ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಸರ್ಗೋಪಚಾರ ತಜ್ಞ ವಿಠ್ಠಲದಾಸ ಮೋದಿ- ಒಂದು ಪರಿಚಯ

By Staff
|
Google Oneindia Kannada News

ಉತ್ತರ ಭಾರತದಲ್ಲಿಯೇ ಅತಿ ದೊಡ್ಡ ನಿಸರ್ಗೋಪಚಾರ ಕೇಂದ್ರವೆಂದರೆ ಗೋರಖಪುರದಲ್ಲಿರುವ ಮೋದಿಯವರ ‘ಆರೋಗ್ಯ ಮಂದಿರ’. ಅದರ ಜನಕ ಅಭಿನವ ಧನ್ವಂತರಿಯೆಂದೇ ಪ್ರಸಿದ್ಧಿ ಪಡೆದ ವಿಠ್ಠಲದಾಸ ಮೋದಿ.

ತನ್ನ ಜೀವಮಾನದಲ್ಲೇ ದಂತಕತೆಯಾಗಿದ್ದ ವಿಠ್ಠಲದಾಸ ಮೋದಿಯವರನ್ನು ಪ್ರತ್ಯಕ್ಷ ಕಾಣುವ ಅವರೊಡನೆ ಎರಡು ಮೂರು ಸಲ ಗಂಟೆಗಟ್ಟಲೆ ಕಾಲ ಕಳೆಯುವ ಸೌಭಾಗ್ಯ ನನ್ನದಾಗಿತ್ತು. ಅವರ ಜೀವನ ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಪುಸ್ತಕ, ‘ವಿಠ್ಠಲದಾಸ್‌ ಮೋದಿ ಹೋನೇ ಕಾ ಅರ್ಥ್‌’ (ಇದೊಂದು ವಿನೂತನ ಪುಸ್ತಕ, ಇದಕ್ಕೆ ‘ಓಮ್ನಿ ಬುಕ್‌’ ಎಂದು ಲೇಖಕ ಡಾ। ಕಾಂತಿಕುಮಾರ ಕರೆಯುತ್ತಾರೆ), ಇನ್ನೊಂದು ಪುಸ್ತಕ ಅವರೇ ಬರೆದಿರುವ ಸುಪ್ರಸಿದ್ಧವಾದ ಹಾಗೂ ದಾಖಲೆ ನಿರ್ಮಿಸಿದ ಕೃತಿ ‘ರೋಗೋಂ ಕೀ ಸರಲ್‌ ಚಿಕಿತ್ಸಾ’ . ಈ ಪುಸ್ತಕಗಳು ಅವರು ನನಗೆ ಕೊಟ್ಟ ಅವಿಸ್ಮರಣಿಯ ಕಾಣಿಕೆಗಳಾಗಿವೆ. ಈ ಪುಸ್ತಕಗಳ ಓದು ನನಗೆ ಹೊಸಸ್ಫೂರ್ತಿಯನ್ನು ನೀಡಿದೆ, ಬೆಳಕನ್ನು ಚೆಲ್ಲಿದೆ.

