ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಅಪ್ಪುಗೆಯಲ್ಲಿ ಬೆಳೆದ ಕುಮಾರ, ರಾಜ್ಯಕ್ಕೀಗ ಸರದಾರ!

By Staff
|
Google Oneindia Kannada News
H.D. Kumaraswamyಛಲಗಾರನಾದರೂ ಅನ್ನಿ, ಅವಕಾಶವಾದಿಯಾದರೂ ಅನ್ನಿ, ಸದ್ಯಕ್ಕಂತೂ ರಾಜಕೀಯ ಅಂಗಳದಲ್ಲಿ ಹರದನಹಳ್ಳಿ ದೇವೇಗೌಡರ ಮಗ ಕುಮಾರಸ್ವಾಮಿ ಒಬ್ಬ ‘ಕಿಂಗ್‌ ಮೇಕರ್‌’(ಅವರೀಗ ಕಿಂಗ್‌ ಸಹಾ ಹೌದು). ಜ್ಯೋತಿಷಿಯಾಬ್ಬರ ಕರೆಗೆ ಓಗೊಟ್ಟು ಕಾಂಗ್ರೆಸ್‌ನ ಕಿವಿಗೆ ಹೂವಿಟ್ಟ ಕುಮಾರಣ್ಣ ಕಾಲಾವಕಾಶ ಬರಲಿ ಅಂತ ಕಾಯ್ದು ಕುಳಿತಿದ್ದರೆ, ಇಂದು ರಾಜ್ಯದ 21ನೇ ಮುಖ್ಯಮಂತ್ರಿಯಾಗಿ ಪಟ್ಟಕ್ಕೇರುವುದು ಸಾಧ್ಯವೇ ಇರಲಿಲ್ಲ.

ಗುಂಡೂರಾಯರು ಮತ್ತು ವೀರೇಂದ್ರ ಪಾಟೀಲರನ್ನು ಬಿಟ್ಟರೆ ಕುಮಾರಣ್ಣನೇ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಕರ್ನಾಟಕದ ಪಾಲಿಗೆ. ಕುಮಾರಣ್ಣನಿಗೆ ಕೇವಲ 46 ವರ್ಷ ವಯಸ್ಸು. ಕೇವಲ ಹತ್ತುಹದಿನೈದು ವರ್ಷ ರಾಜಕೀಯದಲ್ಲಿ ಸೈಕಲ್‌ ತುಳಿದು, ನೇರವಾಗಿ ವಿಧಾನಸೌಧ ತಲುಪಿದ್ದಾರೆ. ತಂತ್ರವೋ, ಮಂತ್ರವೋ, ಕುತಂತ್ರವೋ ಒಟ್ಟಾರೆ ಅವರ ಬಯಕೆ ಫಲಿಸಿದೆ.

1990ರಲ್ಲಿ ರಾಜಕೀಯ ಪ್ರವೇಶಿಸಿದ ಕುಮಾರಸ್ವಾಮಿ, 1996 ಮೇ ನಲ್ಲಿ ನಡೆದ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ವಿಜಯ ಪಡೆದದ್ದು ಬಿಟ್ಟರೆ, ಬರಿ ಸೋಲಿನ ಸರಮಾಲೆಗಳನ್ನೇ ಅನುಭವಿಸಿದವರು. 1998ರ ಮಧ್ಯಂತರ ಚುನಾವಣೆಯಲ್ಲಿ ಕನಕಪುರದಿಂದ ಸೋಲು ಕಂಡಿದ್ದ ಅವರು, 1999ರಲ್ಲಿ ಸಾತನೂರು ವಿಧಾನಸಭೆಯಲ್ಲೂ ಸೋಲಿನ ರುಚಿ ಕಂಡಿದ್ದರು. 2004 ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಆಯ್ಕೆಯಾದ ಕುಮಾರಣ್ಣನ ಕಣ್ಣಲ್ಲಿ ಅಂದು, ಮುಖ್ಯಮಂತ್ರಿ ಕುರ್ಚಿಯ ಚಿತ್ರವಿತ್ತು!

ಅಲ್ಲಿಂದ ಅವರು ರಾಜಕೀಯ ಜೀವನದ ಚದುರಂಗದಾಟದಲ್ಲಿ ಪಾನ್‌ಗಳನ್ನು ಮೂವ್‌ ಮಾಡಲು ಪ್ರಾರಂಭಿಸಿದರು. ಮುಖ್ಯಮಂತ್ರಿ ಹುದ್ದೆ ತಪ್ಪಿಸಿದರು ಎಂಬ ಸಿಟ್ಟಿನಿಂದ ಸಿದ್ದರಾಮಯ್ಯ ಗುರ್‌ಗುರ್‌ ಅನ್ನುತ್ತಾ, ಪಕ್ಷದ ಸಂಘಟನೆಯತ್ತ ಕಣ್ಣು ಹಾಯಿಸದ ಸನ್ನಿವೇಶವನ್ನು ತಮ್ಮ ಹಿತಕ್ಕೆ ಕುಮಾರಸ್ವಾಮಿ ಬಳಸಿಕೊಂಡರು.

