ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಲಕ್ಷ್ಮಿ ಹರಿಹರೇಶ್ವರ ಅವರಿಗೆ ರೋಟರಿ ರಾಜ್ಯೋತ್ಸವ ಪ್ರಶಸ್ತಿ

By Staff
|
Google Oneindia Kannada News
  • ಸ.ರ. ಸುದರ್ಶನ್‌, ಸಹಾಯಕ ನಿರ್ದೇಶಕರು, ಕನ್ನಡ ವಿಶ್ವಕೋಶ,
    ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು.
Nagalakshmi Harihareshwara with Harihareshwara and childrenಕಡಲಾಚೆಯ ಅಮೆರಿಕದಲ್ಲಿ ಕನ್ನಡ ನುಡಿಗೆ ಸಲ್ಲಿಸಿದ ಸೇವೆಗಾಗಿ ಯನ್ನು ರೋಟರಿ ಮೈಸೂರು ಉತ್ತರ ಸಂಸ್ಥೆಯು ಇದೇ ನವಂಬರ್‌ ಹದಿನೆಂಟರಂದು ಶುಕ್ರವಾರ ಆಚರಿಸಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನೀಡಿ ಗೌರವಿಸುತ್ತಿದೆ.

ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಾಗಲಕ್ಷ್ಮಿಯವರು ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಂದುವರೆಸಿ ಕನ್ನಡ ಎಂ.ಎ. ಪದವಿ ಪಡೆದರು. ಶಿಶುವಿಹಾರದಲ್ಲಿ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಉಪಾಧ್ಯಾಯಿನಿಯಾಗಿದ್ದ, ಮಕ್ಕಳ ಪರಿಸರದಲ್ಲೇ ತಮ್ಮನ್ನು ತೊಡಗಿಸಿಕೊಂಡು ಬೆಳೆದ ಇವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವವುಳ್ಳವರು.

ಮದುವೆಯಾದ ನಂತರ, ಪತಿ ಹರಿಹರೇಶ್ವರ ಅವರೊಂದಿಗೆ ಮೊದಲು ಇರಾನ್‌ಗೆ ಹೋಗಿ, ನಂತರ ಅಮೆರಿಕಾಗೆ ನಾಗಲಕ್ಷ್ಮಿ ತೆರಳಿದರು. ಅಲ್ಲಿ ಸುಮಾರು ಇಪ್ಪತ್ತೈದು ವರ್ಷ ನೆಲೆಸಿದ್ದ ಅವಧಿಯಲ್ಲಿ ಅವರು ಅಲ್ಲಿನ ಕನ್ನಡಿಗರ ಮಕ್ಕಳಿಗೆ ಇಂಗ್ಲಿಷ್‌ ಮೂಲಕ ಕನ್ನಡ ಕಲಿಸುವ ಕಾಯಕವನ್ನು ಹಲವಾರು ವರ್ಷ ನಡೆಸಿದ್ದಾರೆ.