Krishna Murari Modi, Vithaldas Modi and G.V. Kulkarniರಾಜಸ್ಥಾನದ ನವಲಗಢದಿಂದ 30 ಕಿಲೋ ಮೀಟರ್‌ ದೂರದಲ್ಲಿರುವ ಚಿಕ್ಕ ಹಳ್ಳಿ, ಗೌಡಜಿ ಕಾ ಗುಢಾದಲ್ಲಿ ಇವರ ಪೂರ್ವಜರು ಕಟ್ಟಿಸಿದ ಹವೇಲಿ ಇದೆ. ಬದಿಯಲ್ಲಿ ಒಂದು ‘ಸತಿ ಮಂದಿರ’ ಇದೆ. ಇವರ ಮನೆತನ ಗೋರಖಪುರಕ್ಕೆ ವಲಸೆ ಬಂದಿದ್ದರೂ ಪ್ರತಿ ವರ್ಷ ಭಾದ್ರಪದ ಮಾಸದ ಸಪ್ತಮಿಯ ದಿನ ಇವರ ಪರಿವಾರದವರೆಲ್ಲ ತಮ್ಮ ಹಳ್ಳಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಇವರೀಗ ಗೋರಖಪುರದವರೇ ಆಗಿದ್ದಾರೆ. ಗೋರಖಪುರ ಎಂದೊಡನೆ ಸಚಿತ್ರ ‘ಕಲ್ಯಾಣ’ ಧಾರ್ಮಿಕ ಮಾಸ ಪತ್ರಿಕೆ, ಸುಲಭ ಬೆಲೆಯಲ್ಲಿ ಭಗವದ್ಗೀತೆಯನ್ನು ಅಚ್ಚುಹಾಕುವ ‘ಗೋರಖ್‌ಪೂರ್‌’ ಪ್ರೆಸ್‌ ನೆನಪಿಗೆ ಬರುತ್ತವೆ. ಈಗ ಇವರ ‘ಆರೋಗ್ಯ ಮಂದಿರ’ ಗೋರಖಪುರದ ಪ್ರಸಿದ್ಧಿಗೆ ಮತ್ತೊಂದು ಕಾರಣವಾಗಿದೆ.

ವಿದ್ಯಾಭ್ಯಾಸ : ವಿಠ್ಠಲದಾಸರು 1912ರಲ್ಲಿ ಗೋರಖಪುರದಲ್ಲಿ ಜನಿಸಿದರು. ಉಚ್ಚ ವ್ಯಾಸಂಗಕ್ಕಾಗಿ ಬನಾರಸ ಹಿಂದೂ ವಿಶ್ವವಿದ್ಯಾಲಯ ಸೇರಿದರು. ಇವರಲ್ಲಿ ಇಚ್ಛಾಶಕ್ತಿ, ಸಂಕಲ್ಪ ಶಕ್ತಿ ಅಗಾಧವಾಗಿತ್ತು. ಇವರು ಹಾಸ್ಟೆಲ್‌ ಸೇರಿದಾಗ ಇವರ ವಿಂಗ್‌ನಲ್ಲಿ 13 ಕೋಣೆಗಳಿದ್ದವು. 25 ವಿದ್ಯಾರ್ಥಿಗಳಿದ್ದರು. ಒಂದು ಕೋಣೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಸೇರಿಸಲಾಯಿತು. ಒಬ್ಬ ವಿದ್ಯಾರ್ಥಿಗೆ ಮಾತ್ರ ಸಿಂಗಲ್‌ ರೂಮ್‌ ದೊರೆಯುವುದು ಸಾಧ್ಯವಿತ್ತು. ಎಲ್ಲರೂ ಆ ರೂಮಿಗಾಗಿ ಸ್ಪರ್ಧಿಸುವವರೇ.

ವಾರ್ಡನ್‌ ಎಲ್ಲರಿಗೂ ‘ಒಂದು ಹೆಸರು ಬರೆದು ಒಂದು ಬಾಕ್ಸ್‌ನಲ್ಲಿ ಹಾಕಲು ಹೇಳಿದರು. ಒಂದು ಹೆಸರನ್ನು ಡ್ರಾ ಮಾಡೋಣ. ಅದೃಷ್ಟವಂತರಿಗೆ ರೂಮು ದೊರೆಯುತ್ತದೆ’ ಎಂದರು. ಮೋದಿಯವರು ಚೇಷ್ಟೆಗೆ ‘‘ಎಲ್ಲರೂ ನನ್ನ ಹೆಸರು ಬರೆಯಿರಿ’’ ಎಂದರು. ಯಾರೂ ಒಪ್ಪಲಿಲ್ಲ. ‘‘ನೀವು ಯಾವ ಹೆಸರು ಬರೆದರೂ ಆ ರೂಮು ದೊರೆಯುವುದು ನನಗೇ’’ ಎಂದು ಘೋಷಿಸಿದರು. ಮುಂದೆ ಇವರಿಗೇ ರೂಮು ದೊರೆತಾಗ ಎಲ್ಲರೂ ತಬ್ಬಿಬ್ಬಾದರು. ಯಾವುದನ್ನೇ ಇಚ್ಛಿಸಿದರೂ ಅದನ್ನು ಪಡೆಯುವ ಸಂಕಲ್ಪ ಅವರಲ್ಲಿತ್ತು.

