• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಟಕದ ಮೂಲಕ ಸಾಮಾಜಿಕ ಕೃಷಿ

By Staff
|

ರಾಕೇಶ ಪೂಂಜ

K.V.Subbannaಆಧುನಿಕ ಸಮಾಜದಲ್ಲಿ ನಾಟಕ ಅತ್ಯಂತ ಪ್ರಭಾವೀ ಸಂವಹನ ಮಾಧ್ಯಮ. ಈ ಮಾಧ್ಯಮವನ್ನು ದಕ್ಷವಾಗಿ ಬಳಸಿಕೊಂಡು, ಇದರ ಮೂಲಕ ಸಾಮಾಜಿಕ ಕೃಷಿಗೆ ಕೈಹಚ್ಚಿ ಯಶಸ್ವಿಯಾದ ವಿರಳರಲ್ಲಿ ಕೆ.ವಿ.ಸುಬ್ಬಣ್ಣ ಅಗ್ರಗಣ್ಯರು.

ಶಿವಮೊಗ್ಗದ ಹೆಗ್ಗೋಡಿನಲ್ಲಿ ನೀನಾಸಂ ರಂಗಕೃಷಿಗೆ ಕೈಹಚ್ಚುವ ಮುನ್ನ ನಾಟಕ ಕಲೆಯ ವಿವಿಧ ಮಜಲುಗಳನ್ನು ಅಭ್ಯಾಸಮಾಡಿದ್ದ ಸುಬ್ಬಣ್ಣ, ಕನ್ನಡ ಸಾರಸ್ವತ ನಾಟಕ ಕ್ಷೇತ್ರದ ಹೆಮ್ಮರವಾಗಿ ಬೆಳೆದದ್ದು ಸಾಮಾನ್ಯವಾದ ಮಾತಲ್ಲ.

ಗ್ರಾಮೀಣ ಸೊಗಡಿಗೆ ನಗರ ಜೀವನದ ಚಂಚಲತೆಯನ್ನು ಮೈಗೂಡಿಸಿ, ಆಧುನಿಕ ಶೈಲಿಯನ್ನು ಹಳ್ಳಿಗಾಡಿನ ಚೌಕಟ್ಟಿಗೆ ಒಳಪಡಿಸುವ ಮೂಲಕ ಸುಬ್ಬಣ್ಣ ಕೈಗೆತ್ತಿಕೊಂಡ ಪ್ರಯತ್ನ ಸಾಮಾನ್ಯ ಸ್ವರೂಪದ್ದಲ್ಲ. ಹಳ್ಳಿಗಾಡಿನ ಜನರಿಗೆ ಅವರದೇ ಧಾಟಿಯಲ್ಲಿ ಆಧುನಿಕ ಕಲೆಯನ್ನು ಪರಿಚಯಿಸುವ ಮುನ್ನ ಸುಬ್ಬಣ್ಣ ವೈಯಕ್ತಿಕವಾಗಿ ಸಾಕಷ್ಟು ಪರಿಶ್ರಮ ವಹಿಸಿದ್ದರು.

ಇದೇ ವೇಳೆ ನೀನಾಸಂನಲ್ಲಿ ಗಾಂಧೀ ಪ್ರಣೀತ ಸಾಮಾಜಿಕ ಜೀವನಶೈಲಿಯ ಪರಿಕಲ್ಪನೆ ಮಾಡಲು ಅವಕಾಶ ಮಾಡಿಕೊಟ್ಟ ಸುಬ್ಬಣ್ಣ ಇದಕ್ಕಾಗಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಗೂ ಭಾಜನರಾದರು. ನಾಟಕಗಳು ಕೇವಲ ಒಣ ಆಡಂಬರ ಅಥವಾ ಶುಷ್ಕ ಮನರಂಜನೆ ಮಾಧ್ಯಮ ಎಂಬ ಕಲ್ಪನೆ ದೂರಾಗಿ ಅವು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅತ್ಯಂತ ಉಪಯುಕ್ತ ಮಾಧ್ಯಮ ಎಂಬುದನ್ನು ಸುಬ್ಬಣ್ಣ ಮನಗಂಡಿದ್ದರು.

