ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ತುಳುನಾಡ ಮೃಗಯಾ ಸಾಹಿತಿ’

By Staff
|
Google Oneindia Kannada News

*ಕೋಡಿಬೆಟ್ಟು ರಾಜಲಕ್ಷ್ಮಿ

ಪುಣ್ಯದ ಹೆಣ್ಣು ಕವಿತಾ ಕನ್ಯೆ /ದಿನವೂ ಕನಸಲ್ಲಿ ಕಾಡುತ್ತಾಳೆ,/ಕುಣಿಯೋಣ ಬಾ , ಕುಣಿಯೋಣ ಬಾ/ ಮುದುಕ ನಾನು. ತುಂಬು ಯುವತಿ ಆಕೆಯಾಂದಿಗೆ/ ಕುಣಿದೊಡೆ ನೀವೆಲ್ಲ ಹಾಸ್ಯ ಮಾಡೀರಿ/ಹಾಸ್ಯಕ್ಕೀಡಾಗುವ ತುಳುವನೇನು ನಾನು ?

ನೀವೇಕೆ ಬರವಣಿಗೆ ನಿಲ್ಲಿಸಿಬಿಟ್ಟಿರಿ ಎಂಬ ಪ್ರಶ್ನೆಗೆ ತುಳುನಾಡ ಹಿರಿಯಜ್ಜ ಕೆದಂಬಾಡಿ ಜತ್ತಪ್ಪ ರೈ ಉತ್ತರಿಸುತ್ತಿದ್ದುದು ಹೀಗೆ. ಮುಪ್ಪು ಅವರಿಂದ ಬರವಣಿಗೆಯನ್ನು ಕಿತ್ತುಕೊಂಡಿತ್ತು.

ಹಲವು ವರ್ಷಗಳ ಹಿಂದೆಯೇ ಬರವಣಿಗೆಯಿಂದ ನಿವೃತ್ತಿ ಹೊಂದಿದ್ದ ಜತ್ತಪ್ಪ ರೈ ಮೊನ್ನೆ ತಾನೇ ತುಳು- ಕನ್ನಡ ಸಾಹಿತ್ಯ ಲೋಕವನ್ನಗಲಿ ಹೋದರು. ಬೇಟೆಯ ಬದುಕು, ಬರವಣಿಗೆ -ಬಡತನದ ಜೊತೆಗೆ ಸಾಗಿದ ಜತ್ತಪ್ಪ ರೈಗಳ ವ್ಯಕ್ತಿತ್ವವೇ ಒಂದು ಕತೆ. ಅದು ಕಾಡಿನಷ್ಟು ಸಮೃದ್ಧ .

Dr. Ananthamurthy Felicitating Jattappa Rai ಎಂದು ಪ್ರಸಿದ್ಧರಾಗಿದ್ದ ಜತ್ತಪ್ಪ ರೈ ನಡೆದಾಡುವ ತುಳು ವಿಶ್ವಕೋಶವೂ ಆಗಿದ್ದರು. ಬರೆಯಲಾಗದಿದ್ದರೂ ಬರೆಯುವ ಆಸೆಯನ್ನು ಮನತುಂಬ ಹೊತ್ತುಕೊಂಡಿದ್ದರು. ‘ಭೂ ಓದು ಮತ್ತು ಬಾನು ಓದು’ ಅಂತ ಎರಡು ಪುಸ್ತಕಗಳನ್ನು ಬರೆಯಬೇಕೆಂಬ ಇಚ್ಛೆ ಇದೆ. ಆದರೆ ಆರೋಗ್ಯ, ವಯಸ್ಸು ಕೈಕೊಡುತ್ತಿದೆ ಎಂದು ತಮ್ಮನ್ನು ಭೇಟಿ ಮಾಡಿದವರೊಡನೆ ಬೇಜಾರು ಹಂಚಿಕೊಳ್ಳುತ್ತಿದ್ದರು. ಜತ್ತಪ್ಪ ರೈ ಸಹಾಯಕರನ್ನು ಇಟ್ಟುಕೊಂಡು ಬರೆಯಬಹುದಾಗಿತ್ತು. ಈ ಪ್ರಶ್ನೆಯನ್ನು ಪಟ್ಟು ಬಿಡದೆ ಕೇಳುತ್ತಿದ್ದವರನ್ನು ದಿಟ್ಟಿಸಿ ನೋಡುತ್ತಾ ರೈ ಒಂದು ಪುಟ್ಟ ಕತೆಯನ್ನೇ ಹೇಳುತ್ತಿದ್ದರು-