ಆಪರೇಷನ್‌ ಆರಂಭ : ಜೆಡಿಎಸ್‌ ಕಾರ್ಯಾಧ್ಯಕ್ಷರಾಗಿ, ತಿಪ್ಪಣ್ಣ ಅವರನ್ನು ಪವರ್‌ಲೆಸ್‌ ಅಧ್ಯಕ್ಷರನ್ನಾಗಿ ಕುಮಾರಣ್ಣ ಪರಿವರ್ತಿಸಿದರು. ಸಿದ್ದರಾಮಯ್ಯ ಅವರಿಗೆ ಕೊಕ್‌ ಕೊಟ್ಟರು. ಸಮಯ ಕಾಯುತ್ತಿದ್ದ ಕುಮಾರಸ್ವಾಮಿ, ಜಿ.ಪಂ ಮತ್ತು ತಾ.ಪಂ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ನಿಜವಾದ ಆಟ ಶುರು ಮಾಡಿದರು.

ಜನವರಿ 18ರಂದು ಜನತಾದಳ ರಾಷ್ಟ್ರೀಯ ನಾಯಕ ಮತ್ತು ತಂದೆ ಎಚ್‌.ಡಿ.ದೇವೇಗೌಡರ ಅಣತಿಯನ್ನು ಧಿಕ್ಕರಿಸಿದರು. ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದೆ ಮತ್ತು ಜೆಡಿಎಸ್‌ ಪಕ್ಷವನ್ನು ಒಡೆಯಲು ಪಿತೂರಿ ನಡೆಸಿದೆ ಎಂದು ಆರೋಪಿಸಿ, ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲವನ್ನು ಕುಮಾರಸ್ವಾಮಿ ವಾಪಸ್ಸು ಪಡೆದರು. ಧರ್ಮಸಿಂಗ್‌ ಸರ್ಕಾರವನ್ನು ಮುಲಾಜಿಲ್ಲದೆ ಕೆಡವಿದರು.

ಸ್ನೇಹದ ಹಸ್ತ : ಕೋಮುವಾದಿಗಳೆಂದು ಈ ಹಿಂದೆ ಬಿಜೆಪಿಯ ಸ್ನೇಹ ನಿರಾಕರಿಸಿದ್ದ ಕುಮಾರಸ್ವಾಮಿ, ಸಿದ್ಧಾಂತಗಳಿಗಿಂತಲೂ ಪಕ್ಷದ ಹಿತ ಮುಖ್ಯ, ರಾಜ್ಯದ ಅಭಿವೃದ್ಧಿ ಮುಖ್ಯ ಎಂದರು. ಬಿಜೆಪಿಗೆ ಜೈ ಎಂದ ಅವರು, 20-20 ತಿಂಗಳು ಅಧಿಕಾರವನ್ನು ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡು, ಮುಖ್ಯಮಂತ್ರಿ ಪದವಿಯನ್ನು ದಕ್ಕಿಸಿಕೊಂಡರು.

ಮೊದಲ ಸಲ ಶಾಸಕರಾಗಿ ವಿಧಾನಸೌಧ ಹತ್ತಿದ ಕುಮಾರಸ್ವಾಮಿ, ರಾಜ್ಯದ ಮುಖ್ಯಮಂತ್ರಿ ಕುರ್ಚಿಯ ತನಕ ಸಾಗಿ ಬಂದ ಹಾದಿಯಲ್ಲಿ ಮುಳ್ಳಿಗಿಂತಲೂ ಹೂವೇ ಜಾಸ್ತಿ ಇದೆ!

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹಿರಿಯ ಪುತ್ರ ಎಂಬ ವಿಶೇಷ ಅರ್ಹತೆ, ಕುಮಾರಸ್ವಾಮಿಯ ರಾಜಕೀಯ ಜೀವನದಲ್ಲಿ ಗಮನಾರ್ಹ ಪಾತ್ರವಹಿಸಿದೆ. ಹಳೆಯ ರಾಜಕಾರಣಿಗಳಿಗಿಂತಲೂ ಕುಮಾರಸ್ವಾಮಿ ತುಸು ಭಿನ್ನ. ಗಾಂಧಿ ಟೋಪಿ, ಬಿಳಿಯ ಪಂಚೆ, ಖಾದಿ ಜುಬ್ಬಗಳನ್ನು ಪಕ್ಕಕ್ಕಿಟ್ಟು, ಆಧುನಿಕ ಪ್ಯಾಂಟು ಷರಟು ತೊಟ್ಟು, ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣುವ ಕುಮಾರಸ್ವಾಮಿ, ಪಕ್ಷದ ಮೇಲೆ ಹಿಡಿತ ಸಾಧಿಸಿದ್ದಾರೆ. ಶಾಸಕರ ನಡುವೆ ಆಪ್ತ ಸಂಬಂಧವನ್ನು ಬೆಳೆಸಿಕೊಂಡು ಅಕ್ಕರೆಯ ಕುಮಾರಣ್ಣ ಆಗಿ ರೂಪಾಂತರಗೊಂಡಿದ್ದಾರೆ.

