ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಥ ಮರುಳಯ್ಯ ಇದು ಎಂಥಾ ಮರುಳು

By Staff
|
Google Oneindia Kannada News

Dr.Robert Zydenbosಜರ್ಮನಿ ಎಂದಾಕ್ಷಣ ಹಿಟ್ಲರ್, ನಾಜಿ, ಯುದ್ಧ, ಕ್ರೌರ್ಯ, ಗೋಡೆ, ಬುಸುಗುಟ್ಟುವ ನೊರೆಯ ತಣ್ಣನೆ ಬಿಯರ್ ನೆನಪಾಗುವುದು ಸಹಜ. ಇವಿಷ್ಟೇ ಅಲ್ಲ. ಜರ್ಮನಿಯ ಜನಕ್ಕೂ ನಮ್ಮ ಸವಿಗನ್ನಡಕ್ಕೂ ಕಳ್ಳುಬಳ್ಳಿಯ ನಂಟಿದೆ. ಅವರಿಗೂ ನಮಗೂ ಒಂದು ಬಗೆಯ ಧನಾತ್ಮಕ ಸಂಬಂಧವಿದೆ ಎಂಬ ಸಂಗತಿ ಮಾತ್ರ ಮಹಾಯುದ್ಧದಷ್ಟೇ ಐತಿಹಾಸಿಕ ಸತ್ಯ. ಇತ್ತೀಚಿನ ವರ್ಷಗಳಲ್ಲಿ ಜರ್ಮನಿಗನೊಬ್ಬನಿಗೆ ಕನ್ನಡ ಭಾಷೆ ಮರುಳು ಮಾಡಿದ ವಿಚಾರವನ್ನು ನಮ್ಮ ಓದುಗರೊಬ್ಬರು ಹಂಚಿಕೊಂಡಿದ್ದಾರೆ.

ಎಸ್.ಆರ್.ಕೆ, ಬೆಂಗಳೂರು

ಕನ್ನಡ ಭಾಷೆಯ ಮೇಲೆ ಅವರಿಗಿದ್ದ ಮಮತೆ ಮತ್ತು ಪ್ರಭುತ್ವ ಕಂಡ ನಾನಂದು ಮೂಕವಿಸ್ಮಿತನಾಗಿದ್ದೆ. ಕನ್ನಡ ಭಾಷೆಯನ್ನು ಬಲ್ಲವರು ಸುಲಲಿತವಾಗಿ ಕನ್ನಡ ಮಾತನಾಡಿದರೆ (??) ಅದರಲ್ಲಿ ಅಂಥದ್ದೇನೂ ವಿಶೇಷ ಇಲ್ಲ ಬಿಡಿ ಎಂದನಿಸುವುದು ನಿಜ. ಆದರೆ, ನಾನೀಗ ಹೇಳಲು ಹೊರಟಿರುವುದು ಒಬ್ಬ ಕನ್ನಡಿಗನ ಕುರಿತಾಗಿಯಂತೂ ಅಲ್ಲ. ಇನ್ನೂ ಹೇಳಬೇಕೆಂದರೆ ಅವರು ಕರ್ನಾಟಕದ ಪ್ರಜೆಯಲ್ಲ, ಭಾರತದವರೇ ಅಲ್ಲ!

ಅವರು ಸದ್ಯ ಇರುವುದು ಜರ್ಮನಿಯಲ್ಲಿ. ಹೊರದೇಶದವರಾಗಿದ್ದರೂ, ಭಾರತದ ಸಂಸ್ಕೃತಿ, ಸಂಪ್ರದಾಯ, ಭಾಷೆ, ನುಡಿ ನಾಡು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕನ್ನಡ ಭಾಷೆಯನ್ನು ಪಾಪ್ಕಾರ್ನ್ ಹುರಿದಂತೆ ಮಾತನಾಡುವ ಅವರು ಕನ್ನಡ ನಾಡಿನ ಹಿರಿ ಕಿರಿಯ ಸಾಹಿತಿಗಳು ಹಾಗೂ ಅವರ ಕುರಿತಾಗಿ ಬಹಳಷ್ಟು ವಿವರಗಳನ್ನು ಕಲೆಹಾಕಿದ್ದಾರೆ. ಕನ್ನಡ ಸಾಹಿತ್ಯ ಅವರ ನಾಲಿಗೆಯಲ್ಲಿ ಸತ್ವಯುತವಾಗಿ ಹರಿದಾಡುತ್ತಿದೆ! ಅವರ ಸಾಧನೆಗಳ ಬಗ್ಗೆ ಇಣುಕು ಹಾಕುತ್ತಾ ಹೋದರೆ ಇನ್ನೂ ಒಂದು ಆಶ್ಚರ್ಯಕಾರಿ ಸತ್ಯ ಗೋಚರಿಸುತ್ತದೆ. ಹೌದು, ಅವರು ಕನ್ನಡ ಭಾಷೆಯಲ್ಲೇ ಡಾಕ್ಟರೇಟ್ ಗಳಿಸಿದ್ದಾರೆ!!

