ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚೆನ್‌ ಎಂಬ ‘ಸ್ಕೂಲ್‌ ಮಾಸ್ಟರ್‌!’

By Staff
|
Google Oneindia Kannada News
  • ಅರವಿಂದ ನಾವಡ
Memories of H. Narasimhaiah, A school Masterಡಾ.ಎಚ್‌.ನರಸಿಂಹಯ್ಯ, ಬದುಕಿನ ಕೊನೆ ಅಂಚು ಮುಟ್ಟುವವರೆಗೂ ಬದುಕಿದ್ದು ಅಪ್ಪಟ ಸ್ಕೂಲ್‌ ಮಾಸ್ಟರ್‌ ಆಗಿ. ಎಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸಿಯೂ ಸರಳ-ಶುಭ್ರ-ಆದರ್ಶವಾದಿಯಾಗಿಯೇ ಉಳಿದದ್ದು ನಿಜಕ್ಕೂ ಅದ್ಭುತ.

ನ್ಯಾಷನಲ್‌ ಹೈಸ್ಕೂಲ್‌ನ ವಿದ್ಯಾರ್ಥಿ ನಿಲಯದಲ್ಲೇ ಇವರದ್ದೂ ಒಂದು ಕೋಣೆ. ಅದರಲ್ಲಿ ಹಾಸಿದ ಚಾಪೆ. ಒಂದು ಟೆಲಿಫೋನು. ಇದು ನ್ಯಾಷನಲ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷರ ಠೀವಿ. ಅಪ್ಪಣೆ ಕೇಳಿ ಕಳುಹಿಸುವ ಜವಾನನೂ ಇಲ್ಲ. ‘ಬಾರಯ್ಯಾ’ ಎನ್ನಲೂ ಕರೆಗಂಟೆಯೂ ಇಲ್ಲ. ಈ ಪುಟ್ಟ ಕೋಣೆಯಲ್ಲಿ ಬದುಕನ್ನೇ ಕಳೆದ ಎಚ್ಚೆನ್‌ ಯಾವ ದೊಡ್ಡ ಗತ್ತಿನ ಗೈರತ್ತಿಗೂ ತಮ್ಮನ್ನು ಕಳೆದುಕೊಳ್ಳುವ ‘ದೊಡ್ಡಸ್ಥಿಕೆ’ ತೋರಲಿಲ್ಲ. ಕೈಗೆಟುಕುವ ಲಾಲ್‌ಬಾಗಿನ ಕುಸುಮವಾಗಿಯೇ ಇದ್ದುಬಿಟ್ಟರು. ದೂರದ ಆಕಾಶಕಾಯವಾಗಲಿಲ್ಲ.

ಪವಾಡಪುರುಷರ ಬೆನ್ನು ಬಿದ್ದ ಎಚ್ಚೆನ್‌ ಸಿದ್ಧಾಂತಕ್ಕಾಗಿ ಕುಲಪತಿ ಸ್ಥಾನ ಕಳೆದುಕೊಂಡರು. ಸತ್ಯಸಾಯಿಬಾಬಾನ ಪವಾಡ ಬಯಲು ಮಾಡಿ ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದ ಎಚ್‌.ಎನ್‌. ‘ಮಮಕಾರ’ವಿಲ್ಲದೇ ಗೋವಿಂದ ನಾರಾಯಣ ರಾಜ್ಯಪಾಲರಾಗಿ ಬಂದಾಗ ಎದುರಾಗಬಹುದಾದ ಅನಗತ್ಯ ಮುಜುಗರದ ಸನ್ನಿವೇಶ ತಪ್ಪಿಸಲು ರಾಜೀನಾಮೆ ನೀಡಿದರು: ಆದರೆ ಅದನ್ನು ದೊಡ್ಡ ಸುದ್ದಿ ಮಾಡಲಿಲ್ಲ. ಪಾಠ ಮಾಡುವ ಶಿಕ್ಷಕ ಹೇಳಿದಂತೆಯೇ ನಡೆಯಬೇಕೆಂಬ ತತ್ವಕ್ಕಾಗಿ ನ್ಯಾಷನಲ್‌ ಹೈಸ್ಕೂಲ್‌ ಶುದ್ಧ ವಿಜ್ಞಾನದ ಆವರಣವಾಗಿತ್ತು. ಅಲ್ಲಿ ಕಲೆ ಮತ್ತಿತರ ಕೋರ್ಸು ಕಾಲಿಡುವಾಗ ವಿಜ್ಞಾನದ ಶಿಕ್ಷಕರ ವಿರೋಧವಿತ್ತು. ಅದೆಲ್ಲವನ್ನೂ ಸಾವರಿಸಿ ಸರಿಪಡಿಸಿದರು.