‘ತುಳು ನಿಘಂಟು ರಚನೆಯಾದ ಸಂದರ್ಭದಲ್ಲಿ ನಿಘಂಟು ಸಂಪಾದಕರಾದ ಡಾ. ಯು.ಪಿ. ಉಪಾಧ್ಯಾಯ ದಂಪತಿ ನನ್ನ ಮನೆಯಲ್ಲೇ ಒಂದು ವಾರ ಇದ್ದರು. ಅವರಿಗೇ ಗೊತ್ತಿಲ್ಲದ ಅದೆಷ್ಟೋ ಪದಗಳನ್ನು ನಾನು ಬಳಸುತ್ತಿದ್ದೆ. ನಾನು ಹೇಳುವ ಪದಗಳನ್ನು ಅರ್ಥೈಸಿಕೊಂಡು, ವಾಕ್ಯ ಜೋಡಿಸಿಕೊಂಡು ಬರೆಯುವ ತುಳುವರು ಇದ್ದಾರಾ....? ಅಷ್ಟು ಜ್ಞಾನವಿದ್ದವರು ನನಗೆ ಸಹಾಯಕರಾಗಲು ಸಿದ್ಧರಿರುತ್ತಾರಾ .. ಅದೆಲ್ಲ ಆಗದ ಹೋಗದ ಮಾತು’ .

ಕಾರಂತರ ಚೋಮನ ದುಡಿ, ಕುವೆಂಪು ಅವರ ಯಮನ ಸೋಲು ಕೃತಿಗಳನ್ನು ರೈ ತುಳುವಿಗೆ ಅನುವಾದಿಸಿದ್ದಾರೆ. ಉಮರ ಖಯ್ಯಾಮನ ರುಬಾಯತ್‌ಗಳನ್ನು ತುಳುವಿಗೆ ಅನುವಾದಿಸಿ, ‘ಕುಜಿಲಿ ಪೂಜೆ’ ಎಂಬ ಪುಸ್ತಕ ಪ್ರಕಟಿಸಿದ್ದಾರೆ.

ಅನುವಾದ ಸಾಹಿತ್ಯವನ್ನು ಸೆಕೆಂಡ್‌ ಹ್ಯಾಂಡ್‌ ಎಂಬ ದೃಷ್ಟಿಯಲ್ಲಿ ನೋಡುತ್ತಿದ್ದವರಿಗೆ ರೈ ಹೇಳುತ್ತಿದ್ದುದು - ‘ಕೊಡಲಿ ಪಕ್ಕದ ಮನೆಯದ್ದಿರಬಹುದು. ಆದರೆ ಅದರ ಹರಿತ ಕಡಿಮೆಯಾಗುತ್ತದೆಯೇ.... ?’

ಚೋಮನ ದುಡಿ ಮತ್ತು ಯಮನ ಸೋಲು ಕೃತಿಗಳ ಅನುವಾದವನ್ನು ನೆನಪಿಸಿಕೊಳ್ಳುತ್ತಾ , ‘ವಟವೃಕ್ಷಗಳೆರಡನ್ನು ಅಲುಗಾಡಿಸುವ ಪ್ರಯತ್ನ ಮಾಡಿದ್ದೇನೆ. ಬಿದ್ದಿರುವ ಜ್ಞಾನದ ಹಣ್ಣುಗಳನ್ನು ತುಳುವರು ಎತ್ತಿಕೊಳ್ಳಬೇಕು’ ಎಂದು ರೈ ವಿನಯದ ಮಾತಾಡುತ್ತಿದ್ದರು.