ಹೆಸರು ರಾಬರ್ಟ್ ಜೆಯ್ದೆನ್ ಬೊಸ್. ದೇಶ ನೆದರ್ ಲ್ಯಾಂಡ್(ಹಾಲೆಂಡ್). ಹುಟ್ಟಿದ್ದು ಕೆನಡಾದಲ್ಲಿ. ತಂದೆ ಹಾಲೆಂಡ್ನವರಾದರೆ ತಾಯಿ ಇಂಡೋನೇಷಿಯಾದವರು. ಸರಿ, ಮೂರು ದೇಶಗಳ ನೀರು ಮತ್ತು ರಕ್ತ ಅವರ ದೇಹದಲ್ಲಿ ಹರಿಯುತ್ತಿದ್ದರೂ, ಅವರ ಮೈಮನಸ್ಸಿನ ಸುಳಿಯಲ್ಲಿ ಕನ್ನಡದ ರಸ ಒಸರುತ್ತಲೇ ಇರುತ್ತದೆ ಎನ್ನಲಡ್ಡಿಯಿಲ್ಲ . ಕಳೆದ ವರ್ಷ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಈ ವ್ಯಕ್ತಿಯ ಜೊತೆ ಮಾತನಾಡುವ ಭಾಗ್ಯ ನನ್ನದಾಗಿತ್ತು. ಒಂದೇ ಸಮನೆ ಕನ್ನಡದಲ್ಲಿ ಉಸುರುತ್ತಿದ್ದ ಅವರ ಮಾತುಗಳೇ ನನ್ನ ಹುಬ್ಬೇರಿಸುವಂತೆ ಮಾಡಿತ್ತು.

ರಾಬರ್ಟ್ ಅವರು ಜೈನ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ. ಜೈನ ಧರ್ಮದ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಬೇಕೆಂಬ ಅಭಿಲಾಷೆ ಅವರಿಗಿದೆ. ಪ್ರಸ್ತುತ ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಧಾರ್ಮಿಕ ದಾರ್ಶನಿಕತೆಗಳ ಅಡಿಪಾಯವಿರುವ "ಇಂಡಾಲಜಿ''ವಿಷಯದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ವೀರಶೈವ, ಜೈನತತ್ವಗಳ ಬಗ್ಗೆ ಅತಿಯಾದ ಆಸಕ್ತಿ ಹಾಗೂ ಶ್ರದ್ಧೆ ಹೊಂದಿದ್ದಾರೆ.

ಜರ್ಮನಿಯ ಮ್ಯೂನಿಕ್ನಲ್ಲಿ 1989ರಲ್ಲಿ ಕನ್ನಡ ಗದ್ಯ ಸಾಹಿತ್ಯದಲ್ಲಿ ಇರುವ ಸಂಸ್ಕೃತಿ ವೈಶಿಷ್ಟ್ಯದ ಕಥಾವಸ್ತುಗಳು'' ಎಂಬ ವಿಷಯದ ಕುರಿತು ಡಾಕ್ಟರೇಟ್ ಪದವಿ ಗಳಿಸಿದ ಅವರು, ಹಾಲೆಂಡ್ ನ ಯೂಟ್ರೆಕ್ಟ್ನಲ್ಲಿ ಇದ್ದ ಕೋಟದ ಪರಮೇಶ್ವರ ಐತಾಳ್ ಅವರಿಂದ ಕನ್ನಡ ಅಭ್ಯಸಿಸಿದರು. ಜೈನ ಧರ್ಮದ ಮೇಲಿನ ಆಸಕ್ತಿ ಅವರನ್ನು ಜೈನ ಧರ್ಮವನ್ನು ಅಭ್ಯಾಸ ಮಾಡಲು ಪ್ರೇರೇಪಿಸಿತು.

ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು'', ಹುಚ್ಚುಮನಸ್ಸಿನ ಹತ್ತು ಮುಖಗಳು'', ಮೈಮನಗಳ ಸುಳಿಯಲ್ಲಿ'', ಕೃತಿಗಳ ಬಗೆಗೆ ಎದೆಯುಬ್ಬಿಸಿ ಮಾತನಾಡುವ ರಾಬರ್ಟ್ ಅವರಿಗೆ ಕಾರಂತರ ಚೋಮನ ದುಡಿ'' ಹೃದಯಕ್ಕೆ ಬಾರೀ ಹತ್ತಿರವಾಗಿದೆಯಂತೆ. ಹೌದು, ಕಾರಂತರ ಚೋಮ ಯಾರಿಗೆತಾನೆ ಹತ್ತಿರವಾಗುವುದಿಲ್ಲ.

"ಕನ್ನಡ ಮಾತನಾಡುವಾಗ ಅಥವಾ ಬರೆಯುವಾಗ ನಾನು ಹಾ.ಮಾ. ನಾಯಕರ ಬಳಿ ಹೋಗುತ್ತಿದ್ದೆ. ನಾನು ಇಂದು ಇಷ್ಟು ಕನ್ನಡ ಮಾತನಾಡುತ್ತೇನೆ ಎಂದರೆ ಅದರಲ್ಲಿ ನಾಯಕರ ಪ್ರಭಾವ ಬಹುಮುಖ್ಯವಾದುದು'' ಎಂದು ನಗು ನಗುತ್ತಾ ಅತ್ಯಂತ ಖುಷಿಯಿಂದ ಅವರು ಹೇಳುತ್ತಿದ್ದಾಗ, ಅಯ್ಯೋ, ನನ್ನ ಕನ್ನಡ ಮಾಷ್ಟ್ರು ಇವರೇ ಆಗಬಾರದೇ ಎಂದು ನನಗನಿಸಿದ್ದು ಸುಳ್ಳಲ್ಲ!

ಸಂಸ್ಕೃತ, ಕನ್ನಡ, ಪ್ರಾಕೃತ, ಹಿಂದಿ, ಬೆಂಗಾಲಿ, ಅಸ್ಸಾಮಿ, ತಮಿಳು, ಉರ್ದು, ಪಾಲಿ ಹೀಗೆ ಒಂಭತ್ತು ಭಾಷೆಗಳಲ್ಲಿ ಅವರು ಭಾಷೆಗಳನ್ನು ಮಾತನಾಡುತ್ತಾರೆ. ಅವರಿಗೆ ಆ ವಾಗ್ದೇವಿ ಒಲಿದಿದ್ದಾಳೆ. ನಾನು ತುಳುನಾಡಿನವನಾದ್ದರಿಂದ, ತುಳು ಬರುತ್ತಾ ಎಂದು ಕೇಳಿದರೆ, ಒಂತೆ ಒಂತೆ ಬರ್ಪುಂಡು, ಆಂಡ ಪಾತೆರುಜಿ ಆತೆ'' ಎಂದು ಮುಗುಳ್ನಕ್ಕರು.

ಇಂದಿನ ಆಧುನಿಕ ಯುಗದಲ್ಲೂ ನಮ್ಮಲ್ಲಿ ಮಡಿವಂತರಿಗೇನೂ ಕೊರತೆಯಿಲ್ಲ. ತಮ್ಮದೇ ಆದ ಕಟ್ಟುಪಾಡುಗಳನ್ನು ಈಗಲೂ ಅನುಸರಿಕೊಂಡು ಹೋಗುತ್ತಿರುವರು ನಮ್ಮ ನಡುವೆಯೇ ಇದ್ದಾರೆ. ಇಂಥವರಿಂದ ಸಮಾಜದ ಕೆಳವರ್ಗದ ಹಾಗೂ ಇನ್ನಿತರ ವರ್ಗದ ಜನರು ಇಂದಿಗೂ ನೋವನ್ನು ಅನುಭವಿಸುವುದು ಇದ್ದದ್ದೇ. ಅಂತರಂಗದ ಮಡಿವಂತಿಕೆಯನ್ನು ಕಾಯ್ದುಕೊಳ್ಳದಿದ್ದರೂ, ತೋರಿಕೆಯ ಮಡಿವಂತಿಗೆ ದುಂಬಾಲು ಬಿದ್ದು ಸಾಮಾನ್ಯ ವರ್ಗದವರನ್ನು ನೀಚ ದೃಷ್ಟಿಯಿಂದ ಕಾಣುವ ಸ್ವಯಂಘೋಷಿತ' ಮಡಿವಂತರಿಂದ ರಾಬರ್ಟ್ ಅವರಿಗೂ ನೋವುಂಟಾಗಿದೆ! ಆದರೆ, ಇವರಿಗೆ ಆದದ್ದು ಕೊಂಚ ಬೇರೆ ರೀತಿಯ ಅನುಭವ.

