• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲಾಶಾಲೆಯ ಕೃತಿಗಳಲ್ಲಿ ಉಸಿರಾಗಿ ಹೋದ ಹಡಪದ್‌

By Staff
|
  • ಆರ್‌. ಜಯಕುಮಾರ್‌

R.M. Hadapadಶೇಷಾದ್ರಿಪುರಂನ ಓಣಿಯ ಆ ಕಲಾಶಾಲೆಯಲ್ಲಿ ಹೆಪ್ಪುಗಟ್ಟಿದ ಮೌನ. ರಂಗುರಂಗಾಗಿ ಹರಿದಾಡುತ್ತಿದ್ದ ಕುಂಚಗಳು ಕ್ಷಣಿಕದ ರಜೆ ಪಡೆದಿವೆ. ಪಾಠದ ಕೊಠಡಿ, ಬಣ್ಣದ ಮನೆಯ ಕುರ್ಚಿ, ಮೇಜುಗಳು ನಿನ್ನೆ ಹೇಗಿತ್ತೋ ಹಾಗೆ ಅಡ್ಡಾದಿಡ್ಡಿಯಾಗಿ ಬಿದ್ದಿವೆ. ಶಾಲೆಯ ಮಕ್ಕಳು ಬರೆದು ಅಪೂರ್ಣಗೊಳಿಸಿದ ಚಿತ್ರಗಳು, ಶಿಲ್ಪಗಳು ಇಂದು (ನ.23) ರಜೆ ಪಡೆದವು.

ಕಳೆದ 40 ವರ್ಷಗಳಿಂದ ಕಲೆಯನ್ನೇ ಉಸಿರಾಡಿ ಬದುಕಿದ್ದ ಜೀವ ಇಲ್ಲವೆಂದರೆ ಅಲ್ಲಿ ನೆರೆದಿದ್ದ ಅವರ ಸಾವಿರಾರು ಶಿಷ್ಯಗಣ ಒಪ್ಪಲು ಸಿದ್ಧವಿಲ್ಲ . ಆದರೆ ಆರ್‌.ಎಂ.ಹಡಪದ್‌ ನಿಶ್ಚಲವಾಗಿ ಮಲಗಿದ್ದರು. ಶನಿವಾರ ಸಂಜೆ ಕೂಡ ಭಾರತೀಯ ವಿದ್ಯಾಭವನದಲ್ಲಿ ಪಾಠ ಮಾಡಿದ ಹಡಪದ್‌ ನಡುರಾತ್ರಿಯಲ್ಲಿ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದರು.

ಹಡಪದ್‌ ಕಲೆಗೆ ಪರ್ಯಾಯವಾಗಿ ಬಳಕೆಯಾಗಬಹುದಾದ ಹೆಸರು. ಅಂತರರಾಷ್ಟ್ರೀಯ ಖ್ಯಾತಿಯ ಇವರು ರಾಜ್ಯದಲ್ಲಿ ನವ್ಯಕಲೆಗೆ ನಾಂದಿ ಹಾಡಿದವರು. ಇವರ ಕನಸಿನ ಕೂಸಾದ ಬೆಂಗಳೂರಿನ ಶೇಷಾದ್ರಿಪುರಂನ ಕೆನ್‌ ಕಲಾ ಶಾಲೆ ರಾಜ್ಯದ ಸಾಂಸ್ಕೃತಿಕ ಪ್ರತಿರೂಪದಂತಿರುವ ಆಶ್ರಮ. ಇಲ್ಲಿ ಕಲಿತ ಸಾವಿರಾರು ಕಲಾವಿದರು ಬದುಕು ಕಂಡುಕೊಂಡಿರುವುದಲ್ಲದೆ, ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