ಬೆಂಗಳೂರು ನಗರಕ್ಕೆ ಯಾರೇ ಪ್ರತಿಷ್ಠಿತರು, ಸಾಹಿತಿಗಳು ಬಂದರೆ ಅವರು ತಮ್ಮ ಕಾಲೇಜಿಗೆ ಬರಬೇಕೆಂಬುದು ಅವರ ಆಶಯ. ಇಂಥ ಸಂಗತಿಗಳಲ್ಲಿ ‘ಶಿವರಾಮ ಕಾರಂತ’ ರಂಥ ಅತಿರಥರನ್ನೇ ಕರೆತಂದಿದ್ದೇವೆ ಎಂದು ನೆನೆಸಿಕೊಳ್ಳುತ್ತಾರೆ ಕನ್ನಡ ಉಪನ್ಯಾಸಕರಾಗಿದ್ದ ಪ್ರೊ.ಕಿ.ರಂ.ನಾಗರಾಜ್‌. ಹೀಗೆ ಎಲ್ಲ ಜ್ಞಾನಶಿಸ್ತುಗಳನ್ನು ಕಲೆಹಾಕಿ ವಿದ್ಯಾರ್ಥಿಗಳನ್ನು ಮೀಯಿಸಬೇಕೆಂಬುದು ಎಚ್ಚೆನ್‌ ಅವರಿಗಿದ್ದ ತುಡಿತ.

ಮಕ್ಕಳೊಂದಿಗಿದ್ದ ಸಂಬಂಧವನ್ನು ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ವಿದ್ಯಾ, ಅಮೃತಾ, ಶೀಲಾ, ಸುಮಾ ಹೇಳುತ್ತಾರೆ - ‘ಎಚ್ಚೆನ್‌ ತಾತಾ ಪ್ರಶ್ನಿಸುವ ಮನೋಭಾವ ನಮ್ಮೊಳಗೆ ಬಿತ್ತಿದ್ದು ಹೆಮ್ಮರವಾಗಿ ಬೆಳೆದಿದೆ. ನಾವು ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳುವುದಿಲ್ಲ ’. ಇದು ಒಬ್ಬ ಸ್ಕೂಲ್‌ ಮಾಸ್ಟರ್‌ನ ವೃತ್ತಿಯ ಸಾರ್ಥಕತೆ.

ಸರಕಾರಕ್ಕೆ, ಸಾರ್ವಜನಿಕರಿಗೆ ಬಹಳ ಹತ್ತಿರವಾಗಿದ್ದ ಎಚ್ಚೆನ್‌ ಮನಸ್ಸು ಮಾಡಿದ್ದರೆ ಏನೆಲ್ಲಾ ಮಾಡಬಹುದಿತ್ತು. ಎಷ್ಟೆಲ್ಲಾ ದುರುಪಯೋಗ ಪಡಿಸಿಕೊಳ್ಳಬಹುದಿತ್ತು . ತಮ್ಮ ಸುತ್ತ ಪಡೆ ಕಟ್ಟಿಕೊಂಡು ಪರಾಕು ಹಾಕಿಸಿಕೊಳ್ಳಬಹುದಿತ್ತು. ಆದರೆ ಶಾಲೆ-ವಿದ್ಯಾರ್ಥಿ-ಸಂಗೀತ-ನಾಟಕ ಇಷ್ಟೇ ಅವರ ಪ್ರಪಂಚ. ತಮ್ಮಷ್ಟಕ್ಕೆ ಕಾಲು ಹಾದಿಯಲ್ಲಿ ನಡೆದರು. ಹಿಂದೆ ಯಾರಿದ್ದಾರೆ ಎಂದೂ ಗಮನಿಸಲಿಲ್ಲ. ಆ ಹಾದಿಯಲ್ಲಿ , ಅವರೇ ರೂಪಿಸಿದ ಲಕ್ಷಾಂತರ ವಿದ್ಯಾರ್ಥಿ ಪಡೆ ನಡೆದೀಗ ಅದು ಹೆದ್ದಾರಿ. ಎಚ್‌.ಎನ್‌. ಸಮರ್ಥ ದಾರಿದೀಪಕ.