ಒಮ್ಮೆ ಮಾಧ್ವ ಸಿದ್ಧಾಂತದ ಕುರಿತು ಅವರು ಮಾತನಾಡುತ್ತಿದ್ದಾಗ, ಕೆಲವು ಸಾಂಪ್ರದಾಯಿಕರು, ಮುಂದಿನ ಜನ್ಮದಲ್ಲಿ ನೀವು ಮಾಧ್ವರಾಗಿ ಹುಟ್ಟಿಬನ್ನಿ. ಆಮೇಲೆ ಮಾಧ್ವ ಸಿದ್ಧಾಂತದ ಕುರಿತು ಮಾತನಾಡುವಿರಂತೆ'' ಎಂದು ತೆಗಳಿದ್ದನ್ನು ಅತ್ಯಂತ ಬೇಸರದಿಂದ ಹೇಳುತ್ತಾರೆ. ಒಬ್ಬ ವ್ಯಕ್ತಿ ಒಂದು ವಿಷಯದ ಬಗ್ಗೆ ಕಲಿಯಲು ಆಸಕ್ತಿ ತೋರಿತಾಗ ಆತನ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕೆ ಹೊರತು ಈ ರೀತಿ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದಾಗ, ನಿರಾಶೆ ಹಾಗೂ ಕೊರಗು ಅವರ ಮೊಗದಲ್ಲಿ ಅಚ್ಚೊತ್ತಿ ಕೂತಿತ್ತು.

ಅದೇನೆ ಇರಲಿ, ವಿದೇಶಿಗನೊಬ್ಬ ಕನ್ನಡವನ್ನು ಇಷ್ಟು ಸುಂದರವಾಗಿ, ಸ್ವಚ್ಛಂದವಾಗಿ, ಅಷ್ಟೇ ಕೋಮಲ ಧ್ವನಿಯಿಂದ ಮಾತನಾಡುತ್ತಾನೆ ಎಂದಾದರೆ, ನಮ್ಮ ನಡವಳಿಕೆ ಬಗ್ಗೆ ಪ್ರಶ್ನೆ ಮೂಡದೆ ಖಂಡಿತಾ ಇರದು. ಕನ್ನಡ ನಮ್ಮ ಮಾತೃಭಾಷೆ. ಆದರೆ ಪಾಶ್ಚಾತ್ಯರ ಇಂಗ್ಲಿಷ್ ಭಾಷೆಗೆ ನಾವು ಸೋತಾಗಿದೆ. ಹೌದು, ಇಂದು ಇಂಗ್ಲಿಷ್ ಬೇಕು. ಆದರೆ ನಮಗೆ, ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದರೂ ನಾವು ಕಣ್ಮುಚ್ಚಿ ಕುಳಿತಿದ್ದೇವೆ ಎಂದರೆ ಅದಕ್ಕೆ ಏನನ್ನಬೇಕು? ಇದು ನಮ್ಮ ಸ್ವಂತಿಕೆಯ ಪ್ರಶ್ನೆ. ನಮ್ಮವರು ರಾಬರ್ಟ್ ರಂಥವರನ್ನು ನೋಡಿ ಕಲಿವಂಥದ್ದು ಸಾಕಷ್ಟಿದೆ.

ಮಸ್ತಕಾಭಿಷೇಕದ ದಿನದಂದು ರತ್ನಗಿರಿ ಬೆಟ್ಟದಲ್ಲಿ ಮಿಂದು ಮೊಳಗುತ್ತಿದ್ದ ಗೊಮ್ಮಟ ಒಂದು ಕಡೆ ಸಂತೋಷ ಕುಣಿದಾಡಿದಂತೆ ಕಂಡುಬರುತ್ತಿದ್ದರೆ, ಇತ್ತ ನಾನು, ವಿದೇಶದಿಂದ ಬಂದ, ಅಷ್ಟೇ ಆತ್ಮೀಯನಂತೆ ಕಂಡು ಬಂದ, ಆಕಸ್ಮಿಕವಾಗಿ ಭೇಟಿ ಮಾಡಿದ ರಾಬರ್ಟ್ ಅವರೊಂದಿಗೆ ಮಾತುಕತೆ ನಡೆಸಿ ಹರ್ಷಚಕಿತನಾಗಿದ್ದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X