ಹಡಪದ್‌ ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ. 1936ರಲ್ಲಿ ಬದಾಮಿಯಲ್ಲಿ ಜನಿಸಿದ ಇವರದು ಸಂಗೀತಪ್ರೇಮಿ ಕುಟುಂಬ. ಬದಾಮಿ, ಪಟ್ಟದಕಲ್ಲಿನ ದೇವಾಲಯ, ಅಲ್ಲಿನ ನಿಸರ್ಗ ಸೌಂದರ್ಯ, ವಿದೇಶಿಯರು ಬಂದು ಆರಾಧಿಸುತ್ತಿದ್ದ ಪರಿ ಕಂಡು ಬೆರಗಾದ ಹಡಪದ್‌ ಕಲೆಯನ್ನೇ ಬದುಕಾಗಿ ಆರಿಸಿಕೊಂಡರು. ಬಳಿಕ ಕಲೆಯ ಸಿದ್ಧಿಗಾಗಿ ಅವಿಶ್ರಾಂತ ದುಡಿಮೆ. ಪ್ರಚಾರ, ಪ್ರಭಾವದಿಂದ ಎಂದೂ ದೂರ ಉಳಿದ ಇವರನ್ನು ಅವರ ಸಾಧನೆ, ವ್ಯಕ್ತಿತ್ವವೇ ಅಮರವಾಗಿಸಿತು.

1958ರಲ್ಲಿ ಮುಂಬಯಿಯ ಜೆಜೆ ಕಲಾ ಶಾಲೆಯಲ್ಲಿ ಕಲಾ ಪದವಿ ಪಡೆದ ಅವರು, ಬಳಿಕ ಆರ್ಟ್‌ ಮಾಸ್ಟರ್‌, ರಾಜಲ್ಥಾನದ ಬನಸ್ಥಳಿ ವಿದ್ಯಾಪೀಠದಲ್ಲಿ ತರಬೇತಿ ಹೊಂದಿ ಪ್ರಾವೀಣ್ಯತೆ ಪಡೆದರು. 1964ರಿಂದ 1968ರವರೆಗೆ ನಡೆದ ಇವರ ನೇತೃತ್ವದ ‘ವೀಫೋರ್‌’ ಕಲಾ ಪ್ರದರ್ಶನ ಸಂಚಲನವನ್ನೇ ಉಂಟು ಮಾಡಿತು. ಬೆಂಗಳೂರಿನ ಕೆನ್‌ ಕಲಾ ಶಾಲೆ ಚಿತ್ರ ಕಲಾವಿದರ ಕಾಶಿ ಎಂದೇ ಇಂದಿಗೂ ಖ್ಯಾತಿ ಪಡೆದಿದೆ. ಅಮೆರಿಕದ ಟೆಕ್ಸಾಸ್‌, ಜರ್ಮನಿಯ ಹೀಡಲ್ಬರ್ಗ್‌ಗಳಲ್ಲಿ 1979ರಿಂದ 1992ರವರೆಗೆ ನಡೆದ ಚಿತ್ರಕಲಾ ಪ್ರದರ್ಶನಗಳು ಇವರಿಗೆ ಅಂತರರಾಷ್ಟ್ರೀಯ ಮಾನ್ಯತೆ ತಂದುಕೊಟ್ಟವು.

An art by R.M.Hadapad1987ರಿಂದ 1990ರವರೆಗೆ ರಾಜ್ಯ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಹಡಪದ್‌ ಎಂದೂ ಪ್ರಶಸ್ತಿ, ಅಧಿಕಾರದ ಬೆನ್ನು ಬಿದ್ದವರಲ್ಲ. ಅವೇ ಅವರನ್ನು ಅರಸಿ ಬಂದವು. ತಂಜಾವೂರ್‌ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯತ್ವ, ಹಂಪಿ ಕನ್ನಡ ವಿವಿ ಸೆನೆಟ್‌ ಸದಸ್ಯತ್ವ, ಲಲಿತ ಕಲಾ ಅಕಾಡೆಮಿ ಫೆಲೋಶಿಪ್‌, ರಾಜ್ಯೋತ್ಸವ ಪ್ರಶಸ್ತಿ , ಹಂಪಿ ಕನ್ನಡ ವಿವಿ ನಾಡೋಜ ಪ್ರಶಸ್ತಿ ಹಾಗೂ ಇವೆಲ್ಲಕ್ಕೂ ಕಿರೀಟಪ್ರಾಯವಾಗಿ 1997ರಲ್ಲಿ ರಾಜ್ಯ ಸರ್ಕಾರದ ಸರ್ವಶ್ರೇಷ್ಠ ಕೆ.ವೆಂಕಟಪ್ಪ ಪ್ರಶಸ್ತಿ ಕೂಡ ಲಭಿಸಿತು.