ನಡೆದು ಬಂದ ಹಾದಿ : ಮಲೆನಾಡಿನ ಮಧ್ಯೆ ಇರುವ ಪುಟ್ಟ ಊರು ಮುಂಡಿಗೇಸರದಲ್ಲಿ ಜನಿಸಿದ ಕೆ.ವಿ.ಸುಬ್ಬಣ್ಣ ಜಾಗತಿಕ ಮಟ್ಟದ ವ್ಯಕ್ತಿತ್ವವಾಗಿ ಬೆಳೆದುನಿಂತ ಅಚ್ಚರಿ. 1932ರ ಜನವರಿ 24 ಅವರ ಜನ್ಮದಿನ. ಕೆ.ವಿ.ರಾಮಪ್ಪ ಮತ್ತು ಸಾವಿತ್ರಮ್ಮ ಎಂಬ ಸಾತ್ವಿಕ ದಂಪತಿಗಳು ಹೆತ್ತವರು.

ಒಂದಷ್ಟು ಅನುಕೂಲಸ್ಥರಾಗಿದ್ದ ಹವ್ಯಕ ಕುಟುಂಬದಲ್ಲಿ ಜನಿಸಿದ ಕೆ.ವಿ.ಸುಬ್ಬಣ್ಣ ಅವರಿಗೆ ಸಂಸ್ಕಾರ ಹಾಗೂ ಸಂಸ್ಕೃತ ರಕ್ತಗತವಾಗಿ ಬಂದಿತ್ತು. ಬಾಲ್ಯದಿಂದಲೇ ಭಾರತೀಯ ಸಂಸ್ಕೃತಿಯನ್ನು ಕುತೂಹಲದ ನೋಟದೊಂದಿಗೆ ಅರಗಿಸಿಕೊಳ್ಳುತ್ತಲೇ ಬೆಳೆದ ಅವರಿಗೆ ಹೆತ್ತವರೇ ಮೊದಲ ಗುರುಗಳು. ಓದು ಬರಹ ಕಲಿತಿದ್ದು ಅವರಿಂದಲೇ.

1943ರಲ್ಲಿ ಅವರು ಸಾಗರದ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿಯಲು ಆರಂಭಿಸಿದರು. ಇಂಗ್ಲಿಷ್‌ ಭಾಷೆಯನ್ನು ಕಲಿಯತೊಡಗಿದ ಅವರು ಕ್ರಮೇಣ ಆ ಭಾಷೆಯ ಸಾಹಿತ್ಯಲೋಕಕ್ಕೆ ತೆರೆದುಕೊಂಡರು. ಜತೆಜತೆಗೆ ಸಾಗರದ ಆಸುಪಾಸಲ್ಲಿ ಹೆಸರುಮಾಡಿದ ವೃತ್ತಿಪರ ಕಂಪನಿ ನಾಟಕಗಳಿಂದ ಆಕರ್ಷಿತರಾಗಿ ಅದರೆಡೆಗೆ ಒಲವು ಬೆಳೆಸಿಕೊಂಡರು.

ರಂಗಭೂಮಿಯೆಡೆಗೆ ಅವರನ್ನು ಸೆಳೆದು ತರುವಲ್ಲಿ ಯಕ್ಷಗಾನವೆಂಬ ಕಲಾಪ್ರಕಾರದ ಕೊಡುಗೆ ಅನನ್ಯ. ಹೈಸ್ಕೂಲ್‌ ಮುಗಿಸಿದ ನಂತರ ಸುಬ್ಬಣ್ಣ ಊರಿಗೆ ಮರಳಿದರು. ಆಗತಾನೇ ಭಾರತ ಸ್ವಾತಂತ್ರದ ಹೊಸಬೆಳಕು ಕಂಡಿತ್ತು. ಹತ್ತಿರದ ಹೆಗ್ಗೋಡಿನ ಆಸುಪಾಸಿನ ಸಮಾನಮನಸ್ಕರನ್ನು ಸೇರಿಸಿ ಅಶೋಕ ಎಂಬ ವಾರಪತ್ರಿಕೆ ಹೊರತಂದರು. ಐನೂರು ಪುಟಗಳ ಪುಟ್ಟ ಪತ್ರಿಕೆ ಜತೆ ಇನ್ನೂ ಏನೋ ಮಾಡುವ ಹಂಬಲ. ರಂಗಭೂಮಿ ಅವರನ್ನು ಕೂಗಿ ಕರೆಯುತ್ತಿತ್ತು.