ಆಸಕ್ತಿ-ಅಭಿರುಚಿ : ಕತೆ, ಕವಿತೆ ಬರೆಯುತ್ತಿದ್ದರು. ಹಿಂದೀ ಸಾಹಿತ್ಯ ಅವರಿಗೆ ಪ್ರಿಯವಾದ ವಿಷಯವಾಗಿತ್ತು. ಬಿ.ಎ., ಆದ ಮೇಲೆ ಎಂ.ಎ., ಮಾಡಬೇಕು ಪ್ರಾಧ್ಯಾಪಕನಾಗಬೇಕೆಂದು ಅವರ ಇಚ್ಛೆಯಾಗಿತ್ತು. ಬಿ.ಎ., ನಂತರ ಮೂರು ವರ್ಷ ಅವರ ದೇಹಸ್ಥಿತಿ ಸರಿಯಾಗಿರಲಿಲ್ಲ. ಯಾವ ಡಾಕ್ಟರರೂ ಯಾವ ಔಷಧಿಯೂ ಅವರನ್ನು ಗುಣಪಡಿಸಲಿಲ್ಲ. ಅವರ ಮುಂದಿನ ಓದಿಗೆ ಭಂಗ ಬಂತು. ಆದರೆ ಇದು ಅವರ ಜೀವನದಲ್ಲಿ ಒಂದು ಪರಿವರ್ತನೆಯನ್ನೂ ತಂದಿತು.

ಅವರು ನಿಸರ್ಗ ಚಿಕಿತ್ಸೆಯ ಮೇಲಿದ್ದ ಪುಸ್ತಕಗಳನ್ನು ಅಧ್ಯಯನ ಮಾಡತೊಡಗಿದರು. ತಮ್ಮ ರೋಗವನ್ನು ತಾವೇ ವಾಸಿ ಮಾಡಿಕೊಂಡರು. ಅವರ ಸ್ವಾಸ್ಥ್ಯ ಮೊದಲಿಗಿಂತಲೂ ಅಧಿಕ ಉತ್ತಮವಾಯಿತು. ತಾವು ಪಡೆದ ಲಾಭ ಇತರರಿಗೆ ಹಂಚತೊಡಗಿದರು. 1940ರಲ್ಲಿ ಇವರು ಗೋರಖಪುರದಲ್ಲಿ ‘ಆರೋಗ್ಯ ಮಂದಿರ’ ಸ್ಥಾಪಿಸಿದರು. ಅವರಿಗಾಗ 32 ವರ್ಷ. ಅವರು ರಾಷ್ಟ್ರೀಯ ಚಳವಳಿಯಲ್ಲಿ ಮುನ್ನುಗ್ಗಿ ಜೈಲು ವಾಸ ಅನುಭವಿಸಿದರು. ಜೈಲಿನಲ್ಲಿ ಕೂಡ ಅವರು ನಿಸರ್ಗ ಚಿಕಿತ್ಸೆಗೆ ಸಂಬಂಧಪಟ್ಟ ಪುಸ್ತಕಗಳ ಆಳವಾದ ಅಧ್ಯಯನ ನಡೆಸಿದರು. 1947ರಲ್ಲಿ ಅವರು ‘ಆರೋಗ್ಯ’ ಎಂಬ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು. ಇದಕ್ಕೆ ಅಭೂತಪೂರ್ವ ಯಶಸ್ಸು ದೊರಕಿತು. ಅಂದಿನಿಂದ ಇಂದಿನ ವರೆಗೆ ಪತ್ರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಈಗ ಅವರ ಮಕ್ಕಳು ಅದನ್ನು ಸಂಪಾದಿಸುತ್ತಾರೆ.