ಒಮ್ಮೆ ನ್ಯಾಷನಲ್‌ ಹೈಸ್ಕೂಲ್‌ ವಿದ್ಯಾರ್ಥಿಯಾಬ್ಬ ಅಪರಾಧ ಪ್ರಕರಣದಲ್ಲಿ ಸಿಕ್ಕಿಕೊಂಡ. ಸುದ್ದಿ ಗಾಳಿಯಂತೆ ಹರಡುವ ಸಂದರ್ಭದಲ್ಲಿ ಎಚ್ಚೆನ್‌ ಗಾಳಿಗೊಡ್ಡಿ ನಿಂತಿದ್ದು ತನ್ನ ಶಾಲೆಯ ವರ್ಚಸ್ಸು ಕಾಪಾಡಲು. ಎಲ್ಲ ಪತ್ರಿಕಾ ಕಚೇರಿಗಳಿಗೆ ಫೋನ್‌ ಮಾಡಿ, ‘ನೋಡಿಯಪ್ಪ , ಆ,ವಿದ್ಯಾರ್ಥಿ ನ್ಯಾಷನಲ್‌ ಸ್ಕೂಲಿನವ್ನಂತೆ. ಹಾಗಂತ ಬರೀಬೇಡಿ. ಬೇರೆ ಏನು ಬೇಕಾದರೂ ಬರೆಯಿರಿ’ ಎಂದು ವಿನಂತಿಸಿದಾಗ ಪ್ರಭಾವ ಬೀರುವ ಧಾಟಿಯಿರಲಿಲ್ಲ ; ಒಬ್ಬ ಶಿಕ್ಷಕನ ಸೌಜನ್ಯವಿತ್ತು . ಅದರ ಹಿಂದೆ ನಿಸ್ಪೃಹ ಕಾಳಜಿಯಿತ್ತು.

ಮೊನ್ನೆ ತಾನೇ ಬೆನ್ನಿಹಿನ್‌ ಬಂದು ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ಅಂಧಶ್ರದ್ಧೆಯ ಪಾಠ ಹೇಳಿಕೊಟ್ಟ ! ಎಚ್ಚೆನ್‌ ಇವನ್ನೆಲ್ಲಾ ವಿರೋಧಿಸುತ್ತಿದ್ದವರೇ. ಮಕ್ಕಳಲ್ಲಿ ವೈಜ್ಞಾನಿಕ ಜಾಗೃತಿ ಬಿತ್ತಿದ ಇವರೇ ಬೆಂಗಳೂರು ವಿ.ವಿ.ಯಲ್ಲಿ ಪವಾಡ ಬಯಲು ಸಮಿತಿ ರಚಿಸಿದರು. ಭಾನಾಮತಿ ಕಾಟ ಆರಂಭವಾದಾಗ ಸರಕಾರ ಅದರ ಬಯಲುಗೊಳಿಸುವ ಸಮಿತಿಗೆ ಇವರನ್ನು ನೇಮಿಸಿದರು.

ಬಿಳಿ ಪಂಚೆ, ಬಿಳಿ ಜುಬ್ಬಾ, ಗಾಂಧಿ ಟೊಪ್ಪಿ ಧರಿಸಿ ಕುಲಪತಿ, ವಿಧಾನಪರಿಷತ್‌ ಸದಸ್ಯಸ್ಥಾನ, ಹತ್ತಾರು ಪ್ರಶಸ್ತಿ ಪುರಸ್ಕಾರ ಪಡೆದೂ ನಿಜವಾದ ಗಾಂಧೀವಾದಿಯಾಗಿ ಬದುಕಿದರು. ಎಷ್ಟೋ ಜನ ಅವರ ರೀತಿ ಕಂಡು ಹೀಯಾಳಿಸಿದ್ದರು. ಆ ಮಾತು ಅವರಿಗೆ ಸ್ವಲ್ಪ ಬೇಸರ ತಂದಿತ್ತು. ಹಾಗೆಂದು ದಾರಿ ಬದಲಿಸಲಿಲ್ಲ. ಈಗ ಅದು ಎಲ್ಲರೂ ನಡೆಯುವ ಹಾದಿಯಾಗಿದೆ. ಮಾಸ್ಟರ್‌ ಎಂದರೆ ಹಾಗೇ, ಎಲ್ಲರಿಗಿಂತ ಮುಂದೆ!

ಒಂದು ಪಕ್ಷ ಗಾಂಧಿ ಬದುಕಿದ್ದರೂ ಇಂದು ಹಾಗೆಯೇ ಇರುತ್ತಿದ್ದರು ಎಂಬುದು ಪ್ರಶ್ನೆಯೇ. ಮನುಷ್ಯನ ಒತ್ತಡವನ್ನು ಸಹಿಸಿಕೊಳ್ಳುವುದು ಅತ್ಯಂತ ದುಬಾರಿ ಮತ್ತು ದುರ್ಭರ. ಒಳ್ಳೆಯ ಮನುಷ್ಯರಾಗಿ ಬದುಕುವುದು ಇವೆಲ್ಲಕ್ಕಿಂತಲೂ ಕಷ್ಟ. ಅದೆಲ್ಲವನ್ನೂ ನೀಗಿಸಿಕೊಂಡು ಶುಭ್ರವಾಗಿಯೇ ಉಳಿದ ಹಂಸ ಎಚ್ಚೆನ್‌!

(ಸ್ನೇಹಸೇತು: ವಿಜಯ ಕರ್ನಾಟಕ)


ಪೂರಕ ಓದಿಗೆ-
ಹೀಗಿದ್ದರು, ನಮ್ಮ ನರಸಿಂಹಯ್ಯ ಮೇಷ್ಟ್ರು!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X