ಹದಿನೈದು ವರ್ಷ ನಡೆದು ನಿಂತು ಹೋಗಿದ್ದ ಹವ್ಯಾಸಿ ಯಕ್ಷಗಾನ ತಂಡಕ್ಕೆ ಕಾಯಕಲ್ಪ ನೀಡಲು ನಿರ್ಧರಿಸಿದರು. ಹುಡುಗರು ಹಿರಿಯರ ಜತೆ ಈ ವಿಷಯ ಪ್ರಸ್ತಾಪಿಸಿದ ಫಲವಾಗಿ ಸ್ವತಃ ಸುಬ್ಬಣ್ಣ ಅವರ ತಂದೆಯವರೇ ಈ ತಂಡದ ಮೊದಲ ಅಧ್ಯಕ್ಷರಾಗಿ ಸಾರಥ್ಯ ವಹಿಸಿದರು. ಅಂದು ಊರಿನ ಸ್ಥಳೀಯ ದೇವರ ಹೆಸರಲ್ಲಿ ಶುರುವಾದ ಶ್ರೀ ನೀಲಕಂಠೇಶ್ವರ ನಾಟಕ ಸಂಘ ಎಂಬ ತಂಡ ಮುಂದೆ ನೀನಾಸಂ ಆಗಿ ಭಾರತೀಯ ರಂಗಭೂಮಿಯ ಇತಿಹಾಸದಲ್ಲಿ ಶಾಶ್ವತ ಹೆಸರು ದಾಖಲಿಸಿದ್ದು ಈಗ ಇತಿಹಾಸ.

1951ರವರೆಗೆ ಪತ್ರಿಕೆ ಮತ್ತು ನಾಟಕ ತಂಡವೆರಡರಲ್ಲೂ ಸಕ್ರಿಯವಾಗಿದ್ದ ಕೆ.ವಿ.ಸುಬ್ಬಣ್ಣ ಮುಂದೆ ಮೈಸೂರಿಗೆ ತೆರಳಿದರು. ಅಲ್ಲಿನ ವಿವಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸುವುದು ಅವರ ಉದ್ದೇಶವಾಗಿತ್ತು. ಅಲ್ಲಿ ಕುವೆಂಪು ಅವರ ಸಂಪರ್ಕಕ್ಕೆ ಬಂದ ಅವರು ಕನ್ನಡ ಸಾರಸ್ವತ ಲೋಕದೆಡೆಗೆ ಆಳವಾದ ಆಸಕ್ತಿ ಬೆಳೆಸಿಕೊಂಡರು. ಸಂಸ್ಕೃತ, ಕನ್ನಡ, ಇಂಗ್ಲಿಷ್‌, ಇಸ್ಲಾಮಿಕ್‌ ಸಾಹಿತ್ಯಗಳಲ್ಲದೇ, ನಮ್ಮ ಮಣ್ಣಿನ ಜಾನಪದಗಳೆಡೆಗಿನ ಶ್ರದ್ಧೆ ಅವರಲ್ಲಿ ಹೊಸತನವೊಂದನ್ನು ಹುಟ್ಟಿಸಿತು. 1954ರಲ್ಲಿ ಮತ್ತೆ ಹೆಗ್ಗೋಡಿಗೆ ಮರಳಿದ ಸುಬ್ಬಣ್ಣ ಹವ್ಯಾಸಿ ರಂಗಭೂಮಿಗೆ ಕಾಯಕಲ್ಪ ನೀಡಲು ನಿರ್ಧರಿಸಿದರು.