ಅಮೆರಿಕಾದ ಮಿಸ್ಸೌರಿಯ ಸೇಂಟ್‌ಲೂಯಿ, ನ್ಯೂಜೆರ್ಸಿಯ ಮೌಂಟ್‌ಲಾರೆಲ್‌ ಮುಂತಾದ ನಗರಗಳಲ್ಲಿ ಹಲವು ವರ್ಷಗಳ ಕಾಲ ವೈಯಕ್ತಿಕವಾಗಿಯೂ, ಕನ್ನಡ ಕೂಟಗಳ ಪ್ರಾಯೋಜಕತ್ವದಲ್ಲಿಯೂ ಕನ್ನಡ ತರಗತಿಗಳನ್ನು ನಡೆಸಿದ್ದಾರೆ. ಅದಕ್ಕಾಗಿ ಅವರು ಐವತ್ತು-ಅರವತ್ತು ಮೈಲಿ ಕಾರಿನಲ್ಲಿ ಪಯಣಿಸಿ, ಕನ್ನಡ ಕಲಿಸಿ, ಮನೆಗೆ ರಾತ್ರಿ ಹಿಂತಿರುಗುತ್ತಿದ್ದದ್ದೂ ಉಂಟು. ‘ಅಮೆರಿಕನ್ನಡ’ ಪತ್ರಿಕೆಯ ಪ್ರತಿ ಸಂಚಿಕೆಯಲ್ಲಿ ಪ್ರಕಟವಾದ ಸಚಿತ್ರ ಕನ್ನಡ ಪಾಠಗಳನ್ನು ಅಮೆರಿಕದ ಹಲವು ಕನ್ನಡ ಕೂಟಗಳು ತಮ್ಮ ಕನ್ನಡ ಶಾಲೆಗಳಲ್ಲಿ ‘ಪಠ್ಯ’ವಾಗಿ ಬಳಸಿಕೊಳ್ಳುತ್ತಿದ್ದವು. ಇದು ಪುಸ್ತಕ ರೂಪದಲ್ಲೂ ಸದ್ಯದಲ್ಲೇ ಹೊರಬರಲಿದೆ.

ಇವರು ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಕೃಷಿ ವಿಧಾನಗಳು ಹಾಗೂ ಕನ್ನಡ ಭಾಷೆ ಅಧ್ಯಯನದ ಬಗ್ಗೆ ಪಿ.ಎಚ್‌ಡಿ. ಮಾಡುತ್ತಿದ್ದ ಇಬ್ಬರು ಕನ್ನಡಿಗ ವಿದ್ಯಾರ್ಥಿನಿಯರಿಗೂ ಕನ್ನಡದ ವಿಷಯದಲ್ಲಿ ಮಾರ್ಗದರ್ಶನ ಮಾಡಿದ್ದಾರೆ.

ಕ್ಯಾಲಿಫೋರ್ನಿಯಾದ ಸ್ಟಾಕ್‌ಟನ್‌ ನಗರದಲ್ಲಿದ್ದಾಗ, ಅಲ್ಲಿನ ಪೆಸಿಫಿಕ್‌ ವಿಶ್ವವಿದ್ಯಾನಿಲಯ ಪ್ರಾಯೋಜಿಸುತ್ತಿದ್ದ ಇಂಟರ್‌ಫೇಯ್ತ್‌ ಎಂಬ ಹೆಸರಿನ ಸರ್ವಧರ್ಮ ಸಮನ್ವಯ ಸಂಸ್ಥೆಯಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ವಿಚಾರಸಂಕಿರಣ ಮತ್ತು ಚರ್ಚಾಕೂಟದಲ್ಲಿ ಹಲವು ಬಾರಿ ಪತಿಯಾಡಗೂಡಿ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ.

ಏಳೆಂಟು ವರ್ಷ ಅಮೆರಿಕಾದ ವಿವಿಧ ಶಾಲೆಗಳಲ್ಲಿ ಕೆಲಸ ಮಾಡುವಾಗ ಭಾರತೀಯ ಉಡುಪಾದ ಸೀರೆ ಉಟ್ಟು ಪಾಠ ಬೋಧಿಸಲು ಅವಕಾಶ ಕೊಟ್ಟರೆ ಮಾತ್ರ ಬೋಧಿಸುವುದಾಗಿ ಅವರು ಷರತ್ತು ಹಾಕುತ್ತಿದ್ದರು. ಅವರೊಳಗಿನ ಶಿಕ್ಷಕಿಯ ಸಾಮರ್ಥ್ಯವನ್ನು ಗುರುತಿಸಿದ ಅಮೆರಿಕನ್‌ ಶಿಕ್ಷಣ ಸಂಸ್ಥೆಗಳು ಅದಕ್ಕೆ ಒಪ್ಪಿಗೆ ಇತ್ತಿದ್ದವು. ಸ್ವಲ್ಪ ಕಾಲ ಕಂಪ್ಯೂಟರ್‌ ಇಂಜಿನಿಯರ್‌ (ಡೇಟಾ ಪ್ರೊಸೆಸಿಂಗ್‌) ಆಗಿ ಸಹ ಅವರು ಕೆಲಸ ಮಾಡಿದ್ದಾರೆ.

