ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ತಮಾನದಲ್ಲಿಯೇ ಕಳೆದು ಹೋದ ಭವಿಷ್ಯದ ನಾಯಕ ಮಹಾಜನ್‌

By Staff
|
Google Oneindia Kannada News
  • ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌
ಬಿಜೆಪಿ ಮುಖಂಡ ಪ್ರಮೋದ್‌ ಮಹಾಜನ್‌ ಅವರ ಸಾವಿನೊಂದಿಗಿನ ಹೋರಾಟ ಮಂಗಳವಾರ ಮಧ್ಯಾಹ್ನ ಅಂತ್ಯಗೊಂಡಿದೆ. ಅವರ ಉಳಿವಿಗಾಗಿ ಈವರೆಗೆ ನಡೆಸಲಾದ ವೈದ್ಯಕೀಯ ಚಿಕಿತ್ಸೆಗಳು ಫಲಿಸಿಲ್ಲ. ಮತ್ತೊಂದೆಡೆ ಕೈಗೊಳ್ಳಲಾದ ದೇವರ ಪೂಜೆ ಮತ್ತು ಪ್ರಾರ್ಥನೆಗಳೂ ಫಲಿಸಿಲ್ಲ.

ಮಹಾಜನ್‌ ನಿಧನದೊಂದಿಗೆ ಬಿಜೆಪಿಯ ಕಮಲದಿಂದ ಒಂದು ದಳ ಉದುರಿದಂತಾಗಿದೆ ಎಂದರೆ ಅತಿಶಯವೆನ್ನಿಸುವುದಿಲ್ಲ. ಅಕ್ಟೋಬರ್‌ 30, 1949ರಂದು ಆಂಧ್ರಪ್ರದೇಶದ ಮೆಹಬೂಬ್‌ನಗರದಲ್ಲಿ ಜನಿಸಿದ ಪ್ರಮೋದ್‌ ಮಹಾಜನ್‌, ಭಾರತದ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅವರ ಓದು, ನಿರ್ವಹಿಸಿದ ಸೇವೆ ಎಲ್ಲವೂ ಭಿನ್ನ... ವಿಭಿನ್ನ. ಪ್ರಮೋದ್‌ ಬಿ.ಎಸ್ಸಿ.,(ಭೌತಶಾಸ್ತ್ರ), ಎಂ.ಎ.,(ರಾಜ್ಯಶಾಸ್ತ್ರ) ಹಾಗೂ ಬಿ.ಎ.,(ಪತ್ರಿಕೋದ್ಯಮ) ಪದವೀಧರರಾಗಿದ್ದರು. ಅವರು ಓದಿದ್ದು; ಪುಣೆ ಹಾಗೂ ಔರಂಗಾಬಾದ್‌ ವಿಶ್ವವಿದ್ಯಾಲಯ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ. ವೆಂಕಟೇಶ್‌ ದೇವಿದಾಸ್‌ ಮಹಾಜನ್‌ ಹಾಗೂ ಪ್ರಭಾವತಿ ವೆಂಕಟೇಶ್‌ ಮಹಾಜನ್‌ ಅವರ ಪುತ್ರ ಪ್ರಮೋದ್‌ ಮಹಾಜನ್‌.

ರಾಜಕಾರಣ : 1986ರಲ್ಲಿ ಅಖಿಲ ಭಾರತ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದರು. 1994-96ರವರೆಗೆ ಪ್ರಧಾನ ಕಾರ್ಯದರ್ಶಿ, 1978ರಿಂದ 83ರವರೆಗೆ ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ, 1996-97ರಲ್ಲಿ ಲೋಕಸಭಾ ಸದಸ್ಯ, 1996ರಲ್ಲಿ ರಕ್ಷಣಾ ಸಚಿವ, 1998ರಲ್ಲಿ ಪ್ರಧಾನ ಮಂತ್ರಿಗಳ ರಾಜಕೀಯ ಸಲಹೆಗಾರರಾಗಿ ಮಹಾಜನ್‌ ಕಾರ್ಯ ನಿರ್ವಹಿಸಿದ್ದರು. 1986, 1992 ಹಾಗೂ 1998ರಲ್ಲಿ ರಾಜ್ಯಸಭಾ ಸದಸ್ಯರಾಗಿ ಅವರು ಆಯ್ಕೆಗೊಂಡಿದ್ದರು.

