಯಾಜಿಕ್ಕಾ? ಅಥವಾ ಸರ್ಕಾರಿ ತಿಜೋರಿಯಿಂದ ಸಕತ್ತಾಗಿ ಸುರಿದು ಹೋಮ ಮಾಡಿದ ಯೋಜನೆಯಾ? ಇವೆರಡೂ ಅಲ್ಲ. ನಮ್ಮ ನಿಮ್ಮ ಹಾಗೇ ಎರಡೇ ಕೈ, ಎರಡೇ ಕಣ್ಣು, ಎರಡೇ ಕಾಲು ಇರುವ ಒಬ್ಬನೇ ವ್ಯಕ್ತಿಯ ನಿರಂತರ ಪ್ರಯತ್ನದ ಫಲಶೃತಿಯೇ ಕಳಿಂಗವೆಂಬ ವಿದ್ಯಾಸಾಗರ. ಈ ವಿದ್ಯಾಸಾಗರದ ನವನಿರ್ಮಾಣದ ನೇತಾರ ಡಾ. ಅಚ್ಯುತ ಸಮಂತಾ.

Kalinga University buildingನಿಸ್ಪ್ರಹ ಸೇವೆಗೆ ನೋಬೆಲ್ ಪ್ರಶಸ್ತಿ ಕೊಡಬಹುದಾದರೆ ಡಾ. ಸಮಂತಾ ಅತ್ಯಂತ ಯೋಗ್ಯ ಅಭ್ಯರ್ಥಿ. ಈ ವ್ಯಕ್ತಿಯನ್ನು ಅವರ ಬ್ಲ್ಯೂಚಿಪ್ ಕ್ಯಾಬಿನ್ ಒಳಗೆ ಭೇಟಿ ಮಾಡುವುದು ಹೇಗಪ್ಪಾ ಎಂದು ತಲೆ ತುರಿಸಿಕೊಳ್ಳುತ್ತಿರುವಾಗಲೇ ಕ್ಯಾಂಪಸ್ಸಿನ ಪಡಸಾಲೆಯಲ್ಲೇ ಸಿಂಪಲ್ ಆಗಿ ಈ ವಾಮನಮೂರ್ತಿ ಪ್ರತ್ಯಕ್ಷವಾದಾಗ ನಮಗೆಲ್ಲ ಆಶ್ಚರ್ಯವೋ ಆಶ್ಚರ್ಯ. ಇಡೀ ಕಳಿಂಗ ಅಧಿಪತಿಯಾಗಿರುವ ಸಮಂತಾ ತಮ್ಮನ್ನು ಚೀಫ್ ವರ್ಕರ್ ಎಂದು ನಮ್ಮಲ್ಲಿ ಪರಿಚಯಿಸಿಕೊಳ್ಳುವುದೇ ಒಂದು ರೋಮಾಂಚನ.

ಹವಾಯಿ ಚಪ್ಪಲಿ, ಸಿಂಪಲ್ ಕಾಟನ್ ಶರ್ಟ್, ಪ್ಯಾಂಟು, ಯಾರೇ ಎದುರಾದರೂ ಕೈ ಜೋಡಿಸಿ ಕುಶಲ ವಿಚಾರಿಸುವ ಹೃದಯ ಶ್ರೀಮಂತಿಕೆ. ಯಾವುದೇ ಭರ್ಜರಿ ಕ್ಯಾಬಿನ್ ಇಲ್ಲದೇ ಇಡೀ ಕ್ಯಾಂಪಸನ್ನೇ ವರ್ಕಿಂಗ್ ಕ್ಯಾಬಿನ್ ಮಾಡಿಕೊಂಡ ಸರಳತೆ. ಗುಡ್ಡ ಗಾಡು ಮಕ್ಕಳನ್ನು ತಮ್ಮ ಸ್ವಂತ ಮಕ್ಕಳೆಂದು ಭಾವಿಸಿಕೊಳ್ಳುವಷ್ಟು ಸೌಜನ್ಯತೆ. ಇಂಥ ಪಕ್ವತೆ, ಆದರ್ಶಗಳೆಲ್ಲ ವೃದ್ಧಾಪ್ಯದಲ್ಲಿ ಎಂದು ಭಾವಿಸಬೇಡಿ. ಸಮಂತಾ ಅವರಿಗೆ ಇನ್ನೂ ನಲವತ್ಮೂರೇ ವರ್ಷ. ಇನ್ನು ಮದುವೆ ಆಗಿಲ್ಲ. ಇಡೀ ಕಳಿಂಗ ಕ್ಯಾಂಪಸ್ಸೇ ಇವರ ಮನೆ. ಅಲ್ಲಿಯ ಸಾವಿರಾರು ವಿದ್ಯಾರ್ಥಿಗಳೇ ಇವರ ತುಂಬಿದ ಸಂಸಾರ. ಒಂದರ್ಥದಲ್ಲಿ ಇವರು ಸಂಸಾರಸ್ಥ ಸನ್ಯಾಸಿ.