ಅಮೆರಿಕದ ಕನ್ನಡ ಕೂಟಗಳಲ್ಲಿ ಕೈಲಾಸಂ ಅವರ ‘ಹೋಂರೂಲ್‌ಉ’, ಪರ್ವತವಾಣಿಯವರ ‘ಇಷ್ಟಾರ್ಥ’, ಸಂಧ್ಯಾ ರವೀಂದ್ರನಾಥ್‌ ಅವರ ‘ಕಿಲಿಕಿಲಿ ಕುಳ್ಳ’ ಮುಂತಾದ ಹಲವಾರು ಕನ್ನಡ ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿದ್ದಾರೆ. ಹಿರಣ್ಣಯ್ಯ ಮಿತ್ರಮಂಡಳಿಯವರು ಅಮೆರಿಕಾಕ್ಕೆ ಬಂದಿದ್ದಾಗ, ಅವರೊಂದಿಗೆ ಸೇರಿ ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಕೂಟದ ಸಾಹಿತ್ಯ ವಾರ್ಷಿಕ ‘ವಿಕ್ರಮ’ಕ್ಕೆ ಪ್ರಧಾನ ಸಂಪಾದಕರಾಗಿದ್ದರು. ಹ್ಯೂಸ್ಟನ್‌, ಟೆಕ್ಸಾಸ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ, ಮತ್ತು ‘ದರ್ಶನ’ ಉದ್ಗ್ರಂಥಗಳ ಸಂಪಾದಕ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿರುವ ಇವರ ಕತೆ, ಕವನ, ಪ್ರಬಂಧಗಳು ಅಮೆರಿಕನ್ನಡ, ಪ್ರಜಾವಾಣಿ, ಕನ್ನಡಪ್ರಭ, ದಟ್ಸ್‌ಕನ್ನಡ ಡಾಟ್‌ ಕಾಮ್‌ ಮತ್ತು ಸಾಕ್ಷಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ; ಇವರ ‘ಕಿಶೋರಿ’ ಕವನ ಸಂಕಲನವೂ ಹೊರಬಂದಿದೆ.

ಬೆಂಗಳೂರಿನಲ್ಲಿದ್ದಾಗ ಬಿ. ಎಸ್‌. ವೆಂಕಟರಾಮ್‌ ಅವರ ‘ಛಾಯಾ ಕಲಾವಿದರು’ ತಂಡದಲ್ಲಿ ತರಬೇತಿ ಪಡೆದು, ರಂಗಕರ್ಮಿಯಾಗಿ ಹಲವಾರು ನಾಟಕಗಳಲ್ಲಿ ಪಾತ್ರವಹಿಸಿದ ಇವರು ಅಲ್ಲಿನ ಗಿರಿಜಮ್ಮ ಮುಕುಂದದಾಸ್‌ ಸರ್ಕಾರೀ ಪ್ರೌಢಶಾಲೆಯಲ್ಲಿ ನಾಟಕಶಾಸ್ತ್ರದ ಅಧ್ಯಾಪಕಿಯಾಗಿದ್ದರು; ಆಕಾಶವಾಣಿಯ ವಿವಿಧ ಬಗೆಯ ನಾಟಕಗಳಲ್ಲಿಯೂ ಭಾಗವಹಿಸಿದರು. ಪ್ರಸ್ತುತ ಮೈಸೂರು ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿರುವ ಇವರ ‘ಚಿಂತನ’ ಕಾರ್ಯಕ್ರಮ ಜನಪ್ರಿಯವಾಗಿವೆ.