ಪ್ರಮೋದ್‌ ಮಹಾಜನ್‌ ಬಿಜೆಪಿಯ ಭವಿಷ್ಯದ ಮುಂಚೂಣಿ ನಾಯಕ ಎಂದೇ ಪರಿಗಣಿತರಾಗಿದ್ದರು. ರಾಜಕೀಯ ಹಾಗೂ ಚುನಾವಣಾ ತಂತ್ರಗಳಲ್ಲಿ ನಿಪುಣ ಎನಿಸಿಕೊಂಡಿದ್ದ ಅವರು, ನೇರ ಚುನಾವಣೆಗಳಲ್ಲಿ ಗೆಲುವಿಗಿಂತ ಸೋಲನ್ನೇ ಹೆಚ್ಚು ಉಂಡಿದ್ದರು. ಆದರೂ ಮಾಜಿ ಪ್ರಧಾನಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪ್ರಮುಖ ಖಾತೆಗಳ ಸಚಿವರಾಗಿದ್ದು, ಒಂದು ವಿಶೇಷ.

ನಂಟು : ಆರ್‌ಎಸ್‌ಎಸ್‌ನೊಂದಿಗೆ ಗಾಢಸಂಬಂಧ ಹೊಂದಿದ್ದ ಅವರು, ಬಿಜೆಪಿ ಮತ್ತು ಸಂಘಪರಿವಾರದ ನಡುವಿನ ಸೇತುವೆಯಂತೆ ನಿಂತಿದ್ದರು. ಅಪಾರ ಜನಪ್ರಿಯತೆ ಅವರಿಗಿತ್ತು. ಪ್ರಸ್ತುತ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಮೋಹನ್‌ ಭಾಗವತ್‌ರೊಡನೆ ನಿಕಟ ಸಂಪರ್ಕ ಹೊಂದಿದ್ದ ಅವರು, ಪಕ್ಷದ ಸಂಸದೀಯ ಮಂಡಳಿ ಹಾಗೂ ಕೇಂದ್ರೀಯ ಚುನಾವಣಾ ಸಮಿತಿ ಕಾರ್ಯದರ್ಶಿಯಾಗಿದ್ದರು.

2004 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ‘ಇಂಡಿಯಾ ಶೈನಿಂಗ್‌’ ಪ್ರಚಾರ ಕಾರ್ಯದ ಸೃಷ್ಟಿಗೆ ಕಾರಣವಾದವರು ಪ್ರಮೋದ್‌ . ಕೊನೆಗೆ ಚುನಾವಣೆಯಲ್ಲಿ ಹಿನ್ನಡೆಯಾದ ಕಾರಣ ವ್ಯಾಪಕ ಟೀಕೆಗೊಳಗಾಗಿದ್ದರು. ಇಷ್ಟೆಲ್ಲ ಟೀಕೆಗಳ ಮಧ್ಯೆಯೂ ಪಕ್ಷದಲ್ಲಿ ಜನಪ್ರಿಯ ನಾಯಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಪಕ್ಷದ 25ನೇ ವರ್ಷಾಚರಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರದಾಗಿತ್ತು.

ತಮ್ಮ ಇಡೀ ರಾಜಕೀಯ ಜೀವನದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಲ್‌.ಕೆ.ಅಡ್ವಾಣಿ ಅವರೊಡನೆ ಸಮತೋಲಿತ ಸಂಬಂಧ ಕಾಪಾಡಿಕೊಂಡು ಬಂದಿದ್ದ ಅವರು, ಇತ್ತೀಚಿನ ಕೆಲವು ತಿಂಗಳುಗಳಿಂದ ಸ್ವಲ್ಪ ಮಟ್ಟಿಗೆ ವಾಜಪೇಯಿಯವರತ್ತ ವಾಲಿದ್ದಾರೆಂಬ ಮಾತು ರಾಜಕೀಯ ವಲಯದಲ್ಲಿ ಚಲಾವಣೆಯಲ್ಲಿತ್ತು.

ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ, ಪತ್ನಿ ರೇಖಾ ಪ್ರಮೋದ್‌ ಮಹಾಜನ್‌ ಅವರನ್ನು ಬಿಟ್ಟು ಅಗಲಿರುವ ಮಹಾಜನ್‌, ಈಗ ನೆನಪು ಮಾತ್ರ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X