ತಮ್ಮ ತಂದೆಯಷ್ಟೇ ಭವಿಷ್ಯ, ಯಾಗ, ಪೂಜೆ ಎಂದೆಲ್ಲ ನಂಬುವ ಕುಮಾರಸ್ವಾಮಿ, ಒಂದೇ ದಿನದಲ್ಲಿ ಸರ್ಕಾರವನ್ನು ಕೆಡವಿದವರು. ದಕ್ಷಿಣ ಭಾರತದಲ್ಲಿ ಬಿಜೆಪಿ ಭಾಗ್ಯದ ಬಾಗಿಲು ತೆರೆಯಲು ಸಹಾಯಕರಾದವರು.

ಹಿನ್ನೆಲೆ : ಡಿಸೆಂಬರ್‌ 16.1959ರಲ್ಲಿ ಜನಿಸಿದ ಕುಮಾರಸ್ವಾಮಿ, ಹೊಳೆನರಸೀಪುರದಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರಿನ ಜಯನಗರದ ಎಂಇಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆ, ಆರ್‌.ವಿ. ರಸ್ತೆಯ ವಿಜಯಾ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದವರು.

ಕುಮಾರಸ್ವಾಮಿ ಅವರ ಪತ್ನಿ ಅನಿತಾ. ಕಂಪ್ಯೂಟರ್‌ ವಿಜ್ಞಾನದಲ್ಲಿ ಬಿ.ಇ. ಪದವೀಧರೆ. ಈ ದಂಪತಿಗಳ ಏಕೈಕ ಕುಮಾರರತ್ನ ನಿಖಿಲ್‌ ಕುಮಾರಸ್ವಾಮಿ. ಈಗ ಜೈನ್‌ ಕಾಲೇಜಿನಲ್ಲಿ ಎರಡನೇ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.

ಕೃಷಿಕ ಕುಟುಂಬದ ಕುಮಾರಸ್ವಾಮಿಗೆ ಸಿನಿಮಾ ರಂಗದ ಜೊತೆ ಬಿಡಿಸಲಾರದ ನಂಟು. ಹಂಚಿಕೆದಾರರಾಗಿ, ಪ್ರದರ್ಶಕರಾಗಿ ಕೆಲಸ ಮಾಡಿ, ಚಿತ್ರನಿರ್ಮಾಣಕ್ಕೂ ಇಳಿದರು. ಸೂರ್ಯವಂಶ, ಪ್ರೇಮೋತ್ಸವ, ಗಲಾಟೆ ಅಳಿಯಂದಿರು, ಜಿತೇಂದ್ರ, ಚಂದ್ರ ಚಕೋರಿ ಚಿತ್ರಗಳನ್ನು ನಿರ್ಮಿಸಿ ಗಾಂಧಿನಗರದಲ್ಲಿ ಗುರ್ತಿಸಲ್ಪಟ್ಟರು.

ಸಿನಿ ಗದ್ದಲ : ಕನ್ನಡ ಚಿತ್ರೋದ್ಯಮ ಮತ್ತು ಪ್ರದರ್ಶಕರ ನಡುವೆ ಬಿಕ್ಕಟ್ಟು ತಲೆದೋರಿದಾಗ, ಕುಮಾರಸ್ವಾಮಿ ಪ್ರಮುಖ ಪಾತ್ರವಹಿಸಿದ್ದರು. ಪರಭಾಷಾ ಚಿತ್ರಗಳನ್ನು ಬೆಂಬಲಿಸಿದ್ದಲ್ಲದೆ, ಡಾ.ರಾಜ್‌ ಕುಟುಂಬದ ವಿರುದ್ಧ ಬೀದಿ ಸಮರಕ್ಕೆ ನಿಂತರು ಎಂಬ ವಾದಗಳಿವೆ. ಚಿತ್ರರಂಗದಲ್ಲಿ ಇಷ್ಟೆಲ್ಲ ತೊಡಗಿಸಿಕೊಂಡಿದ್ದರು, ರಾಜಕೀಯದ ಸೆಳೆತ ಅವರನ್ನು ಬಿಡಲೇ ಇಲ್ಲ.

