• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಡರಿಬಾಯಿ ಎಂಬ ‘ಈ ಶತಮಾನದ ಮಾದರಿ ಅಮ್ಮ’

By Oneindia Staff Writer
|

*ರಘುನಾಥ ಚ.ಹ.

ವರನಟ ರಾಜ್‌ಕುಮಾರ್‌ ಅಭಿನಯದ 'ಜೀವನಚೈತ್ರ’ ಸಿನಿಮಾದ ಈ ದೃಶ್ಯ ನಿಮಗೆ ನೆನಪಿರಬೇಕು : ಹೆಂಡತಿಯನ್ನು ಕಳಕೊಂಡು ಪರಿತಪಿಸುತ್ತಿರುವ ಮಗ. ಆ ಮಗನನ್ನು ನೋಡಿ ಪರಿತಪಿಸುವ ತಾಯಿಯ ಪಾತ್ರದಲ್ಲಿ ರಾಜ್‌ ಹಾಗೂ ಪಂಡರಿಬಾಯಿ ಅದ್ಭುತವಾಗಿ ನಟಿಸಿದ್ದರು. ಹೆಂಡತಿಯನ್ನು ಕಳಕೊಂಡ ದುಃಖವನ್ನು ಮರೆಯಲೋಸುಗ ತೀರ್ಥಯಾತ್ರೆಗೆ ಹೊರಟು ನಿಂತ ಮಗನನ್ನು ಬೀಳ್ಕೊಡುವ ತಾಯಿಯ ದೃಶ್ಯದಲ್ಲಿ ಪಂಡರಿಬಾಯಿ ವಾತ್ಸಲ್ಯ-ವಿಷಾದ ರಸಗಳನ್ನು ಆವಾಹಿಸಿಕೊಂಡಿದ್ದರು. ಪಂಡರಿಬಾಯಿ ಜ.29ರ ಮುಂಜಾವಿನಲ್ಲಿ ಪಂಡರಿಬಾಯಿ ನಿಧನರಾದರೆಂಬ ಸುದ್ದಿ ತಿಳಿದಾಗ ಮೊದಲು ಕಣ್ಣೆದುರು ಸುಳಿದದ್ದು ಜೀವನಚಿತ್ರ ಚಿತ್ರದ ಈ ದೃಶ್ಯ.

ಕನ್ನಡ ಅಷ್ಟೇ ಯಾಕೆ, ಇಡೀ ದಕ್ಷಿಣಭಾರತ ಚಲನಚಿತ್ರರಂಗದಲ್ಲಿ ಪಂಡರಿಬಾಯಿಯೆಂಬ ನಟಿ ನೆನಪಿರುವುದೇ 'ಅಮ್ಮ’ನ ಪಾತ್ರಗಳ ಮೂಲಕ. ದಕ್ಷಿಣ ಭಾಷೆಗಳ ಬಹುತೇಕ ಸೂಪರ್‌ಸ್ಟಾರ್‌ಗಳಿಗೆ ಪಂಡರಿಬಾಯಿ ತಾಯಿಯಾಗಿ ನಟಿಸಿದ್ದರು. ಡಾ.ರಾಜ್‌ಕುಮಾರ್‌, ಎಂ.ಜಿ.ಆರ್‌, ಶಿವಾಜಿಗಣೇಶ್‌, ರಜನಿಕಾಂತ್‌ ಅವರೆಲ್ಲ ರಿಗೂ ಪಂಡರಿಬಾಯಿ ಸಿನಿಮಾದಲ್ಲಿ ಅಮ್ಮನಾಗಿದ್ದವರು.