ಕಾರಂತರ ಬರಹದ ತಿರುಳು ನನ್ನಲ್ಲಿ ಇದೆಯೇ? ಯಾರಲ್ಲಿ ಇದೆ ಹೇಳಿ. ಆದರೂ ಪ್ರಯತ್ನಿಸಿದ್ದೇನೆ. ‘ಚೋಮನ ದುಡಿ’ಯನ್ನು ತುಳುವಿಗೆ ಕೊಂಡೊಯ್ದು ಅವನನ್ನು ಕೊಲ್ಲಬೇಡ ಎಂದು ಕಾರಂತರು ಬೈದಿದ್ದರು. ಆದರೂ ನಾನು ಧೈರ್ಯ ಮಾಡಿ ಅನುವಾದಿಸಿದ ಭಾಗಗಳನ್ನು ನನ್ನಿಂದಲೇ ಓದಿಸಿದರು. ಏಳು ಅಧ್ಯಾಯ ಓದಿದರೂ ಮಾತಿಲ್ಲ. ಎಂಟನೇ ಅಧ್ಯಾಯ ಓದುತ್ತಲೇ- ‘ನಿನ್ನಲ್ಲಿರುವ ತುಳುವಿನ ಓಘಕ್ಕೆ ಮೆಚ್ಚಿದೆ. ಚೋಮನಿಗೆ ತುಳುವೇ ಹೆಚ್ಚು ಸೂಕ್ತ , ನೀನು ಇನ್ನೊಂದು ಬೋರನ ದುಡಿ ಬರೆಯಬಲ್ಲೆ ’ ಎಂದು ಅನುವಾದಿತ ಕೃತಿಯ ಪ್ರಕಟಣೆಗೆ ಅಪ್ಪಣೆ ಕೊಟ್ಟರು.

ರಿಚರ್ಡ್‌ ಕ್ಯಾಸ್ಟಲಿನೋ ಒಮ್ಮೆ ಗೋವಿಂದ ಪೈಗಳ ಗೋಲ್ಗೊಥಾವನ್ನು ಅನುವಾದ ಮಾಡಿಕೊಡುವಂತೆಯೂ ಜತ್ತಪ್ಪ ರೈಗಳನ್ನು ಕೇಳಿಕೊಂಡಿದ್ದರು. ರೈಗಳು ಗೊಲ್ಗೋಥಾದಲ್ಲಿ ಬರುವ ಪದಗಳಿಗೆ ತುಳುವಿನಲ್ಲಿ ಸೂಕ್ತ ಪದಗಳನ್ನು ಮನಸ್ಸಿನಲ್ಲಿಯೇ ಜೋಡಿಸಿಕೊಳ್ಳುತ್ತಿದ್ದರು. ತಮ್ಮನ್ನು ಭೇಟಿಯಾದವರನ್ನೆಲ್ಲಾ - ಮುಪ್ಪು ಬರವಣಿಗೆಯನ್ನು ಮುಂದುವರೆಸಲು ಬಿಡುತ್ತದಾ... ಎಂದು ಪ್ರಶ್ನಿಸುತ್ತಾ ಅನುವಾದಿಸಲಾಗದ್ದಕ್ಕೆ ಬೇಜಾರು ಮಾಡಿಕೊಳ್ಳುತ್ತಿದ್ದರು.

‘ಇತ್ತೀಚೆಗಿನ ಬರುತ್ತಿರುವ ತುಳು ಸಾಹಿತ್ಯ ಅಷ್ಟೇನೂ ಆಳವಾಗಿಲ್ಲ. ಮಕ್ಕಳಿಗೆ ತುಳುವಿನಲ್ಲಿ ಸಾಕಷ್ಟು ಪದಗಳಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಅದು ಸುಳ್ಳು. ಎಳೆನೀರು ತೆಂಗಿನ ಕಾಯಿ ಆಗುವ ಮಧ್ಯ ಹಂತದಲ್ಲಿ ಅದಕ್ಕೆ ಕನ್ನಡದಲ್ಲಿ ಏನು ಪದವಿದೆ ಹೇಳಿ. ತುಳುವರು ಅದಕ್ಕೆ ಬನ್ನಂಗಾಯಿ ಎನ್ನುತ್ತಾರೆ. ಹಾಗೆ ಚೆಂಡೇಲು ಎಂಬ ಪದವನ್ನು ತುಳವರೇ ಕೊಟ್ಟದ್ದು. ಸಾಹಿತ್ಯವನ್ನು ಅಗೆದರೆ ಪದಗಳು ಸಿಕ್ಕಾವು. ಈಗಿನ ಕಾಲದಲ್ಲಿ ಸಾಕಷ್ಟು ಸವಲತ್ತುಗಳಿವೆ. ಮಕ್ಕಳು ಹೆಚ್ಚು ಹೆಚ್ಚು ಓದಬೇಕು. ಸಾಹಿತ್ಯ ರಚನೆ ಮಾಡಬೇಕು’ ಎನ್ನುತ್ತಿದ್ದ ರೈಗಳು ಯುವ ಜನಾಂಗಕ್ಕೆ ಕಾವ್ಯರೂಪದಲ್ಲೇ ಸಂದೇಶ ಕೊಡುತ್ತಿದ್ದರು:
ಬರೆ ಓದು, ಓದು ಬರೆ, ಆಗ
ದೊರೆವುದು ನಿನಗೆ ಬರೆವ ಜಾಡು
ಅಚ್ಚು ಶಾಲೆಗಳುಂಟು ವೆಚ್ಚಕ್ಕೆ ದುಡ್ಡುಂಟು
ಇಚ್ಛೆ ಬಂದಂತೆ ಬರೆವ ಸ್ವಾತಂತ್ರ್ಯವುಂಟು
ಬರೆ ಓದು, ಓದು ಬರೆ....