ಪುಸ್ತಕ ಪ್ರಕಟಣೆ : 1951ರಲ್ಲಿ ಅವರ ಪ್ರಥಮ ಪುಸ್ತಕ, ‘ ರೋಗೋಂ ಕೀ ಸರಲ್‌ ಚಿಕಿತ್ಸಾ’, ಹೊರಬಂತು. ಆ ಕಾಲದಲ್ಲಿ ಒಂದು ಸಾವಿರ ಪ್ರತಿ ಸಾಕಾಗುತ್ತಿತ್ತು. ಇವರ ಉತ್ಸಾಹ ನೋಡಿ ಮಿತ್ರರು, ‘2000 ಪ್ರತಿ ಪ್ರಕಟಿಸಬಹುದು ಆದರೆ ಮಾರಾಟವಾಗದಿದ್ದರೆ ಗೋಡೌನಿನಲ್ಲಿ ಕೊಳೆಯುತ್ತವೆ. ಹಾಕಿದ ಹಣ ದಂಡವಾಗುತ್ತದೆ’ ಎಂದು ಬುದ್ಧಿ ಹೇಳಿದರು. ಆದರೆ ಮೋದಿಯವರಿಗೆ ತಮ್ಮ ಬಗ್ಗೆ, ತಮ್ಮ ಕೃತಿಯ ಮಾರಾಟದ ಬಗ್ಗೆ ವಿಶ್ವಾಸವಿತ್ತು. ಪ್ರಿಂಟರನನ್ನು ಕರೆದು ಕೇಳಿದರು, ‘ಎರಡು ಸಾವಿರ ಪ್ರತಿಗೆ ಎಷ್ಟು ವೆಚ್ಚ?’ ಎಂದು. ‘ನಾಲ್ಕು ಸಾವಿರ’ ಎಂದ. ‘ಐದು ಸಾವಿರ ಪ್ರತಿಗಳಿಗೆ ಎಷ್ಟು?’ಎಂದು ಕೇಳಿದಾಗ, ‘ಏಳು ಸಾವಿರ’ ಅವನೆಂದ. ‘ಹಾಗಾದರೆ ಎಂಟು ಸಾವಿರ ಪ್ರತಿ ಮುದ್ರಿಸಿದರೆ?’ ಎಂದು ಕೇಳಿದರು. ‘ಎಂಟು ಸಾವಿರ’ ಎಂಬ ಉತ್ತರ ಬಂತು.

ಮೋದಿಯವರು ತಮ್ಮ ಮನದಲ್ಲಿಯೇ ಲೆಕ್ಕ ಹಾಕಿದರು. ಪುಸ್ತಕದ ಬೆಲೆ ಮೂರು ರೂಪಾಯಿ ಇಡಬೇಕು. ಒಂದು ರೂಪಾಯಿ ಕಮೀಶನ್‌ ಹೋದರೂ, ಒಂದು ರೂಪಾಯಿ ಲಾಭವಾಗುತ್ತದೆ. ತಮ್ಮ ‘ಆರೋಗ್ಯ ಮಂದಿರ’ದಲ್ಲಿ ದಾಖಲಾದವರಿಗೂ 25% ರಿಯಾಯಿತಿ ನೀಡಬೇಕು ಎಂದೂ ನಿಶ್ಚಯಿಸಿದರು. ಎಂಟು ಸಾವಿರ ಪ್ರತಿ, ಅದೂ ಮೊದಲ ಮುದ್ರಣದಲ್ಲಿ. ಯಾರಿಗೂ ಈ ದುಸ್ಸಾಹಸ ಸರಿಬರಲಿಲ್ಲ. ಎಲ್ಲ ಮಿತ್ರರು ತಪ್ಪಿದರು. ಮೋದಿಯವರೇ ಸರಿಯಾಗಿದ್ದರು. ಒಂದೇ ವರ್ಷದಲ್ಲಿ ಎಲ್ಲ ಪುಸ್ತಕ ಮಾರಟವಾದವು.

