ಕಣ್ಣು ಮುಚ್ಚಿದ ನೈಜ ಸಮಾಜವಾದಿ
ರಾಜಕಾರಣ ಜನರ ಏಳಿಗೆಗೆ ದುಡಿಯಲು ಒಂದು ಸಾಧನ ಎಂದು ಬಗೆದಿದ್ದ ಅಪರೂಪದ ರಾಜಕಾರಣಿಗಳ ಸಾಲಿನಲ್ಲಿ ಮಹಾರಾಷ್ಟ್ರದ ಪ್ರೊಫೆಸರ್ ಮಧು ದಂಡವತೆ ಪ್ರಮುಖರು. ದೀರ್ಧಕಾಲದ ಅಸ್ವಾಸ್ಥ್ಯದ ನಂತರ ಶನಿವಾರ ನಿಧನರಾದ ದಂಡವತೆ ಸರಳ ಸಜ್ಜನಿಕೆಯ ರಾಜಕಾರಣಿ ಎಂಬ ಹೆಗ್ಗಳಿಕೆಯನ್ನು ಕೊನೆ ತನಕ ಉಳಿಸಿಕೊಂಡಿದ್ದರು.
ಸಮಾಜವಾದಿ ಚಿಂತನೆಯ ಮೂಸೆಯಿಂದ ಬಂದ ಹಲವಾರು ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ದಂಡವತೆ ಎಂದೂ ತಮ್ಮ ಸಿದ್ಧಾಂತಗಳಿಂದ ದೂರ ಸರಿಯಲಿಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ದಂಡವತೆ ಅದಕ್ಕಾಗಿ ರಾಜಕೀಯವಾಗಿ ಭಾರಿ ಬೆಲೆ ತೆರಬೇಕಾಯಿತು. ಮನಸ್ಸು ಮಾಡಿದ್ದರೆ ಇತರ ಹಲವಾರು ಸಮಾಜವಾಗಳಂತೆ ದಂಡವತೆ ಸಹ ಬಣ್ಣ ಬದಲಾಯಿಸಿ ಕಾಂಗ್ರೆಸ್ ಪಾಳಯ ಸೇರಿ ಅಧಿಕಾರ ರಾಜಕಾರಣದಲ್ಲಿ ಮೆರೆಯಬಹುದಿತ್ತು. ಆದರೆ ಕಾಂಗ್ರೆಸ್ ಮತ್ತು ಇಂದಿರಾಗಾಂಧಿ ಅವರ ನಿರಂಕುಶ ಪ್ರಭುತ್ವದ ವಿರುದ್ಧ ಸೆಟೆದು ನಿಂತ ದಂಡವತೆ ಜಯಪ್ರಕಾಶ್ ನಾರಾಯಣ್ ಅವರ ಕರೆಗೆ ಓಗೊಟ್ಟು ಮಹಾರಾಷ್ಟ್ರ್ದಲ್ಲಿ ಜನತಾ ಪರಿವಾರದ ಸಂಘಟನೆಗೆ ಟೊಂಕ ಕಟ್ಟಿ ನಿಂತರು.
1924ಜನವರಿ ಒಂದರಂದು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಜನಿಸಿದ ದಂಡವತೆ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಗುರುತಿಸಿಕೊಂಡರು. ನಂತರ 1946ರಲ್ಲಿ ಸಮಾಜವಾದಿ ಚಳವಳಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇ ಅಲ್ಲದೇ ಗೋವಾ ವಿಮುಕ್ತಿ ಮತ್ತು 1969ರಲ್ಲಿ ಭೂ ಸುಧಾರಣಾ ಚಳವಳಿಗಲ್ಲಿ ಸಹ ಮುಂಚೂಣಿಯ ಪಾತ್ರ ನಿರ್ವಹಿಸಿದ್ದರು.