ಕನ್ನಡ ಚಿತ್ರರಂಗದ ಇತಿಹಾಸವನ್ನು ಮೊದಲ ಪುಟದಿಂದ ಇವತ್ತಿನವರೆಗೆ ತಿರುವಿಹಾಕಿ ; ಎಂ.ವಿ.ರಾಜಮ್ಮ ಅವರನ್ನು ಬಿಟ್ಟರೆ ಪಂಡರಿಬಾಯಿ ಸಮಕ್ಕೆ ನಟಿಸಬಲ್ಲ - ಪಂಡರಿಬಾಯಿ ಮಟ್ಟಿಗೆ ಜನಪ್ರಿಯತೆ ಗಳಿಸಿದ ಮತ್ತೊಬ್ಬ ಅಮ್ಮನಿಲ್ಲ .

ಒಂದು ವರ್ಷದ ಹಿಂದೆ (2002ರ ಫೆಬ್ರವರಿ) , ತುಮಕೂರಿನಲ್ಲಿ ನಡೆದ 69ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಂಡರಿಬಾಯಿ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದರು. ಕನ್ನಡ ಚಿತ್ರೋದ್ಯಮದಲ್ಲಿನ ಪಂಡರಿಬಾಯಿ ಅವರ ಸಾಧನೆಯನ್ನು ಗುರ್ತಿಸಿ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಸಲ್ಲಿಸಿದ ಸಂದರ್ಭವದು. ಸಮ್ಮೇಳನದ ಅಧ್ಯಕ್ಷ ಡಾ.ಯು.ಆರ್‌.ಅನಂತಮೂರ್ತಿ ಎದ್ದು ನಿಂತು ಚಪ್ಪಾಳೆ ತಟ್ಟಿದರು. 'ಚೆನ್ನಾಗಿದ್ದೀರಾ?’ ಎಂದು ಪಂಡರಿಬಾಯಿ ಹತ್ತಿರ ಬಂದು ಕುಶಲ ವಿಚಾರಿಸಿದರು. ಇನ್ನೊಬ್ಬ ಸನ್ಮಾನಿತರಾದ ಭದ್ರಗಿರಿ ಅಚ್ಯುತದಾಸರು ಕೂಡ ಪಂಡರಿಬಾಯಿ ಅವರ ಆರೋಗ್ಯ ವಿಚಾರಿಸಿದ್ದರು. ಸಾವಿರಾರು ಜನ ಚಪ್ಪಾಳೆ ತಟ್ಟುವ ಮೂಲಕ ಪಂಡರಿಬಾಯಿ ಅವರಿಗೆ ಗೌರವ ಸೂಚಿಸಿದ್ದರು. ಗದ್ಗದಿತರಾಗಿದ್ದ ಆಕೆಗೆ ಮಾತುಗಳೇ ಹೊರಡುತ್ತಿರಲಿಲ್ಲ . ಪಂಡರಿಬಾಯಿಯೆಂಬ ನಟಿ ಕನ್ನಡ ಜನತೆಗೆ ಮಾಡಿದ ಮೋಡಿಗೆ ಆ ಸಂದರ್ಭ ಸಾಕ್ಷಿಯಂತಿತ್ತು .

*

ರಾಜ್‌ಕುಮಾರ್‌ ಅವರು ಸಿನಿಮಾ ಪ್ರವೇಶಿದುದಕ್ಕಿಂಥ ಹನ್ನೊಂದು ವರ್ಷಗಳ ಮುನ್ನವೇ ಪಂಡರಿಬಾಯಿ ಸಿನಿಮಾದಲ್ಲಿ ನಟಿಸಿದ್ದರು. ಮೂರು ತಲೆಮಾರಿನ ತಾರೆಗಳೊಂದಿಗೆ ನಟಿಸಿದ ಖ್ಯಾತಿ ಪಂಡರಿಬಾಯಿ ಅವರದು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರಾದ ಪಂಡರಿಬಾಯಿ ಚಿತ್ರರಂಗ ಪ್ರವೇಶಿಸಿದ್ದು 1943 ರಲ್ಲಿ - 'ವಾಣಿ’ ಚಿತ್ರದ ಮೂಲಕ. ಆದರೆ ಆಕೆಯ ವೃತ್ತಿ ಜೀವನಕ್ಕೆ ತಿರುವು ದೊರೆತಿದ್ದು 1954 ರಲ್ಲಿ - ಬೇಡರ ಕಣ್ಣಪ್ಪ ಸಿನಿಮಾ ಮೂಲಕ. ವರನಟ ಡಾ.ರಾಜ್‌ಕುಮಾರ್‌ ನಾಯಕರಾಗಿ ಅಭಿನಯಿಸಿದ ಮೊದಲ ಚಿತ್ರವದು.