ಮುಂದೇನು? : ತಮ್ಮ ಹಾದಿಯಲ್ಲಿ ಅಡ್ಡವಾಗಿದ್ದ ಸಿದ್ದರಾಮಯ್ಯ ಅವರನ್ನು ಅಂದು ಮೂಲೆಗೆ ಸರಿಸಿದರು. ಇಂದು ಪಕ್ಷದ ಹಿರಿಯ ಮುಖಂಡರಾದ ಎಂ.ಪಿ.ಪ್ರಕಾಶ್‌ ಮತ್ತು ಪಿ.ಜಿ.ಆರ್‌.ಸಿಂಧ್ಯಾ ಅವರನ್ನು ಮೂಲೆಗೆ ತಳ್ಳಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ಪಾಳಯದಲ್ಲಿವೆ. ಅದರ ಪರಿಣಾಮಗಳನ್ನು ಕಾದು ನೋಡಬೇಕು. ಕುಮಾರಸ್ವಾಮಿಯ ಮತ್ತೊಬ್ಬ ಸಹೋದರ ಎಚ್‌.ಡಿ.ರೇವಣ್ಣ ಸದ್ಯಕ್ಕೆ ಅಪ್ಪನ ಮಾತುಕೇಳುತ್ತಿದ್ದು, ಕುಟುಂಬದ ಬಿಕ್ಕಟ್ಟಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.

ಮೂರು ಆರಾಗಲಿ, ಆರು ಮೂರಾಗಲಿ ಬಿಜೆಪಿಯಾಂದಿಗೆ ನಮ್ಮ ಪಕ್ಷ ಉತ್ತಮ ಆಡಳಿತವನ್ನು ರಾಜ್ಯದಲ್ಲಿ ನೀಡಲಿದೆ ಎನ್ನುವ ವಿಶ್ವಾಸ ಕುಮಾರಣ್ಣ ಅವರಲ್ಲಿದೆ. ಅದು ನಿಜವಾಗಲಿ.

ನಮ್ಮ ಸಿಎಂ ಬಗ್ಗೆ ಇನ್ನಷ್ಟು ಇಂಟರೆಷ್ಟಿಂಗ್‌ ವಿಷಯಗಳು :

  • ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಮೊದಲ ಸಲವೇ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಇವರಿಗೆ ಸಂದಿದೆ. ಮುಖ್ಯಮಂತ್ರಿಯಾಗಿದ್ದವರ ಮಗ, ಅದೇ ರಾಜ್ಯದ ಮುಖ್ಯಮಂತ್ರಿಯಾದ ನಿದರ್ಶನ ಬೇರೆಲ್ಲಿಯೂ ಇಲ್ಲ.
  • 2006ರಲ್ಲಿ ಕನ್ನಡ ಚಾನಲ್‌ ‘ಕನ್ನಡ ಕಸ್ತೂರಿ’ಯನ್ನು ಕನ್ನಡಿಗರಿಗೆ ಅರ್ಪಿಸುವ ಗುರಿ ಕುಮಾರಸ್ವಾಮಿ ಮುಂದಿದೆ.
  • ಪಿಯುಸಿ ಫೇಲ್‌ ಆಗಿದ್ದವರು. ರಾಜ್‌ಕುಮಾರ್‌ರ ಬಂಗಾರದ ಮನುಷ್ಯ ಚಿತ್ರವನ್ನು 25ಸಲ ನೋಡಿದ ಭೂಪ.
  • ಕುಮಾರ್‌ಸ್ವಾಮಿಗೆ ಕಂಪ್ಯೂಟರ್‌ ಗೊತ್ತಿಲ್ಲ. ಒಳ್ಳೆ ಇಂಗ್ಲಿಷ್‌ ಮತ್ತು ಹಿಂದಿಯನ್ನು ಇನ್ನು ಮುಂದೆ ಕಲಿಯುತ್ತಾರಂತೆ.
  • ಕಥೆ, ಕಾದಂಬರಿ ಓದೋ ಹುಚ್ಚು ಸಾಕಷ್ಟಿದೆ.
  • ಒಳ್ಳೆ ಕಾರ್‌ ಡ್ರೆೃವರ್‌. ದೇವೇಗೌಡರಿಗೆ ಮಗನ ಡ್ರೆೃವಿಂಗ್‌ ಬಗ್ಗೆ ಹೆಮ್ಮೆ.
ಕುಮಾರ್‌ ಸ್ವಾಮಿ ಅವರ ಕಾಯಂ ವಿಳಾಸ -

ನಂ.286, 3ನೇ ಮುಖ್ಯ ರಸ್ತೆ,
ಜೆ.ಪಿ.ನಗರ, 3ನೇ ಹಂತ,
ಬೆಂಗಳೂರು.-560078.
ದೂರವಾಣಿ -26582230


ಪೂರಕ ಓದಿಗೆ :
ಮುಖ್ಯಮಂತ್ರಿಯ ಸಿನಿನಂಟು!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X