ದಿಲ್ಲಿಯ ರಾಷ್ಟ್ರೀಯ ಕಲಾ ಸಂಗ್ರಹಾಲಯ, ಗೋವಾ, ಮದ್ರಾಸ್‌, ಇಂಗ್ಲೆಂಡ್‌, ಜರ್ಮನಿ ಮತ್ತು ಅಮೆರಿಕದ ಕಲಾ ಸಂಗ್ರಹಾಲಯಗಳಲ್ಲಿ ಇವರ ಚಿತ್ರಕಲೆಗಳನ್ನು ಇಡಲಾಗಿದೆ. ಜನಪದ ಲೋಕ, ಧರ್ಮಾವರಂ ಕಾಲೇಜ್‌ ಚರ್ಚ್‌, ಇಸ್ರೋಗಳಲ್ಲೂ ಇವರ ಕಲಾಕುಶಲತೆ ಗಮನ ಸೆಳೆಯುತ್ತದೆ.

ಹಡಪದ್‌ ಕಲಾವಿದರಾಗಿ ಗಳಿಸಿದ ಹೆಸರಿನ ಎರಡರಷ್ಟು ಗೌರವ ಅವರಿಗೆ ಗುರುವಾಗಿ ಲಭಿಸಿದೆ. ರಾಜಧಾನಿಯ ಹೈಟೆಕ್‌ ಸಂಸ್ಕೃತಿಯ ನಡುವೆಯೂ ಕೆನ್‌ ಶಾಲೆಯನ್ನು ಗುರುಕುಲ ಮಾದರಿಯಲ್ಲಿ ಕಟ್ಟಿ ಬೆಳೆಸಿದ ಕೀರ್ತಿ ಅವರದು. ಎಲ್ಲ ತೆರನಾದ ಸಾಹಿತ್ಯ, ಸಂಸ್ಕೃತಿ, ಕಲೆ, ಸಂವಾದಗಳಿಗೆ ಅದು ಕೇಂದ್ರಸ್ಥಳ. ಇವರ ಶಾಲೆಯಲ್ಲಿ ಹಾದುಹೋಗದೆ ಖ್ಯಾತಿ ಹೊಂದಿದ ಕಲಾವಿದರೇ ಇಲ್ಲವೆನ್ನುವಷ್ಟು ದೊಡ್ಡ ಶಿಷ್ಯ ಪರಂಪರೆ ಅವರದು.

ಹಡಪದ್‌ ಅಭಿಮಾನಿಗಳು, ಶಿಷ್ಯಂದಿರನ್ನು ಮಾತನಾಡಿಸಿದಾಗ ದುಃಖದ ನಡುವೆಯೂ ಅವರು ಹೇಳಿದ್ದಿಷ್ಟು : ಬೆಂಗಳೂರು ಮಹಾನಗರ ಪಾಲಿಕೆ ಕೆನ್‌ ಶಾಲೆ ಆವರಣವನ್ನು ಶಾಲೆಗೇ ಬಿಟ್ಟುಕೊಡಬೇಕು. ಇದು ಪ್ರೊ.ಎಂ.ಎಚ್‌.ಕೃಷ್ಣಯ್ಯ ಆಗ್ರಹ.