ಎರಡನೆಯ ಮುದ್ರಣ ಮತ್ತೆ 5000 ಪ್ರತಿ ಸಿದ್ಧವಾಯ್ತು. ಮುಂದೆ ಪರಿಷ್ಕರಿಸಿದರು, ಹೆಚ್ಚಿನ ಮಾಹಿತಿ ಸೇರಿಸಿದರು. ನನಗೆ ಅವರು ಕೊಟ್ಟ ಪ್ರತಿ, 1993ರಲ್ಲಿ ಪ್ರಕಟಗೊಂಡ ಹದಿಮೂರನೆಯ ಪುನರ್‌ ಮುದ್ರಣ. 1994ರಲ್ಲಿ ಅವರ ಮಗ ಕೃಷ್ಣ ಮುರಾರಿಯವರ ಮನೆಯಲ್ಲಿ ಭೆಟ್ಟಿಯಾಗಿದ್ದೆ. ಅದೇ ಅವರ ಅಂತಿಮ ಭೆಟ್ಟಿಯಾಯಿತು. ಅದೇ ವರ್ಷ ನಾನು ಪ್ರಕಟಿಸುತ್ತಿದ್ದ ‘ಗುಡ್‌-ಬಾಯ್‌ ಡಾಕ್ಟರ್‌’ ಎಂಬ ಪತ್ರಿಕೆಯಲ್ಲಿ ಅವರೊಂದಿಗೆ ನಾನು ತೆಗೆಸಿದ ಭಾವಚಿತ್ರ ಪ್ರಕಟವಾಗಿತ್ತು.

ಈ ಪುಸ್ತಕಕ್ಕೆ ಸಂಬಂಧಿಸಿದ ಒಂದು ರೋಚಕ ಘಟನೆಯ ಬಗ್ಗೆ ಇಲ್ಲಿ ಬರೆಯಬೇಕೆನಿಸುತ್ತದೆ. ಒಂದು ದಿನ ಈ ಪುಸ್ತಕಕ್ಕೆ 500 ಪ್ರತಿಗಳಿಗಾಗಿ ಒಂದೇ ಪಾರ್ಟಿಯಿಂದ ಆರ್ಡರ್‌ ಬಂತಂತೆ. ವಿಠ್ಠಲದಾಸರಿಗೆ ಪರಮಾನಂದ, ಪರಮಾಶ್ಚರ್ಯ ಕೂಡ. ನಂತರ ಕೆಲವು ತಿಂಗಳ ಮೇಲೆ ಸತ್ಯ ಸಂಗತಿ ತಿಳಿಯಿತಂತೆ. ಒಬ್ಬ ವ್ಯಕ್ತಿ ಇವರ ‘ಆರೋಗ್ಯ ಮಂದಿರ’ದಲ್ಲಿ ಇದ್ದನಂತೆ. ತನ್ನ ಕಾಯಿಲೆಯನ್ನು ಗುಣಪಡಿಸಿಕೊಂಡ ಮೇಲೆ ಮರಳಿದ್ದನಂತೆ. ಅವನು ಮುಂದೆ ಒಂದು ಡಿಸ್ಟ್ರಿಕ್ಟ್‌ ಬೋರ್ಡಿನ ಚೇರಮನ್ನನಾದನಂತೆ. ಅವನು ತನ್ನ ಜಿಲ್ಲೆಯ ಎಲ್ಲ ಲೈಬ್ರರಿಗಳಲ್ಲಿ ಈ ಪುಸ್ತಕ ಇರಬೇಕೆಂದು ಶಿಫಾರಸು ಮಾಡಿ ಐದುನೂರು ಪ್ರತಿ ತರಿಸಿದ್ದನಂತೆ.