ಅಮೆರಿಕದಲ್ಲಿ ತೊಂದರೆಗೊಳಗಾದ ಭಾರತೀಯ ನಾರಿಯರೊಡನೆ ಆಪ್ತ ಸಮಾಲೋಚನೆ ನಡೆಸಿ ಪರಿಹಾರ ಒದಗಿಸಿರುವುದು, ಅಲ್ಲಿನ ವಸತಿಹೀನ ಜನರ ಮಕ್ಕಳ ಶಾಲೆಯಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡಿರುವುದು ಮತ್ತು ಬೆಂಗಳೂರಿನಲ್ಲಿ ಶ್ರೀರಾಮಪುರದಲ್ಲಿದ್ದಾಗ ವಯಸ್ಕರ ಶಿಕ್ಷಣ ಕೇಂದ್ರ ನಡೆಸಿ ಇಪ್ಪತ್ತಮೂರು ಜನ ಮನೆಗೆಲಸ ಮಾಡುವ ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡಿದ್ದು ಇವರ ಸಮಾಜ ಸೇವೆಗೆ ನಿದರ್ಶನಗಳಾಗಿವೆ. ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು ಭಾರತಕ್ಕೆ ಹಿಂದಿರುಗಿದ ಮೇಲೆ ಇಲ್ಲಿಯೂ ಕೆಲವು ಶಿಕ್ಷಣ ಸಂಸ್ಥೆಗಳ ಪೋಷಕ ಧರ್ಮದರ್ಶಿಗಳಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಸೇವೆ ಸಲ್ಲಿಸುತ್ತಿದ್ದಾರೆ.

ಅಮೆರಿಕಾದಲ್ಲಿಯೇ ಹುಟ್ಟಿ ಬೆಳೆದ ಇವರ ಇಬ್ಬರು ಮಕ್ಕಳು, ನಂದಿನಿ ಮತ್ತು ಸುಮನಾ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಕೆಲಸದಲ್ಲೂ ಮತ್ತು ಸ್ನಾತಕೋತ್ತರ ಉನ್ನತ ವ್ಯಾಸಂಗದಲ್ಲೂ ತೊಡಗಿದ್ದಾರೆ.

ಪ್ರಸ್ತುತ ಸರಸ್ವತಿಪುರದ ಸ್ವಂತ ಮನೆಯಲ್ಲಿ, ಪತಿಯಾಡಗೂಡಿ ಮೈಸೂರಿಗರಾಗಿ ನೆಲೆಸಿರುವ ಕಡಲಾಚೆಯ ಕನ್ನಡ ಸೇವಕಿ ನಾಗಲಕ್ಷ್ಮಿಯವರನ್ನು ಭಾರತೀಯ ಭಾಷಾ ಸಂಸ್ಥೆಯ ಪ್ರಾಧ್ಯಾಪಕ ಲಿಂಗದೇವರು ಹಳೆಮನೆ ಮುಖ್ಯ ಅತಿಥಿಯಾಗಿರುವ ಹಾಗೂ ರೋಟರಿ ಮೈಸೂರು ಉತ್ತರದ ಅಧ್ಯಕ್ಷ ಕೆ. ಲೋಕನಾಥ್‌ ಅವರ ಅಧ್ಯಕ್ಷತೆಯಲ್ಲಿ ನವೆಂಬರ್‌ ಹದಿನೆಂಟರಂದು ಸಂಜೆ 6:30ಕ್ಕೆ ಜಾನ್ಸಿರಾಣಿ ಲಕ್ಷ್ಮಿಬಾಯಿ (ಜೆ.ಎಲ್‌.ಬಿ.) ರಸ್ತೆಯ ರೋಟರಿ ಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪುರಸ್ಕರಿಸಲಾಗುತ್ತಿದೆ.


ಪೂರಕ ಓದಿಗೆ :
ಕಥೆ : ಗಂಡ ಭೇರುಂಡ
ಅವಲಂಬನೆಯೇ ದುಃಖ ; ಸ್ವಾವಲಂಬನೆಯೇ ಸುಖ
ಹಿಂಸೆ ; ಶಕ್ತಿಹೀನರ ಆಯುಧ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X