Pandaribai being felicitated in 69th All India Kannada Sahiya Sammelana, Tumkurಎಚ್‌.ಎಲ್‌.ಎನ್‌.ಸಿಂಹ ನಿರ್ದೇಶಿಸಿದ 'ಬೇಡರ ಕಣ್ಣಪ್ಪ’ ರಾಜ್‌ ಅವರಿಗೆ ಭಾಗ್ಯದ ಬಾಗಿಲು ತೆರೆದಂತೆಯೇ ಪಂಡರಿಬಾಯಿ ಅವರ ಭವಿಷ್ಯವನ್ನೂ ಬದಲಿಸಿತು. ಆನಂತರದ್ದು ಪಂಡರಿಬಾಯಿ ಯುಗ. ಕನ್ನಡ, ತಮಿಳು, ಹಿಂದಿ, ಕೊಂಕಣಿ, ಕೊಡವ ಹಾಗೂ ತುಳು ಎಲ್ಲೆಡೆಯೂ ಪಂಡರಿಬಾಯಿ ಸಂದರು. ಬೇಡರ ಕಣ್ಣಪ್ಪ ಚಿತ್ರದ ಶೂಟಿಂಗ್‌ ಸಂದರ್ಭದಲ್ಲಿ ಆ್ಯಕ್ಷನ್‌/ಕಟ್‌ ಗೊತ್ತಿರದ ರಾಜ್‌ಕುಮಾರ್‌ಗೆ ಸಿನಿಮಾರಂಗದ ಓನಾಮ ಹೇಳಿಕೊಟ್ಟದ್ದೇ ಪಂಡರಿಬಾಯಿ. ಇದನ್ನು ಅನೇಕ ಸಂದರ್ಭಗಳಲ್ಲಿ ರಾಜ್‌ ಅವರೇ ಸ್ಮರಿಸಿದ್ದಾರೆ.

ತಮಿಳು ಚಿತ್ರರಂಗದ ಮೇರುನಟ ಶಿವಾಜಿ ಗಣೇಶನ್‌ ಅವರ ಮೊದಲ ಚಿತ್ರದಲ್ಲೂ ಪಂಡರಿಬಾಯಿ ಅವರೇ ನಾಯಕಿ !

ರಾಜಾ ವಿಕ್ರಮ, ಸೋದರಿ, ರಾಯರ ಸೊಸೆ, ಹರಿ ಭಕ್ತ, ಬಂಗಾರದ ಹೂವು, ಅಮ್ಮ , ಗೆಜ್ಜೆಪೂಜೆ, ಸಂಧ್ಯಾರಾಗ, ತೇಜಸ್ವಿನಿ, ನಮ್ಮ ಮಕ್ಕಳು, ಸತ್ಯ ಹರಿಶ್ಚಂದ್ರ, ಜೇನುಗೂಡು, ಕೆರಳಿದ ಸಿಂಹ, ಅಬ್ಬಾ ಆ ಹುಡುಗಿ, ಬೆಳ್ಳಿಮೋಡ, ಅನುರಾಗ ಅರಳಿತು, ಜೀವನಚೈತ್ರ, ಪಂಡರಿಬಾಯಿ ಅವರ ಅಭಿನಯದ ಕೆಲವು ಚಿತ್ರಗಳು.