ಕೊನೆ ಕಾಲದಲ್ಲಿ ಜತ್ತಪ್ಪ ರೈಗಳು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಮೊದಲ ಹೆಂಡತಿ ಅಗಲಿದ ನಂತರ ಎರಡನೇ ಮದುವೆಯಾಗಿದ್ದರು. ಆಕೆಯೂ ಅಗಲಿದಾಗ ರೈಗಳು ಆಧ್ಯಾತ್ಮಕ್ಕೆ ಜಾರಿದರು. ‘ಜೋಡಿಯಾಗಿರುವ ಹಲವು ಹುಲಿಗಳನ್ನು ಕೊಂದಿದ್ದೇನೆ. ಆ ಪಾಪದ ಫಲಕ್ಕೇನೋ ನಾನೀಗ ಒಂಟಿಯಾಗಿದ್ದೇನೆ’ ಎಂದು ಆಗಾಗ ರೈಗಳು ಹಲುಬುತ್ತಿದ್ದರು.

ಆದರೂ ಬೇಟೆಯ ಮಾತೆತ್ತಿದರೆ ರೈಗಳು ಮಂಚದಿಂದ ಎದ್ದು ಕುಳಿತು ಬೇಟೆ ಕತೆಗಳನ್ನು ಹೇಳಲು ಶುರುಹಚ್ಚಿಕೊಳ್ಳುತ್ತಿದ್ದರು. ಎಲ್ಲೆಲ್ಲಾ ಬೇಟೆಯಾಡಿದ್ದೀರಿ ಎಂದೇನಾದರೂ ಕೇಳಿದರೆ... ‘ಊಹ್ಞೂಂ ಎಲ್ಲಿ ಬೇಟೆ ಆಡಿಲ್ಲ ಅಂತ ನೀವು ಕೇಳಬೇಕು’ ಎಂದು ಪ್ರಶ್ನೆಯನ್ನು ತಿದ್ದುತ್ತಿದ್ದರು.

ಪುತ್ತೂರಿನ ಕೆದಂಬಾಡಿ ಗುತ್ತಿನಲ್ಲಿ ಗುರಿಕಾರನೆಂದೇ ಗುರುತಿಸಿಕೊಂಡಿದ್ದ ಜತ್ತಪ್ಪ ರೈಗಳು ಕೃಷಿ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದವರು. ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಭತ್ತ ಬೆಳೆದು ಪ್ರಶಸ್ತಿಗಳನ್ನು ಗೆದ್ದವರು. ಆದರೆ ಕೃಷಿಗೆ ಮಹತ್ವ ಹಿಂದೆ ಹೋಗುತ್ತಲೇ ಶ್ರೀಮಂತಿಕೆಗೆ ಪೆಟ್ಟು ಬಿತ್ತು.