ವಿಠ್ಠಲದಾಸರಿಗೆ ಮೂರು ಗಂಡುಮಕ್ಕಳು. ಚತುರ್ಭುಜ, ಕೃಷ್ಣ ಮುರಾರಿ, ವಿಮಲಕುಮಾರ. ಮೂವರೂ ಎಂ.ಬಿ.ಬಿ.ಎಸ್‌. ಪದವಿ ಗಳಿಸಿದ ಡಾಕ್ಟರರೇ. ತಂದೆಯ ಪ್ರಭಾವ ಮಕ್ಕಳ ಮೇಲೆ ಎಷ್ಟೊಂದಾಗಿತ್ತೆಂದರೆ, ಅವರೆಲ್ಲ ತಮ್ಮ ಅಲೋಪತಿ ಪ್ರ್ಯಾಕ್ಟೀಸ್‌ ಬಿಟ್ಟು ತಂದೆಯ ಭವ್ಯವಾದ ಕ್ಯಾಂಪಸ್‌ನಲ್ಲಿ ನಿಸರ್ಗೋಪಚಾರ ಚಿಕಿತ್ಸೆ ಕೊಡಲು ಮಗ್ನರಾದರು. ಇದು ‘ನ ಭೂತೋ ನ ಭವಿಷ್ಯತಿ’ ಆದ ಸಂಗತಿ. ಎರಡನೆಯ ಮಗ, (ನನ್ನ ಮಿತ್ರ) ಕೃಷ್ಣ ಮುರಾರಿ ಉಚ್ಚ ಶಿಕ್ಷಣಕ್ಕಾಗಿ ಇಂಗ್ಲಂಡಿಗೆ ತೆರಳಿದರು. ಅಲ್ಲಿ ಕಲಿತದ್ದು ನಿಸರ್ಗ ಚಿಕಿತ್ಸೆ ಹಾಗೂ ಔಷಧಿರಹಿತ ಚಿಕಿತ್ಸೆಗೆ ಅನುಕೂಲವಾದ ‘ಒಸ್ಟಿಯೋಪಥಿ’ ಎಂಬ ಮಸಾಜುಕಲೆ.

ಒಬ್ಬ ಪೇಷಂಟ್‌ ನೋಡಲು ಮುಂಬೈಗೆ ಬಂದರು. ಅವರ ಕೈಚಳಕ, ‘ಹೀಲಿಂಗ್‌ ಟಚ್‌’ಗೆ ಮುಂಬೈ ಜನ ಮೋಹಿತರಾದರು. ಕೋಲಾಬಾದ ಕಫ್‌ ಪರೇಡ್‌ನಲ್ಲಿ ಪ್ರ್ಯಾಕ್ಟೀಸ್‌ ಶುರು ಮಾಡಿದರು. ಹತ್ತು ವರ್ಷಗಳ ಕೆಳಗೆ ಕರ್ಜತ್‌ನಲ್ಲಿ 50 ಎಕರೆ ಜಾಗೆಯಲ್ಲಿ 80 ಕಾಟೇಜ್‌ ಕಟ್ಟಿದ್ದಾರೆ, ‘ಕಾಯಕಲ್ಪ’ ಕೇಂದ್ರ ತೆರೆದಿದ್ದಾರೆ. ಅಲ್ಲಿ ಗೋಲ್ಫ್‌ ಕ್ಲಬ್‌ ಇದೆ, ಈಜುಗೊಳವಿದೆ, ನಿಸರ್ಗ ಚಿಕಿತ್ಸೆಯ ಎಲ್ಲ ಸೌಲಭ್ಯ ಅಲ್ಲಿದೆ.