ಪ್ರಜಾತಂತ್ರ ಸೋಷಲಿಸ್ಟ್ ಪಾರ್ಟಿಯ ಮೂಲಕ 1967ರಲ್ಲಿ ರಾಜಾಪುರದಿಂದ ಲೋಕಸಭೆಗೆ ಆಯ್ಕೆಯಾದ ದಂಡವತೆ ನಂತರ ಐದು ಬಾರಿ ಇದೇ ಕ್ಷಣವನ್ನು ಪ್ರತಿನಿಧಿಸಿದ್ದರು. ಈ ನಡುವೆ ಸಮಾಜವಾದಿ ಸಿದ್ಧಾಂತಗಳಿಂದಲೇ ಕೂಡಿದ್ದ ಜನತಾ ಪರಿವಾರದ ಮೇರು ನಾಯಕರ ಸಾಲಿಗೆ ಸೇರಿದ ದಂಡವತೆ ಎರಡು ಬಾರಿ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಇಂದಿರಾಗಾಂಧಿ ವಿರೋಧಿ ಅಲೆಯಲ್ಲಿ ಪ್ರಥಮ ಬಾರಿಗೆ ಜನತಾ ಪಕ್ಷ 1977ರಲ್ಲಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದಾಗ ದಂಡವತೆ ರೈಲ್ವೆ ಖಾತೆ ಸಚಿವರಾಗಿ ನಿಯುಕ್ತಿಗೊಂಡರು. ಈ ಅವಧಿಯಲ್ಲಿಯೇ ಪ್ರತಿಷ್ಠಿತ ಕೊಂಕಣ ರೈಲು ಯೋಜನೆಯ ರೂಪುರೇಷೆ ತಯಾರಿಸಿದ ಕೀರ್ತಿ ದಂಡವತೆಗೆ ಸಲ್ಲುತ್ತದೆ. ಜನತಾ ಪಕ್ಷ ಹೋಳಾದ ನಂತರವೂ ಪರಿವಾರದಲ್ಲಿಯೇ ಮುಂದುವರಿದ ದಂಡವತೆ ಬೊಫೋರ್ಸ್ ವಿರೋಧಿ ಅಲೆಯ ಮೇಲೆ ಅಧಿಕಾರಕ್ಕೆ ಬಂದ ವಿ.ಪಿ.ಸಿಂಗ್ ಸರಕಾರದಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡರು. ಈ ಅವಧಿಯಲ್ಲಿ ದೇಶಾದ್ಯಂತ ಭ್ರಷ್ಟರ ವಿರುದ್ಧ ಆದಾಯ ತೆರಿಗೆ ದಾಳಿಯನ್ನು ಚುರುಕುಗೊಳಿಸುವ ಮೂಲಕ ದಂಡವತೆ ತಮ್ಮ ಸಾಮರ್ಥ್ಯ ಮೆರೆದರು. ಅವರ ರಾಜಕೀಯ ಜೀವನ 1990ರ ನಂತರ ಇಳಿಮುಖವಾಯಿತು. ಐದು ಬಾರಿ ಪ್ರತಿನಿಧಿ ಸಿದ್ಧ ರಾಜಾಪುರ ಕ್ಷೇತ್ರದಲ್ಲಿ ಸೋಲಿನ ರುಚಿ ಕಂಡ ದಂಡವತೆ ಮತ್ತೆ ಲೋಕಸಭೆಗೆ ಆಯ್ಕೆಯಾಗುವಲ್ಲಿ ವಿಫಲರಾದರು. ಇಷ್ಟಾದರೂ 1998ರಲ್ಲಿ ಶರದ್ ಪವಾರರ ಎನ್‌ಸಿಪಿ ಜತೆ ಕೈ ಜೋಡಿಸಿ ಮತ್ತೆ ಚುನಾವಣಾ ಕಣಕ್ಕಿಳಿದ ದಂಡವತೆಗೆ ಅಲ್ಲಿಯೂ ಜಯ ಲಭಿಸಲಿಲ್ಲ.
1996ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿ ಆದಾಗ ಪಕ್ಷದ ಹಿರಿಯ ಮುಖಂಡರಾಗಿದ್ದ ದಂಡವತೆ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಯಲ್ಲಿ ಕುಳ್ಳಿರಿಸಿದರು. ಈ ನಡುವೆ ಪತ್ನಿ ಪ್ರಮೀಳಾ ದಂಡವತೆ 2002ರಲ್ಲಿ ನಿಧನರಾದ ನಂತರ ಆರೋಗ್ಯವೂ ಕೈ ಕೊಟ್ಟಿತು. ಪ್ರಮೀಳಾ ಸಹ ಸಮಾಜವಾದಿ ಚಳವಳಿಯ ಜತೆ ಗುರುತಿಸಿಕೊಂಡಿದ್ದರಲ್ಲದೆ ಲೋಕ ಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.
ಪ್ರಖರ ಚಿಂತನೆಗೆ ಹೆಸರಾಗಿದ್ದ ದಂಡವತೆ ಗಾಂಧೀಜಿ, ಮಾರ್ಕ್ಸ್,ಜೆಪಿ ಚಿಂತನೆಗಳ ಆಧಾರದ ಮೇಲೆ ಹಲವಾರು ಪುಸ್ತಕಗಳನ್ನು ಸಹ ಬರೆದಿದ್ದರು.
(ಸ್ನೇಹ ಸೇತು: ವಿಜಯ ಕರ್ನಾಟಕ )












Click it and Unblock the Notifications