Pandaribai with Shivaji Ganeshan in the film Parashaktiಸಿನಿಮಾ ರಂಗದ ಶ್ರೇಷ್ಠ ಸಾಧನೆಗಾಗಿ ಕರ್ನಾಟಕ ಸರ್ಕಾರ ನೀಡುವ 'ರಾಜ್‌ಕುಮಾರ್‌’ ಪ್ರಶಸ್ತಿ ಯನ್ನು ಪಂಡರಿಬಾಯಿ ಪಡೆದಿದ್ದಾರೆ. ಆಕೆಯ ಅಕೌಂಟಿನಲ್ಲಿ ಸುಮಾರು ಅರ್ಧ ಸಾವಿರ ಚಿತ್ರಗಳಿವೆ.

*

ಪಂಡರಿಬಾಯಿ ಅವರ ಕೊನೆಯ ದಿನಗಳು ಸಂತಸದ ದಿನಗಳೇನೂ ಆಗಿರಲಿಲ್ಲ . ಕಿಡ್ನಿ ಕೈ ಕೊಟ್ಟಿತ್ತು . ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಪಂಡರಿಬಾಯಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತ ನರಳುತ್ತಿದ್ದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಚಿಕಿತ್ಸೆಗೆ ಸಕಲ ಸೌಕರ್ಯಗಳನ್ನೂ ಕಲ್ಪಿಸದಿದ್ದರೆ ಪಂಡರಿಬಾಯಿ ಅವರ ಅಂತ್ಯ ಇನ್ನಷ್ಟು ದಾರುಣವಾಗಿರುತ್ತಿತ್ತು . ಕಾವೇರಿ ವಿಷಯದಲ್ಲಿ ಜಯಾ ಮೇಲೆ ಕೋಪವೆಷ್ಟೇ ಇರಲಿ ; ಪಂಡರಿಬಾಯಿ ವಿಷಯದಲ್ಲಿ ಅವರು ತೋರಿದ ಸಜ್ಜನಿಕೆಯನ್ನು ಸ್ಮರಿಸಲೇಬೇಕು.

ಪಂಡರಿಬಾಯಿ ಅವರ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿತ್ತು . ಬೆಂಗಳೂರಿನಲ್ಲಿ ನನಗೊಂದು ನಿವೇಶನ ಕೊಡಿ ಎಂದು ಪಂಡರಿಬಾಯಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರಿಗೆ ಮನವಿ ಸಲ್ಲಿಸಿದ್ದು . ಆಶ್ವಾಸನೆ ದೊರೆತದ್ದು ದೊಡ್ಡ ಸುದ್ದಿಯಾಯಿತು! ಇದಕ್ಕೂ ಮುನ್ನ 1994 ರಲ್ಲಿ - ರಸ್ತೆ ಅಪಘಾತವೊಂದರಲ್ಲಿ ಪಂಡರಿಬಾಯಿ ಎಡಗೈ ಕಳಕೊಂಡಿದ್ದರು. ಆಗ ಕೂಡ ಚಿಕಿತ್ಸೆಗೆ ಆರ್ಥಿಕ ಸಂಕಷ್ಟ ಎದುರಿಸಿದ್ದರು.

ಪಂಡರಿಬಾಯಿ ಪಾಂಡುರಂಗನ ಭಕ್ತೆ . ಚೆನ್ನೈನಲ್ಲಿ ಪಾಂಡುರಂಗನ ದೇಗುಲವನ್ನು ಆಕೆ ಕಟ್ಟಿಸಿದ್ದರು. ಪಂಡರಿಬಾಯಿ ಅವರಿಗೆ 76 ವರ್ಷ ವಯಸ್ಸಾಗಿತ್ತು . ಅದು ಸಾಯುವ ವಯಸ್ಸಲ್ಲ ಅನ್ನುವುದು ಪಾಂಡುರಂಗನಿಗೂ ಗೊತ್ತು .