ಬದುಕು : ವಿಠ್ಠಲದಾಸರಿಗೆ ಕೃಷ್ಣಾ ಎಂಬ ಹಿರಿಯ ಮಗಳಿದ್ದಾಳೆ. ಅವಳ ಮದುವೆ ಮಾಡಲು ಹೊರಟಾಗ ಇವರಲ್ಲಿ ಹಣವಿರಲಿಲ್ಲ. ಕನಿಷ್ಟ 20-25 ಸಾವಿರ ಖರ್ಚು ಮಾಡಬೇಕಿತ್ತು. ಆಗ ಅವರ ‘ಆರೋಗ್ಯ’ ಪತ್ರಿಕೆಗೆ ಎಂಟು ಸಾವಿರ ಚಂದಾದಾರರಿದ್ದರು. ಅದರ ವಾರ್ಷಿಕ ಚಂದಾ ನಾಲ್ಕು ರೂಪಾಯಿ ಇತ್ತು. ಅದರ ಚಂದಾಹಣ ಒಂದು ರೂಪಾಯಿ ಹೆಚ್ಚಿಸಿದರು. ಎಂಟು ಸಾವಿರ ಮಗಳ ಹೆಸರಿಗೆ ತೆಗೆದಿಟ್ಟರು. ಮೂರು ವರ್ಷಗಳಲ್ಲಿ ಆ ಹಣ 24 ಸಾವಿರ ಆಯಿತು. ಆಗ ಅವರು ಮಗಳ ಮದುವೆ ಮಾಡಿದರು.

ಇವರು ಒಂದು ರೀತಿಯಲ್ಲಿ ಆದರ್ಶವಾದಿಗಳು, ಗಾಂಧೀಜಿಯವರ ಭಕ್ತರು. ಒಂದು ಪೈಸೆ ಕೂಡಾ ‘ದಹೇಜ್‌’ (ವರದಕ್ಷಿಣೆ) ಪಡೆಯದೆಯೆ ಗಂಡುಮಕ್ಕಳ ಮದುವೆ ಮಾಡಿದರು. ಮೊದಲನೆಯ ಮಗ ಚತುರ್ಭುಜನಿಗೆ ಉಮಾ ಎಂಬ ಕನ್ನೆಯನ್ನು ಆರಿಸಿದರು. ಎರಡನೆಯ ಮಗ ಅದೇ ಇಂಗ್ಲಂಡದಿಂದ ಮರಳಿದ್ದ. ಹಣ ಸುರಿಯುವವರಿಗೆ ಕಡಿಮೆ ಇರಲಿಲ್ಲ. ರಸಾಯನಶಾಸ್ತ್ರದಲ್ಲಿ ಎಂ.ಎಸ್‌ಸಿ., ಪದವೀಧರೆಯಾದ ಉಷಾ ಎಂಬವಳನ್ನು ಸೊಸೆಯಾಗಿ ಪಡೆದರು.

ಮೂರನೆಯ ಮಗನ ಮದುವೆಯ ಘಟನೆ ಮೋಜಿನದಾಗಿದೆ. ಅವನು (ವಿಮಲಕುಮಾರ) ಗೋರಖಪುರ ಮೆಡಿಕಲ್‌ ಕಾಲೇಜಿನಲ್ಲಿ ಓದುತ್ತಿದ್ದ. ಆ ಕಾಲೇಜಿನ ಮಹಿಳಾ ಹಾಸ್ಟೆಲ್‌ನಲ್ಲಿ ಒಂದು ದಿನ ಲೈಟು, ನೀರು ಇರಲಿಲ್ಲ. ವಿದ್ಯಾರ್ಥಿನಿಯರಿಗೆ ಊಟದ ಸಮಸ್ಯೆಯಾಯಿತು. ಪ್ರಿನ್ಸಿಪಾಲರು ನಾಲ್ಕನೆಯ ವರ್ಷದ ವಿದ್ಯಾರ್ಥಿಯಾಗಿದ್ದ ವಿಮಲಕುಮಾರನನ್ನು ಕರೆದು ಸಮಸ್ಯೆ ವಿವರಿಸಿ ಹೇಳಿದರು,

