• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮದಾಸ್ ಗೆ ಅಕ್ಷರ ನಮಸ್ಕಾರನಿರುತ್ತರನಾದನೆ ಚಾರ್ವಾಕ?

By Staff
|

ಸಾಧ್ಯವಾದಷ್ಟೂ ತನ್ನ ಅಂತಃಸಾಕ್ಷಿಗೆ ಹತ್ತಿರವಾಗಿ ನಡೆದುಕೊಳ್ಳಬಲ್ಲ ದಿಟ್ಟ ಮನುಷ್ಯನನ್ನು ಕಂಡರೆ ವ್ಯವಸ್ಥೆ ಯಾಕೆ ಬೆಚ್ಚುತ್ತದೆ ಎಂಬುದು ಪ್ರೊ.ಕೆ.ರಾಮದಾಸರ ಬದುಕಿನ ರೀತಿಯನ್ನು ನೋಡಿದರೆ ಗೊತ್ತಾಗುತ್ತದೆ. ಬನ್ನಿ, ಗೊತ್ತು ಮಾಡಿಕೊಳ್ಳೋಣ...

K.Ramadasಸುಮಾರು 35ವರ್ಷಗಳ ಕಾಲ ಕರ್ನಾಟಕದ ಅನೇಕ ರೀತಿಯ ಚಳವಳಿಗಳನ್ನು ಜೀವಂತವಾಗಿರಿಸಿದವರು ಪ್ರೊ. ಕೆ ರಾಮದಾಸ್. ಮಹಾರಾಜ ಕಾಲೇಜಿನ ಕ್ಲಾಸುಗಳಲ್ಲಿ, ಮೈಸೂರಿನ ಮೂಲೆಗಳಲ್ಲಿ, ಕರ್ನಾಟಕದ ನೂರಾರು ಊರುಗಳಲ್ಲಿ ಮಾಡಿದ ಭಾಷಣದ ಮೂಲಕವೇ ನಾಡಿನ ರಾಜಕಾರಣ ಹಾಗೂ ಸಮಾಜವನ್ನು ಕಟುವಾಗಿ ವಿರ್ಮಶಿಸಿದವರು ಅವರು. ಎಲ್ಲಾ ಮುಖ್ಯ ಚಳವಳಿಗಳ ಜೊತೆಗಿದ್ದು, ಬರಬರುತ್ತ ಅವುಗಳ ರಾಜಿಗಳನ್ನು ಒಪ್ಪದೆ ದೂರಾದವರು. ಇದು ರಾಮದಾಸ್ ವ್ಯಕ್ತಿತ್ವದ ಮುಖ್ಯ ಗುಣವನ್ನು ಹೇಳುತ್ತದೆ.

ರಾಮದಾಸ್ ತಮಗನಿಸಿದ್ದನ್ನು ಹೇಳಬಲ್ಲವರಾಗಿದ್ದರಿಂದ ಅವರು ಯಾವುದೇ ಚಳವಳಿಗಳ ಜೊತೆ ನಿರಂತರವಾಗಿ ಇರಬಲ್ಲವರಾಗಿರಲಿಲ್ಲ. ನಿಜ, ಆದರೆ ಆ ಚಳವಳಿಗಳ ಮೂಲ ಸತ್ವವನ್ನು ಸದಾ ತಮ್ಮದೇ ರೀತಿಯಲ್ಲಿ ಹಬ್ಬಿಸಬಲ್ಲವರಾಗಿದ್ದರು. ರೈತ, ದಲಿತ, ಜಾತ್ಯತೀತ ಚಳವಳಿಗಳ ಕೇಂದ್ರ ಪ್ರಶ್ನೆಗಳನ್ನು ಅವರು ಏಕಾಂಗಿಯಾಗಿಯೂ ಕೈಗೆತ್ತಿಗೊಳ್ಳಬಲ್ಲವರಾಗಿದ್ದರು. ಸಾಮಾಜಿಕ ಬಿಕ್ಕಟ್ಟುಗಳು ಬಂದಾಗ ಇಡೀ ಕರ್ನಾಟಕದ ಪ್ರಗತಿಪರರು ರಾಮದಾಸರ ನಾಯಕತ್ವ, ಮಾರ್ಗದರ್ಶನಕ್ಕಾಗಿ ಅವರನ್ನು ಹುಡುಕಿಕೊಂಡು ಹೋಗುತ್ತಿದ್ದರು.