*

ಅನೇಕ ನಟಿಯರನ್ನು ಕುರಿತು ಮಾತನಾಡುವಾಗ 'ಈ ಶತಮಾನದ ಮಾದರಿ ಹೆಣ್ಣು’ ಎನ್ನುವ ವಿಶೇಷಣ ಬಳಸುತ್ತೇವೆ. ನಟೀಮಣಿಯಾಬ್ಬಳು ಮೂರೋ ನಾಲ್ಕೋ ಮದುವೆಯಾದ ಸಂದರ್ಭಗಳಲ್ಲಿ ಮಾದರಿ ಹೆಣ್ಣೆಂದು ಉದ್ಘರಿಸುವುದು ವಾಡಿಕೆ. ಆದರೆ ಪಂಡರಿಬಾಯಿ ನಿಜವಾದ ಅರ್ಥದಲ್ಲಿ ಈ ಶತಮಾನದ ಮಾದರಿ ಹೆಣ್ಣು .

ಸುಮಾರು 6 ದಶಕಗಳ ಕಾಲ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದ ಹೆಣ್ಣುಮಗಳು ಪಂಡರಿಬಾಯಿ. ಆಕೆ ನಟಿಯಷ್ಟೇ ಅಲ್ಲ - ನಿರ್ಮಾಪಕಿ, ರಂಗ ಕರ್ಮಿಯೂ ಹೌದು. ಪಂಡರಿಬಾಯಿ ನಿರ್ಮಿಸಿದ 'ರಾಯರ ಸೊಸೆ’ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತ್ತು . ಜಿ.ವಿ. ಅಯ್ಯರ್‌ ಅವರೊಂದಿಗೆ ಪಂಡರಿಬಾಯಿ ಜಂಟಿಯಾಗಿ ನಿರ್ಮಿಸಿರುವ 'ಶ್ರೀಕೃಷ್ಣ ಲೀಲೆ’ ಇನ್ನೂ ತೆರೆ ಕಾಣಬೇಕಿದೆ.

ಕಿರುತೆರೆಯಲ್ಲೂ ಪಂಡರಿಬಾಯಿ ನಟಿಸಿದ್ದರು. ಸಿನಿಮಾ ಮೇಲೆ ಟೀವಿ ಸವಾರಿ ಪ್ರಾರಂಭಿಸಿದ ದಿನಗಳಲ್ಲಿ ಪಂಡರಿಬಾಯಿ ಅವರ ಬಳಗ ನಿರ್ಮಿಸಿದ 'ಮನೆತನ’ ಮೆಗಾ ಧಾರಾವಾಹಿಯಲ್ಲಿ ಪಂಡರಿಬಾಯಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 'ಮನೆತನ’ ಕನ್ನಡದ ಮೊದಲ ಮೆಗಾ ಸೀರಿಯೆಲ್‌.

'ಶ್ರೀಕೃಷ್ಣ ಚೈತನ್ಯ ನಾಟಕ ಸಭಾ’ ಎನ್ನುವ ರಂಗಭೂಮಿ ಬಳಗವನ್ನು ಕಟ್ಟಿದ ಪಂಡರಿಬಾಯಿ ಊರೂರು ಅಲೆದು ನಾಟಕ ಮಾಡಿದರು. ಸಿನಿಮಾ, ನಾಟಕ ಎಂದು ಕಾಲ ಕಳೆದ ಪಂಡರಿಬಾಯಿ ಮದುವೆಯಾದಾಗ ಅವರಿಗೆ ಐವತ್ತು ವರ್ಷ ವಯಸ್ಸಾಗಿತ್ತು . ಈಗ ಹೇಳಿ- ಈ ಶತಮಾನದ ಹೆಣ್ಣು ಯಾರು ?

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ಪಂಡರಿಬಾಯಿ ಎಂಬ ‘ಈ ಶತಮಾನದ ಮಾದರಿ ಅಮ್ಮ’
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more