‘‘ನಿಮ್ಮ ‘ಆರೋಗ್ಯ ಮಂದಿರ’ದಲ್ಲಿ ಮೆಸ್‌ ಇದೆ. ಅಲ್ಲಿ ಈ ಹುಡುಗಿಯರಿಗೆ ಊಟದ ವ್ಯವಸ್ಥೆ ಮಾಡಲು ನಿಮ್ಮ ತಂದೆಯವರಿಗೆ ನನ್ನ ಪರವಾಗಿ ವಿನಂತಿಸುವೆಯಾ?’’ ಅವನು ಎಲ್ಲ ಹುಡುಗಿಯರನ್ನು ಕರೆದುಕೊಂಡು ಬಂದನು. ಅವರಿಗೆಲ್ಲ ಊಟದ ವ್ಯವಸ್ಥೆಯಾಯಿತು. ಅದರಲ್ಲಿ ಮೊದಲನೆಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಸ್ಮಿತಾ ಎಂಬವಳು ಲೀಡರ್‌ ಆಗಿದ್ದಳು. ಅವಳನ್ನು ಕಂಡು ಆಕರ್ಷಿತರಾದ ವಿಠ್ಠಲದಾಸರು ಅವಳಿಗೆ ಕೇಳಿದರು, ‘‘ಎಂ.ಬಿ.ಬಿ.ಎಸ್‌. ಆದ ಮೇಲೆ ಏನು ಮಾಡುವ ವಿಚಾರವಿದೆ?’’ ಎಂದು. ಸ್ಮಿತಾ ಧೈರ್ಯದಿಂದ ಉತ್ತರಿಸಿದಳು,‘‘ಆರಾಮಾಗಿರಲು ಒಂದು ಮನೆ ಸಿಕ್ಕರೆ ನಾನು ನೌಕರಿ ಮಾಡುವುದಿಲ್ಲ’’. ‘‘ಸಿಗುತ್ತದೆ’’ ಎಂದು ಆಶೀರ್ವದಿಸಿದರು. ಮುಂದೆ ಅದೇ ಕನ್ನೆ ಅವರ ಸೊಸೆಯಾಗಿ ಬಂದಳು.

ಅದು ಅಂತರ್ಜಾತಿ ವಿವಾಹ ಎಂದು ಕೆಲವರು ಹುಬ್ಬೇರಿಸಿದರು. ವಿಠ್ಠಲದಾಸರದು ದೊಡ್ಡ ಮನಸ್ಸು. ಅವಳನ್ನು ಮಗಳಾಗಿ ಸ್ವೀಕರಿಸಿದರು. ಅವಳು ಒಂದು ಲೇಖನದಲ್ಲಿ ಈ ಮನೆಯನ್ನು ಎರಡನೆಯ ತವರುಮನೆ ಎಂದು ಕರೆದಿದ್ದಾಳೆ.

ಇವರ ‘ಆರೋಗ್ಯ ಮಂದಿರ’ ಇಷ್ಟೊಂದು ಖ್ಯಾತಿ ಪಡೆಯಲು ಇನ್ನೊಂದು ಕಾರಣವೆಂದರೆ ಇವರ ಮಕ್ಕಳೆಲ್ಲ ಅಲೋಪತಿಯಲ್ಲಿ ತಜ್ಞರು. ನಿಸರ್ಗ ಚಿಕಿತ್ಸೆಯಲ್ಲೂ ಪರಿಣಿತರು. ಔಷಧಿಯಿಲ್ಲದೆ ಇವರು ನಡೆಸುವ ‘ಹೀಲಿಂಗ್‌ ಮಿರ್ಯಾಕಲ್‌’ ನೋಡಲು ಜನ ಬರತೊಡಗಿದರು. ಇವರು ಬಳಸುತ್ತಿದ್ದ ಸಾಧನ ಗಾಳಿ, ನೀರು, ಬಿಸಿಲು, ಮಣ್ಣು. ಆಹಾರದಲ್ಲಿ ಪಥ್ಯ. ಹೊಟ್ಟೆಯನ್ನು ಶುದ್ಧಗೊಳಿಸಲು ಉಪವಾಸ ಮತ್ತು ಎನಿಮಾ ಪ್ರಯೋಗ.

(ಸ್ನೇಹ ಸೇತು : ಕರ್ನಾಟಕ ಮಲ್ಲ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X