1956ರಲ್ಲಿ ಶೈಲಜಾ ಅವರನ್ನು ವಿವಾಹವಾದ ನಂತರ ಬದುಕಿಗೆ ಇನ್ನಷ್ಟು ವೇಗ, ಉತ್ಸಾಹ ಬಂದಿತ್ತು. ಮಗ ಜನಿಸಿದಾಗ ಅಕ್ಷರ ಎಂಬ ಹೆಸರಿಟ್ಟರು. ಮುಂದೆ ಅವರ ಸಾಹಿತ್ಯ ಕೃಷಿ ಮತ್ತು ರಂಗಭೂಮಿಯ ಕೃಷಿ ಅವಿರತವಾಗಿ ಮುಂದುವರಿಯಿತು.

1971ರಲ್ಲಿ ನೀನಾಸಂ ಎಂಬ ರಂಗತಂಡವನ್ನು ಸಂಸ್ಥೆಯಾಗಿಸಲು ನಿರ್ಧರಿಸಿದರು. ಥಿಯೇಟರ್‌ ಕಟ್ಟುವ, ರಂಗಶಾಲೆ ನಿರ್ಮಿಸುವ ಕನಸು ಕಾರ್ಯರೂಪಕ್ಕೆ ಬರತೊಡಗಿದಂತೆ ಅವರು ಇನ್ನಷ್ಟು ಸಕ್ರಿಯರಾಗತೊಡಗಿದರು. ಚಲನಚಿತ್ರಗಳ ಪ್ರದರ್ಶನಕ್ಕೂ ಹೊಂದುವ ಈ ಥಿಯೇಟರ್‌ನಲ್ಲಿ 1978ರಲ್ಲಿ ಚಲನಚಿತ್ರೋತ್ಸವ ಏರ್ಪಡಿಸಿದರು. ಆ ಮಲೆನಾಡಿನ ಕುಗ್ರಾಮದ ಜನರೂ ಸತ್ಯಜಿತ್‌ ರೇ, ಕುರುಸೋವರ ಚಿತ್ರಗಳನ್ನು ನೋಡುವಂತಾಯಿತು.

ಇಡೀ ಭಾರತದ ರಂಗಪ್ರಿಯರನ್ನು, ಕಲಾಸಕ್ತರನ್ನು ಹೆಗ್ಗೋಡು ಆಕರ್ಷಿಸತೊಡಗಿತು. 1985ರೊಳಗೆ ಸುಮಾರು 2ಲಕ್ಷ ಜನ ಅತ್ಯುತ್ತಮ ಸಿನಿಮಾಗಳನ್ನು ನೋಡಿದರು. 5ಸಾವಿರ ಜನ ಅಪ್ರಿಷಿಯೇಷನ್‌ ಕೋರ್ಸ್‌ಗಳಲ್ಲಿ ಭಾಗವಹಿಸಿದರು. 1980ರಲ್ಲಿ ಶುರುವಾದ ರಂಗ ತರಬೇತಿ ಸಂಸ್ಥೆ ಸಾವಿರಾರು ರಂಗಕರ್ಮಿಗಳನ್ನು, ನಾಟಕ ಪ್ರಿಯರನ್ನು ಸೃಷ್ಟಿಸುತ್ತಲೇ ಇದೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಪೂರಕ ಓದಿಗೆ :

 • ‘ಸುಬ್ಬಣ್ಣನವರನ್ನು ಭೇಟಿ ಮಾಡಿಬಂದೆ’
 • ಅಕ್ಷರ ಪ್ರೀತಿಯ ಸುಬ್ಬಣ್ಣ
 • ಮೆಲುದನಿಯ ಚಿಂತಕ ಕೆ.ವಿ.ಸುಬ್ಬಣ್ಣ ಅವರಿಗೆ ಕಾಳಿದಾಸ ಸಮ್ಮಾನ್‌
 • ಅಡಿಕೆ: ಮಾರುಕಟ್ಟೆ ಗುಟ್ಟು ಅರಿಯದೆ ಕಂಗೆಟ್ಟ ಬೆಳೆಗಾರ
 • ‘ಅಡಿಕೆ ತಿನ್ನೋದು ಆರೋಗ್ಯಕ್ಕೆ ಹಾನಿ’- ಮೊದಲು ಇದನ್ನು ಅಳಿಸಿ: ಕೆ.ವಿ.ಸುಬ್ಬಣ್ಣ
 • ಮುಖಪುಟ / ಸಾಹಿತ್ಯ-ಸಂಸ್ಕೃತಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more