ಸಂಘಟನೆಗಳ ಬೆಂಬಲವಿರಲಿ, ಇಲ್ಲದಿರಲಿ ತಾವು ನಂಬಿದ್ದನ್ನು ಹೇಳಲು ರಾಮದಾಸ್ ಹಿಂಜರಿದವರಲ್ಲ. ಎದುರಿಗಿರುವುದು ಎಷ್ಟೇ ಅಧಿಕಾರಯುತ ಶಕ್ತಿಯಾಗಿರಲಿ, ಅದನ್ನು ಮುಖಾಮುಖಿಯಾಗಲು ಅವರು ಹಿಂದೆ ಮುಂದೆ ನೋಡಿದವರಲ್ಲ.

ಲಂಕೇಶರು ತಮ್ಮ “ಕಲ್ಲು ಕರಗುವ ಸಮಯ”ವನ್ನು “ಗೆಳೆಯ, ಶಿಷ್ಯ, ಮಾರ್ಗದರ್ಶಿ” ರಾಮದಾಸ್ ಗೆ ಅರ್ಪಿಸಿದ್ದು ರಾಮದಾಸ್ ಮತ್ತು ಲಂಕೇಶರ ವಿಶಿಷ್ಟ ಸಂಬಂಧವನ್ನು ಹೇಳುವಂತಿದೆ.

ಲಂಕೇಶರ ಬರಹ ಮತ್ತು ನಿಲುವುಗಳು, ಹಾದಿ ತಪ್ಪಿದ್ದು ಕಂಡಾಗಲೆಲ್ಲ ನೇರವಾಗಿ ಅವರನ್ನು ಟೀಕಿಸಬಲ್ಲವರಾಗಿದ್ದ ಕೆಲವೇ ಕೆಲವರಲ್ಲಿ ರಾಮದಾಸ್ ಒಬ್ಬರು. ಲಂಕೇಶರು ಆ ಬಗ್ಗೆ ಗೊಣಗುತ್ತಿದ್ದರೂ ರಾಮದಾಸರ ಮಾತಿನಲ್ಲಿದ್ದ ಸತ್ಯ ನಿಧಾನವಾಗಿ ಅವರ ಎದೆಗಿಳಿಯುತ್ತಿತ್ತು.

90ರ ದಶಕದಲ್ಲಿ ಲಂಕೇಶ್ ಹಾಗೂ ರಾಮದಾಸ್ ಪ್ರಗತಿ ರಂಗ ಎಂಬ ರಾಜಕೀಯ ಪಕ್ಷ ಕಟ್ಟಿ ಕರ್ನಾಟಕವನ್ನು ಎಚ್ಚರಿಸಲು ಯತ್ನಿಸಿದರು. ಲಂಕೇಶ್ ಹಾಗೂ ತೇಜಸ್ವಿ ನಡುವೆ ಬಿರುಕುಂಟಾದಾಗ ರಾಮದಾಸ್ ಒಳಗೊಳಗೆ ನೊಂದರು. ಅದು ಖಾಸಗಿ ನೋವಾಗಿರಲಿಲ್ಲ. ಬದಲಿಗೆ ಎರಡು ದೊಡ್ಡ ಶಕ್ತಿಗಳು ಒಟ್ಟಿಗೇ ಇದ್ದರೆ ಕರ್ನಾಟಕದ ಸಂಸ್ಕೃತಿಗೆ ದಕ್ಕಬಲ್ಲ ಹೊಸ ಸಾಧ್ಯತೆ ತಪ್ಪಿದ್ದನ್ನು ಕಂಡು ಹುಟ್ಟಿದ ನೋವಾಗಿತ್ತು ಅದು.

ಸಾಧ್ಯವಾದಷ್ಟೂ ತನ್ನ ಅಂತಃಸಾಕ್ಷಿಗೆ ಹತ್ತಿರವಾಗಿ ನಡೆದುಕೊಳ್ಳಬಲ್ಲ ದಿಟ್ಟ ಮನುಷ್ಯನನ್ನು ಕಂಡರೆ ವ್ಯವಸ್ಥೆ ಯಾಕೆ ಬೆಚ್ಚುತ್ತದೆ ಎಂಬುದು ರಾಮದಾಸರ ಬದುಕಿನ ರೀತಿಯನ್ನು ನೋಡಿದರೆ ಗೊತ್ತಾಗುತ್ತದೆ. ರಾಮದಾಸ್ ಜಾತ್ಯತೀತತೆಯನ್ನು ಪ್ರತಿಪಾದಿಸಿದ್ದಷ್ಟೇ ಅಲ್ಲ, ಅಂತರ್ಜಾತೀಯ ವಿವಾಹಗಳ ನಿರಂತರ ಬೆಂಬಲಿಗರೂ ಆಗಿದ್ದರು. ರಾಮದಾಸ್ ಮನೆಯಲ್ಲಿ ನಡೆದ ಅಂತರ್ಜಾತೀಯ ವಿವಾಹಗಳ ಸಂಖ್ಯೆ ದೊಡ್ಡದು.