ಜತ್ತಪ್ಪ ರೈಯ ಆರ್ಥಿಕ ಬಡತನದ ಬಗ್ಗೆ ಕೇಳಿದ ಅನೇಕರು ಹೃದಯವಂತಿಕೆಯಿಂದ ಅವರ ಮನೆಗೆ ಹೋಗಿ ಕುಶಲ ವಿಚಾರಿಸಿದ್ದುಂಟು. ಗಣ್ಯರು ಅವರಿಗೆ ಸರಕಾರದ ನೆರವು ಒದಗಿಸುವ ಭರವಸೆ ನೀಡಿದ್ದೂ ಉಂಟು. ಆದರೆ ಯಾವುದೂ ಪ್ರಯೋಜನವಾಗಲಿಲ್ಲ ಎಂಬ ಕೊರಗು ರೈಗಳನ್ನಂಟಿಕೊಂಡಿತ್ತು. ರಾಜ್ಯೋತ್ಸವ ಪ್ರಶಸ್ತಿ ಕೊಡಿಸುವುದಾಗಿಯೂ ರೈಗಳಿಗೆ ಅನೇಕರು ಸಾಂತ್ವನ ಹೇಳಿದ್ದರು. ರೈಗಳು ಅದನ್ನು ನಂಬಿಬಿಟ್ಟಿದ್ದರು ಕೂಡ. ಕೊನೆಗಾಲದ ಎರಡು ಮೂರು ವರ್ಷಗಳಲ್ಲಿ ರಾಜ್ಯೋತ್ಸವ ಪಟ್ಟಿ ಪ್ರಕಟವಾದಾಗ ರೈಗಳಿಗೆ ಪ್ರತಿ ಬಾರಿ ನಿರಾಸೆ ಕಾದಿರುತ್ತಿತ್ತು.

ಸಣ್ಣ ಪುಟ್ಟ ಮಿಡಿ ಸಾಹಿತಿಗಳು ಪ್ರಶಸ್ತಿ ಪಡೆಯುತ್ತಿರುವುದನ್ನು ಕಂಡು- ‘ರಾಜ್ಯೋತ್ಸವ ಪ್ರಶಸ್ತಿಯನ್ನು ಯಾವ ಆಧಾರದ ಮೇಲೆ ಕೊಡುತ್ತಾರೆ’ ಎಂದು ಮನೆಗೆ ಬಂದ ಅತಿಥಿಗಳೊಡನೆ ಮುಗ್ಧವಾಗಿ ಕೇಳುತ್ತಿದ್ದರು.

ಬೇಟೆಯ ನೆನಪುಗಳು, ಈಡೊಂದು ಹುಲಿ ಎರಡು, ಬೇಟೆಯ ಉರುಳು, ಬೆಟ್ಟದ ತಪ್ಪಲಿಂದ ಕಡಲ ತಡಿಗೆ ( ಕನ್ನಡ ಕೃತಿಗಳು), ಚೋಮನ ದುಡಿ, ಯಮನ ಸೋಲು, ಸೂದ್ರೆ ಏಕಲವ್ಯೆ, ರಾಮಾಶ್ವಮೇದೋ(ಅನುವಾದಿತ ತುಳು ಕೃತಿಗಳು) ಜತ್ತಪ್ಪ ರೈಯವರ ಸಮೃದ್ಧ ತುಳು ಶೈಲಿಯಲ್ಲಿ ಮೂಡಿ ಬಂದಿವೆ. ಬೇಟೆಯ ನೆನಪುಗಳು ಇತರ 17 ಭಾಷೆಗೆ ಅನುವಾದಗೊಂಡಿದೆ.

ಕನ್ನಡ ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟ, ತುಳು ಸಾಹಿತ್ಯ ಸಮೇಳನಗಳಲ್ಲಿ, ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಜತ್ತಪ್ಪ ರೈಗೆ ಪುರಸ್ಕಾರ ಸಂದಿದೆ. ಆದರೂ ರೈಗಳ ಸಾಹಿತ್ಯ ಸಾಧನೆಯನ್ನು ಸರಕಾರ ಗುರುತಿಸಲಿ ಎಂದು ಪ್ರಾಮಾಣಿಕವಾಗಿ ಹಲವರು ಪ್ರಯತ್ನಿಸಿದ್ದುಂಟು. ರೈಗಳೂ ಕೂಡ ಎಂದಾದರೊಂದು ದಿನ ಸರಕಾರ ತನ್ನ ಬರಹ ಕೃಷಿಯನ್ನು ಗುರುತಿಸುತ್ತದೆ- ಪುರಸ್ಕರಿಸುತ್ತದೆ ಎಂದು ನಂಬಿಕೊಂಡಿದ್ದರು. ಆದರೆ ಸರಕಾರಕ್ಕೆ ಪುರುಸೊತ್ತಾಗಲಿಲ್ಲ .

ಮುಖಪುಟ / ಸಾಹಿತ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X