ಸಮಂತಾ ಕಳಿಂಗ (ಡೀಮ್ಡ್) ವಿಶ್ವವಿದ್ಯಾಲಯವನ್ನು ಕಟ್ಟಿದ್ದಾರೆಂದರೆ ಅವರು ಕೋಠ್ಯಧೀಶ್ವರರ ಮಗನಾಗಿರಬೇಕು ಎಂದು ಭಾವಿಸಿದರೆ ನೀವು ಬೇಸ್ತು ಬೀಳುತ್ತೀರಿ. ಬಾಲ್ಯದಲ್ಲಿ ದಹಿಸುವ ಬಡತನ, ಕಷ್ಟಪಟ್ಟು ಗಳಿಸಿದ ಕೆಮಿಸ್ಟ್ರಿ ಪದವಿ. ಮುಂದೆ ಕೆಲಕಾಲ ಉಪನ್ಯಾಸಕ. 15 ವರ್ಷಗಳ ಹಿಂದೆ ಕೆಲಸಕ್ಕೆ ರಾಜೀನಾಮೆ. 5 ಸಾವಿರ ರೂಪಾಯಿ ಸಾಲದೊಂದಿಗೆ ಐಟಿಐ ತರಬೇತಿ ಕೇಂದ್ರ ಸ್ಥಾಪನೆ. ಎರಡೇ ಕೊಠಡಿಗಳಲ್ಲಿ ಎಲ್ಲ ಕೆಲಸ. ಆದರೆ ಈಗ 300 ಎಕರೆ ಪ್ರದೇಶದಲ್ಲಿ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ಯೂನಿವರ್ಸಿಟಿ. 800 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವಹಿವಾಟು, ಎರಡೂವರೆ ಸಾವಿರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಕಳಿಂಗ ರಿಲೀಫ್ ಚಾರಿಟೇಬಲ್ ಟ್ರಸ್ಟ್, ಕಳಿಂಗ ಸಮಾಜ ವಿಜ್ಞಾನ ಸಂಸ್ಥೆ (ಕಿಸ್)ಗಳಂಥ ಅನೇಕ ಸಮಾಜ ಸೇವಾ ಕೇಂದ್ರಗಳು, ಎಂ.ಬಿ.ಎ.ಯಿಂದ ಹಿಡಿದು ಜನರಲ್ ಸ್ಟಡೀಸ್, ನರ್ಸಿಂಗ್, ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕೋರ್ಸ್‌ವರೆಗೆ ಹತ್ತು ಹಲವು ಶಿಕ್ಷಣ ಅವಕಾಶಗಳು. ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳ ವಿ.ವಿ.ಗೆ ಹೋಲಿಸಿದರೆ ಕಮ್ಮಿ ಇಲ್ಲದ ಕ್ಯಾಂಪಸ್. ಇವೆಲ್ಲ ಸಮಂತಾರೊಬ್ಬರಿಂದಲೇ ಸಾಕಾರಗೊಂಡಿದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರ ಸಾಧನೆಯ ಪಥದ ಮೇಲೆ ಕಣ್ಣಾಡಿಸಿದರೆ ಸಾಕು. ಹೀಗಾಗಿ ಸಮಂತಾ ಬರೇ ವ್ಯಕ್ತಿಯಲ್ಲ - ಅವರೊಬ್ಬ ಶಕ್ತಿ.