ಕೆಲವೊಮ್ಮೆ ರಾಮದಾಸ್ ತಮ್ಮ ಮನೆ “ಚಾರ್ವಾಕ”ದ ಕಾಂಪೌಂಡಿನಲ್ಲಿ “ತೆರೆದ ಬಾಗಿಲು ನಾನು; ಸರ್ವಋತು ಬಂದರು” ಎಂಬ ಸಾಲನ್ನು ನೆನಪಿಸುವ ಹಾಗೆ ಪೇಪರ್ ಓದುತ್ತಾ ಕೂತಿರುತ್ತಿದ್ದರು. ಯಾವುದೋ ಊರಿನಿಂದ ಜಾತಿ ಮೀರಿ ಪ್ರೀತಿಯ ಆಶ್ರಯ ಹುಡುಕುತ್ತ ತರುಣ ಹಾಗೂ ತರುಣಿ ಅಳುಕುತ್ತ ಅವರ ಕಾಂಪೌಂಡಿನೊಳಗೆ ಹೆಜ್ಜೆ ಇಡುತ್ತಿದ್ದರು. ಆಗ ಸ್ವಾಮಿ ಆನಂದ್, ಉಗ್ರನರಸಿಂಹೇಗೌಡರಂತಹ ಬಂಟರಿಗೆ ರಾಮದಾಸರ ಬುಲಾವ್ ಹೋಗುತ್ತಿತ್ತು.

ಒಂದೆರಡು ದಿನಗಳಲ್ಲೇ ರಾಮದಾಸರ ಮನೆಯ ಟೆರೇಸ್ ಮೇಲೆ ಸರಳ ಅಂತರ್ಜಾತಿ ವಿವಾಹ ಏರ್ಪಾಡಾಗುತ್ತಿತ್ತು. ಎಲ್ಲಾ ಸಾಮಾಜಿಕ ಚಳವಳಿಗಳೂ ಕ್ಷೀಣವಾದಾಗ ರಾಮದಾಸ್ ಈ ವಿವಾಹಗಳನ್ನೇ ಒಂದು ಚಳವಳಿಯಾಗಿಸಬಲ್ಲ ಜಾತ್ಯತೀತ ಒಲವಿನ ವೇದಿಕೆ “ಮಾನವ ಮಂಟಪ”ವನ್ನು ಕಟ್ಟಿದರು. ಈ ವಿವಾಹಿತರೆಲ್ಲ ಬರಬರುತ್ತಾ ಕರ್ನಾಟಕದ ಜಾತ್ಯತೀತ ಪಡೆಗಳಾಗಿ ಪರಿವರ್ತಿತರಾಗುತ್ತಿದ್ದರು.

ರಾಮದಾಸ್ ಕರ್ನಾಟಕದಲ್ಲಿ ಲೋಹಿಯಾ ವಾದವನ್ನು ಜೀವಂತವಾಗಿರಿಸಿದ್ದ ಕೆಲವೇ ಚಿಂತಕರಲ್ಲಿ ಒಬ್ಬರು. ಹರೆಯದಿಂದಲೂ ಲೋಹಿಯಾ ಚೈತನ್ಯ ಅವರಲ್ಲಿ ಹರಿಯುತ್ತಿತ್ತು. ಲೋಹಿಯಾ ಬರಹಗಳಲ್ಲಿ ವ್ಯಕ್ತವಾಗುವ ಅನೇಕ ನಿಲುವುಗಳು ಹೆಚ್ಚು ಪ್ರಖರವಾಗಿ ಕಾಣುತ್ತಿದ್ದದ್ದು ಪ್ರೊ.ನಂಜುಂಡಸ್ವಾಮಿ ಹಾಗೂ ರಾಮದಾಸರಲ್ಲಿಯೇ. ಕಾಂಗ್ರೆಸ್, ಬಿಜೆಪಿಗಳ ಬಗ್ಗೆ ರಾಮದಾಸರ ತಾತ್ವಿಕ ನಿಲುವುಗಳು ಹಾಗೂ ಬೀದಿ ಹೋರಾಟಗಳು ಲೋಹಿಯಾವಾದಿ ಚಿಂತನೆಯ ಮೇಲೇ ರೂಪುಗೊಂಡಿದ್ದವು. ಹಾಗೆಯೇ ವ್ಯವಸ್ಥೆಯ ವಿರುದ್ಧ ಅವರ ತೀಕ್ಷ್ಣ ಪ್ರಹಾರಗಳು ಕೂಡ ಲೋಹಿಯಾವಾದಿ ತಾತ್ವಿಕತೆಯಿಂದಲೇ ಚಿಮ್ಮುತ್ತಿದ್ದವು.