‘ನಾವು ಅದೃಷ್ಟ ಹೀನರು. ಅವರ ಮಾರ್ಗದರ್ಶನ ನಮಗೆ ಇನ್ನಷ್ಟು ವರ್ಷ ಬೇಕಿತ್ತು . ಅವರ ಮಕ್ಕಳಂತೆಯೇ ನಮ್ಮನ್ನು ಸಲಹಿದ್ದರು. ಕೆನ್‌ ಶಾಲೆ ನಮ್ಮ ಮನೆಯೇ ಆಗಿತ್ತು’ ಎಂದು ಈಗಿನ ಅಲ್ಲಿನ ವಿದ್ಯಾರ್ಥಿ ಜಿ.ಎನ್‌.ಪ್ರದೀಪ್‌ ಅಭಿಪ್ರಾಯ ಪಟ್ಟರೆ, ‘ಅವರು ನಮ್ಮ ಗುರುಗಳು ಮಾತ್ರವಲ್ಲ . ನಮ್ಮ ಎಲ್ಲ ಕಷ್ಟಗಳಿಗೂ ಪರಿಹಾರ ನೀಡುತ್ತಿದ್ದರು’ ಎಂದು ಶಾಲೆಯ ಮೂರನೇ ವರ್ಷದ ವಿದ್ಯಾರ್ಥಿ ಯೋಗೇಶ್‌ ಉಡುಪ ಹೇಳುತ್ತಾರೆ.

‘ನಾನು ದೂರದ ಊರಿನಿಂದ ಅಲೆದಾಡಿ ಬೆಂಗಳೂರಿಗೆ ಬಂದೆ. ಕೆನ್‌ ಶಾಲೆಯನ್ನೇ ಮನೆ ಮಾಡಿಕೊಂಡು ಬೆಳೆದೆ. ಅಲ್ಲೇ ಪೋಸ್ಟರ್‌ ಹೊದ್ದು ಮಲಗಿ, ಚುರುಮುರಿ ತಿಂದು ಕಲಾವಿದನಾದೆ’ ಎನ್ನುತ್ತಾರೆ ಹಳೆ ವಿದ್ಯಾರ್ಥಿ ಶಿವು ಹೂಗಾರ್‌. ‘ಶ್ರೀರಾಂಪುರದಲ್ಲಿ ರೌಡಿಯಾಗಬೇಕಾಗಿದ್ದ ನನ್ನನ್ನು ಎಳೆತಂದು ಚಿತ್ರಕಲಿಸಿ ಈ ಮಟ್ಟಕ್ಕೆ ಬೆಳೆಸಿದರು’ ಎನ್ನುವುದು ಕೆನ್‌ ಶಾಲೆಯ ಹಾಲಿ ಪ್ರಾಂಶುಪಾಲರಾದ ಜೆ.ಎಂ.ಎಸ್‌.ಮಣಿಯ ಉವಾಚ.

ಹಡಪದ್‌ರ ಸಾಧನೆಗೆ ಪತ್ನಿ ಶಾರದಮ್ಮ ಬೆಂಗಾವಲಾಗಿ ನಿತರೆ, ಅವರ ಮಕ್ಕಳಾದ ಉಮೇಶ್‌, ಮಹೇಶ್‌, ಮೋಹನ್‌ ಮತ್ತು ಮಗಳು ವಿಜಯಾ ತಂದೆಯ ಶಿಸ್ತಿನ ಗರಡಿಯಲ್ಲಿ ಪಳಗಿ ಬೆಳೆದವರು.

ಹಡಪದ್‌ ಇಲ್ಲದ ಕೆನ್‌ ಶಾಲೆ ಕಲ್ಪಿಸಲೂ ಕಷ್ಟ. ಆದರೆ ಅವರ ಶಿಷ್ಯಪಡೆ ಈ ಪರಿಸ್ಥಿತಿಯನ್ನೇ ಸವಾಲಾಗಿ ಸ್ವೀಕರಿಸಿ ಕೆನ್‌ ಶಾಲೆಯನ್ನೇ ಮಾದರಿ ಸಂಸ್ಥೆಯಾಗಿ ಬೆಳೆಸಿ ಗುರುಕಾಣಿಕೆ ನೀಡಲು ಮುಂದಾಗಿದೆ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more