ಒರಿಸ್ಸಾದಲ್ಲಿ ಇತ್ತೀಚೆಗೆ ಅಭಿವೃದ್ಧಿಯ ಗಾಳಿ ಬೀಸುತ್ತಿದ್ದರೂ ಅಲ್ಲಿಯ ಗುಡ್ಡಗಾಡು ಪ್ರದೇಶ, ಹಳ್ಳಿಗಾಡುಗಳು ಇಂದಿಗೂ ಕಡುಬಡತನ, ಅನಕ್ಷರತೆಗಳಿಂದ ನಲುಗುತ್ತಿವೆ. ಇದನ್ನು ತಪ್ಪಿಸಲು ತಮ್ಮ ಕೈಲಾದ್ದನ್ನು ಮಾಡಬೇಕೆಂದು ಸಮಂತಾ ಸ್ವತಃ ಗುಡ್ಡಗಾಡು ಅಲೆದರು. ಸ್ಥಳೀಯರನ್ನು ಸಂಘಟಿಸಿದರು, ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಪಾಲಕರಿಗೆ ದುಂಬಾಲು ಬಿದ್ದರು, ಕಾಡಲ್ಲಿ, ಕುಗ್ರಾಮಗಳಲ್ಲಿ ಶಾಲೆಗಳೇ ಇಲ್ಲವೆಂಬುದು ಅರಿವಿಗೆ ಬಂದಾಗ ತಮ್ಮ ಕಳಿಂಗ ಕ್ಯಾಂಪಸ್ ಪಕ್ಕದಲ್ಲೇ ಕಿಸ್ (ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್) ಪ್ರಾರಂಭಿಸಿ ಗುಡ್ಡಗಾಡು ಮಕ್ಕಳಿಗೆ ವಸತಿ ಶಿಕ್ಷಣ ಕೊಟ್ಟರು.

ಈಗ ಈ ಕಿಸ್ ಸಂಸ್ಥೆಯೂ ಹೆಮ್ಮರವಾಗಿ ಬೆಳೆದು ಐದು ಸಾವಿರದಷ್ಟು ಬಡ ಮಕ್ಕಳಿಗೆ ನೆರಳು-ನೆಮ್ಮದಿ ನೀಡುತ್ತಾ ಇಡೀ ದೇಶದಲ್ಲೇ ಅತ್ಯಂತ ದೊಡ್ಡ ಬುಡಕಟ್ಟು ವಿದ್ಯಾರ್ಥಿಗಳ ಶಾಲೆ ಎಂಬ ದಾಖಲೆ ನಿರ್ಮಿಸಿದೆ. ಶಿಕ್ಷಣದ ಜೊತೆಗೇ ಮಕ್ಕಳ ಭವಿಷ್ಯಕ್ಕೆ ಆಧಾರವಾಗುವ ಹೊಲಿಗೆ, ಕಸೂತಿ, ಗುಡಿ ಕೈಗಾರಿಕೆ, ತೋಟಗಾರಿಕೆ, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಮುಂತಾದ ಅನೇಕ ಚುಟವಟಿಕೆಗಳ ಆಗರವಾಗಿ ಈ ಕಿಸ್ ಕೆಲಸ ಮಾಡುತ್ತಿದೆ. ಇದಕ್ಕೆ ಯಾವುದೇ ರಾಜಕೀಯ ವ್ಯಕ್ತಿಗಳ, ಪಕ್ಷಗಳ ಸಂಪರ್ಕವಿಲ್ಲ. ಡಾ. ಕಲಾಂ, ದ್ರಾವಿಡ್, ತೆಂಡುಲ್ಕರ್, ಶತ್ರುಘ್ನ ಸಿನ್ಹಾ, ಸ್ವಾಮಿ ರಾಮದೇವ್ ಮುಂತಾದ ಗಣ್ಯರು ಸಮಂತಾರ ಸಾಮ್ರಾಜ್ಯಕ್ಕೆ ಭೇಟಿ ನೀಡಿ ಶಹಭಾಸ್ ಎಂದಿದ್ದಾರೆ. ನೀವು ಸಮಂತಾರ ಸಾಧನೆಯನ್ನು ಸಾಕ್ಷಾತ್ ನೋಡಲು ಒರಿಸ್ಸಾಕ್ಕೆ ಒಮ್ಮೆ ಯಾಕೆ ಹೋಗಬಾರದು? ನೆನಪಿಡಿ ; ಸಮಂತಾ ತಮ್ಮ ಬಗ್ಗೆ ಹೆಚ್ಚೇನು ಹೇಳುವುದಿಲ್ಲ, ಆದರೆ ಇಡೀ ಕಳಿಂಗ ಕ್ಯಾಂಪಸ್ಸೇ ಸಮಂತಾರ ಬಗ್ಗೆ ಸದಾ ಮಾತನಾಡುತ್ತೆ.

ಅಚ್ಯುತ ಅವರ ಈಮೇಲ್ ವಿಳಾಸ : achyuta@kiit.ac.in, achyuta@achyutasamanta.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more