ಇಂದಿರಾಗಾಂಧಿಯವರ ಎಮರ್ಜೆನ್ಸಿ, ಬೂಸಾ ಪ್ರಕರಣಗಳಿಂದ ಹಿಡಿದು ಬಾಬಾ ಬುಡನ್ ಗಿರಿಯ ಮತೀಯ ರಾಜಕಾರಣದವರೆಗೂ ರಾಮದಾಸರ ನಿಲುವು ಕರ್ನಾಟಕದ ಜನಪರ ಚಳವಳಿಗಳನ್ನು ಜೀವಂತವಾಗಿರಿಸುವ ದ್ರವ್ಯಗಳಲ್ಲೊಂದಾಗಿತ್ತು. ಲೋಹಿಯಾವಾದದ ಕರ್ನಾಟಕದ ಮಾದರಿಯನ್ನು ಹುಡುಕುವವರು ರಾಮದಾಸ್ ಸಂಘಟಿಸಿದ ಹೋರಾಟ, ಚರ್ಚೆ, ಪ್ರತಿಭಟನೆಗಳಲ್ಲಿ ಆ ಮಾದರಿಯನ್ನು ಸ್ಪಷ್ಟವಾಗಿ ಕಾಣಬಹುದು.

ಗೆಳೆಯ ತೇಜಸ್ವಿ ತೀರಿಕೊಂಡ ಮೇಲೆ ರಾಮದಾಸ್ ಒಳಗೇ ಕುಸಿಯತೊಡಗಿದ್ದರೆಂದು ಅವರ ಜೊತೆಗಿದ್ದವರು ಹೇಳುತ್ತಿದ್ದರು. “ನಾವೆಲ್ಲಾ ಈ ಭೂಮಂಡಲದ ಎನ್ ಡೇಂಜರ್ಡ್ ಸ್ಪೀಶೀಸ್ ಕಣ್ರೀ” ಎಂದು ಅವರು ತಮ್ಮನ್ನು ತಾವು ತಮಾಷೆ ಮಾಡಿಕೊಳ್ಳುತ್ತಿದ್ದರು. ಹತ್ತು ವರ್ಷಗಳ ಕೆಳಗೆ ಅವರಿಗೆ ಹೃದಯಾಘಾತವಾದಾಗ ರಾತ್ರಿ ನಾನು ಅವರ ಬಳಿ ಇದ್ದೆ. ಆಪರೇಷನ್ ಮಾಡಿಸಿಕೊಳ್ಳದೆ ಮಾತ್ರೆಗಳಲ್ಲೇ ಅದನ್ನೆಲ್ಲ ಗೆಲ್ಲಲು ನೋಡಿದರು.

ರಾಮದಾಸ್ ತಮ್ಮ ಸ್ವಂತದ ಏಳುಬೀಳುಗಳ ಬಗ್ಗೆ ಹೆಚ್ಚು ಮಾತಾಡಿದವರಲ್ಲ. ಅವರು ಸಮಾಜವನ್ನು ಪೂರ್ತಿ ಒಳಗೆ ತೆಗೆದುಕೊಂಡು ನವೆದವರು. ಎರಡು ತಿಂಗಳ ಹಿಂದೆ ತೇಜಸ್ವಿಯವರ “ನಿರುತ್ತರ”ದಿಂದ ಬಂದ “ಚಾರ್ವಾಕ” ಕೂಡ ನಿರುತ್ತರನಾಗಿಬಿಟ್ಟನೆ?

ರಾಮದಾಸರ ಶಾಶ್ವತ ಮೌನ ನಮ್ಮೆಲ್ಲರಲ್ಲೂ ವಿಚಿತ್ರ ಅಸಹಾಯಕತೆ ಹಾಗೂ ತಬ್ಬಲಿತನ ಮೂಡಿಸುತ್ತಿದೆ.

(http://avadhi.wordpress.com/ ನಿಂದ ಕೇಳಿ ಪಡೆದದ್ದು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X